ಮೌಡ್ಯ ಪ್ರತಿಬಂಧಕಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನಾನು ಶಿಕ್ಷೆ ಪಡೆವೆ
Team Udayavani, Sep 6, 2017, 12:00 PM IST
ಬೆಂಗಳೂರು: ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ನಿರ್ಣಾಯಕ ಹೋರಾಟ ಆರಂಭಿಸಿರುವ ಪ್ರಗತಿಪರ ಮಠಾಧೀಶರ ವೇದಿಕೆಯು ಸರ್ಕಾರದಿಂದ ಲಿಖೀತ ಭರವಸೆಗೆ ಬುಧವಾರ ಸಂಜೆವರೆಗೆ ಗಡುವು ನೀಡಿದ್ದು, ಸ್ಪಂದಿಸದಿದ್ದರೆ ಹೋರಾಟದ ಸೋಲಿಗೆ ತಾವೇ ಸೋಲಿನ ಹೊಣೆ ಹೊತ್ತು ಸ್ವಯಂ ಶಿಕ್ಷೆಗೆ ಒಳಗಾಗುವುದಾಗಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ವೇದಿಕೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಧರಣಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿಯಾಗಿದೆ. ಕೇರಳದಲ್ಲೂ ಜಾರಿಗೆ ಬರುತ್ತಿದೆ. ಆದರೆ ಸಂತರು, ಶರಣರ ನಾಡು ಎನಿಸಿದ ಕರ್ನಾಟಕದಲ್ಲಿ ಮಾತ್ರ ಕಾಯ್ದೆ ಜಾರಿ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆ ಜಾರಿಗೆ ಮುಖ್ಯಮಂತ್ರಿಗಳಿಗೆ ಆಸಕ್ತಿ ಇದ್ದರೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಕಾಯ್ದೆಗೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳೂ ವಿರೋಧ ವ್ಯಕ್ತಪಡಿಸುತ್ತಿವೆ. ಮುಖ್ಯಮಂತ್ರಿಗಳಿಗೆ ಉತ್ತಮ ಸಹೋದ್ಯೋಗಿಗಳು ಸಿಕ್ಕಿಲ್ಲ. ಮೌಡ್ಯ ನಿಷೇಧ ಅಹಿಂದದ ಆದ್ಯತೆ. ಮೌಡ್ಯ, ಶೋಷಣೆಯಿಂದ ಬೇಯುತ್ತಿರುವ ಜನರ ರಕ್ಷಣೆಗಾಗಿ ಕಾಯ್ದೆ ಜಾರಿಗೊಳಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ನಾನೇ ಶಿಕ್ಷೆ ಅನುಭವಿಸುತ್ತೇನೆ
ಕಾಯ್ದೆ ಜಾರಿಗೊಳಿಸುವುದಾಗಿ ಸರ್ಕಾರ ಭರವಸೆ ನೀಡದಿದ್ದರೆ ಈ ಹೋರಾಟದ ಸೋಲಿನ ಹೊಣೆಯನ್ನು ನಾನೇ ಹೊತ್ತು ಸ್ವಯಂ ಶಿಕ್ಷೆಗೆ ಒಳಪಡುತ್ತೇನೆ. ನಾನು ಸ್ವಯಂ ಬಂಧನಕ್ಕೆ ಒಳಗಾಗಿ ಶಿಕ್ಷೆ ಅನುಭವಿಸುತ್ತೇನೆ. ಬೇರೆ ಯಾರೊಬ್ಬರ ಮೇಲೂ ಹೇರುವುದಿಲ್ಲ ಎಂದು ಹೇಳಿದರು. ಹೋರಾಟದಲ್ಲಿ ಹಲವು ಮಠಾಧಿಪತಿಗಳು, ಚಿಂತಕರು, ಸಾಮಾಜಿಕ ಕಾರ್ಯಕರ್ತರು, ನಾನಾ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ದೇಶದಲ್ಲಿ ವಿಚಾರವಾದಿಗಳ ಹತ್ಯೆಯಾಗುತ್ತಿದೆ
ದೇಶದಲ್ಲಿ ವಿಚಾರವಾದಿಗಳ ಹತ್ಯೆಯಾಗುತ್ತಿದ್ದು, ಸರ್ಕಾರ ಕೂಡಲೇ ಮೌಡ್ಯಮುಕ್ತ ಕಾನೂನು ಜಾರಿಗೊಳಿಸಲು ಮುಂದಾಗಬೇಕು. ಮೌಡ್ಯಮುಕ್ತ ಕಾನೂನು ಜಾರಿಗೆ ಒತ್ತಾಯಿಸಿ ವೇದಿಕೆ ಹೋರಾಟ ಆರಂಭಿಸಿರುವುದು ಅನುಕರಣೀಯ ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.
ಚರ್ಚಿಸಿ ನಿರ್ಧಾರ ಪ್ರಕಟ
ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹಾಗೂ ದಲಿತ ಸಂಘಟನೆಗಳಿಂದ ಮನವಿ ಸ್ವೀಕರಿಸಿದರು. ಬಳಿಕ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಬುಧವಾರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.