High Temperature: ಸುಡುಸುಡು ಬೆಂಗಳೂರು: ದಾಖಲೆಯ 37.2 ಡಿಗ್ರಿ ತಾಪ
Team Udayavani, Apr 3, 2024, 10:11 AM IST
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತಾಪಮಾನವು ಏರಿಕೆಯಾಗುತ್ತಲೇ ಇರುವುದು ಬೆಂಗಳೂರಿ ಗರಲ್ಲಿ ಬೆವರಿಳಿಸುವಂತೆ ಮಾಡಿದೆ. ಇದಕ್ಕೆ ಪೂರಕ ವೆಂಬಂತೆ ಮಂಗಳವಾರ 2024ರಲ್ಲೇ ಅತ್ಯಧಿಕ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಲೇ ಇದೆ. ಕಳೆದ ಮಾರ್ಚ್‌ನಲ್ಲಿ ಸರಾಸರಿ 34-35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪ ಮಾನ ದಾಖಲಾಗಿತ್ತು. ಇದರ ಪ್ರಮಾಣವು ಏಪ್ರಿಲ್ 2ರಂದು 37.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅತ್ಯಧಿಕ ದಾಖಲೆ ಗರಿಷ್ಠ ಉಷ್ಣಾಂಶ ಇದಾಗಿದೆ. ಈ ವಾರದಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
2016ರಲ್ಲಿ ಏಪ್ರಿಲ್ 25ರಂದು 39.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ದಾಖಲೆಯ ಉಷ್ಣಾಂಶ ದಾಖಲಾ ಗಿತ್ತು. ಇದು ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದರೆ, ಈ ಬಾರಿ ಅಂದರೆ 2024ರಲ್ಲಿ ಏಪ್ರಿಲ್ ಅಂತ್ಯಕ್ಕೆ 39.2 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗುವ ಲಕ್ಷಣ ಗೋಚರಿಸುತ್ತಿದೆ. ಈ ಮೂಲಕ ಬೆಂಗಳೂರು ಬೆಂದ ಕಾಳೂರಾಗಿ ಮಾರ್ಪಟ್ಟಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 37.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾದರೆ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 36.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿರುವುದು ಹುಬ್ಬೇರಿಸುವಂತೆ ಮಾಡಿದೆ.
ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ: ಈ ಅವಧಿಗೆ ಬೆಂಗಳೂರಿನಲ್ಲಿ ವಾಡಿಕೆಯಂತೆ 34.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗ ಬೇಕಿತ್ತು. ಆದರೆ, ವಾಡಿಕೆಗಿಂತ 3 ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತಿದೆ. ಎಲ್‌ನಿನೋ ಮಧ್ಯಮ ಹಂತದಲ್ಲಿ ಇದೆ. ಜೂನ್‌ನಲ್ಲಿ ಎಲ್‌ನಿನೋ ದುರ್ಬಲವಾಗುವ ಸಾಧ್ಯತೆಗಳಿವೆ. ನಂತರ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗುವ ಸಂಭವ ಇದೆ. ಸದ್ಯ ಬೆಳಗ್ಗೆ ಭಾಗಶಃ ಮೋಡ ಕವಿದ ಆಕಾಶವಿರಲಿದೆ. ಮಧ್ಯಾಹ್ನ/ಸಂಜೆಯ ಹೊತ್ತಿಗೆ ಸ್ಪಷ್ಟವಾದ ಆಕಾಶವಾಗುತ್ತದೆ. ಇದರಿಂದ ಹೆಚ್ಚಿನ ತಾಪಮಾನದ ಅನುಭವ ಆಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ “ಉದಯವಾಣಿ’ಗೆ ತಿಳಿಸಿದ್ದಾರೆ.
ತಾಪಮಾನದ ಬೇಗೆಗೆ ಬೆಂಗಳೂರಿಗರು ತತ್ತರ: ಒಂದು ಕಾಲದಲ್ಲಿ ಏಪ್ರಿಲ್‌ನಲ್ಲೂ ತಂಪಾಗಿ ಇರುತ್ತಿದ್ದ ಐಟಿ-ಬಿಟಿ ಸಿಟಿಯಲ್ಲಿ ಇದೀಗ ತಾಪಮಾನದ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನ ಎಲ್ಲೆಡೆ ಹವಾನಿಯಂತ್ರಕ (ಏರ್ ಕಂಡೀಷನ್), ಕೂಲರ್, ಫ್ಯಾನ್‌ಗಳು ದಿನದ 24 ಗಂಟೆಯೂ ಚಲನೆಯಲ್ಲಿರುವುದು ಕಂಡು ಬರುತ್ತಿದೆ. ಬೆಂಗಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಬಾಟಲಿಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ. 2022, 2023ರ ಏಪ್ರಿಲ್‌ನಲ್ಲಿ ಮಾರಾಟವಾಗುತ್ತಿದ್ದ ನೀರಿನ ಬಾಟಲಿಗಳ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಮಾತು.
ಬೆಂಗಳೂರಿನಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಿದೆ. ರಾಜ್ಯ ರಾಜಧಾನಿಯಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ತಾಪಮಾನವು ಹೆಚ್ಚುತ್ತಲೇ ಇದೆ. ಜನ ಸಾಮಾನ್ಯರು ತಾಪಮಾನದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.-ಪ್ರಸಾದ್, ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.