ಬಿಬಿಎಂಪಿ ವಿರುದ್ಧ ಹೈಕೋರ್ಟ್ ಚಾಟಿ
Team Udayavani, Sep 26, 2019, 3:04 AM IST
ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತು ನಿಷೇಧಿಸುವ ದಿಸೆಯಲ್ಲಿ ಅನುಮೋದಿಸಿರುವ “ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಅನ್ನು ಕನ್ನಡ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವುದಕ್ಕೆ ವಿಳಂಬವಾಗಲು ಕಾರಣರಾದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.
ಅಕ್ರಮ ಜಾಹೀರಾತುಗಳ ಹಾವಳಿ ತಡೆಯಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು, ಭಾಷಾಂತರಕಾರರ ಅಲಭ್ಯತೆಯಿಂದ ಕನ್ನಡದಲ್ಲಿನ ಬೈಲಾ ಅನ್ನು ಗೆಜೆಟ್ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರ ವಕೀಲ ಜಿ.ಆರ್.ಮೋಹನ್, ಕೆಎಂಸಿ ಕಾಯ್ದೆಯ ಸೆಕ್ಷನ್ 428ರ ಪ್ರಕಾರ ಬೈಲಾ ಅನುಮೋದಿಸಿ ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ. ಅದಕ್ಕಾಗಿ ಎರಡೂ ಭಾಷೆಯಲ್ಲಿನ ಬೈಲಾ ಪ್ರತಿಯನ್ನು ಬಿಬಿಎಂಪಿ ಸರ್ಕಾರಕ್ಕೆ ಕಳುಹಿಸಿಕೊಡಬೇಕಿತ್ತು. ಕನ್ನಡದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸದ ಹೊರತು ಬೈಲಾ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ದೂರಿದರು.
ಆಗ ನ್ಯಾಯಪೀಠ ಪ್ರತಿಕ್ರಿಯಿಸಿ, ಕೋರ್ಟ್ ನಿರ್ದೇಶನಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸಲಾಗುವುದು. ಹೀಗಾಗಿ, ತಪ್ಪಿತಸ್ಥ ಅಧಿಕಾರಿಗಳ ಹೆಸರು ತಿಳಿಸಿ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಬೇಕು. ಅದನ್ನು ಪರಿಗಣಿಸಿ ಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದಕ್ಕೆ ವಿವರಣೆ ಕೇಳಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಅ.15ಕ್ಕೆ ಮುಂದೂಡಿತು.
ಹಿನ್ನೆಲೆ: ಈ ಅರ್ಜಿಯು ಸೆ.9ರಂದು ವಿಚಾರಣೆಗೆ ಬಂದಿದ್ದ ವೇಳೆ ಬಿಬಿಎಂಪಿ ಕಳುಹಿಸಿರುವ “ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಅನ್ನು ಅನುಮೋದಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದ ಸರ್ಕಾರ, ಗೆಜೆಟ್ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿತ್ತು. ಕೇವಲ ಇಂಗ್ಲಿಷ್ ಭಾಷೆಯಲ್ಲಿ ಅಧಿಸೂಚನೆ ಹೊರಡಿಸಿದ್ದನ್ನು ಗಮನಿಸಿದ್ದ ನ್ಯಾಯಪೀಠ, ಕನ್ನಡ ಭಾಷೆಯಲ್ಲೂ ಗೆಜೆಟ್ ಅಧಿಸೂಚನೆ ಪ್ರಕಟಿಸಿ ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಬಿಬಿಎಂಪಿಯು ಕನ್ನಡ ಭಾಷೆಯಲ್ಲಿನ ಬೈಲಾ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕಿತ್ತು.
***
ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: 2018ರ ವಿಧಾನಸಭಾ ಚುನಾವಣೆ ವೇಳೆ ಗೋವಿಂದರಾಜನಗರ ಕ್ಷೇತ್ರದ 271ಮತಗಟ್ಟೆ ವಿವಿಪ್ಯಾಟ್‌ಗಳ ಮತ ಎಣಿಕೆಗೆ ನಿರ್ದೇಶನ ನೀಡಬೇಕೆಂದು ಕೋರಿ ಪರಾಜಿತ ಅಭ್ಯರ್ಥಿ ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಈ ಕುರಿತು ಪ್ರಿಯ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚುನಾವಣಾಧಿಕಾರಿ ತಮ್ಮ ವಿವೇಚನಾಧಿಕಾರ ಬಳಸಿಯೇ ಅರ್ಜಿದಾರರ ಮನವಿ ತಿರಸ್ಕರಿಸಿದ್ದಾರೆ. ಹೀಗಾಗಿ, ಅವರ ಆದೇಶ ರದ್ದುಗೊಳಿಸಲಾಗದು ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಕೋರಿಕೆಯಂತೆ ವಿಧಾನಸಭಾ ಕ್ಷೇತ್ರದ 271 ಮತಗಟ್ಟೆಗಳಲ್ಲಿನ ವಿವಿಪ್ಯಾಟ್‌ಗಳ ಎಣಿಕೆಗೆ ಆದೇಶ ನೀಡಲಾಗದು ಎಂದೂ ನ್ಯಾಯಪೀಠ ಹೇಳಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಗೋವಿಂದರಾಜನಗರ ಕ್ಷೇತ್ರದ ಮತ ಎಣಿಕೆ ಮೇ 15ರಂದು ನಡೆದಿತ್ತು. ಅದೇ ದಿನ ಮತ ಎಣಿಕೆ ಮುಕ್ತಾಯದ ಬಳಿಕ ಪ್ರಿಯಾಕೃಷ್ಣ ಸುಮಾರು 24 ಮತಗಟ್ಟೆಗಳ ವಿದ್ಯುನ್ಮಾನ ಮತ ಯಂತ್ರ ತಿರುಚಲಾಗಿದೆ. ಮತಗಳ ಜೊತೆಗೆ ವಿವಿ ಪ್ಯಾಟ್‌ನ ವೋಟರ್ ಸ್ಲಿಪ್‌ಗಳನ್ನೂ ಎಣಿಕೆ ಮಾಡಬೇಕು ಎಂದು ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಬಗ್ಗೆ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಪ್ರಿಯಾಕೃಷ್ಣ ಅವರ ಅರ್ಜಿ ತಿರಸ್ಕರಿಸಿದ್ದರು.
ಅದನ್ನು ಪ್ರಶ್ನಿಸಿ ಪ್ರಿಯ ಕೃಷ್ಣ, ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರು ದೂರಿರುವ 24 ಮತಗಟ್ಟೆಗಳಲ್ಲಿ 15,001 ಮತ ಚಲಾವಣೆ ಆಗಿವೆ. ಆ ಪೈಕಿ ಅರ್ಜಿದಾರರು 5,615 ಮತ ಪಡೆದುಕೊಂಡಿದ್ದಾರೆ. ಉಳಿದ 9,386 ಮತ ಉಳಿದ ಅಭ್ಯರ್ಥಿ, ನೋಟಾಗೆ ಬಿದ್ದಿವೆ. ಈ ಮತಗಳ ಪ್ರಮಾಣ ಅರ್ಜಿದಾರರ ಸೋಲಿನ ಅಂತರದ ಮತಗಳಾದ 11,354 ಮತಗಳಿಗೂ ಕಡಿಮೆ ಇದೆ. ಹೀಗಾಗಿ 24 ಮತಗಟ್ಟೆಗಳ ವಿವಿ ಪ್ಯಾಟ್ ಚೀಟಿಗಳ ಎಣಿಕೆಗೆ ಅರ್ಥವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.