ಕೌಟುಂಬಿಕ ವಿಚಾರಕ್ಕೆ ಐಎಎಸ್‌ಅಧಿಕಾರಿ ಫೋನ್ ಕದ್ದಾಲಿಕೆ: ಮಾಜಿ ಐಪಿಎಸ್ ವಿರುದ್ಧ ಕೇಸ್
Team Udayavani, May 26, 2024, 12:36 PM IST
![5](https://www.udayavani.com/wp-content/uploads/2024/05/5-20-620x372.jpg)
![5](https://www.udayavani.com/wp-content/uploads/2024/05/5-20-620x372.jpg)
ಬೆಂಗಳೂರು: ಮಾಜಿ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಯೊಬ್ಬರ ನಡುವಿನ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಅನಧಿಕೃತ ಸಿಡಿಆರ್ (ಕರೆ ವಿವರಗಳ ದಾಖಲೆ) ಪಡೆದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಐಎಎಸ್ ಅಧಿಕಾರಿ ಡಾ.ಆಕಾಶ್ ನೀಡಿರುವ ದೂರಿನನ್ವಯ ಮಾಜಿ ಐಪಿಎಸ್ ಅಧಿಕಾರಿ ಟಿ.ಆರ್.ಸುರೇಶ್, ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ, ಸುರೇಶ್ ಅವರ ಪುತ್ರಿ ವಂದಿತಾ, ಪುತ್ರ ಜಗದೀಶ್, ಪತ್ನಿ ಗಾಯತ್ರಿ ಸೇರಿ ಐವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ಟಿ.ಆರ್.ಸುರೇಶ್ ಹಾಗೂ ಪ್ರಸ್ತುತ ಹೆಬ್ಬಗೋಡಿ ಠಾಣೆಯ ಇನ್‌ಸ್ಪೆಕ್ಟರ್ ಆಗಿರುವ ಐಯ್ಯಣ್ಣ ರೆಡ್ಡಿ ಸೇರಿ 2022ರ ಫೆಬ್ರವರಿಯಿಂದ 2023ರ ಜನವರಿಯವರೆಗಿನ ತಮ್ಮ ಕರೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ನನಗೆ ಕಿರುಕುಳ ನೀಡಲು, ಬೆದರಿಕೆ ಹಾಕಲು ಬಳಸಿಕೊಂಡಿದ್ದಾರೆ ಎಂದು ಡಾ.ಎಸ್. ಆಕಾಶ್ ದೂರಿದ್ದಾರೆ.
ದೂರಿನ ಅನ್ವಯ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.
ಐಯ್ಯಣ್ಣ ರೆಡ್ಡಿಗೆ ರೇವ್‌ಪಾರ್ಟಿ ನಡುವೆ ಸಿಡಿಆರ್ ಸಂಕಷ್ಟ!: ಈಚೆಗೆ ಹೆಬ್ಬಗೋಡಿಯ ಜಿ.ಆರ್. ಫಾರಂ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ಸಂಬಂಧ ಹೆಬ್ಬಗೋಡಿ ಠಾಣೆಯ ಇನ್ ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ಬೆಂಗಳೂರು ಗ್ರಾಮಾಂತರ ಎಸ್ಪಿ ಚಾರ್ಜ್ ಮೆಮೋ ನೀಡಿದ್ದಾರೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಬಳಸಿ ಕೊಂಡು ರೇವ್ ಪಾರ್ಟಿ ಮಾಡುತ್ತಿದ್ದರೂ ಕೂಡ ಈ ಮಾಹಿತಿ ತಮಗೆ ಮಾಹಿತಿ ಇತ್ತೇ? ಇಲ್ಲವೇ? ಎಂಬುದನ್ನು ವಿವರಿಸಿ ಎಂದು ಮೆಮೋದಲ್ಲಿ ಉಲ್ಲೇಖೀಸಲಾಗಿದೆ. ಈ ಪ್ರಕರಣದ ನಡುವೆಯೇ ಈಗ ಅನಧಿಕೃತವಾಗಿ ಸಿಡಿಆರ್ ತೆಗೆದಿರುವ ಆರೋಪ ಕೇಳಿ ಬಂದಿದ್ದು ರೆಡ್ಡಿ ಅವರನ್ನು ಸಂಕಷ್ಟಕ್ಕೀಡು ಮಾಡಿದೆ.