ಐಎಂಎ ವಂಚನೆ: ಐಪಿಎಸ್ ಅಧಿಕಾರಿ ವಿಚಾರಣೆ
Team Udayavani, Aug 3, 2019, 3:00 AM IST
ಬೆಂಗಳೂರು: ಐಎಂಎ ಅಕ್ರಮ ವ್ಯವಹಾರದ ಬಗ್ಗೆ ತನಿಖೆ ನಡೆಸಲು ನೀಡಿದ್ದ ಶಿಫಾರಸುಗಳನ್ನು ಆಧರಿಸಿ ಐಎಂಎಗೆ ಕ್ಲೀನ್‌ಚಿಟ್ ನೀಡಿದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ವಿಚಾರಣೆಗೆ ಹಾಜರಾಗಲು ನೀಡಿದ್ದ ನೋಟಿಸ್ ಅನ್ವಯ ಶುಕ್ರವಾರ 11.30ರ ಸುಮಾರಿಗೆ ಕಾರ್ಲಟನ್‌ನಲ್ಲಿರುವ ಸಿಐಡಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ಸದ್ಯ ಕೆಎಸ್‌ಆರ್‌ಪಿ ಒಂದನೇ ಬೆಟಾಲಿಯನ್ ಕಮಾಡೆಂಟ್ ಆಗಿರುವ ಅಜಯ್ ಹಿಲೋರಿ ಆಗಮಿಸಿದ್ದರು.
ಎಸ್‌ಐಟಿ ಮುಖ್ಯಸ್ಥ ಬಿ.ಆರ್ ರವಿಕಾಂತೇಗೌಡ, ಡಿಸಿಪಿ ಎಸ್. ಗಿರೀಶ್, ಅಜಯ್ ಹಿಲೋರಿ ಅವರನ್ನು ದೀರ್ಘಕಾಲ ವಿಚಾರಣೆಗೊಳಪಡಿಸಿದರು. ವಿಚಾರಣೆ ವೇಳೆ ಅಜಯ್ ಹಿಲೋರಿ ಬಳಿ ಕೆಲವು ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ. ಪುನ: ಶನಿವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಪೂರ್ವ ವಿಭಾಗದ ಡಿಸಿಪಿ ಆಗಿ ಅಜಯ್ ಹಿಲೋರಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಕಮರ್ಷಿಯಲ್ ಠಾಣಾ ವ್ಯಾಪ್ತಿಯೂ ಪೂರ್ವ ವಿಭಾಗಕ್ಕೆ ಬರಲಿದ್ದು ಐಎಂಎ ಕಂಪೆನಿ ಕೂಡ ಆ ವ್ಯಾಪ್ತಿಯಲ್ಲಿಯಿದೆ.
ಐಎಂಎ ಕಂಪೆನಿಯ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಆರ್‌ಬಿಐ ಮಾರುಕಟ್ಟೆ ಗುಪ್ತಚರ ವಿಭಾಗ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಇದನ್ನು ವ್ಯಾಪ್ತಿಯ ಡಿಸಿಪಿ ಅಜಯ್ ಹಿಲೋರಿ ತನಿಖೆ ನಡೆಸಿ, ಐಎಂಎ ಕಂಪೆನಿ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂಬ ಕಾರಣ ನೀಡಿ ಕ್ಲೀನ್ ಚಿಟ್ ನೀಡಿದ್ದರು. ಈ ಆರೋಪ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.