ಅನೈತಿಕ ಸಂಬಂಧ: ಪತಿ ಕೊಲೆ
Team Udayavani, Oct 21, 2017, 11:41 AM IST
ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಆರೋಪದ ಮೇಲೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಂದಿರಾ ಪ್ರಿಯದರ್ಶಿನಿ ನಗರದ ನೀಲಾ (30) ಮತ್ತು ಆಕೆಯ ಪ್ರಿಯಕರ ಪ್ರದೀಪ್ (30) ಬಂಧಿತರು. ಇತರೆ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಪತಿ ಮಧುಸೂದನ್ ಎಂಬುವವರು ನೀಲಾಳನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಾರ್ಮೆಂಟ್ಸ್‌ನಲ್ಲಿ ಮೆಕ್ಯಾನಿಕ್ ಆಗಿರುವ ಮಧುಸೂದನ್ ಪತ್ನಿ ಮತ್ತು ಮಕ್ಕಳೊಂದಿಗೆ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ನೆಲೆಸಿದ್ದರು. ದಂಪತಿ ಮನೆ ಪಕ್ಕದಲ್ಲೇ ಲಾರಿ ಚಾಲಕ ಪ್ರದೀಪ್ ಕೂಡ ವಾಸವಿದ್ದ. ಈ ವೇಳೆ ಪ್ರದೀಪ್‌ನ ಪರಿಚಯಸಿಕೊಂಡಿದ್ದ ನೀಲಾ ಈತನ ಜತೆ ಅನೈತಿಕ ಸಂಬಂಧ ಹೊಂದಿದ್ದರು.
ಈ ವಿಚಾರ ತಿಳಿದ ಪತಿ ಮಧುಸೂದನ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಕೊಲೆಗೈಯಲು ಪತ್ನಿ ನೀಲಾ ಹಾಗೂ ಪ್ರಿಯಕರ ಪ್ರದೀಪ್ ಜತೆ ಸಂಚು ರೂಪಿಸಿದ್ದರು. ಅದರಂತೆ ಆರೋಪಿ ಪ್ರದೀಪ್ ಅ.10ರಂದು ಮಧುಸೂದನ್‌ನನ್ನು ಕಾರ್ಯನಿಮಿತ್ತ ಬಿಡದಿ ಬಳಿ ಕರೆದೊಯ್ದಿದ್ದಾನೆ. ಮೊದಲೇ ಸಂಚು ರೂಪಿಸಿದ್ದಂತೆ ಬಿಡದಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ,
ತನ್ನ ಇಬ್ಬರು ಸಹಚರ ಜತೆ ಸೇರಿಕೊಂಡು ಮಧುಸೂದನ್ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಶವವನ್ನು ಕೆಂಗೇರಿ ಬಳಿಯ ರಾಜಕಾಲುವೆಗೆ ಎಸೆದಿದ್ದರು. ನಂತರ ಪತ್ನಿ ನೀಲಾ ನಾಲ್ಕು ತಿಂಗಳ ಬಳಿಕ ಪತಿ ಕಾಣಿಯಾಗಿರುವ ಬಗ್ಗೆ ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಈ ನಡುವೆ ಅ.16 ರಂದು ಬಿಡದಿ ಬಳಿಯ ರಾಜಕಾಲುವೆಯಲ್ಲಿ ಮಧುಸೂದನ್ ಶವ ಪತ್ತೆಯಾಗಿದ್ದು, ಬಿಡದಿ ಪೊಲೀಸರು ಅಪರಿಚಿತ ಶವಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಅನಂತರ ಅ.19 ರಂದು ಬಿಡದಿ ಪೊಲೀಸರು ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.
“ಅಚ್ಚೆ’ ಕೊಟ್ಟ ಸುಳಿವು: ಕೂಡಲೇ ಕಾರ್ಯಪ್ರವೃತ್ತರಾದ ರಾಜಗೋಪಾಲನಗರ ಠಾಣೆ ಪೊಲೀಸರು ಮಧುಸೂದನ್ ಅವರ ತಂದೆ ದೇವರಾಜ್‌ರನ್ನು ಕರೆದೊಯ್ದು ಶವ ಪತ್ತೆಗೆ ಮುಂದಾದರು. ಸಂಪೂರ್ಣವಾಗಿ ಕೊಳೆತ ಶವ ಕಂಡ ದೇವರಾಜ್ ಆರಂಭದಲ್ಲಿ ಗೊಂದಲಕ್ಕೊಳಗಾದರು. ಆದರೆ, ಮಗನ ತೋಳಿನ ಮೇಲೆ ಇದ್ದ “ಅಚ್ಚೆ’ ಯಿಂದ ಮಧುಸೂದನ್ ಎಂದು ಗುರುತಿಸಿದರು. ಅನಂತರ ದೇವರಾಜ್ ಸೊಸೆ ನೀಲಾ ವಿರುದ್ಧ ಮತ್ತೂಂದು ದೂರು ನೀಡಿದ್ದರು. ಈ ಸಂಬಂಧ ನೀಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.