High security number plate: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಹಿಂದೇಟು ಏಕೆ?
Team Udayavani, Sep 11, 2023, 10:26 AM IST
ಕೇವಲ ಎರಡೂವರೆ ತಿಂಗಳಲ್ಲಿ 1.75 ಕೋಟಿ ಹಳೆಯ ವಾಹನಗಳು ಈಗ ಸಾಮಾನ್ಯ ನಂಬರ್ ಪ್ಲೇಟ್‌ನಿಂದ ಎಚ್‌ಎಸ್‌ಆರ್‌ಪಿಗೆ ಪರಿವರ್ತನೆ ಆಗಬೇಕಿದೆ. ಅದರ ಪ್ರಕ್ರಿಯೆಗಳೆಲ್ಲವೂ ಆನ್‌ಲೈನ್ ಮೂಲಕವೇ ಆಗಬೇಕಿದೆ. ಗ್ರಾಮೀಣ ಭಾಗದಲ್ಲಿ ದೂರದ ಮಾತು. ಬೆಂಗಳೂರಿನಂತಹ ಮಹಾನಗರಗಳಲ್ಲೇ ನಿತ್ಯ ಬೆರಳೆಣಿಕೆಯಷ್ಟು ಮಾತ್ರ ಅಳವಡಿಕೆ ಆಗುತ್ತಿವೆ. ಈ ನಿಟ್ಟಿನಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಎಚ್‌ಎಸ್‌ಆರ್‌ಪಿ ಏನು? ಅದರ ಅಳವಡಿಕೆ ಹೇಗೆ? ಅದರ ಉಪಯೋಗ ಏನು? ಇಂತಹ ಹಲವು ಗೊಂದಲಗಳಿವೆ. ಅದರ ನಿವಾರಣೆ ಪ್ರಯತ್ನ ಸುದ್ದಿ ಸುತ್ತಾಟದಲ್ಲಿ…
ವಾಹನಗಳ ಹಳೆಯ ನಂಬರ್ ಪ್ಲೇಟ್ ಬದಲಾಯಿಸಿ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಬರುವ ನ.17ರ ಗಡುವು ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಅಳವಡಿಸಿಕೊಳ್ಳದಿದ್ದರೆ, “ದಂಡ ಪ್ರಯೋಗ’ದ ಎಚ್ಚರಿಕೆಯನ್ನೂ ಸಾರಿಗೆ ಇಲಾಖೆ ನೀಡಿದೆ. ರಾಜ್ಯದಲ್ಲಿ ಹಳೆಯ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಸಂಖ್ಯೆ ಅಂದಾಜು 1.75 ಕೋಟಿ ಇದ್ದು, ನಿತ್ಯ ಕನಿಷ್ಠ ಎರಡು ಲಕ್ಷ ವಾಹನಗಳ ನೋಂದಣಿ ಫಲಕಗಳು ಬದಲಾಗಬೇಕು. ಆದರೆ, ಪ್ರಸ್ತುತ ದಿನಕ್ಕೆ 200 ಕೂಡ ಆಗುತ್ತಿಲ್ಲ! ಇದಕ್ಕೆ ಮೂಲಕಾರಣ ಉದಾಸೀನ. ಆ ಉದಾಸೀನ ಸರ್ಕಾರದ್ದೂ ಆಗಿರಬಹುದು ಅಥವಾ ಸಾರಿಗೆ ಇಲಾಖೆಯದ್ದೂ ಆಗಿರಬಹುದು ಅಥವಾ ವಾಹನಗಳ ಮಾಲಿಕರದ್ದೂ ಆಗಿರಬಹುದು. ಎಚ್‌ಎಸ್‌ಆರ್‌ಪಿ ಬಗ್ಗೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು ಬಿಟ್ಟರೆ, ಇದುವರೆಗೆ ಯಾವುದೇ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಸಾರಿಗೆ ಸಚಿವರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಇನ್ನು ವಾಹನ ಮಾಲಿಕರಂತೂ ಅತ್ತ ತಿರುಗಿಯೂ ನೋಡಿಲ್ಲ. ಇದೆಲ್ಲದರ ಪರಿಣಾಮ ಒಂದು ಶೋರೂಂ ಅಥವಾ ವಿತರಕರಿಂದ ದಿನಕ್ಕೆ ಕೇವಲ ಒಂದು ಅಥವಾ ಎರಡು ನಂಬರ್ ಪ್ಲೇಟ್‌ಗಳ ಅಳವಡಿಕೆ ಆಗುತ್ತಿದೆ.
ಇಲಾಖೆಯಿಂದ ಸೂಚನೆ ಬಂದಿಲ್ಲ: “ಸಾರಿಗೆ ಇಲಾಖೆಯಿಂದ ನಮಗೆ ಯಾವುದೇ ಸೂಚನೆಗಳು ಬಂದಿಲ್ಲ. ಆದರೆ, ಕಂಪನಿಯಿಂದ ನಿರ್ದೇಶನಗಳು ಬಂದಿವೆ. ಅದರಂತೆ ನಾವು ಅಳವಡಿಕೆ ಮಾಡುತ್ತಿದ್ದೇವೆ. ಕಳೆದ ಹತ್ತು ಹದಿನೈದು ದಿನಗಳಲ್ಲಿ 10 ಎಚ್‌ಎಸ್ ಆರ್‌ಪಿಗಳನ್ನು ದ್ವಿಚಕ್ರ ವಾಹನಗಳಿಗೆ ಅಳವಡಿಕೆ ಮಾಡಿದ್ದೇವೆ. ಜನರಲ್ಲಿ ಅರಿವಿನ ಕೊರತೆ ಇರುವುದರಿಂದ ಸರ್ವಿಸ್‌ಗಾಗಿ ನಾವು ವಾಹನ ಮಾಲಿಕರಿಗೆ ಕರೆ ಮಾಡುವಾಗ, ಈ ಬಗ್ಗೆ ಕೇಳಿ ಮಾಹಿತಿ ನೀಡುತ್ತಿದ್ದೇವೆ’ ಎಂದು ರಾಜಾಜಿನಗರ ಸಪ್ತಗಿರಿ ಶೋರೂಂನ ವ್ಯವಸ್ಥಾಪಕ ಚಿನ್ನರಾಜು ತಿಳಿಸುತ್ತಾರೆ. “ನಗರದಲ್ಲಿ ನೈನ್ ಸ್ಟಾರ್‌ನ ಮೂರು ಶಾಖೆಗಳಿವೆ. ಮೂರೂ ಕಡೆಯಿಂದ ಕಳೆದ ಹತ್ತು ದಿನಗಳಲ್ಲಿ 15-20 ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಲಾಗಿದೆ. ಬೇಡಿಕೆ ತುಂಬಾ ಕಡಿಮೆ ಇದೆ. ಬರುವ ದಿನಗಳಲ್ಲಿ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇದೆ. ಸ್ವತಃ ವಾಹನ ಮಾಲಿಕರು ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಹೋಗಿ ಎಚ್ ಎಸ್‌ಆರ್‌ಪಿಗೆ ಬೇಡಿಕೆ ಇಡಬೇಕು. ಆದರೆ, ಬಹುತೇಕರಿಗೆ ಇದು ಗೊತ್ತಿಲ್ಲ’ ಎಂದು ನೈನ್ ಸ್ಟಾರ್ ಹೊಸೂರು ರಸ್ತೆ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿನಯ್ ರೆಡ್ಡಿ ಮಾಹಿತಿ ನೀಡುತ್ತಾರೆ.
11 ರಾಜ್ಯಗಳಲ್ಲಿ ಜಾರಿ: ಎಚ್‌ಎಸ್‌ಆರ್‌ಪಿ ನಿಯಮ ಜಾರಿಗೊಳಿಸಲು ಎರಡು ದಶಕಗಳ ಸಮಯ ಹಿಡಿದಿದೆ. ಆದರೆ, ಅದರ ಜಾರಿಗೆ ಬರೀ ಎರಡೂವರೆ ತಿಂಗಳು ಕಾಲಾವಕಾಶ ನೀಡಲಾಗಿದೆ. 2001ರಲ್ಲೇ ನಿಯಮದ ಬಗ್ಗೆ ಚರ್ಚೆ ಆಗಿದೆ. ಅಲ್ಲಿಂದ 2019ರವರೆಗೆ ವಿವಿಧ ಹಂತಗಳಲ್ಲಿ ಚರ್ಚೆ ನಡೆದವು. ಸರ್ಕಾರಗಳೂ ಬದಲಾದವು. ಅಂತಿಮವಾಗಿ ಅಸ್ತಿತ್ವಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಯಿತು. ಈಗಾಗಲೇ ಇದು 11 ರಾಜ್ಯಗಳಲ್ಲಿ ಜಾರಿಯಾಗಿದೆ. ಈಚೆಗೆ ಕರ್ನಾಟಕ ಸರ್ಕಾರ ಕೂಡ ಮುಂದಡಿ ಇಟ್ಟಿದೆ. ಅದರ ಸಮರ್ಪಕ ಅನುಷ್ಠಾನಕ್ಕೆ ಈಗ ಕಾರ್ಯಪವೃತ್ತವಾಗಬೇಕಿದೆ.
ದೇಶದ ಭದ್ರತೆ ಮತ್ತು ವಾಹನಗಳ ಕಳ್ಳತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಚ್‌ಎಸ್ ಆರ್‌ಪಿ ಜಾರಿಗೊಳಿಸಲಾಗಿದೆ. ಈ ನಿಯಮ ಅಸ್ತಿತ್ವಕ್ಕೆ ಬಂದ ನಂತರದಿಂದ ರಸ್ತೆಗಿಳಿಯುವ ಎಲ್ಲ ಪ್ರಕಾರದ ವಾಹನಗಳಿಗೂ ತಯಾರಕರೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿರುತ್ತಾರೆ. ಅದಕ್ಕಿಂತ ಮುನ್ನ ಅಂದರೆ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ 1.75 ಕೋಟಿ ವಾಹನಗಳ ಫಲಕಗಳ ಬದಲಾವಣೆ ಆಗಬೇಕಿದೆ. ಇದರಲ್ಲಿ ಶೇ. 70ರಷ್ಟು ವಾಹನಗಳು ಬೆಂಗಳೂರಿನಲ್ಲೇ ಇದ್ದು, ದ್ವಿಚಕ್ರ ವಾಹನಗಳೇ ಗರಿಷ್ಠ ಸಂಖ್ಯೆಯಲ್ಲಿವೆ.
ಹಾಗಿದ್ದರೆ, ಇಲಾಖೆ ನೀಡಿದ ಅಲ್ಪಾವಧಿ ಗಡುವಿನಲ್ಲಿ ಎಲ್ಲ ಹಳೆಯ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಸಾಧ್ಯವೇ? ಅಷ್ಟೊಂದು ವಿತರಕರು ಮತ್ತು ಮಾರಾಟಗಾರರು ಮತ್ತು ಮೂಲಸೌಕರ್ಯಗಳು ನಮ್ಮಲ್ಲಿ ಲಭ್ಯವಿದೆಯೇ? ಅಷ್ಟಕ್ಕೂ ಈ ಎಚ್‌ಎಸ್‌ಆರ್‌ಪಿ ಅವಶ್ಯಕತೆ ಏನಿದೆ? ಎಲ್ಲಿ ಬದಲಾವಣೆ ಮಾಡಬಹುದು? ಎಂಬ ಹಲವು ಪ್ರಶ್ನೆಗಳು ವಾಹನ ಮಾಲಿಕರಲ್ಲಿವೆ. ಆ ಗೊಂದಲ ನಿವಾರಣೆ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…
ಏನಿದು ಎಚ್‌ಎಸ್‌ಆರ್‌ಪಿ? ದೇಶದ ಪ್ರತಿ ವ್ಯಕ್ತಿಗೆ “ಆಧಾರ್’ ಸಂಖ್ಯೆ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ರೀತಿ, ಪ್ರತಿ ವಾಹನಕ್ಕೂ ವಿಶೇಷ ಸಂಖ್ಯೆ ನೀಡುವ ವ್ಯವಸ್ಥೆಯೇ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್ ಆರ್‌ಪಿ). 10 ಅಂಕಿಗಳ ಪಿನ್ (ವೈಯಕ್ತಿಕ ಗುರುತಿನ ಸಂಖ್ಯೆ)ನೀಡಲಾಗಿರುತ್ತದೆ. ಅದು ಆ ವಾಹನದ ಎಲ್ಲ ಮಾಹಿತಿಯೊಂದಿಗೆ ಸಂಯೋಜಿಸಲ್ಪಟ್ಟಿರುತ್ತದೆ. ವಾಹನ್-4 ಸಾಫ್ಟ್ ವೇರ್‌ನಲ್ಲಿ ಅದರ ದತ್ತಾಂಶಗಳು ಸಂಗ್ರಹಿಸಲ್ಪಟ್ಟಿರುತ್ತವೆ. ಆ ಸಂಖ್ಯೆ ಟೈಪ್ ಮಾಡಿದರೆ ಸಾಕು, ಎಲ್ಲ ಮಾಹಿತಿಗಳು ಲಭ್ಯವಾಗುವುದರಿಂದ ಅದಲು-ಬದಲಿಗೆ ಅವಕಾಶ ಇರುವುದಿಲ್ಲ. ಇನ್ನು ಅಲ್ಯುಮಿನಿಯಂನಿಂದ ತಯಾರಿಸಿದ ಈ ನಂಬರ್ ಪ್ಲೇಟ್‌ನಲ್ಲಿ 20×20 ಮಿ.ಮೀ. ಅಳತೆಯ ನೀಲಿ ಬಣ್ಣದ ಕ್ರೋಮಿಯಂ ಆಧಾರಿತ ಹೋಲೋಗ್ರಾಂ ಇರುತ್ತದೆ. ಅನ್ನು ಮರುಬಳಕೆ ಮಾಡಲಾಗದು ಮತ್ತು ತಿರುಚಲಿಕ್ಕೂ ಸಾಧ್ಯವಿಲ್ಲ. ಒಂದು ವೇಳೆ ಅದರ ಲಾಕ್ ಒಡೆದರೆ, ಮತ್ತೆ ಅದನ್ನು ಫಿಕ್ಸ್ ಮಾಡಲು ಬರುವುದಿಲ್ಲ. ಮತ್ತೆ ಹೊಸ ಲಾಕ್ ಅಧಿಕೃತ ರಿಟೇಲರ್ ಮೂಲಕವೇ ಬರಬೇಕು.
ನಕಲಿ ಹಾವಳಿಗೆ ಕಡಿವಾಣ: ಕಡ್ಡಾಯಗೊಳಿಸುತ್ತಿದ್ದಂತೆ ಇತ್ತ ನಕಲಿ ಎಚ್‌ಎಸ್‌ಆರ್‌ಪಿಗಳ ಹಾವಳಿ ಶುರು ವಾಗಿದೆ. ರಸ್ತೆಬದಿಯ ಮಾರಾಟಗಾರರೆಲ್ಲ ಇವುಗಳ ಅಳವಡಿಕೆಗೆ ಮುಂದಾಗು ತ್ತಿದ್ದಾರೆ. ಆದರೆ, ಆನ್‌ಲೈನ್ ಮೂಲಕ ಕೋರಿಕೆ ಸಲ್ಲಿಸಿ, ಅಧಿಕೃತ ಡೀಲರ್ ಅಥವಾ ಮಾರಾಟಗಾರರಿಂದ ಬರುವ ಎಚ್‌ಎಸ್‌ಆರ್‌ಪಿ ಮಾತ್ರ ಅಧಿಕೃತ. ಉಳಿದಿದ್ದೆಲ್ಲವೂ ನಕಲಿ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ.ಮಲ್ಲಿಕಾರ್ಜುನ ಸ್ಪಷ್ಟಪಡಿಸುತ್ತಾರೆ. ನಿಯಮದ ಪ್ರಕಾರ ಒಇಎಂಗಳಿಂದ ಅನುಮೋದನೆಗೊಂಡವರಿಗೆ ಮಾತ್ರ ಈ ನಂಬರ್ ಪ್ಲೇಟ್ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ನಕಲಿ ಹಾವಳಿ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ಕಡಿವಾಣ ಬೀಳಿದೆ. ಅದರ ಜತೆಗೆ ವಾಹನ ಮಾಲಿಕರು ಕೂಡ ಇದಕ್ಕೆ ಸಹಕರಿಸಬೇಕಾಗುತ್ತದೆ ಎಂದು ಹೇಳಿದರು.
ಯಾವುದು ಅಸಲಿ? ಯಾವುದು ನಕಲಿ?: ವಾಹನ ಮಾಲಿಕರನ್ನು ಇದನ್ನು ಪತ್ತೆ ಮಾಡುವುದು ಕಷ್ಟ. ಅಧಿಕೃತ ಡೀಲರ್ ಅಥವಾ ಮಾರಾಟಗಾರರು ಅಳವಡಿಸುವ ಎಚ್ ಎಸ್‌ಆರ್‌ಪಿ ಮಾತ್ರ ಅಸಲಿ. ಉಳಿದಿದ್ದೆಲ್ಲವೂ ನಕಲಿ. ಅಷ್ಟು ಮಾತ್ರ ಹೇಳಬಹುದು. ಪೊಲೀಸರು, ಸಾರಿಗೆ ಅಧಿಕಾರಿಗಳಿಗೆ “ವಾಹನ್-4′ ಮೂಲಕ ಸಂಖ್ಯೆ ನಮೂದಿಸಿ ಪತ್ತೆಹಚ್ಚಲು ಅವಕಾಶ ಇರುತ್ತದೆ. ಅಲ್ಲಿ ಸುಲಭವಾಗಿ ಅದು ಗೊತ್ತಾಗುತ್ತದೆ ಎಂದು ಸಿ. ಮಲ್ಲಿಕಾರ್ಜುನ ಸ್ಪಷ್ಟಪಡಿಸುತ್ತಾರೆ.
ಅವಧಿ ವಿಸ್ತರಣೆ?: ಎಲ್ಲ ಪ್ರಕಾರದ ಹಳೆಯ ವಾಹನಗಳು ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳಲು ನ.17 ಕಡೆಯ ದಿನವಾಗಿದೆ. ತಾಲೂಕು ಕೇಂದ್ರಗಳಲ್ಲೂ ಮಾರಾಟಗಾರರು ಅಥವಾ ಡೀಲರ್‌ಗಳಿರುವುದರಿಂದ ಕಷ್ಟ ಆಗದು. ಹತ್ತಿರದ ಶೋರೂಂನಲ್ಲಿ ಸಾರ್ವಜನಿಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು. ಗಡುವಿನೊಳಗೆ ನಿರೀಕ್ಷಿತ ಮಟ್ಟದಲ್ಲಿ ಅಳವಡಿಕೆ ಸಾಧ್ಯವಾಗದಿದ್ದರೆ, ಸರ್ಕಾರದ ಅನುಮೋದನೆಯೊಂದಿಗೆ 10-15 ದಿನಗಳು ವಿಸ್ತರಣೆ ಮಾಡಬಹುದು ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.
ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆ ಹೇಗೆ?: ಒಇಎಂ (ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನ್ಯುಫ್ಯಾಕ್ಚರರ್)ಗಳಿಂದ ಅನುಮೋದಿಸಲ್ಪಟ್ಟ ಮಾರಾಟಗಾರರು ಮತ್ತು ವಿತರಕರು (ಡೀಲರ್) ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುತ್ತಾರೆ. ಅದೂ ಆನ್‌ಲೈನ್ ಮೂಲಕವೇ ಕೋರಿಕೆ ಸಲ್ಲಿಸುವುದು ಅಗತ್ಯ ಮತ್ತು ಅನಿವಾರ್ಯ. ಇಡೀ ಪ್ರಕ್ರಿಯೆಗೆ ಕನಿಷ್ಠ 6ರಿಂದ 7 ದಿನ ಹಿಡಿಯುತ್ತದೆ. ಇದಕ್ಕಾಗಿ ವಾಹನಗಳ ಮಾಲಿಕರು ಮಾಡಬೇಕಾದ್ದಿಷ್ಟೇ - ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಎಚ್‌ಎಸ್‌ಆರ್‌ಪಿಗೆ ಕೋರಿಕೆ ಸಲ್ಲಿಸಬೇಕು. ನಂತರ ನೋಂದಣಿ ಪತ್ರ ಒಳಗೊಂಡಂತೆ ಅಗತ್ಯ ದಾಖಲೆಗಳನ್ನು ದಾಖಲಿಸಬೇಕು. ಅದು ಸಂಬಂಧಪಟ್ಟ ಒಇಎಂಗೆ ಹೋಗುತ್ತದೆ. ಅಲ್ಲಿ ಹತ್ತಿರದ ಡೀಲರ್ ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ತದನಂತರ ದಿನಾಂಕ ಮತ್ತು ಸಮಯ ನಿಗದಿಯಾಗುತ್ತದೆ. ಜತೆಗೆ ಆಯಾ ಸಮೀಪದ ಡೀಲರ್‌ಗೂ ಸಂದೇಶ ತಲುಪುತ್ತದೆ. ನಿಗದಿಪಡಿಸಿದ ಅವಧಿಯಲ್ಲಿ ಖುದ್ದು ವಾಹನದೊಂದಿಗೆ ಭೇಟಿ ನೀಡಿ ಅಳವಡಿಕೊಳ್ಳಬೇಕಾಗುತ್ತದೆ. ಮೂಲಗಳ ಪ್ರಕಾರ ದೇಶದಲ್ಲಿ 23 ಜನ ಒಇಎಂಗಳಿದ್ದು, ರಾಜ್ಯದಲ್ಲಿ ಸುಮಾರು 300-400 ಮಾರಾಟಗಾರರು ಅಥವಾ ವಿತರಕರು ಇರಬಹುದು ಎನ್ನಲಾಗಿದೆ.
ಹಳೆ, ಹೊಸ ನಂಬರ್ ಪ್ಲೇಟ್ ನಡುವಿನ ವ್ಯತ್ಯಾಸ ಏನು?:
- ಹಳೆಯ ನಂಬರ್ ಪ್ಲೇಟ್ ಅನ್ನು ಕಳ್ಳರು ಸುಲಭವಾಗಿ ಅದಲು-ಬದಲು ಮಾಡಬಹುದು. ಆದರೆ, ಎಚ್‌ಎಸ್ ಆರ್‌ಪಿಯಲ್ಲಿ ಇದಕ್ಕೆ ಅವಕಾಶ ಇಲ್ಲ.
- ನಂಬರ್ ಪ್ಲೇಟ್ ತಿರುಚುವುದು, ಗೀಚುವುದು ಮಾಡಬಹುದು. ಎಚ್ ಎಸ್‌ಆರ್‌ಪಿಯಲ್ಲಿ ಇದು ಸಾಧ್ಯವಿಲ್ಲ. ಅಲ್ಲದೆ, ಎಲ್ಲ ಮಾಹಿತಿಗಳೂ ಇದರಲ್ಲಿನ ಹತ್ತು ಅಂಕಿಗಳ ವಿಶೇಷ ನಂಬರ್‌ನಲ್ಲಿ ಇರುತ್ತದೆ.
- ಈ ಮೊದಲು ನಂಬರ್ ಪ್ಲೇಟ್ ವಿನ್ಯಾಸ, ಗಾತ್ರ ಮತ್ತು ಬಣ್ಣ ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದಿತ್ತು. ಇದರಿಂದ ಸಂಚರಿಸುವ ವಾಹನಗಳ ಸಂಖ್ಯೆ ಗುರುತಿಸುವುದು ಪೊಲೀಸರಿಗೆ ಕಷ್ಟ ಆಗುತ್ತಿತ್ತು. ಇನ್ಮುಂದೆ ಏಕರೂಪದಲ್ಲಿ ಇರುವುದರಿಂದ ಆ ತೊಂದರೆ ಇರುವುದಿಲ್ಲ
–ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.