ಮಾನ ಹೋದ್ರೂ ಮರೆಯಾಗದ ತ್ಯಾಜ್ಯ ವ್ಯಾಜ್ಯ
Team Udayavani, Apr 18, 2017, 11:54 AM IST
ವಿಷಆಗುತ್ತಿದೆ ರಾಜಧಾನಿ ಕಸ: ಬಿಬಿಎಂಪಿಯ ಎಲ್ಲ ಆರು ಘಟಕಗಳಲ್ಲಿನ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯ, ವಿಂಗಡಣೆಯಾಗುತ್ತಿರುವ ಪ್ರಮಾಣ, ಸದ್ಯದ ಸ್ಥಿತಿ, ಘಟಕಗಳ ಬಳಿ ಸೃಷ್ಟಿಯಾಗಿರುವ ಸಮಸ್ಯೆಗಳು, ಅದರ ನಿವಾರಣೆಗೆ ಪಾಲಿಕೆ ಕೈಗೊಂಡಿರುವ ಕ್ರಮಗಳ ಕುರಿತು ಇಂದಿನಿಂದ ಉದಯವಾಣಿ ಸರಣಿ ವರದಿ ಪ್ರಕಟಿಸಲಿದೆ.
ಬೆಂಗಳೂರು: ತ್ಯಾಜ್ಯ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಪಖ್ಯಾತಿಗೆ ಗುರಿಯಾಗಿ ಮಾನ ಹರಾಜಾದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಐದು ವರ್ಷಗಳ ಹಿಂದೆ ತ್ಯಾಜ್ಯ ವಿಲೇವಾರಿಯಾಗದೆ ಉದ್ಭವಿಸಿದ್ದ ಸಮಸ್ಯೆಗೆ ಸಮರ್ಪಕ ಪರಿಹಾರ ಕಂಡುಹಿಡಿಯುವಲ್ಲಿ ಬಿಬಿಎಂಪಿ ವಿಫಲವಾದ್ದರಿಂದ ಮತ್ತೂಮ್ಮೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಭೀತಿ ಎದುರಾಗಿದೆ.
ಹಿಂದಿನ ಘಟನೆ ಬಳಿಕ ಬಿಬಿಎಂಪಿ ಆರು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿತಾದರೂ ವೈಜ್ಞಾನಿಕ ನಿರ್ವಹಣೆಗೆ ಒತ್ತು ನೀಡದ ಕಾರಣ ಸ್ಥಳೀಯರ ವಿರೋಧ ತೀವ್ರವಾಗಿ ಮೂರು ಘಟಕಗಳು ಈಗ ಸ್ಥಗಿತಗೊಂಡಿವೆ. ಎರಡು ಘಟಕಗಳಿಗೆ ಪೊಲೀಸ್ ಭದ್ರತೆಯಲ್ಲಿ ಕಸ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಮತ್ತೆ ರಾಜಧಾನಿಯ ರಸ್ತೆಗಳು ಕಸದ ರಾಶಿಗಳಿಂದ ತುಂಬಿ ದುರ್ನಾತ ಬೀರುವ ಸಾಧ್ಯತೆ ಇಲ್ಲದಿಲ್ಲ.
ತ್ಯಾಜ್ಯ ನಿರ್ವಹಣೆಯಲ್ಲಿನ ವೈಫಲ್ಯದಿಂದ ಸರ್ಕಾರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ ನೆಲದ ಮೇಲೆಲ್ಲೂ ಹಿಡಿ ಕಸವೂ ಉಳಿಯದಂತೆ ವೈಜ್ಞಾನಿಕ ಸಂಸ್ಕರಣೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಕಟಿಸಿತು. ಅದರಂತೆ ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ನಗರದ ಆರು ಕಡೆ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಿಸಿದೆ. ಆದರೆ, ಗುತ್ತಿಗೆದಾರರು ಘಟಕಗಳಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಘಟಕಗಳನ್ನು ಮುಚ್ಚಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸವನ್ನು ಪ್ರತ್ಯೇಕವಾಗಿ ಸಾಗಿಸಿ ವೈಜ್ಞಾನಿಕ ವಿಧಾನದಡಿ ಗೊಬ್ಬರವಾಗಿ ಪರಿವರ್ತಿಸುವ ಉದ್ದೇಶದಿಂದ ನಿರ್ಮಿಸಿದ ಘಟಕಗಳೇ ಇಂದು ಸಮಸ್ಯೆಗಳ ಗೂಡಾಗಿವೆ. ಪರಿಣಾಮವಾಗಿ ಘಟಕದ ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಬೀರುತ್ತಿದ್ದು, ನೊಣ ಹಾಗೂ ಸೊಳ್ಳೆ ಕಾಟಕ್ಕೆ ಸ್ಥಳೀಯರು ಹೈರಾಣಾಗಿದ್ದಾರೆ. ವೈಜ್ಞಾನಿಕ ಸಂಸ್ಕರಣೆಗೆ ಒತ್ತು ನೀಡಿ ಸ್ಥಳೀಯರಲ್ಲಿ ವಿಶ್ವಾಸ ಮೂಡಿಸದಿದ್ದರೆ 2012ರ ಪರಿಸ್ಥಿತಿ ಮರು ಕಳಿಸಲಿದ್ದು, ಜಾಗತಿಕ ಮಟ್ಟದಲ್ಲಿ ಮತ್ತೂಮ್ಮೆ ಬೆಂಗಳೂರು ಅಪಖ್ಯಾತಿಗೆ ಒಳಗಾಗುವ ಆತಂಕ ಮೂಡಲಾರಂಭಿಸಿದೆ.
ಜನ ಹೋರಾಟ ತೀವ್ರ: ಘಟಕಗಳಿಂದ ಹೊರ ಬರುವ ದುರ್ವಾಸನೆ ಹೆಚ್ಚಾದಂತೆ ಸ್ಥಳೀಯರು ಘಟಕಗಳನ್ನು ಸ್ಥಗಿತಗೊಳಿಸುವಂತೆ ಹೋರಾಟ ತೀವ್ರಗೊಳಿಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಹತ್ತಾರು ಬಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರಾದರೂ, ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಇದರಿಂದ ರೊಚ್ಚಿಗೆದ್ದ ಜನ ತ್ಯಾಜ್ಯ ಸಾಗಣೆ ವಾಹನ ಚಾಲಕರ ಮೇಲೆ ಹಲ್ಲೆ ನಡೆಸುವ ಘಟನೆಗಳು ಸಂಭವಿಸುತ್ತಲೇ ಇವೆ.
ಇದರಿಂದಾಗಿ ಆಗಾಗ್ಗೆ ಘಟಕಗಳು ದಿಢೀರ್ ಸ್ಥಗಿತಗೊಂಡು ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಕಾರ್ಯಾರಂಭವಾಗುತ್ತಿವೆ. ಸ್ಥಳೀಯರಿಂದ ಹಲ್ಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಘಟಕಗಳಿಗೆ ಪೊಲೀಸ್ ಭದ್ರತೆಯಲ್ಲಿ ಕಸ ಸಾಗಿಸಲಾಗುತ್ತಿದೆ. ಆದರೆ, ಪೊಲೀಸ್ ಭದ್ರತೆ ಎಷ್ಟು ದಿನ ಕಸ ಸಾಗಿಸಲು ಸಾಧ್ಯ ಎಂಬ ಪ್ರಶ್ನೆ ಮೂಡಿಸಿದ್ದು, ಸ್ಥಳೀಯರ ಮನವೊಲಿಸುವ ಮೂಲಕ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಪಾಲಿಕೆ ಮುಂದಾಗಬೇಕಿದೆ.
ಸಮಸ್ಯೆ ಭುಗಿಲೆದ್ದು, ಸ್ಥಳೀಯರು ಉಗ್ರ ಹೋರಾಟಕ್ಕಿಳಿದಾಗ ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಹುಡುಕುವ ಬದಲಿಗೆ ಘಟಕಗಳಲ್ಲಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಂಡು, ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ, ಅಧಿಕಾರಿಗಳು ಮತ್ತದೆ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದ್ದು, ಘಟಕಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ನಗರದ ತ್ಯಾಜ್ಯವನ್ನು ಹೊರವಲಯಗಳಲ್ಲಿರುವ ಕಲ್ಲು ಕ್ವಾರಿಗಳಿಗೆ ಸುರಿಯುವಂತಾಗಿದೆ.
ಹಾಗಾಗಿ ಈಗಾಗಲೇ ಎರಡು ಕ್ವಾರಿಗಳು ಕಸದಿಂದ ಭರ್ತಿಯಾಗಿದ್ದು, ಉಳಿದೆರಡು ಕ್ವಾರಿಗಳು ಒಂದೊವರೆ ವರ್ಷದಲ್ಲಿ ಭರ್ತಿಯಾಗುವ ಸ್ಥಿತಿಯಲ್ಲಿವೆ. ಪಾಲಿಕೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರಗಳ ಮೊರೆ ಹೋಗದೆ ಶೀಘ್ರ ಎಲ್ಲ ಘಟಕಗಳ ಮರು ಆರಂಭಕ್ಕೆ ಮುಂದಾಗುವ ಮೂಲಕ ವಿಂಗಡಣೆಯಾಗುತ್ತಿರುವ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸಬೇಕಿದೆ. ಇದರೊಂದಿಗೆ ಘಟಕಗಳ ಸುತ್ತಮತ್ತಲಿನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಘಟಕಗಳನ್ನು ನಡೆಸಿದರೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಲಿದೆ.
ದಂಡಕ್ಕೂ ಬಗ್ಗದ ಜನತೆ
ಹಸಿ- ಒಣ ಪ್ರತ್ಯೇಕವಾಗಿ ಸಾಗಣೆಯಾಗದೆ ಮಿಶ್ರ ತ್ಯಾಜ್ಯ ಘಟಕಗಳಿಗೆ ಸಾಗಣೆಯಾಗುತ್ತಿರುವುದರಿಂದ ಹೆಚ್ಚಿನ ತೊಂದರೆ ತಲೆದೋರಿ ಸಮಸ್ಯೆ ಉಂಟಾಗುತ್ತಿತ್ತು. ಈ ಕುರಿತು ಪಾಲಿಕೆಯಿಂದ ಹಲವಾರು ಜಾಗೃತಿ ಕಾರ್ಯಕ್ರಮದ ಜತೆಗೆ ವಿಂಗಡಣೆ ಕಡ್ಡಾಯಗೊಳಿಸಿ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿತು. ಇಷ್ಟಾದರೂ ನಗರದ ಎಲ್ಲ ವರ್ಗದ ಜನರಿಗೆ ಸಂಪೂರ್ಣ ಸಹಕಾರ ಸಿಗುತ್ತಿಲ್ಲ. ಸದ್ಯ ಶೇ.50ರಷ್ಟು ಕಸ ವಿಂಗಡಣೆ ತುಸು ಸಮಾಧಾನ ತಂದರೂ ಪೂರ್ಣ ಪ್ರಮಾಣದಲ್ಲಿ ವಿಂಗಡಣೆಯಾದರೆ ಸಮಸ್ಯೆ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ.
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.