House arrest: 10 ದಿನ ಹೌಸ್ ಅರೆಸ್ಟ್ ಮಾಡಿ 30 ಲಕ್ಷ ರೂ. ಸುಲಿಗೆ!
ಫೆಡೆಕ್ಸ್, ಡಿಎಚ್‌ಎಲ್ ಕೊರಿಯರ್ ಸಂಸ್ಥೆ ಸೋಗಲ್ಲಿ ಖಾಸಗಿ ಉದ್ಯೋಗಿಗೆ ವಂಚನೆ
Team Udayavani, Sep 24, 2024, 11:02 AM IST
ಬೆಂಗಳೂರು: ಫೆಡೆಕ್ಸ್ ಹಾಗೂ ಡಿಎಚ್‌ಎಲ್ ಇಂಟರ್ ನ್ಯಾಷನಲ್ ಕೊರಿಯರ್ ಕಂಪನಿ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ “ಹೌಸ್ ಅರೆಸ್ಟ್’ ಮಾಡಿ 30 ಲಕ್ಷ ರೂ. ಸುಲಿಗೆ ಮಾಡಿದ ಮೂವರು ವಂಚಕರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿಗಳಾದ ಮುಕರಾಮ್ (32), ಮನ್ಸೂರ್ (30) ಮತ್ತು ಥಣಿಸಂದ್ರ ನಿವಾಸಿ ಇಬ್ರಾಹಿಂ (34) ಬಂಧಿತರು. ಆರೋಪಿಗಳಿಂದ 11.75 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡಿರುವ ಇತರೆ ಆರೋಪಿಗಳು ಮುಂಬೈ, ಬೆಂಗಳೂರು ಹಾಗೂ ವಿದೇಶದಲ್ಲಿರುವ ಮಾಹಿತಿಯಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಬ್ರಹ್ಮಣ್ಯಪುರದಲ್ಲಿರುವ ಅಪಾರ್ಟ್‌ವೊಂದರ ನಿವಾಸಿಗೆ ಜೂನ್ 24ರಂದು ಕರೆ ಮಾಡಿದ ವ್ಯಕ್ತಿ, “ತಾನು ಡಿಎಚ್‌ಎಲ್ ಕೊರಿಯರ್ ಉದ್ಯೋಗಿ’ ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಹೆಸರಿಗೆ ಶಾಂಘೈನಿಂದ ಪಾರ್ಸೆಲ್ ಮುಂಬೈಗೆ ಬಂದಿದೆ. ಈ ಕೋರಿಯರ್ ಪಾರ್ಸೆಲ್‌ನಲ್ಲಿ 140 ಡ್ರಗ್ಸ್ ಇದೆ. ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವುದರಿಂದ ನಿಮ್ಮ ವಿರುದ್ಧ ಮುಂಬೈ ಕ್ರೈಂ ಪೊಲೀಸ್ ಮತ್ತು ಸಿಬಿಐ ತನಿಖೆ ನಡೆಸುತ್ತಿದ್ದು, ಮುಂಬೈ ಪೊಲೀಸರು ಮಾತನಾಡುತ್ತಾರೆ ಎಂದು ಮತ್ತೂಬ್ಬರಿಗೆ ಫೋನ್ ಕೊಟ್ಟಿದ್ದಾನೆ. ಬಳಿಕ ಮಾತನಾಡಿದ ವ್ಯಕ್ತಿ, ಸ್ಕೈಪ್ ಮೂಲಕ ಸಿಬಿಐ ಅಧಿಕಾರಿಯೊಬ್ಬರು ಸಂಪರ್ಕಿಸಲಿದ್ದಾರೆ ಎಂದಿದ್ದಾನೆ.
ಹೌಸ್ ಅರೆಸ್ಟ್!: ಕೆಲ ಹೊತ್ತಿನ ಬಳಿಕ ಅಪರಿಚಿತ ವ್ಯಕ್ತಿ ಸ್ಕೈಪ್ ಆ್ಯಪ್ ಮೂಲಕ ದೂರುದಾರರನ್ನು ಸಂಪರ್ಕಿಸಿ, “ಸಿಬಿಐ ಅಧಿಕಾರಿ’ ಎಂದು ಹೇಳಿ, ಹವಾಲಾ ಮೂಲಕ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ಹೀಗಾಗಿ ನಿಮ್ಮನ್ನು “ಹೌಸ್ ಅರೆಸ್ಟ್’ ಮಾಡುತ್ತೇವೆ ಎಂದಿದಲ್ಲದೆ, ಕೂಡಲೇ ಮನೆ ತೊರೆದು, ಸ್ಟೇ ಹೋಮ್‌ಗೆ ಹೋಗಬೇಕೆಂದು ಸೂಚಿಸಿದ್ದಾನೆ. ಅದರಂತೆ ದೂರುದಾರ ಕೆಂಗೇರಿಯ ಗುಬ್ಬಲಾಳದಲ್ಲಿರುವ ಗ್ಲೋಬಲ್ ಸ್ಟೇಯಲ್ಲಿ ಬಾಡಿಗೆ ರೂಮ್‌ನಲ್ಲಿದ್ದುಕೊಂಡು ಆರೋಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬಳಿಕ ಆರೋಪಿ, ದೂರುದಾರ ಖಾತೆಯಿಂದ ಪ್ರಕರಣ ಇತ್ಯರ್ಥ ಪಡಿಸಲು ಹಂತ-ಹಂತವಾಗಿ 30 ಲಕ್ಷ ರೂ. ಅನ್ನು ತಾನೂ ಸೂಚಿಸಿದ 2 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಆರೋಪಿ ಯಾರೊಂದಿಗೂ ಈ ವಿಚಾರ ಚರ್ಚಿಸಬಾರದು ಎಂದು ಎಚ್ಚರಿಸಿದ್ದ. ಹೀಗೆ 10 ದಿನಗಳ ಕಾಲ ಹೌಸ್ ಅರೆಸ್ಟ್ ಆಗಿದ್ದ ದೂರುದಾರರಿಗೆ ಅವರ ಕುಟುಂಬ ಸದಸ್ಯರು ಕರೆ ಮಾಡಿದಾಗ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದರು ಎಂದು ಆಯುಕ್ತರು ತಿಳಿಸಿದರು.
ಈ ಸಂಬಂಧ ತನಿಖೆ ಕೈಗೊಂಡು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರ ಮನ್ಸೂರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಕರಾಮ್ ಮತ್ತು ಇಮ್ರಾನ್ ಹೆಸರು ಬಾಯಿಬಿಟ್ಟಿದ್ದ. ಮುಕರಾಮ್ ಸೂಚನೆ ಮೇರೆಗೆ ತನ್ನ ಬ್ಯಾಂಕ್ ಖಾತೆ ನೀಡಿದ್ದು, ಅದಕ್ಕಾಗಿ ಕಮಿಷನ್ ಪಡೆದುಕೊಂಡಿದ್ದೇನೆ ಹಾಗೂ ಇಮ್ರಾನ್‌ಗೂ ಹಣ ನೀಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಏನಿದು ಡಿಜಿಟಲ್ ಅರೆಸ್ಟ್?:
ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರನಲ್ಲಿ ಬಂದಿರುವ ಕೋರಿಯರ್‌ನಲ್ಲಿ ಮಾದಕ ವಸ್ತುಗಳು, ನಕಲಿ ಪಾಸ್ ಪೋರ್ಟ್‌ಗಳು ಹಾಗೂ ಇತರೆ ವಸ್ತುಗಳು ಇವೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಅದನ್ನು ಇತ್ಯರ್ಥ ಪಡಿಸಬೇಕಾದರೆ ಹಣ ಕೊಡಿ ಎಂದು ಕರೆ ಮಾಡುವುದಲ್ಲದೆ, ಸ್ಕೈಪ್ ಅಥವಾ ಇತರೆ ಆ್ಯಪ್‌ಗಳ ಮೂಲಕ ವಿಡಿಯೋ ಕರೆ ಮಾಡಿ ದಿನವೀಡಿ ತಮ್ಮ ಅಧೀನದಲ್ಲೇ ಕೂರಿಸುವುದಾಗಿದೆ. ಜತೆಗೆ ಆ ವ್ಯಕ್ತಿಯ ಬ್ಯಾಂಕ್ ಹಾಗೂ ಇತರೆ ಹಣಕಾಸಿನ ಮಾಹಿತಿಯನ್ನು ವಂಚಕರು ಪಡೆಯಲಿದ್ದಾರೆ. ಕೆಲವೊಮ್ಮೆ ವ್ಯಕ್ತಿಯ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿರುವಂತೆ ಸೂಚಿಸುತ್ತಾರೆ. ಕೆಲವೊಮ್ಮೆ ಬೇರೆಡೆ ಹೋಗಿ ರೂಮ್ ಮಾಡುವಂತೆ ಸೂಚಿಸಿ, ಲಕ್ಷಾಂತರ ರೂ. ಸುಲಿಗೆ ಮಾಡುತ್ತಾರೆ. ಅದಕ್ಕೆ ಡಿಜಿಟಲ್ ಅರೆಸ್ಟ್ ಎನ್ನುತ್ತಾರೆ.
ಚೀನಾ ಮೂಲದವರೇ ಬಾಸ್:
ಆರೋಪಿಗಳ ಪೈಕಿ ಮುಕರಾಮ್ ದುಬೈನಲ್ಲಿದ್ದಾಗ ಚೀನಾ ಮೂಲದ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಆತನ ಆಮಿಷದ ಮೇರೆಗೆ ದಂಧೆ ನಡೆಸುತ್ತಿದ್ದಾನೆ. ಮನ್ಸೂರ್ ಹಾಗೂ ಇಮ್ರಾನ್ ಅವರನ್ನು ಈತನೇ ನೇಮಕ ಮಾಡಿದ್ದ. ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ಕೆಲ ಮೊಬೈಲ್ ನಂಬರ್‌ಗಳು, ಅಪರಿಚಿತ ವ್ಯಕ್ತಿಗಳ ಹೆಸರಿನಲ್ಲಿ ನೂರಾರು ಸಿಮ್‌ಕಾರ್ಡ್‌ಗಳು, ಜತೆಗೆ ಕೆಲ ವ್ಯಕ್ತಿಗಳ ಬ್ಯಾಂಕ್ ಖಾತೆ ಮಾಹಿತಿಯನ್ನು ಇವರಿಂದಲೇ ಮುಕರಾಮ್ ಪಡೆದುಕೊಂಡು, ಪ್ರಕರಣದ ಕಿಂಗ್‌ಪಿನ್‌ಗಳಿಗೆ ಮಾರಾಟ ಮಾಡಿದ್ದಾನೆ. ದುಬೈನಲ್ಲಿದ್ದ ಮುಕರಾಮ್ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಚೀನಾ ಮೂಲದ ವ್ಯಕ್ತಿಗಳಿಂದ ನಕಲಿ ಸಿಬಿಐ, ಇ.ಡಿ. ಕಚೇರಿ ಸ್ಥಾಪಿಸಿ ಕಾರ್ಯಾಚರಣೆ:
ಪ್ರಕರಣ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಂದಿದೆ. ರಾಜ್ಯದ ಕೆಲ ವ್ಯಕ್ತಿಗಳು ಕಾಂಬೋಡಿ ದೇಶಕ್ಕೆ ಹೋಗಿದ್ದು, ಚೀನಾ ವ್ಯಕ್ತಿಗಳು ತಾತ್ಕಾಲಿಕವಾಗಿ ಸ್ಥಾಪಿಸಿರುವ ಭಾರತದ ಸಿಬಿಐ, ಇಡಿ, ಮುಂಬೈ ಕ್ರೈಂ ಪೊಲೀಸರ ನಕಲು ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಕನ್ನಡ, ಇಂಗ್ಲಿಷ್, ಹಿಂದೆಯಲ್ಲಿ ರಾಜ್ಯದ ಸೇರಿ ದೇಶದ ವ್ಯಕ್ತಿಗಳಿಗೆ ಕರೆ ಮಾಡಿ ಮಾತನಾಡಿಸುತ್ತಾರೆ. ಇನ್ನು ಈ ಕಚೇರಿಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಇದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳ ಪೈಕಿ ಮುಕರಾಮ್, ಇಮ್ರಾನ್ ವಿಚಾರಣೆಯಲ್ಲಿ ಹವಾಲಾ ಮೂಲಕ ವಿದೇಶದಲ್ಲಿರುವ ಆರೋಪಿಗಳಿಗೆ ದೂರುದಾರರ 30 ಲಕ್ಷ ರೂ. ಪೈಕಿ 10.25 ಲಕ್ಷ ರೂ. ಅನ್ನು ನೀಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.