ಪತ್ರ ಸಮರಕ್ಕೆ ನಾಂದಿಯಾದ ಹಿಂದಿ
Team Udayavani, Jul 7, 2017, 11:16 AM IST
ಬೆಂಗಳೂರು: “ನಮ್ಮ ಮೆಟ್ರೋ’ ರೈಲ್ವೆ ಸೇವೆಯಲ್ಲಿ ಹಿಂದಿ ಬಳಕೆಗೆ ಆದ್ಯತೆ ನೀಡುವ ಕುರಿತು ಬಿಎಂಆರ್‌ಸಿಎಲ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡುವಿನ ಪತ್ರ ಸಮರ ಮುಂದುವರೆದಿದೆ. ನಮ್ಮ ಮೆಟ್ರೋ ಸೇವೆಗಳಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಸಲಾಗಿದ್ದು, ಕೂಡಲೇ ಹಿಂದಿ ಭಾಷೆ ಕೈಬಿಟ್ಟು, ದ್ವಿಭಾಷಾ ಸೂತ್ರ ಅನುಸರಿಸುವಂತೆ ಜು.3ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಎಂಆರ್‌ಸಿಎಲ್ ಸಂಸ್ಥೆಗೆ ಪತ್ರ ಬರೆದಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಿಎಂಆರ್‌ಸಿಎಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ ಹಿಂದಿ ಭಾಷೆ ಬಳಕೆಯನ್ನು ಸಮರ್ಥಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಚಲಿತ ನಿಯಮಗಳಲ್ಲಿ ದಾಖಲಿಸಿರುವ ಕೆಲವು ನಿಯಮಗಳನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ಕಡ್ಡಾಯವಾಗಿ ರಾಜ್ಯದ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಸ್ಥಗಿತಗೊಳಿಸಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿ ಮತ್ತೆ ಪತ್ರ ಬರೆದಿದ್ದಾರೆ.
ಬಿಎಂಆರ್‌ಸಿಎಲ್ ಸಂಸ್ಥೆಯು ದೇಶದ ಸಂಯುಕ್ತ ವ್ಯವಸ್ಥೆಯನ್ನು ಗೌರವಿಸುವ ಮೂಲಕ ಆಯಾ ರಾಜ್ಯಗಳ ಅಸ್ಮಿತೆಯನ್ನು ಎತ್ತಿಹಿಡಿಯುವ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕು. ಈ ಕುರಿತು 15 ದಿನಗಳ ಒಳಗಾಗಿ ಕ್ರಮಕೈಗೊಂಡಿರುವ ಕುರಿತು ವರದಿ ಸಲ್ಲಿಸುವಂತೆ ಸಂಸ್ಥೆಗೆ ನೀಡಿರುವ ನೋಟಿಸ್‌ನಲ್ಲಿ ಆದೇಶಿಸಿದ್ದಾರೆ.
ಖರೋಲ ದ್ವಿಮುಖ ನೀತಿಯ ಪತ್ರ ಬಿಡುಗಡೆ
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಗುರುವಾರ ದಾಖಲೆ ಬಿಡುಗಡೆ ಮಾಡಿದ್ದು, ಮೆಟ್ರೋ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 2016ರಲ್ಲಿ ಕರ್ನಾಟಕ ಮೆಟ್ರೋ ನಿಗಮದಲ್ಲಿ ಹಿಂದಿ ಬಳಕೆ ಮಾಡುವುದಕ್ಕೆ ಬರುವುದಿಲ್ಲ ಎಂದು ಅಂದಿನ ಮುಖ್ಯ ಕಾರ್ಯದರ್ಶಿಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಪತ್ರ ಬರೆದಿದ್ದರು.
ನಂತರ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಅವರು, ಕೇಂದ್ರ ಸಚಿವ ವೆಂಕಯ್ಯನಾಯ್ಡು ಆದೇಶದ ಮೇರೆಗೆ ಮೆಟ್ರೋದಲ್ಲಿ ಹಿಂದಿ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬರೆದ ಪತ್ರಕ್ಕೂ ಹಿಂದಿ ಬಳಕೆಯನ್ನು ಸಮರ್ಥಿಸಿಕೊಂಡು ಸ್ಪಷ್ಟನೆ ನೀಡಿದ್ದಾರೆ.
ಆದ್ದರಿಂದ ಕೂಡಲೇ ಮೆಟ್ರೋ ಅಧಿಕಾರಿ ವಿರುದ್ಧ ಕ್ರಮಕೈಗೊಂಡು, ಮೆಟ್ರೋ ಸೇವೆಯಲ್ಲಿ ಹಿಂದಿ ಬಳಸದಂತೆ ಆದೇಶಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹಿಸಿದ್ದಾರೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ 2016 ಮತ್ತು 2017ರಲ್ಲಿ ಸರ್ಕಾರಕ್ಕೆ ಬರೆದಿದ್ದ ಪತ್ರಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಮೆಟ್ರೋದಲ್ಲಿ ಪ್ರಯಾಣಿಸಿ ವ್ಯವಸ್ಥೆ ಪರಿಶೀಲಿಸಲಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಅಗತ್ಯ ಸೌಲಭ್ಯಗಳ ಕೊರತೆ ಇದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಶುಕ್ರವಾರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಮೆಟ್ರೋ ರೈಲಿನಲ್ಲಿ ನಿಲ್ಲಲು ಕೂಡ ಸಾಧ್ಯವಾಗದಂತಹ ಸ್ಥಿತಿ ಇದ್ದು, ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ.
ವೃದ್ಧರು, ಗರ್ಭಿಣಿಯರು, ಅಂಗವಿಕಲರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕೂಡ ಇಲ್ಲ. ಇರುವಂತಹ ಆಸನಗಳನ್ನು ಸಾಮರ್ಥ್ಯ ಇರುವವರೇ ಕುಳಿತಿರುತ್ತಾರೆ. ಜತೆಗೆ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಸದಾ ಬೀಗ ಹಾಕಲಾಗಿರುತ್ತದೆ. ಅಲ್ಲಿನ ಸಿಬ್ಬಂದಿ ಅವುಗಳನ್ನು ಬಳಸಲು ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ ಎಂಬಿತ್ಯಾದಿ ಹಲವು ದೂರುಗಳು ಆಯೋಗಕ್ಕೆ ಬಂದಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಮೆಟ್ರೋ ನಿಲ್ದಾœಣ ಮತ್ತು ರೈಲುಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಪರಿಶೀಲನೆಗೆ ಖುದ್ದಾಗಿ ಜು.7ರಂದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ತೀರ್ಮಾನಿಸಿದ್ದಾರೆ.
ಅಂದು ಬೆಳಗ್ಗೆ 10ಕ್ಕೆ ವಿಜಯನಗರ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್-ಕಬ್ಬನ್‌ಪಾರ್ಕ್- ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದವರೆಗೂ ಪ್ರಯಾಣಿಸಲಿದ್ದಾರೆ. ಸಾಧ್ಯವಾದರೆ, ಮೆಜೆಸ್ಟಿಕ್‌ನಿಂದ ಜಯನಗರ ಮೆಟ್ರೋ ನಿಲ್ದಾಣದವರೆಗೆ ತೆರಳಿ ಮಹಿಳೆಯರ ಕುಂದುಕೊರತೆ ತಿಳಿಯುವುದಾಗಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಉದಯವಾಣಿಗೆ ತಿಳಿಸಿದ್ದಾರೆ.
ಬ್ಯಾಗ್ ತಪಾಸಣೆ ವಿಚಾರಕ್ಕೆ ಮೆಟ್ರೋದಲ್ಲಿ ಸಿಬ್ಬಂದಿಯ ಮಾರಾಮಾರಿ
ಬೆಂಗಳೂರು: ಕ್ಷುಲಕ್ಕ ವಿಚಾರಕ್ಕೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಈ ಸಂಬಂಧ ಇಬ್ಬರು ಮೆಟ್ರೋ ಸಿಬ್ಬಂದಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಮತ್ತು ಹರೀಶ್ ಬಂಧಿತರು. ಆನಂದ್ ಗುಡ್ಡದ್ ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ.
ಮೆಟ್ರೋ ನಿಲ್ದಾಣದಲ್ಲಿ ಮೇಲ್ವಿಚಾರಕನಾಗಿರುವ ರಾಕೇಶ್ ಗುರುವಾರ ಬೆಳಗ್ಗೆ 6 ಗಂಟೆಗೆ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣಕ್ಕೆ ಕರ್ತವ್ಯಕ್ಕೆ ಬಂದಿದ್ದ. ಇದೇ ವೇಳೆ ಭದ್ರತಾ ಸಿಬ್ಬಂದಿ ಆನಂದ್ ಗುಡ್ಡದ್ ಎಂಬುವರು ಬ್ಯಾಗ್‌ಅನ್ನು ಲೋಹ ಶೋಧಕ ಯಂತ್ರ ಮತ್ತು ಸ್ಕ್ಯಾನಿಂಗ್‌ಗೆ ಒಳಪಡಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಕೇಶ್, ನಾನು ಸಹ ಮೆಟ್ರೋ ಸಿಬ್ಬಂದಿ ನನ್ನ ತಪಾಸಣೆ ಅಗತ್ಯವಿಲ್ಲ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾನೆ.
ಆಗ ಅಲ್ಲೇ ಇದ್ದ ಮತ್ತೂರ್ವ ಭದ್ರತಾ ಪೇದೆ ಲಕ್ಷ್ಮಣ್ ಕೂಡ ಯಾರೆ ಬಂದರೂ ತಪಾಸಣೆ ನಡೆಸುವುದು ನಮ್ಮ ಕರ್ತವ್ಯ ಸಹಕರಿಸಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಕೇಶ್ ಇಬ್ಬರು ಸಿಬ್ಬಂದಿ ಮೇಲೆ ಕೂಗಾಡಿ ಒಂದು ಹಂತದಲ್ಲಿ ಹಲ್ಲೆಗೂ ಯತ್ನಿಸಿದ. ಕೂಡಲೇ ಅಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಿದರು.
ನಂತರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಹೋದ್ಯೋಗಿ ಹರೀಶ್ ಹಾಗೂ ಒಂದಷ್ಟು ಜನರ ತಂಡದೊಂದಿಗೆ ಆನಂದ್ ಬಳಿಎ ಬಂದ ರಾಕೇಶ್ ಹಲ್ಲೆ ಮಾಡಿದ್ದಾನೆ.
ಇದನ್ನು ತಡೆಯಲು ಬಂದ ಲಕ್ಷ್ಮಣ್ ಮೇಲೂ ಸಹ ಹಲ್ಲೆ ನಡೆಸಿದ್ದಲ್ಲದೆ ಮಹಿಳಾ ಸಿಬ್ಬಂದಿ ಭಾರತಿ ಎಂಬವರನ್ನು ಎಳೆದಾಡಿದ. ಈ ಹಿನ್ನೆಲೆಯಲ್ಲಿ ಆನಂದ್ ಗುಡ್ಡದ್ ನೀಡಿರುವ ದೂರಿನ ಮೇರೆಗೆ ರಾಕೇಶ್ ಮತ್ತು ಹರೀಶ್‌ನನ್ನು ಪೊಲೀಸರು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನುಷ್ಟು ಮಂದಿ ಭಾಗಿಯಾಗಿರುವುದು ಕಂಡು ಬಂದಿದ್ದು, ನಿಲ್ದಾಣದಲ್ಲಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
-ಚಂದ್ರಗುಪ್ತಾ, ಡಿಸಿಪಿ ಕೇಂದ್ರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.