ಅನಿರೀಕ್ಷಿತ “ಪ್ರವಾಹ’ಕ್ಕೆ ತತ್ತರಿಸಿದ “ಹುಳಿಮಾವು’


Team Udayavani, Nov 26, 2019, 3:10 AM IST

aniriksita

ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದು ಉಂಟಾದ ಅನಾಹುತದ ಆಘಾತದಿಂದ ಇಲ್ಲಿನ ಜನ ಇನ್ನೂ ಹೊರ ಬಂದಿಲ್ಲ. ಕೆರೆಯ ಏರಿ ಒಡೆದು 24 ಗಂಟೆಯಾದರೂ, ಮನೆ, ಅಂಗಡಿ, ಆಸ್ಪತ್ರೆ ಹಾಗೂ ವಸತಿ ಸಮುಚ್ಛಯಗಳಿಗೆ ನುಗ್ಗಿರುವ ನೀರನ್ನು ಹೊರ ತೆಗೆಯುವಲ್ಲಿ ಅಲ್ಲಿನ ಸಾರ್ವಜನಿಕರು ನಿರತರಾಗಿದ್ದಾರೆ.

ಕಿಡಿಗೇಡಿಗಳ ಕೃತ್ಯಕ್ಕೆ ಕೆರೆಯ ಏರಿ ಒಡೆದು ಹುಳಿಮಾವಿನ ಸುತ್ತಮುತ್ತಲಿನ ಪ್ರದೇಶಗಳಾದ ಕೃಷ್ಣಾ ಲೇಔಟ್‌, ಸರಸ್ವತಿ ಪುರ, ವಿಜಯ ಬ್ಯಾಂಕ್‌, ವೈಶ್ಯ ಬ್ಯಾಂಕ್‌ ಕಾಲೋನಿ, ರಾಘವೇಂದ್ರ ನಗರ, ಅವನಿ ಶೃಂಗೇರಿ ಹಾಗೂ ಶಾಂತಿನಿಕೇತನ ಬಡಾವಣೆಗಳಲ್ಲಿನ ಸಾವಿರಾರು ಜನ ತಮ್ಮ ಮನೆ, ವಾಣಿಜ್ಯ ಸಂಕೀರ್ಣಗಳಿಗೆ ಉಂಟಾಗಿರುವ ಹಾನಿ ಕಂಡು ಕಣ್ಣೀರಿಡುತ್ತಲೇ ಮನೆ ಮತ್ತು ಅಂಗಡಿಗಳಿಂದ ನೀರು ಹೊರಕ್ಕೆ ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು ಹಾಗೂ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಬಂದು, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಜನರು ತಿಂಗಳಾಂತ್ಯದ ನಿರ್ವಹಣೆಗೆ ಎಂದು ಕೂಡಿಟ್ಟಿದ್ದ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಬಟ್ಟೆ, ದವಸ ಧಾನ್ಯಗಳು ಸಂಪೂರ್ಣ ಕೆರೆಸರು ಮಯವಾಗಿದ್ದು, ದಿಕ್ಕು ತೋಚದ ಪರಿಸ್ಥಿತಿಗೆ ತಲುಪಿದ್ದಾರೆ.

ಏಕಾಏಕಿ ಬಂದೆರಗಿದ “ಪ್ರವಾಹ’ದಿಂದ ಈ ಭಾಗದಲ್ಲಿ ಮನೆಗಳಿಂದ ನೀರು ಖಾಲಿಯಾದರೂ, ವಾತಾವರಣ ಸುಧಾರಿಸುವುದಕ್ಕೆ ವಾರಗಳೇ ಬೇಕಾಗಲಿದೆ. ಈ ಮಧ್ಯೆ ದಿನದ ಕೂಲಿಯನ್ನೇ ನಂಬಿಕೊಂಡಿರುವ ನೂರಾರು ಕುಟುಂಬಗಳು ಕೆಲಸಕ್ಕೂ ಹೋಗಲಾಗದೆ, ಮನೆ ಸ್ವಚ್ಛಗೊಳಿಸುವುದಕ್ಕೆ ನೀರು ಸಿಗದೆ ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಕೂಲಿ ನಂಬಿ ಬಂದಿದ್ದೆವು: ಕೂಲಿ ಮಾಡುವುದಕ್ಕೆ ಮಂಡ್ಯದಿಂದ ಬೆಂಗಳೂರಿನ ಕೃಷ್ಣಾ ಲೇಔಟ್‌ನ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದು, ಅನಾಹುತದಿಂದ ಇಲ್ಲಿನ ಕುಟುಂಬಗಳು ತತ್ತರಿಸಿವೆ. ಅನಾಹುತದಿಂದ ಸಂತ್ರಸ್ತರಾದವರು ಅವರ ಪರಿಸ್ಥಿಯನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

“ಕೆರೆಯ ಏರಿ ಒಡೆದರೂ, ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುತ್ತದೆ. ಕಡಿಮೆ ಬಾಡಿಗೆಗೆ ಮನೆ ಸಿಗುತ್ತದೆ ಎಂದು ಈ ಭಾಗದಲ್ಲಿ ಬಾಡಿಗೆಗೆ ಇದ್ದೀವಿ. ಆದರೆ, ಇಷ್ಟು ದಿನ ದುಡಿಮೆ ಮಾಡಿ ಉಳಿಸಿಕೊಂಡ ಎಲ್ಲವೂ ನೀರು ಪಾಲಾಗಿದೆ. ರಾಗಿ, ಅಕ್ಕಿ, ಧಾನ್ಯ ಯಾವುದೂ ಉಳಿದಿಲ್ಲ. ಉಡುವುದಕ್ಕೆ ಒಂದೇ ಒಂದು ಜತೆ ಬಟ್ಟೆಯೂ ಉಳಿದಿಲ್ಲ’ ಎಂದು ನಾಗಮ್ಮ ಕಣ್ಣೀರಾದರು.

ಮಳೆ ಬಂದಾಗ ಸಣ್ಣ ಪ್ರಮಾಣದಲ್ಲಿ ಮನೆಗಳಿಗೆ ನುಗ್ಗುತ್ತಿತ್ತು. ಆದರೆ, ಈಗಿನ ಪರಿಸ್ಥಿತಿ ಬೇರೆಯೇ ಇದೆ. ಇದರಿಂದ ಹೊರ ಬರುವುದು ಹೇಗೆ ಎಂದು ತಿಳಿಯುತ್ತಲೇ ಇಲ್ಲ. ಎಲ್ಲ ಮನೆಗಳೂ ಹಿಂಗೇ ಇವೆ. ಪರಿಹಾರ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಎಲ್ಲ ಮನೆಗಳೂ ಹಾನಿಯಾಗಿದೆ ನಿಜ. ನಾವು ಬಡವರು ಕಷ್ಟ ಪಟ್ಟು ಗಳಿಸಿದ್ದು, ಕೈಸೇರುವಾಗ ಈ ರೀತಿಯಾಗಿದೆ ಎಂದರು.

“ಕೆಲವೇ ತಿಂಗಳ ಹಿಂದಷ್ಟೇ ಹಾಸಿಗೆ ವ್ಯಾಪಾರ ಪ್ರಾರಂಭಿಸಿದ್ದೆ ಎಲ್ಲವೂ ಈಗ ನೀರು ಪಾಲಾಗಿದೆ. ಅಂಗಡಿ ತೆರೆಯುವುದಕ್ಕೆ ಮಾಡಿದ್ದ ಸಾಲ ಕೂಡ ಇನ್ನೂ ತೀರಿಸಿಲ್ಲ’ ಎಂದು ಹಾಸಿಗೆ ವ್ಯಾಪಾರಿ ಕುಮಾರ್‌ ಹೇಳಿದರು. ಎಲ್ಲವನ್ನೂ ಸಾವರಿಕೊಂಡು ಮತ್ತೆ ಹೊಸದಾಗಿ ಪ್ರಾರಂಭಿಸಬೇಕು. ಆ ಚೈತನ್ಯ, ಆರ್ಥಿಕ ಶಕ್ತಿ ಎರಡೂ ಈಗ ಇಲ್ಲ. ಯಾರ ಮೂಲಕವಾದರೂ ಹೇಳಿಸಿ, ಸಹಾಯ ಮಾಡಿ ಎಂದು ಕೈಮುಗಿದರು!

ಇನ್ನು ಸರಸ್ವತಿಪುರದಲ್ಲೂ ವಾತಾವರಣ ಭಿನ್ನವಾಗಿರಲಿಲ್ಲ. ಯಾದಗಿರಿಯಿಂದ ಬಂದು ಇಲ್ಲಿನ ಸಣ್ಣ ಮನೆಯಲ್ಲಿ ವಾಸವಿರುವ ಭೀಮಮ್ಮ ಎಂಬವರ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಸೋಮವಾರ ಮಧ್ಯಾಹ್ನವಾದರೂ ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕುವುದರಲ್ಲಿ ನಿರತರಾಗಿದ್ದರು. “ಭಾನುವಾರ ರಾತ್ರಿ ಪೂರ್ತಿ ಜಾಗರಣೆ ಮಾಡಿದೆವು. ಮಕ್ಕಳು ಮನೆಯ ಸೀಟಿನ ಮೇಲೆ ಮಲಗಿದ್ದಾರೆ. ಮನೆಯ ಯಾವ ವಸ್ತುವೂ ಉಳಿದಿಲ್ಲ. ಸೊಂಟದವರೆಗೆ ಈಗಲೂ ನಿಂತಿದೆ ದಿಕ್ಕೇ ತೋಚುತ್ತಿಲ್ಲ’ ಎಂದರು.

ರೋಗ ಹರಡುವ ಭೀತಿ: ಈ ಭಾಗದಲ್ಲಿ ಕೆರೆ ನೀರು ಬಂದಿರುವುದರಿಂದ ರೋಗ ಹರಡುವ ಸಾಧ್ಯತೆ ಇದೆ. ಈಗಾಗಲೇ ಕೆರೆ ನೀರು ಕಲುಷಿತವಾಗಿದ್ದು, ದುರ್ನಾತ ಬೀರುತ್ತಿದೆ. ಕೃಷ್ಣಾ ಲೇಔಟ್‌ನಲ್ಲಿನ ಬಿಬಿಎಂಪಿಯ ಸಮುದಾಯ ಭವನದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು 60 ಜನರಿಗೆ ಚಿಕಿತ್ಸೆ ನೀಡಿದ್ದು, ಇಲ್ಲಿನ ವಾತಾವರಣ ನೋಡಿದರೆ, ಮತ್ತಷ್ಟು ಜನ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ.

“ಸೋಮವಾರ 60 ಜನ ಇಲ್ಲಿ ಚಿಕಿತ್ಸೆ ಪಡೆದಿದ್ದು, ಇವರಲ್ಲಿ 10ರಿಂದ 15 ಜನ ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉಳಿದವರಲ್ಲಿ ಜ್ವರ, ನಗಡಿ, ಮೈಕೈ ನೋವು ಮತ್ತು ತುರಿಕೆಯಂತ ಸಮಸ್ಯೆಗಳು ಕಾಣಿಸಿಕೊಂಡಿವೆ. ಆತಂಕ ಪಡುವಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾ.ಯಶಸ್ವಿನಿ ತಿಳಿಸಿದರು.

ಪರಿಹಾರ ಮೊತ್ತ ಘೋಷಣೆ ಮಾಡಿದ ಸಚಿವ ವಿ.ಸೋಮಣ್ಣ: ಹುಳಿಮಾವು ಕೆರೆಯ ಏರಿಯಿಂದ ಹಾನಿಗೆ ಒಳಗಾಗಿರುವ ಮನೆಗಳಿಗೆ ಸಚಿವ ವಿ.ಸೋಮಣ್ಣ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಅನಾಹುತದಿಂದ ಮನೆಗಳಿಗೆ ಹಾನಿಯಾಗಿದ್ದರೆ ಸರ್ಕಾರದಿಂದಲೇ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ. ಸೋಮವಾರ ಸ್ಥಳ ಪರಿಶೀಲನೆ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕೆರೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಿರುವ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡಿ ಎಂದು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು. ಆ ನಂತರ, ಜಲ ಮಂಡಳಿಯಿಂದ ಹುಳಿಮಾವು ಕೆರೆಯ ಸಮೀಪವೇ ನಿರ್ಮಾಣವಾಗುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ಭೇಟಿ ನೀಡಿದರು. ಈ ವೇಳೆ ಜಲ ಮಂಡಳಿಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೂ ನಡೆಯಿತು.

ಎಲ್ಲ ಕೆರೆಗಳ ಪರಿಶೀಲನೆ: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕೆರೆಗಳನ್ನು ಬಿಡಿಎದಿಂದ ಬಿಬಿಎಂಪಿಗೆ ಹಸ್ತಾಂತರಿಸುವುದಾಗಿ ಸರ್ಕಾರ ಹೇಳಿದೆ. ಈ ಪ್ರಕ್ರಿಯೆ ಮುಗಿದರೆ ಎಲ್ಲ ಕೆರೆಗಳ ಉಸ್ತುವಾರಿ ಹೊಣೆ ಬಿಬಿಎಂಪಿಗೆ ಬರಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 129 ಕೆರೆಗಳಿದ್ದು, ಈಗಾಗಲೇ 79 ಕೆರೆಗಳನ್ನು ಸ್ವಚ್ಛ ಮಾಡಲಾಗಿದೆ.

ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಕೆರೆಗಳ ಸುತ್ತ ಸಿಸಿ ಕ್ಯಾಮೆರಾ, ತಡೆಗೋಡೆ ಸೇರಿ ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗುವುದು. ಕಂದಾಯ ಅಧಿಕಾರಿಗಳು ನಡೆಸುತ್ತಿರುವ ಸರ್ವೇ ಕಾರ್ಯ ಇನ್ನೆರಡು ದಿನದಲ್ಲಿ ಮುಗಿಯುವ ಸಾಧ್ಯತೆ ಇದೆ. ಸಂತ್ರಸ್ತರಿಗೆ ಸರ್ಕಾರದಿಂದ 40 ಸಾವಿರ ರೂ. ಹಾಗೂ ಬಿಬಿಎಂಪಿಯಿಂದ 10 ಸಾವಿರ ರೂ. ನೀಡಲಾಗುವುದು ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು: ಹುಳಿಮಾವು ಕೆರೆ ಏರಿ ಒಡೆದು ಜಲಪ್ರಳಯ ಉಂಟಾದ ಸ್ಥಳಕ್ಕೆ ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್‌ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಲೋಕಾಯುಕ್ತರು, ತೊಂದರೆಗೆ ಒಳಗಾದ ಸಂತ್ರಸ್ತರಿಗೆ ತಾರತಮ್ಯ ಮಾಡದೆ ಶೀಘ್ರ ಪರಿಹಾರ ವಿತರಣೆ ಮಾಡಬೇಕು. ನಿಮ್ಮ ಕರ್ತವ್ಯ ನಿರ್ವಹಿಸದಿದ್ದರೆ ನನ್ನ ಕೆಲಸ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಅವಘಡಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ತನಿಖೆ ನಡೆಸುವಂತೆ ಈಗಾಗಲೇ ಬಿಬಿಎಂಪಿಗೆ ನೋಟಿಸ್‌ ನೀಡಿದ್ದೇನೆ ಎಂದು ಹೇಳಿದರು.

ಡಿ ವಾಟರಿಂಗ್‌ ಮತ್ತು ಡ್ರೈಕ್ಲೀನರ್‌ ಸದ್ದು: ಹುಳಿಮಾವಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಎಲ್ಲಿ ನೋಡಿದರೂ ಡಿ ವಾಟರಿಂಗ್‌ (ನೀರು ಹೊರ ತೆಗೆಯುವ ಯಂತ್ರ) ಮತ್ತು ಡ್ರೈಕ್ಲೀನರ್‌ ಸದ್ದು ಮಾಡುತ್ತಿತ್ತು. ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಸಂಪುಗಳನ್ನು ಸ್ವಚ್ಛ ಮಾಡುವುದಕ್ಕೆ ಡ್ರೈಕ್ಲೀನರ್‌ಗಳ ಮೊರೆ ಹೋಗಿದ್ದು, ಕಂಡು ಬಂತು.

ಸ್ಥಳೀಯ ಶಾಸಕರೇ ಕಾಣಿಸಲಿಲ್ಲ!: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಳಿಮಾವು ಕೆರೆ ಒಡೆದು ಅನಾಹುತ ಸೃಷ್ಟಿಯಾದ ಹಿನ್ನೆಲೆಯಲ್ಲಿ ಇಲ್ಲಿಗೆ ಸಚಿವ ವಿ.ಸೋಮಣ್ಣ , ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ಮೇಯರ್‌ ಎಂ.ಗೌತಮ್‌ಕುಮಾರ್‌, ಉಪ ಮೇಯರ್‌ ರಾಮ ಮೋಹನ್‌ ರಾಜು, ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೀ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ವಿಶೇಷ ಆಯುಕ್ತರಾದ ಲೋಕೇಶ್‌, ರಂದೀಪ್‌ ಸೇರಿದಂತೆ ಹಲವು ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಸ್ಥಳೀಯ ಶಾಸಕ ಸತೀಶ್‌ ರೆಡ್ಡಿ ಎಲ್ಲೂ ಕಾಣಲಿಲ್ಲ!

ಸಂತ್ರಸ್ತರಿಗೆ ಒಂದು ವಾರಕ್ಕೆ ಬೇಕಾಗುವ ಗೋಧಿ, ಅಕ್ಕಿ, ಎಣ್ಣೆ ಸೇರಿ ಅಗತ್ಯ ಸಾಮಗ್ರಿ, ಬಟ್ಟೆಗಳನ್ನು ಒಳಗೊಂಡ ಕಿಟ್‌ ನೀಡಲಾಗುವುದು.
-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.