ಮೂಲದಲ್ಲೇ ಕಸ ವಿಂಗಡಣೆ ಅನಿವಾರ್ಯ
Team Udayavani, Jun 5, 2019, 3:09 AM IST
ಬೆಂಗಳೂರು: ಮೂಲದಿಂದಲೇ ಹಸಿ ಹಾಗೂ ಒಣ ಕಸ ವಿಂಗಡಣೆಯಾಗದ ಹೊರತು ನಗರದಲ್ಲಿ ಪ್ಲಾಸ್ಟಿಕ್ ಸಮಸ್ಯೆ ನಿವಾರಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ನಾಗರಿಕರು ಮೂಲದಿಂದಲೇ ತ್ಯಾಜ್ಯ ವಿಂಗಡಣೆಗೆ ಮುಂದಾಗಬೇಕೆಂಬುದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರ ಆಶಯ.
ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಉದಯವಾಣಿ ಆರಂಭಿಸಿರುವ ಪ್ಲಾಸ್ಟಿಕ್ ಮುಕ್ತ ಪರಿಸರದತ್ತ ಅಭಿಯಾನದ ಕರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಿತ್ಯ 4200 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಶೇ.50ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತಿಲ್ಲ. ಇದರಿಂದಾಗಿ 440 ಕೋಟಿ ರೂ. ವೆಚ್ಚದಲ್ಲಿ ಏಳು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಿಸಿದರೂ, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.
ನಿತ್ಯ ಸಂಗ್ರಹವಾಗುವ ತ್ಯಾಜ್ಯದಲ್ಲಿ ಶೇ.65ರಷ್ಟು ಹಸಿ ತ್ಯಾಜ್ಯವಿದ್ದರೆ, ಶೇ.35ರಷ್ಟು ಒಣ ತ್ಯಾಜ್ಯವಿರುತ್ತದೆ. ಆ ಪೈಕಿ ಶೇ.25ರಷ್ಟು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಇದ್ದರೆ, ಶೇ.10ರಷ್ಟು ನಿರುಪಯುಕ್ತ ತ್ಯಾಜ್ಯವಿರುತ್ತದೆ. ಆದರೆ, ಮೂಲದಲ್ಲಿಯೇ ಸಮರ್ಪಕವಾಗಿ ತ್ಯಾಜ್ಯ ವಿಂಗಡಣೆಯಾಗದ ಹಿನ್ನೆಲೆಯಲ್ಲಿ ಸಮಸ್ಯೆಗಳು ಉದ್ಭವಾಗುತ್ತಿವೆ ಎಂದರು.
ಪ್ಲಾಸ್ಟಿಕ್ ಬ್ಯಾನ್‌ಗೆ ಸಿಬ್ಬಂದಿ ಕೊರತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದ್ದು, ಪ್ಲಾಸ್ಟಿಕ್ ಬಳಸುವವರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರಂತೆ ಈಗಾಗಲೇ 2.59 ಲಕ್ಷ ಕೆ.ಜಿ.ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದ್ದು, ತಪ್ಪಿತಸ್ಥರಿಗೆ 2.58 ಕೋಟಿ ರೂ. ದಂಡ ವಿಧಿಸಲಾಗಿದೆ. ಪಾಲಿಕೆಯಲ್ಲಿರುವ ಆರೋಗ್ಯ ವಿಭಾಗದ ಅಧಿಕಾರಿಗಳು ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆಯುಕ್ತರು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಸಹಕಾರ ಅಗತ್ಯ: ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ಉತ್ಪನ್ನಗಳ ಉದ್ದಿಮೆಗಳನ್ನು ಈಗಾಗಲೇ ಸ್ಥಗಿತಗೊಳಿಸಿದ್ದರೂ, ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇದರೊಂದಿಗೆ ಹೊರರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಆಮದಾಗುತ್ತಿವೆ. ಹೀಗಾಗಿ ಸಾರಿಗೆ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗಳು ಪಾಲಿಕೆಗೆ ಬೆಂಬಲ ನೀಡಿದರೆ ನಗರಕ್ಕೆ ಬರುವ ಪ್ಲಾಸ್ಟಿಕ್ ಪ್ರಮಾಣ ಕಡಿಮೆಯಾಗಲಿದೆ ಎನ್ನುತ್ತಾರೆ.
ಪ್ಲಾಸ್ಟಿಕ್ ಪತ್ತೆ ಮಾಡುವುದೇ ಕಷ್ಟವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಮಾದರಿಯ ಪ್ಲಾಸ್ಟಿಕ್ ಬ್ಯಾಗ್‌ಗಳು ಬಂದಿವೆ. ಅದರಲ್ಲೂ ಬಟ್ಟೆ ಬ್ಯಾಗ್ ಹೋಲುವಂತಹ ಕ್ಯಾರಿಬ್ಯಾಗ್‌ಗಳು ಬಂದಿದ್ದು, ಅದು ಪ್ಲಾಸ್ಟಿಕ್ ಅಥವಾ ಬಟ್ಟೆ ಎಂಬುದನ್ನು ಕಂಡುಹಿಡಿಯುವುದೇ ಕಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯೊಂದರ ಸಹಾಯದೊಂದಿಗೆ ನಿಷೇಧವಾಗಿರುವ ಪ್ಲಾಸ್ಟಿಕ್ ಮಾದರಿಗಳ ಕುರಿತು ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ ಎಂದು ಹೇಳಿದರು.
ಕೇಸ್ ಮಾಡುವ ಅಧಿಕಾರವಿಲ್ಲ: ಘನತ್ಯಾಜ್ಯ ನಿರ್ವಹಣೆ ನಿಯಮಗಳು 2016ರಂತೆ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ಹಾಕುವ ಅಧಿಕಾರವಿದ್ದರೂ, ಅವರ ವಿರುದ್ಧ ಕೇಸ್ ದಾಖಲಿಸುವ ಅಧಿಕಾರ ಪಾಲಿಕೆಗೆ ಇಲ್ಲ. ಇದರಿಂದಾಗಿ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕೇಸು ದಾಖಲಿಸುವ ಅಧಿಕಾರ ಪಾಲಿಕೆಗೆ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೋರಲಾಗಿದೆ ಎಂದು ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.
ಕ್ಯಾರಿಬ್ಯಾಗ್ ಇಲ್ಲದಿದ್ದರೆ ನಷ್ಟ!: ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರಿಬ್ಯಾಗ್‌ಗಳು ಬಳಕೆಯಾಗುತ್ತಿವೆ. ಪಾಲಿಕೆಯಿಂದ ದಂಡ ವಿಧಿಸಿದರೂ ವ್ಯಾಪಾರಿಗಳು ಮಾತ್ರ ಅವುಗಳನ್ನು ಬಳಸುತ್ತಲೇ ಇದ್ದಾರೆ. ಈ ಕುರಿತು ವ್ಯಾಪಾರಿಗಳನ್ನು ಪ್ರಶ್ನಿಸಿದರೆ, ಕ್ಯಾರಿಬ್ಯಾಗ್ ನೀಡದಿದ್ದರೆ ತಮ್ಮ ಬಳಿ ವ್ಯಾಪಾರ ಮಾಡುವುದಿಲ್ಲ. ಕ್ಯಾರಿಬ್ಯಾಗ್ ನೀಡುವವರ ಬಳಿ ಖರೀದಿಸುತ್ತಾರೆ. ಇದರಿಂದಾಗಿ ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ. ಆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದರು.
ಮಕ್ಕಳಿಗಾಗಿ ಕಿರು ಪುಸ್ತಕ: ಪ್ಲಾಸ್ಟಿಕ್ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಕೆ ಕಿರು ಪುಸ್ತಕಗಳನ್ನು ಹೊರತಂದಿದ್ದು, ಅವುಗಳನ್ನು ಪಾಲಿಕೆಯ ಶಾಲೆಗಳಲ್ಲಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಮಕ್ಕಳಿಗೂ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ಯಾರಿಬ್ಯಾಗ್ ಬಳಸುವವರಿಗೂ ದಂಡ: ಘನತ್ಯಾಜ್ಯ ವಿಲೇವಾರಿಗೆ ಇರುವ ತೊಡಕುಗಳ ನಿವಾರಣೆಗಾಗಿ ಪ್ರತಿ ವಾರ್ಡ್‌ಗೆ ಒಬ್ಬರಂತೆ ಮಾರ್ಷಲ್‌ಗಳನ್ನು ಪಾಲಿಕೆ ನೇಮಿಸಿಕೊಳ್ಳುತ್ತಿದೆ. ಅದರಂತೆ ಪ್ಲಾಸ್ಟಿಕ್ ಬ್ಯಾನ್‌ಗೂ ಅವರ ನೆರವು ಪಡೆಯಬಹುದಾಗಿದ್ದು, ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್ ನೀಡುವ ಹಾಗೂ ಬಳಸುವ ಗ್ರಾಹಕರಿಗೂ ದಂಡ ವಿಧಿಸುವ ವ್ಯವಸ್ಥೆ ಜಾರಿಗೊಳಿಸಬಹುದಾಗಿದೆ ಎಂದು ಆಯುಕ್ತರು ಹೇಳಿದರು.
ಪ್ರತ್ಯೇಕ ಹಸಿ ಕಸ ಸಂಗ್ರಹ ಅನಿವಾರ್ಯ: ಪ್ರತಿಯೊಂದು ಮನೆಯಿಂದಲೇ ತ್ಯಾಜ್ಯ ವಿಂಗಡಣೆಯಾಗಬೇಕೆಂಬ ಉದ್ದೇಶದಿಂದ ಹಸಿ ಕಸ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗಿದೆ. ಜತೆಗೆ ಒಣತ್ಯಾಜ್ಯ ಸಂಗ್ರಹಿಸುವ ಜವಾಬ್ದಾರಿಯನ್ನು ಚಿಂದಿ ಆಯುವವರು ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡಲು ತೀರ್ಮಾನಿಸಲಾಗಿದೆ.
ಇದರಿಂದಾಗಿ ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗಲಿದ್ದು, ಸಮರ್ಪಕವಾಗಿ ತ್ಯಾಜ್ಯ ವಿಂಗಡಣೆಯಾಗಲಿದೆ. ಆದರೆ, ಪಾಲಿಕೆ ಸದಸ್ಯರು ಎರಡೂ ಜವಾಬ್ದಾರಿಯನ್ನು ಒಬ್ಬರಿಗೇ ನೀಡಬೇಕೆಂದು ಹೇಳುತ್ತಿದ್ದಾರೆ. ಒಬ್ಬರಿಗೆ ಎರಡು ರೀತಿಯ ಕಸ ಸಂಗ್ರಹಿಸಲು ಅವಕಾಶ ನೀಡಿದರೆ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.