ನಮ್ಮ ಮೆಟ್ರೋದ ವೇಗ ಹೆಚ್ಚಲಿ
Team Udayavani, Jun 18, 2018, 11:49 AM IST
ಮೆಟ್ರೋ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ ಒಂದು ದಶಕವಾಗಿದೆ. ಮೊದಲಹಂತ ನಾಲ್ಕು ವರ್ಷದಲ್ಲಿ ಪೂರ್ಣಗೊಂಡಿದ್ದು, ಎರಡನೇ ಹಂತ ನಾಲ್ಕು ವರ್ಷ ಕಳೆದರೂ ಪ್ರಗತಿ ಸಾಧಿಸಿಲ್ಲ. ಮೊದಲ ಹಂತದಲ್ಲಿ ಎದುರಾದ ಸಂಕಷ್ಟವನ್ನು ಎದುರಿಸುವಲ್ಲಿ ಸಿಕ್ಕ ಅನುಭವನ್ನು ಎರಡನೇ ಹಂತದಲ್ಲಿ ಬಳಸಿಕೊಂಡಿಲ್ಲ. ಮಂದಿಗತಿಯ ಕಾಮಗಾರಿಗೆ ಕೇಂದ್ರ ಅನುದಾನದ ತೊಡಕು, ಸಮನ್ವಯದ ಕೊರತೆ, ಅಪರಿಣಿತರ ನೇತೃತ್ವ ಹೀಗೆ ನಾನಾ ತೊಂದರೆಗಳಿಂದ ಎರಡನೇ ಹಂತ ಪೂರ್ಣಗೊಳ್ಳಲು ಒಟ್ಟಾರೆ ಆರು ವರ್ಷ ಬೇಕಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಮೆಟ್ರೋ ಕಾರ್ಯಾನುಭವದ ಮಾಹಿತಿ ನಿಮ್ಮ ಮುಂದೆ.
ಬೆಂಗಳೂರು: ಸಾಮಾನ್ಯವಾಗಿ ಅನುಭವ ಪಾಠ ಕಲಿಸುತ್ತದೆ. ಆದರೆ, “ನಮ್ಮ ಮೆಟ್ರೋ’ ಯೋಜನೆ ಮಾತ್ರ ಇದಕ್ಕೆ ಅಪವಾದವಾಗಿದೆ. ಹಾಗಾಗಿ, ಎರಡನೇ ಹಂತದ ಮೆಟ್ರೋ ಯೋಜನೆ ಪ್ರಗತಿ ಮೊದಲನೇ ಹಂತಕ್ಕಿಂತ ಮಂದಗತಿಯಲ್ಲಿ ಸಾಗುತ್ತಿದ್ದು, ಇದಕ್ಕೆ ಪರೋಕ್ಷವಾಗಿ ನಗರದ ಜನ ಬೆಲೆ ತೆರಬೇಕಾಗಿದೆ.
2007ರಲ್ಲಿ “ನಮ್ಮ ಮೆಟ್ರೋ’ ಮೊದಲ ಹಂತದ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಇದಾಗಿ ನಾಲ್ಕು ವರ್ಷಗಳಲ್ಲಿ ಅಂದರೆ ಅ.20. 2011ಪ್ರಪ್ರಥಮ ಬಾರಿಗೆ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ (6 ಕಿ.ಮೀ. ಉದ್ದ) ಮೆಟ್ರೋ ಓಡಿಸುವಲ್ಲಿ ಬಿಎಂಆರ್‌ಸಿ ಯಶಸ್ವಿಯಾಗಿತ್ತು. ಆದರೆ, ಎರಡನೇ ಹಂತದ ಯೋಜನೆಗೆ ಕೂಡ ಅನುಮೋದನೆ ಸಿಕ್ಕು ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಒಂದೇ ಒಂದು ಕಿ.ಮೀ. ಮಾರ್ಗವನ್ನು ಲೋಕಾರ್ಪಣೆ ಮಾಡಲು ಬಿಎಂಆರ್‌ಗೆ ಸಾಧ್ಯವಾಗಿಲ್ಲ. ನಿಗಮವು ಅನುಭವದಿಂದ ಪಾಠ ಕಲಿತಿಲ್ಲ ಎನ್ನುವಂತಾಗಿದೆ.
72 ಕಿ.ಮೀ. ಉದ್ದದ 26,405 ಕೋಟಿ ಮೊತ್ತದ “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗೆ 2014ರಲ್ಲೇ ಕೇಂದ್ರದ ಅನುಮೋದನೆ ದೊರಕಿದೆ. ಈವರೆಗೆ ಮೈಸೂರು ರಸ್ತೆಯಿಂದ ಕೆಂಗೇರಿ ಮತ್ತು ಯಲಚೇನಹಳ್ಳಿಯಿಂದ ಅಂಜನಾಪುರ ನಡುವೆ ಕೇವಲ ವಯಾಡಕ್ಟ್ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಇನ್ನೂ ಹಳಿ ಮತ್ತು ರೈಲುಗಳ ಪೂರೈಕೆಗೆ ಟೆಂಡರ್ ಆಗಿಲ್ಲ. ಇ ಆಂಡ್ ಎಂ (ಎಲೆಕ್ಟ್ರಾನಿಕ್ ಆಂಡ್ ಮೆಕಾನಿಕಲ್), ಲಿಫ್ಟ್-ಎಸ್ಕಲೇಟರ್‌ಗೆ ಟೆಂಡರ್ ಕರೆಯಬೇಕಿದೆ.
ಯೋಜನಾ ವೆಚ್ಚ ವಿಸ್ತರಣೆ ಸಾಧ್ಯತೆ: ಈ ಮಂದಗತಿಯ ಕಾರ್ಯವೈಖರಿ ಯೋಜನಾ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಉದಾಹರಣೆಗೆ 42 ಕಿ.ಮೀ. ಉದ್ದದ ಮೊದಲ ಹಂತದ ಯೋಜನೆಗೆ ಆರಂಭದಲ್ಲಿ 8,158 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಪೂರ್ಣಗೊಂಡಾಗ ಅದು 13,865 ಕೋಟಿ ರೂ. ತಲುಪಿತ್ತು.
ಎರಡನೇ ಹಂತ ಮತ್ತಷ್ಟು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಉಪಕರಣಗಳ ಬೆಲೆ ಏರಿಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಹೆಚ್ಚುವುದರಿಂದ ಬ್ಯಾಂಕ್‌ಗಳ ಸಾಲದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಇದರ ಹೊರೆ ಜನರ ಮೇಲೆ ಆಗಲಿದೆ ಎಂದು ಪ್ರಜಾ ಸಂಸ್ಥೆಯ ಸಂಜೀವ್ ದ್ಯಾಮಣ್ಣವರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮೊದಲ ಹಂತದಲ್ಲಿ ಭೂಸ್ವಾಧೀನದಿಂದ ಹಿಡಿದು ಪ್ರತಿಯೊಂದೂ ಹೊಸದಾಗಿತ್ತು. ಎಂಜಿನಿಯರ್‌ಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಇತ್ತು. 50 ಕೋಟಿಗಿಂತ ಹೆಚ್ಚು ಮೊತ್ತದ ಟೆಂಡರ್‌ಗೆ ಕಡ್ಡಾಯವಾಗಿ ಕೇಂದ್ರದಲ್ಲಿರುವ ಮೆಟ್ರೋ ಮಂಡಳಿಯ ಅನುಮೋದನೆ ಪಡೆಯಬೇಕಿತ್ತು.
ಆದರೆ, ಈಗ ಇದಾವುದರ ಕೊರತೆ ಇಲ್ಲ. ಪ್ರಾಜೆಕ್ಟ್‌ನಲ್ಲೇ ಎಂಜಿನಿಯರ್‌ಗಳ ಸಂಖ್ಯೆ 700ಕ್ಕೂ ಅಧಿಕವಾಗಿದೆ. ಅದರಲ್ಲಿ ಬಹುತೇಕರು ಈಗಾಗಲೇ ಅನುಭವಿಗಳಾಗಿದ್ದಾರೆ. ಪ್ರತಿಯೊಂದಕ್ಕೂ ಮಂಡಳಿ ಮರ್ಜಿ ಎದುರು ನೋಡಬೇಕಿಲ್ಲ. ನೇತೃತ್ವ ವಹಿಸಿಕೊಂಡವರು ಮಾತ್ರ ಅನನುಭವಿಗಳಾಗಿದ್ದಾರೆ. ಹಾಗಾಗಿ, ಪ್ರಗತಿ ಕುಂಠಿತವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಸಮನ್ವಯ ಕೊರತೆಯೂ ಇದೆ: ಕೇವಲ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವುದು ಅಲ್ಲ; ಸಮನ್ವಯದ ಕೊರತೆಯೂ ಇಲ್ಲಿ ಎದ್ದುಕಾಣುತ್ತಿದೆ. ಉದಾಹರಣೆಗೆ ವಯಾಡಕ್ಟ್ (ಎತ್ತರಿಸಿದ ಮಾರ್ಗ)ಗಳ ಜೋಡಣೆ ಆಗಿದೆ. ಆದರೆ, ಡಿಪೋ ಸಿದ್ಧವಾಗಿಲ್ಲ. ಮತ್ತೂಂದೆಡೆ ನಿಲ್ದಾಣ ಕಾಮಗಾರಿ ನಡೆದಿದೆ. ಫಿನಿಶಿಂಗ್ (ಪೇಂಟಿಂಗ್, ಪ್ಲಾಸ್ಟರಿಂಗ್, ವೈರಿಂಗ್ ಇತ್ಯಾದಿ) ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಇದು ಸಮಸ್ಯೆ ಆಗಿ ಪರಿಣಮಿಸಲಿದೆ ಎಂದೂ ಅವರು ಹೇಳುತ್ತಾರೆ.
ಎರಡನೇ ಹಂತದಲ್ಲಿ ಅನುದಾನ ಮತ್ತು ತಂತ್ರಜ್ಞಾನದ ಕೊರತೆ ಎರಡೂ ಕಾಡುತ್ತಿವೆ. ರಾಜ್ಯ ಸರ್ಕಾರದಿಂದ ಆದ್ಯತೆ ಮೇರೆಗೆ ಬರಬೇಕಾದ ಸಾಕಷ್ಟು ಅನುದಾನ ಬೇರೆ ಕಡೆ ತಿರುಗಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚು ವಿನ್ಯಾಸ ಮಾಡಿರುವುದು ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್. ಶ್ರೀಹರಿ ಅಭಿಪ್ರಾಯಪಡುತ್ತಾರೆ.
ಮತ್ತಷ್ಟು ಸೇರ್ಪಡೆ: ಎರಡನೇ ಹಂತದ ಯೋಜನೆಯೇ ಕುಂಟುತ್ತಾ ಸಾಗುತ್ತಿದೆ. ಹೀಗಿರುವಾಗ, ಒಂದರ ಹಿಂದೊಂದು ಮೆಟ್ರೋ ಮಾರ್ಗಗಳನ್ನು ಜೋಡಿಸುತ್ತಾ ಹೊರಟಿದೆ. ಎರಡನೇ ಹಂತವೇ ಕಳೆದ ನಾಲ್ಕು ವರ್ಷಗಳಲ್ಲಿ ಶೇ. 19ರಿಂದ 20ರಷ್ಟು ಕಾಮಗಾರಿ ಮಾತ್ರ ಪ್ರಗತಿ ಸಾಧಿಸಿದೆ. ಅಂತಹದ್ದರಲ್ಲಿ ಮೂರನೇ ಹಂತದಲ್ಲಿ ಮತ್ತೆ 105 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಅಂದಹಾಗೆ ಹೊಸದಾಗಿ ಸೇರ್ಪಡೆಗೊಂಡ ಯಾವ ಮಾರ್ಗವೂ ನಗರದ ಹೃದಯಭಾಗದಲ್ಲಿ ಹಾದುಹೋಗುವುದಿಲ್ಲ.
ಹೊಸದಾಗಿ ಸೇರ್ಪಡೆಗೊಂಡ ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ವಿನೂತನ ಕ್ರಮಗಳನ್ನು ಅನುಸರಿಸುತ್ತಿದೆ. ಎಂಬಸ್ಸಿ ಗ್ರೂಪ್ ಸೇರಿದಂತೆ ಹಲವು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿವೆ. ಆದರೆ, ಈಗಾಗಲೇ ಕಾಮಗಾರಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಅಂತಹದ್ದರಲ್ಲಿ ಮತ್ತಷ್ಟು ಮಾರ್ಗಗಳು ಸೇರ್ಪಡೆಗೊಂಡಿದ್ದು, ಅವುಗಳು ಕೈಗೂಡಲು ದಶಕಗಳೇ ಬೇಕಾಗುತ್ತದೆ ಎನ್ನಲಾಗಿದೆ.
ಪ್ರಸ್ತಾವಿತ ಮಾರ್ಗಗಳು
-ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (23 ಕಿ.ಮೀ.)
-ಕಾರ್ಮೆಲ್‌ರಾಮ್-ಯಲಹಂಕ (32 ಕಿ.ಮೀ.)
-ಮಾರತ್‌ಹಳ್ಳಿ-ಹೊಸಕೆರೆಹಳ್ಳಿ (21 ಕಿ.ಮೀ.)
-ಸಿಲ್ಕ್ಬೋರ್ಡ್-ಕೆ.ಆರ್. ಪುರ-ಹೆಬ್ಟಾಳ (29 ಕಿ.ಮೀ.)
10 ವರ್ಷದಲ್ಲಿ ಒಂದು ಹಂತ
-ದೆಹಲಿ ಮೆಟ್ರೋ ಮೊದಲ ಮತ್ತು ಎರಡನೇ ಹಂತ ಪೂರ್ಣಗೊಳ್ಳಲು ತೆಗೆದುಕೊಂಡಿದ್ದು 12 ವರ್ಷ. ಆದರೆ, “ನಮ್ಮ ಮೆಟ್ರೋ’ ಮೊದಲ ಹಂತ ಪೂರ್ಣಗೊಳ್ಳಲಿಕ್ಕಾಗಿಯೇ 10 ವರ್ಷ ಹಿಡಿಯಿತು!
-ಎರಡನೇ ಹಂತವನ್ನು ಅನುಮೋದನೆಗೊಂಡ ನಂತರದಿಂದ ಐದು ವರ್ಷಗಳಲ್ಲಿ (2020) ಪೂರ್ಣಗೊಳಿಸುವುದಾಗಿ ಸಮಗ್ರ ಯೋಜನಾ ವರದಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿಕೊಂಡಿದೆ. ಆದರೆ, ಈಗಾಗಲೇ ಗಡುವು 2021ಕ್ಕೆ ವಿಸ್ತರಣೆ ಆಗಿದೆ.
2032ಕ್ಕೆ ಪೂರ್ಣ?!: “ನಮ್ಮ ಮೆಟ್ರೋ’ ಯೋಜನೆ ಪೂರ್ಣಗೊಂಡು (1 ಮತ್ತು 2 ಹಂತ) ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲು ಇನ್ನೂ ಒಂದೂವರೆ ದಶಕ ಬೇಕಾಗುತ್ತದೆ ಎಂದು ರೈಲ್‌ಯಾತ್ರಿ ಡಾಟ್ ಇನ್ ಅಧ್ಯಯನ ನಡೆಸಿದ್ದು, ಈ ಅಧ್ಯಯನದ ಪ್ರಕಾರ ನಮ್ಮ ಮೆಟ್ರೋ ಯೋಜನೆ 2032ಕ್ಕೆ ಪೂರ್ಣಗೊಳ್ಳಲಿದೆ ಎಂದು ರೈಲ್‌ಯಾತ್ರಿ.ಇನ್ ಸಂಸ್ಥಾಪಕ ಕಪಿಲ್ ರೈಝಾದಾ ತಿಳಿಸಿದ್ದರು. ದೆಹಲಿ ಮೆಟ್ರೋ ಯೋಜನೆ ಮೊದಲ ಹಂತವು ವರ್ಷಕ್ಕೆ 8.06 ಕಿ.ಮೀ. ಸರಾಸರಿಯಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಎರಡನೇ ಹಂತ ಮುಕ್ತಾಯವಾಗುವ ಹೊತ್ತಿಗೆ ಈ ವಾರ್ಷಿಕ ಸರಾಸರಿ 15 ಕಿ.ಮೀ. ತಲುಪಿತ್ತು. ಆದರೆ, ಬೆಂಗಳೂರು ಮೆಟ್ರೋ ಕಳೆದ ಎಂಟು ವರ್ಷಗಳಲ್ಲಿ ನಿರ್ಮಿಸಿದ್ದು 22.7 ಕಿ.ಮೀ. ಮಾತ್ರ. ಇದನ್ನು ನೋಡಿದಾಗ ಕಾಮಗಾರಿ ನಿರ್ಮಾಣದ ವಾರ್ಷಿಕ ಸರಾಸರಿ 2.5 ಕಿ.ಮೀ. ಆಗುತ್ತದೆ. ಈ ಮಂದಗತಿಯ ವೇಗವನ್ನು ಆಧರಿಸಿ ಲೆಕ್ಕಹಾಕಿದರೆ, ಎರಡನೇ ಹಂತದ ನಮ್ಮ ಮೆಟ್ರೋ 2032-33ರಲ್ಲಿ ಮುಗಿಯಬಹುದು ಎಂದು ಅವರು ಹೇಳಿದ್ದರು.
ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿಂದೆ: ಮುಂಬೈ ಉಪನಗರ ರೈಲಿಗೆ ಹೋಲಿಸಿದರೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣದಲ್ಲಿ “ನಮ್ಮ ಮೆಟ್ರೋ’ ಸಾಕಷ್ಟು ಹಿಂದೆಬಿದ್ದಿದೆ. ಬನಶಂಕರಿ, ಪೀಣ್ಯ ಡಿಪೋಗಳಲ್ಲಿ 5ರಿಂದ 8 ಎಕರೆ ಜಾಗ ಇದೆ. ಇದಲ್ಲದೆ, ಇನ್ನೂ ಹಲವು ನಿಲ್ದಾಣಗಳಲ್ಲಿ ಸಾಕಷ್ಟು ಜಾಗ ಇದೆ. ಆದರೆ, ಅದರ ಸಮರ್ಪಕ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಖಾಲಿ ಜಾಗದಲ್ಲಿ ಪ್ರಾಪರ್ಟಿ ಡೆವಲಪ್‌ಮೆಂಟ್, ಜಾಹಿರಾತು ಮತ್ತಿತರ ಚಟುವಟಿಕೆಗಳಿಂದ ಬಿಎಂಆರ್‌ಸಿ ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ.
ಮೊದಲ ಹಂತದ ಪ್ರಗತಿ ಪಥ
-2007ರ ಏಪ್ರಿಲ್-ಮೇನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭ
-2009ರ ವೇಳೆಗೆ ಎಲ್ಲ ಟೆಂಡರ್ ಪ್ರಕ್ರಿಯೆಗಳು ಪೂರ್ಣ
-2010-11ಕ್ಕೆ ಸುರಂಗ-1 (ಸಂಪಿಗೆರಸ್ತೆ-ನ್ಯಾಷನಲ್ ಕಾಲೇಜು) ಟೆಂಡರ್ ಅವಾರ್ಡ್
-2011ರ ಅಕ್ಟೋಬರ್ 20ಕ್ಕೆ ರೀಚ್-1 ಲೋಕಾರ್ಪಣೆ
-2014ರ ಮಾರ್ಚ್‌ನಲ್ಲಿ ಹಸಿರು ಮಾರ್ಗ ಮಂತ್ರಿಸ್ಕ್ವೇರ್-ಪೀಣ್ಯ ಸೇವೆಗೆ ಮುಕ್ತ
-2015ರಲ್ಲಿ ಮಾಗಡಿ ರಸ್ತೆ-ಮೈಸೂರು ರಸ್ತೆ ಸೇವೆಗೆ ಮುಕ್ತ
-2016ರಲ್ಲಿ ಉತ್ತರ-ದಕ್ಷಿಣ ಸುರಂಗ ಮಾರ್ಗ ಸೇವೆ ಮುಕ್ತ
-2017ರ ಜೂನ್‌ನಲ್ಲಿ ಪೂರ್ವ-ಪಶ್ಚಿಮ ಸುರಂಗ ಮಾರ್ಗ ಸೇವೆಗೆ ಮುಕ್ತ
2ನೇ ಹಂತದ ಪ್ರಗತಿ
-2014ರಲ್ಲಿ ಯೋಜನೆಗೆ ಕೇಂದ್ರದ ಅನುಮೋದನೆ
-2015 ಏಪ್ರಿಲ್ ಮೈಸೂರು ರಸ್ತೆ-ಕೆಂಗೇರಿ ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್
-2016 ಜನವರಿಯಲ್ಲಿ ಯಲಚೇನಹಳ್ಳಿ-ಅಂಜನಾಪುರ ಒಂದು ಪ್ಯಾಕೇಜ್‌ನಲ್ಲಿ ಟೆಂಡರ್
-2017 ಏಪ್ರಿಲ್‌ನಲ್ಲಿ ಬೈಯಪ್ಪನಹಳ್ಳಿ-ಐಟಿಪಿಎಲ್ ಮಾರ್ಗವನ್ನು ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್
-2017 ಏಪ್ರಿಲ್‌ನಲ್ಲಿ ಆರ್.ವಿ. ರಸ್ತೆ-ಬೊಮ್ಮಸಂದ್ರ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್
-2017 ಸೆಪ್ಟೆಂಬರ್‌ನಲ್ಲಿ ಗೊಟ್ಟಿಗೆರೆ-ಡೈರಿ ವೃತ್ತ ಒಂದು ಪ್ಯಾಕೇಜ್‌ನಲ್ಲಿ ಟೆಂಡರ್
-ನಾಗಸಂದ್ರ-ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಒಂದು ಪ್ಯಾಕೇಜ್‌ನಲ್ಲಿ ಟೆಂಡರ್
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.