ಸಮಾಜ ಬದಲಿಸದಿದ್ದರೆ ಕಂಟಕ
Team Udayavani, Dec 7, 2017, 12:22 PM IST
ಬೆಂಗಳೂರು: ಅತೃಪ್ತಿ ಮತ್ತು ಅಮಾನವೀಯತೆ ತುಂಬಿಕೊಂಡಿರುವ ಸಮಾಜವನ್ನು ಬದಲಾಯಿಸದೇ ಇದ್ದರೆ ಭವಿಷ್ಯದ ಪೀಳಿಗೆಗೆ ಕಂಟಕವಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ನಗರದ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ಸೆಲ್ಕೊ ಫೌಂಡೇಷನ್, ಸಿಎಲ್‌ಟಿ ಇಂಡಿಯಾ, ಮೆಂಡಾ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಇ-ಶಾಲಾ ಡಿಜಿಟಲ್ ಎಜುಕೇಷನ್ ಕಾರ್ಯಕ್ರಮದ ಸಾವಿರ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ನಡೆದ ವಿವಿಧ ಹಗರಣಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ತೃಪ್ತಿ ಮತ್ತು ಮಾನವೀಯತೆ ಇಲ್ಲದೇ ಇರುವುದೇ ಇದಕ್ಕೆ ಮೂಲ ಕಾರಣ. ತೃಪ್ತಿ ಇಲ್ಲದಿದ್ದರೆ ದುರಾಸೆ ಹೆಚ್ಚಾಗುತ್ತದೆ. ಮಾನವೀಯತೆ ಮರೆತರೆ ಹಲವು ಸಮಸ್ಯೆ ಉದ್ಭವಿಸುತ್ತವೆ. ಸಮಾಜದ ಇಂಥ ಪರಿಸ್ತಿತಿ ಬದಲಾಯಿಸದೇ ಇದ್ದರೆ ಭವಿಷ್ಯದ ಪೀಳಿಗೆಗೆ ಕಂಟಕ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.
ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಇದರ ಪರಿಣಾಮವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಸ್ಥಿತ್ವಕ್ಕೆ ಬಂದಿದೆ. ಸರ್ಕಾರಿ ಶಾಲೆಗಳಿಗಿಂತ ಉತ್ತಮ ಶಿಕ್ಷಣವನ್ನು ಖಾಸಗಿ ಶಾಲೆಗಳು ಒದಗಿಸುತ್ತಿದೆ ಎಂದು ಹೇಳಿದರು.
ಮೇಲ್ಮನೆ ಸದಸ್ಯ ಅರುಣ್ ಶಹಪುರ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ದೊಡ್ಡ ಸವಾಲಾಗಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇಂಗ್ಲಿಷ್ ಶಿಕ್ಷಕರ ನೇಮಕಾತಿಯಾಗಿಲ್ಲ. ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕಾರ್ಯಭಾರದ ಸಮೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯ ಬಲವರ್ಧನೆಯ ಜತೆಗೆ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿರಬೇಕು. ಸರ್ಕಾರಿ ಶಾಲೆಗೆ ಮೊದಲ ಆದ್ಯತೆ, ಆನಂತರ ಅನುದಾನಿತ ಶಾಲೆ, ಕೊನೆಯ ಆಯ್ಕೆ ಖಾಸಗಿ ಶಾಲೆಯಾಗಬೇಕು.
ಸರ್ಕಾರಿ ಶಾಲೆ ಇಲ್ಲದ ಕಡೆಗಳಲ್ಲಿ ಖಾಸಗಿ ಅಥವಾ ಅನುದಾನಿತ ಶಾಲೆಗೆ ಪ್ರೋತ್ಸಾಹ ನೀಡಲೇಬೇಕು. ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ದೃಷ್ಟಿಯಿಂದ ಇ-ಶಾಲಾ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವ್ಯಾಕರಣವನ್ನು ಸುಲಭದಲ್ಲಿ ಮಕ್ಕಳಿಗೆ ಅರ್ಥೈಸುತ್ತಿದೆ ಎಂದು ಹೇಳಿದರು.
ಸೆಲ್ಕೊ ಮುಖ್ಯಸ್ಥ ಡಾ.ಹರೀಶ್ ಹಂದೆ, ಮೆಂಡಾ ಫೌಂಡೇಷನ್ ಟ್ರಸ್ಟಿ ಅರ್ಜುನ್ ಮೆಂಡಾ, ಸಿಎಲ್‌ಟಿ ಇಂಡಿಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಗ್ಯ ರಂಗಾಚಾರ್ ಮೊದಲಾದವರು ಉಪಸ್ಥಿತರಿದ್ದರು.
ಇ-ಶಾಲಾ ಕಲಿಕಾ ವಿಧಾನದ ಮೂಲಕ ಸುಲಭವಾಗಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನವನ್ನು ಕಲಿಯಲು ಸಾಧ್ಯವಾಗುತ್ತಿದೆ. ನಮಗೆ ಅರ್ಥವಾಗುವಂತೆ ವಿಡಿಯೋ ಮತ್ತು ಆಡಿಯೋ ಮೂಲಕ ಬೋಧಿಸುತ್ತಾರೆ.
-ಆರ್ಯನ್, 7ನೇ ತರಗತಿ ವಿದ್ಯಾರ್ಥಿ, ಸರ್ಕಾರಿ ಮಾದರಿ ಪ್ರೌಢಶಾಲೆ ಕೆಂಗೇರಿ
ಶಾಲೆಯ 170 ಮಕ್ಕಳು ಇ-ಶಾಲಾ ಕಲಿಕಾ ವಿಧಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಚಿತ್ರದ ಮೂಲಕ ನೋಡಿರುವುದನ್ನು ವಿದ್ಯಾರ್ಥಿಗಳು ಹೆಚ್ಚು ಸಮಯ ನೆನಪಿಟ್ಟುಕೊಳ್ಳುತ್ತಾರೆ. ಡಿಜಿಟಲ್ ಶಿಕ್ಷಣವಾದರೂ, ನಿರ್ವಹಣೆಗೆ ಶಿಕ್ಷಕರ ಅಗತ್ಯ ಇದ್ದೇ ಇರುತ್ತದೆ.
-ಸಿದ್ದಲಿಂಗಯ್ಯ, ಶಿಕ್ಷಕ, ಸರ್ಕಾರಿ ಮಾದರಿ ಪ್ರೌಢಶಾಲೆ ಕೆಂಗೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.