ಬಾಯಿ ಮಾತಲ್ಲೇ ರಾಜಕಾಲುವೆ ಸ್ವಚ್ಛ!
Team Udayavani, Aug 13, 2019, 3:09 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಮಳೆ ಅನಾಹುತ ತಪ್ಪಿಸಲು ಸರ್ವ ಸನ್ನದ್ಧವಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಮಳೆ ನೀರು ಹರಿಯುವ ಪ್ರಮುಖ ರಾಜಕಾಲುವೆಗಳನ್ನೇ ಸ್ವಚ್ಛ ಮಾಡಿಲ್ಲದಿರುವುದು “ಉದಯವಾಣಿ’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್, ದೊಮ್ಮಲೂರು, ನಾಯಂಡಹಳ್ಳಿ, ಹಲಸೂರು, ಕೋರಮಂಗಲ ಸೇರಿದಂತೆ ಪ್ರಮುಖ ಭಾಗಗಳಲ್ಲಿನ ರಾಜಕಾಲುವೆಗಳು ಹೂಳು ತುಂಬಿದ್ದು, ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗದೆ ಪ್ರವಾಹವುಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ನಗರದಲ್ಲಿರುವ 842 ಕಿ.ಮೀ. ಉದ್ದದ ರಾಜಕಾಲುವೆ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ 440 ಕಿ.ಮೀ. ಉದ್ದದ ರಾಜಕಾಲುವೆಯ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿತ್ತು. ಒಂದು ವರ್ಷಕ್ಕೆ 36 ಕೋಟಿ ರೂ. ಸಹ ನೀಡುವ ಒಪ್ಪಂದವಾಗಿತ್ತು. ಆದರೆ, ಖಾಸಗಿ ಸಂಸ್ಥೆ ನಿರ್ವಹಣೆ ಮಾಡುವ ರಾಜಕಾಲುವೆ ಮಾರ್ಗ ಯಾವುದು? ಬಿಬಿಎಂಪಿ ನಿರ್ವಹಣೆ ಮಾಡುವ ರಾಜಕಾಲುವೆ ಮಾರ್ಗ ಯಾವುದು? ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳಲ್ಲೇ ಗೊಂದಲ ಉಂಟಾಗಿದೆ.
ಹೀಗಾಗಿ, ಅತ್ತ ಪಾಲಿಕೆಯೂ ನಿರ್ವಹಣೆ ಇಲ್ಲ. ಇತ್ತ ಖಾಸಗಿ ಸಂಸ್ಥೆಯಿಂದಲೂ ನಿರ್ವಹಣೆಯಾಗದೆ ಇದೀಗ ಮಳೆಗಾಲ ಬಂದಿರುವಾಗ ರಾಜಕಾಲುವೆಗಳಲ್ಲಿ ಕಸ ಹಾಗೂ ಹೂಳು ತುಂಬಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆಗಳ ನಿರ್ವಹಣೆ ಹೊಣೆ ಹೊತ್ತಿದ್ದ ಖಾಸಗಿ ಕಂಪನಿ ಸರ್ಮಪಕವಾಗಿ ನಿರ್ವಹಣೆ ಮಾಡದಿರುವುರಿಂದ ಖಾಸಗಿ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಟ್ರಾಶ್ ಬ್ಯಾರಿಯರ್‌ಯೋಜನೆ ವಿಫಲ: ಈ ಮಧ್ಯೆ, ಬಿಬಿಎಂಪಿ ಕೆಲವು ತಿಂಗಳ ಹಿಂದಷ್ಟೇ ರಾಜಕಾಲುವೆಗಳಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಮತ್ತು ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಅಗರಕೆರೆ, ಸಿಲ್ಕ್ಬೋರ್ಡ್ ಹಾಗೂ ದೊಮ್ಮಲೂರು ಸೇರಿದಂತೆ ಹಲವೆಡೆ ರಾಜಕಾಲುವೆಗಳಲ್ಲಿ ಟ್ರಾಶ್‌ಬ್ಯಾರಿಯರ್(ತೆಲುವ ಕಸ ತಡೆಯುವ ಆಲ್ಯೂಮಿನಿಯಂ ಬಲೆ)ಯನ್ನು ಅಳವಡಿಸಿತ್ತು.
ಮಳೆಗಾಲದಲ್ಲಿ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿತ್ತು. ಇದಕ್ಕೆ 25ಲಕ್ಷರೂ. ವೆಚ್ಚವನ್ನು ಬಿಬಿಎಂಪಿ ಮಾಡಿತ್ತು. ಆದರೆ, ಇದರಿಂದಲೂ ಯಾವುದೇ ಪ್ರಯೋಜವಾಗಿಲ್ಲ. ರಾಜಕಾಲುವೆಗಳಲ್ಲಿ ಟ್ರಾಶ್‌ಬ್ಯಾರಿಯರ್‌ಗೆ ಸಿಲುಕಿಕೊಳ್ಳುವ ತ್ಯಾಜ್ಯವನ್ನು ಪ್ರತಿದಿನ ತೆರವು ಮಾಡುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಈಗ ದೊಮ್ಮಲೂರು, ಸಿಲ್ಕ್ಬೋರ್ಡ್ ಮತ್ತು ಅಗರ ಕೆರೆಗಳಲ್ಲಿ ಅಳವಡಿಸಿರು ಟ್ರಾಶ್‌ಬ್ಯಾರಿಯರ್ ಬಹುತೇಕ ಹಾಳಾಗಿದೆ.
ಕಾಮಾಕ್ಷಿಪಾಳ್ಯ, ಕುವೆಂಪು ನಗರ, ಹೊಸಹಳ್ಳಿಕೆರೆ, ಅಡುಗೋಡಿ ಜಂಕ್ಷನ್, ಹೊಸಹಳ್ಳಿಕೆರೆ, ಮತ್ತು ಗಾಳಿಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ರಾಜಕಾಲುವೆ ಸೇರಿದಂತೆ 122 ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಟ್ರಾಶ್ ಬ್ಯಾರಿಯರ್ ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆದರೆ, ಈಗಾಗಲೇ ಅಳವಡಿಕೆ ಮಾಡಿರುವ ಕಡೆ ನಿರೀಕ್ಷಿತ ಯಶಸ್ಸು ಕಾಣದ ಕಾರಣ ಯೋಜನೆ ಕೈಬಿಡಬೇಕೇ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.
ಪೂರ್ಣ ಹೂಳು ತೆಗೆದಿಲ್ಲ: ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡುತ್ತಿರುವ ರಾಜಕಾಲುವೆಯ 402 ಕಿ.ಮೀ. ಪೈಕಿ 184 ಕಿ.ಮೀ.ವ್ಯಾಪ್ತಿಯಲ್ಲಿ ಹೂಳು ತೆಗೆದು ಸ್ವಚ್ಛ ಮಾಡಲಾಗಿದೆ. ಉಳಿದ 218 ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚು ಸಮಸ್ಯೆ ಇಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಖಾಸಗಿ ಕಂಪೆನಿಗೆ ವಹಿಸಿರುವ 440 ಕಿ.ಮೀ. ಸ್ವಚ್ಛತೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ.
ಕಾಲುವೆಗೆ ತ್ಯಾಜ್ಯ ಎಸೆದರೆ ಜೈಲು ಶಿಕ್ಷೆ!: ರಾಜಕಾಲುವೆಗಳಲ್ಲಿ ತ್ಯಾಜ್ಯ ಎಸೆಯುವವರು ಮತ್ತು ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವುದನ್ನು ತಡೆಯಲು ಯತ್ನಿಸುವವರ ಮೇಲೆ ಐಪಿಸಿ ಸೆಕ್ಷನ್ 431ನ ಅನ್ವಯ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ. ಈ ಕಾಯ್ದೆಯ ಅನ್ವಯ ರಾಜಕಾಲುವೆ ನೀರು ಹರಿಯುವುದಕ್ಕೆ ತಡೆಯೊಡ್ಡುವುದಕ್ಕೆ 5 ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಕಾಯ್ದೆ ಕೆರೆಗಳಿಗೂ ಅನ್ವಯಿಸಲಿದೆ. ರಾಜಕಾಲುವೆಗಳಲ್ಲಿ ಕಟ್ಟಡ ತ್ಯಾಜ್ಯ , ಪ್ರಾಣಿ ಮಾಂಸತ್ಯಾಜ್ಯ ಮತ್ತುಹಾಸಿಗೆಸೇರಿದಂತೆಯಾವುದೇ ತ್ಯಾಜ್ಯ ವನ್ನು ಎಸೆದರೂ ಬಿಬಿಎಂಪಿಗೆ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ. ಆದರೆ, ಈ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಯಾಗುತ್ತಿಲ್ಲ.
* ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.