ಮಕ್ಕಳ ಕಲ್ಯಾಣ ಸಮಿತಿಯಿಂದಲೇ ಯುವತಿಯ ಅಕ್ರಮ ಬಂಧನ
Team Udayavani, Sep 2, 2017, 12:09 PM IST
ಬೆಂಗಳೂರು: ಶೋಷಿತ ಹೆಣ್ಣುಮಕ್ಕಳಿಗೆ ಆಶ್ರಯ ಕೊಟ್ಟು ಯೋಗಕ್ಷೇಮ ನೋಡಿಕೊಳ್ಳಬೇಕಾದ ಮಕ್ಕಳ ಕಲ್ಯಾಣ ಸಮಿತಿಯೇ ಯುವತಿಯೊಬ್ಬಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆರೋಪ ಎದುರಿಸುತ್ತಿದೆ. ಪ್ರಕರಣವೊಂದರ ವಿಚಾರಣೆಯ ನೆಪದಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಯುವತಿಯನ್ನು ಮಡಿವಾಳದ ಬಾಲಕಿಯರ ಬಾಲಮಂದಿರದಲ್ಲಿ ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ನ್ಯಾಯಾಲಯದಲ್ಲಿ ಹೆಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಚ್.ಜಿ.ರಮೇಶ್ ಮತ್ತು ನ್ಯಾ.ಕೆ.ಎಸ್.ಮುದಗಲ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದು ತಪ್ಪು. ಆದ್ದರಿಂದ ಅದಕ್ಕೆ ನಷ್ಟ ಪರಿಹಾರ ತುಂಬಿಕೊಡಬೇಕಿದ್ದು, ಎಷ್ಟು ಪರಿಹಾರ ನೀಡಲಾಗುತ್ತದೆ? ಎಂಬುದರ ಕುರಿತು ಸೆ.5ರಂದು ಕೋರ್ಟ್‌ಗೆ ತಿಳಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.
ಪ್ರಕರಣವೇನು?
ಹತ್ತನೇ ತರಗತಿಯಲ್ಲಿ ಮೂರು ಬಾರಿ ಅನುತ್ತೀರ್ಣಗೊಂಡಿದ್ದ ಸುಭಾಷಿಣಿ ಎಂಬ ಯುವತಿಯನ್ನು ವಿದ್ಯಾಭ್ಯಾಸಕ್ಕೆಂದು ಆಕೆಯ ತಂದೆ ಚಿಂತಾಮಣಿಯ ಶ್ರೀರಾಮರೆಡ್ಡಿ ಅವರು ಯಲಹಂಕದ ಡಾ.ಅನಿತಾ ಮತ್ತು ಡಾ.ಅಶೋಕ್ ಎಂಬ ವೈದ್ಯ ದಂಪತಿಯ ಮನೆಗೆ ಕಳುಹಿಸಿಕೊಟ್ಟಿದ್ದರು. ದಂಪತಿ ಯುವತಿಗೆ ಬಿಡುವಿನ ವೇಳೆ ಪಾಠ ಹೇಳಿಕೊಡುತ್ತಿದ್ದರು.
ಈ ನಡುವೆ, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಅನಿತಾ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಚೈಲ್ಡ್‌ಲೈನ್ ಸಿಬ್ಬಂದಿ ಆರ್.ರಾಧಾ ಆ.22ರಂದು ಯಲಹಂಕ ಪೊಲೀಸ್ ಠಾಣೆಗೆ ತೆರಳಿ ಡಾ.ಅನಿತಾ ದಂಪತಿ ಅಪ್ರಾಪ್ತ ವಯಸ್ಸಿನ ಸುಭಾಷಿಣಿಯನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಡಾ.ಅನಿತಾ ಮತ್ತು ಸುಭಾಷಿಣಿ ಅವರನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪಡೆದಿದ್ದರು. ಈ ವೇಳೆ ಸುಭಾಷಿಣಿ ಹೇಳಿಕೆ ನೀಡಿದ್ದು, ನನಗೆ 18 ವರ್ಷ ಪೂರ್ಣಗೊಂಡಿದೆ. ವಿದ್ಯಾಭ್ಯಾಸಕ್ಕಾಗಿ ನಮ್ಮ ಪೋಷಕರೇ ಡಾ.ಅನಿತಾ ಅವರ ಮನೆಯಲ್ಲಿ ಬಿಟ್ಟಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಲಿಖೀತವಾಗಿ ತಿಳಿಸಿದ್ದರು.
ಜತೆಗೆ 18 ವರ್ಷ ಪೂರ್ಣಗೊಂಡಿರುವುದಕ್ಕೆ ದಾಖಲೆಯನ್ನೂ ಕೂಡ ಒದಗಿಸಿದ್ದರಿಂದ ಅನಿತಾ ಅವರೊಂದಿಗೆ ಸುಭಾಷಿಣಿಯನ್ನು ಪೊಲೀಸರು ಕಳುಹಿಸಿಕೊಟ್ಟಿದ್ದರು. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಡಾ.ಅನಿತಾ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಅದರಂತೆ ಆ.29ರಂದು ಸುಭಾಷಿಣಿಯೊಂದಿಗೆ ಡಾ.ಅನಿತಾ ಸಮಿತಿ ಮುಂದೆ ಹಾಜರಾಗಿದ್ದರು.
ಆಗ ಸುಭಾಷಿಣಿ ವಯಸ್ಸು 16-17 ಇದೆ ಎಂದು ಹೇಳಿ ಸಮಿತಿಯು ಯುವತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಕಳೆದ ಮೂರು ದಿನಗಳಿಂದ ಯುವತಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು. ಇದರಿಂದ ಸುಭಾಷಿಣಿ ತಂದೆ ಎ.ವಿ.ಶ್ರೀರಾಮರೆಡ್ಡಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮಗಳನ್ನು ತಮ್ಮ ವಶಕ್ಕೆ ವಹಿಸುವಂತೆ ಕೋರಿದ್ದರು. ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಿತ್ತು.
ಸುಭಾಷಿಣಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಕೆಯನ್ನು ತಂದೆ ಶ್ರೀರಾಮರೆಡ್ಡಿ ಅವರ ವಶಕ್ಕೆ ಒಪ್ಪಿಸಲಾಯಿತು. ಮೂರು ದಿನಗಳ ಕಾಲ ಯುವತಿಯನ್ನು ಅಕ್ರಮ ಬಂಧನದಲ್ಲಿ ಇರಿಸಿದ ಕಾರಣಕ್ಕೆ ಮಕ್ಕಳ ಕಲ್ಯಾಣ ಸಮಿತಿ ಎಷ್ಟು ನಷ್ಟ ಪರಿಹಾರ ತುಂಬಿ ಕೊಡುತ್ತದೆ ಎಂಬುದರ ಮಾಹಿತಿ ಪಡೆದು ಸೆ.5ರಂದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ವಿಭಾಗೀಯಪೀಠವು ಸೂಚಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.