ಮಕ್ಕಳ ಹಕ್ಕು ರಕ್ಷಣೆಗಾಗಿ “ಭಾರತ ಯಾತ್ರೆ’
Team Udayavani, Sep 7, 2017, 11:43 AM IST
ಬೆಂಗಳೂರು: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ ಮಕ್ಕಳ ಲೈಂಗಿಕ ಕಿರುಕುಳ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿಗಾಗಿ “ಭಾರತ್ ಯಾತ್ರೆ’ಯನ್ನು ಸೆ.11ರಂದು ಕನ್ಯಾಕುಮಾರಿಯಲ್ಲಿ ಆರಂಭಿಸಲಿದೆ. ರ್ಯಾಲಿಯ ಭಾಗವಾಗಿ ಕೈಲಾಶ್ ಸತ್ಯಾರ್ಥಿ ಅವರು ಕೋಲಾರ, ಬೆಂಗಳೂರಿನಲ್ಲಿ ಸುಮಾರು ಎರಡೂವರೆ ದಿನ ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಂತರ ರ್ಯಾಲಿಯಲ್ಲಿ ಹೈದರಾಬಾದ್‌ಗೆ ತೆರಳಲಿದ್ದಾರೆ.
ಸೆ.11ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗುವ ರ್ಯಾಲಿಯು ಅ.16ರಂದು ದೆಹಲಿ ತಲುಪಲಿದೆ. ಸೆ.15ರಂದು ಕೋಲಾರ ಬಳಿ ರಾಜ್ಯ ಪ್ರವೇಶಿಸುವ ಕೈಲಾಶ್ ಸತ್ಯಾರ್ಥಿ ಅವರು ನಂತರ ಬೆಂಗಳೂರು ತಲುಪಿ ಎರಡು ದಿನ ನಾನಾ ರೀತಿಯ ಜಾಗೃತಿ, ಸಂವಾದ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೇಲಂ, ಚಾಮರಾಜನಗರ ಹಾಗೂ ಕೋಲಾರ ಮಾರ್ಗವಾಗಿ ಪ್ರತ್ಯೇಕವಾಗಿ ಬರುವ ಯಾತ್ರೆಯು ಬೆಂಗಳೂರಿನಲ್ಲಿ ಒಂದಾಗಿ ನಂತರ ಹೈದರಾಬಾದ್ ಕಡೆಗೆ ತೆರಳಲಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಿಐಐ ಯಂಗ್ ಇಂಡಿಯನ್ ಮಾಸೂಮ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಓಕ್ರಿಡ್ಜ್ ಇಂಟರ್‌ನ್ಯಾಷನಲ್ ಇತರೆ ಸಂಸ್ಥೆಗಳು ಭಾರತ ಯಾತ್ರೆ ಯಶಸ್ಸಿಗೆ ಸಹಕಾರ ನೀಡುತ್ತಿವೆ. ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಕ್ಕಳ ಹಕ್ಕುಗಳ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ.ರಾವ್, “2011ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಕ್ಕಳಿದ್ದಾರೆ.
ಮಕ್ಕಳ ಹಕ್ಕುಗಳ ಸಂರಕ್ಷಣೆ ಜತೆಗೆ ರಕ್ಷಣೆಯನ್ನು ಒದಗಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು “ಸುರಕ್ಷಿತ ಬಾಲ್ಯ- ಸುರಕ್ಷಿತ ಭಾರತ’ ಪರಿಕಲ್ಪನೆಯಡಿ ಭಾರತ ಯಾತ್ರೆ ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮ ನಡೆಯಲಿವೆ’ ಎಂದು ಹೇಳಿದರು.
ಸ್ಪರ್ಶ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್, “ಮುಳಬಾಗಿಲು ಬಳಿಯ ನಂಗಲಿ ಸಮೀಪ ರಾಜ್ಯ ಪ್ರವೇಶಿಸುವ ಕೈಲಾಶ್ ಸತ್ಯಾರ್ಥಿ ಅವರಿಗೆ ಆತ್ಮೀಯ ಸ್ವಾಗತ ಕೋರಿ ಬರ ಮಾಡಿಕೊಳ್ಳಲಾಗುವುದು. ಮುಳಬಾಗಿಲಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಪ್ರತಿ ಮೂರು ಕಿ.ಮೀ.ಗೆ ಒಂದು ಕಡೆ ಸ್ವಾಗತ ಕಾರ್ಯಕ್ರಮವಿರಲಿದ್ದು, ಮಧ್ಯಾಹ್ನ 12ಕ್ಕೆ ಕೋಲಾರದಲ್ಲಿ ಜಾಥಾ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಹೊಸಕೋಟೆ ಬಳಿಯ ಆವಲಹಳ್ಳಿ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಫಸ್ಟ್ ಅಮೆರಿಕನ್ ಇಂಡಿಯಾ ಪ್ರತಿಷ್ಠಾನವು ವಿವೇಕಾನಂದ ಮೆಟ್ರೋ ನಿಲ್ದಾಣ ಬಳಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ನಿವೃತ್ತ ಜಿಲ್ಲಾ ಗವರ್ನರ್ ಪಿ.ಆರ್.ಎಸ್.ಚೇತನ್, “ಶೇ.90ರಷ್ಟು ಮಕ್ಕಳ ಕಳ್ಳ ಸಾಗಣೆ ದೇಶದೊಳಗೆ ನಡೆಯುತ್ತದೆ.
ಎನ್‌ಸಿಆರ್‌ಬಿ ದಾಖಲೆಯನ್ವಯ ದೇಶದಲ್ಲಿ 4.50 ಲಕ್ಷ ಮಕ್ಕಳು ಭಿಕ್ಷೆ ಬೇಡುತ್ತಾರೆ ಎಂಬ ಮಾಹಿತಿ ಇದೆ. ಕಳ್ಳಸಾಗಣೆ, ಅಂಗಾಂಗ ದಾನ, ಇತರೆ ಚಟುವಟಿಕೆಗಳಿಗೆ ಬಳಸುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಜಾಗೃತಿ ಮೂಡಿಸಲು ಭಾರತ ಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹ. ಅದರಂತೆ ಸೆ.15ರಂದು ಸಂಜೆ ಜಯನಗರ 7ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ “ಕ್ಯಾಂಡಲ್ ಲೈಟ್ ವಿಸಿಲ್’ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ವಿಭಾಗದ ನಿರ್ದೇಶಕಿ ಫಿನು ಜೋಸ್, “ಸೆ.16ರಂದು ಬೆಳಗ್ಗೆ 8.30ಕ್ಕೆ ಹೊಂಬೇಗೌಡನಗರ ಮೈದಾನದಿಂದ ಕ್ರೈಸ್ಟ್ ವಿ.ವಿವರೆಗೆ ನಾನಾ ಸ್ವಯಂ ಸೇವಾಸಂಸ್ಥೆಗಳು ಜಾಥಾ ಹಮ್ಮಿಕೊಂಡಿವೆ. ಬಳಿಕ 11 ಗಂಟೆಗೆ ಕ್ರೈಸ್ಟ್ ವಿ.ವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ’ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ, “ವರ್ಷಗಳು ಕಳೆದಂತೆ ಹೆಣ್ಣು ಮಕ್ಕಳ ಜನನ ಪ್ರಮಾಣ ತಗ್ಗುತ್ತಿದೆ.
ಭ್ರೂಣ ಹತ್ಯೆ, ಜೀತಪದ್ಧತಿ, ಲೈಂಗಿಕ ದೌರ್ಜನ್ಯ, ಕಳ್ಳ ಸಾಗಣೆ ತಡೆಗೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಅರಿವು ಮೂಡಿಸಲು ಕೈಲಾಶ್ ಸತ್ಯಾರ್ಥಿ ಅವರು ಭಾರತ ಯಾತ್ರೆ ಆರಂಭಿಸಿರುವುದು ಉತ್ತಮ ಪ್ರಯತ್ನ. ನಮ್ಮ ಮಕ್ಕಳು ಮಾತ್ರವಲ್ಲದೆ, ಇತರೆ ಮಕ್ಕಳು ಕೂಡ ದೇಶ ಆಸ್ತಿ ಎಂಬುದನ್ನು ಅರಿಯಬೇಕು. ಸೆ.16ರಂದು ಸಂಜೆ ಕೈಲಾಶ್ ಸತ್ಯಾರ್ಥಿ ಅವರೊಂದಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯ್ದ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವಿದೆ’ ಎಂದು ಮಾಹಿತಿ ನೀಡಿದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎಸ್.ನಾಗೇಂದ್ರ ಮಾತನಾಡಿ, “ಸೆ.17ರಂದು ಬೆಳಗ್ಗೆ 8.30ರಿಂದ 10 ಗಂಟೆವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಅವರು ಹೈದರಾಬಾದ್ ಕಡೆಗೆ ತೆರಳಲಿದ್ದಾರೆ’ ಎಂದು ಹೇಳಿದರು. ಆಯೋಗದ ಸದಸ್ಯರಾದ ಮರಿಸ್ವಾಮಿ, ವನಿತಾ ತೊರವಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.