ಪ್ರತಿಪಕ್ಷಗಳಿಗೆ ನುಂಗಲಾಗದ ತುತ್ತಾದ ಇಂದಿರಾ ಕ್ಯಾಂಟೀನ್
Team Udayavani, Aug 21, 2017, 11:28 AM IST
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್’ ಯೋಜನೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ಗೆ ತಲೆಬಿಸಿಯಾಗಿದೆ. ಆಟೋ ಚಾಲಕರು, ವಿದ್ಯಾರ್ಥಿಗಳು, ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದವರು ಕ್ಯಾಂಟೀನ್‌ನತ್ತ ಆಕರ್ಷಿತರಾಗುತ್ತಿರುವುದು ಇದಕ್ಕೆ ಕಾರಣ.
ಈ ನಡುವೆ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಸರ್ಕಾರ ಮುಂದಾಗಿರುವುದರಿಂದ ಅದು ಕಾರ್ಯಗತಗೊಂಡರೆ ಒಂದು ವರ್ಗದ “ಮತಬ್ಯಾಂಕ್’ ಕೈ ಪಾಲಾಗಬಹುದು ಎಂಬ ಆತಂಕ ಎರಡೂ ಪಕ್ಷಗಳದ್ದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಜೆಡಿಎಸ್‌ಗೆ ನುಂಗಲಾಗದ ತುತ್ತು: ಅದರಲ್ಲೂ “ಅಹಿಂದ’ ವರ್ಗ ಸೇರಿ ಕಾಂಗ್ರೆಸ್ ಓಟ್‌ಬ್ಯಾಂಕ್‌ಗೆ ಲಗ್ಗೆ ಹಾಕಲು ವರ್ಷಕ್ಕೆ ಮುಂಚೆಯೇ ಚುನಾವಣಾ ಅಖಾಡಕ್ಕಿಳಿದು ರಣತಂತ್ರ ರೂಪಿಸುತ್ತಿರುವ ಜೆಡಿಎಸ್‌ಗೆ ಇಂದಿರಾ ಕ್ಯಾಂಟೀನ್ ನುಂಗಲಾರದ ತುತ್ತಾಗಿದೆ. ಹೀಗಾಗಿ, ನಮ್ಮ ಅಪ್ಪಾಜಿ ಕ್ಯಾಂಟೀನ್ ಮತ್ತಷ್ಟು ವಿಸ್ತರಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿದೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಸಮೂಹ ಕ್ಯಾಂಟೀನ್‌ನತ್ತ ಆಕರ್ಷಿತರಾಗುತ್ತಿರುವುದು. ಆಟೋ ಚಾಲಕರು, ಗಾರ್ಮೆಂಟ್ಸ್ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗ ಕ್ಯಾಂಟೀನ್ ಯೋಜನೆಗೆ ಸಂತಸ ವ್ಯಕ್ತಪಡಿಸಿರುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಪಕ್ಷವನ್ನು ಚಿಂತೆಗೀಡುಮಾಡಿದೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕನಿಷ್ಠ 10 ಸ್ಥಾನ ಗೆಲ್ಲುವ ಗುರಿ ಹೊಂದಿದ್ದ ನಮಗೆ ನಮಗೆ ಇಂದಿರಾ ಕ್ಯಾಂಟೀನ್ ಸ್ವಲ್ಪ ಹೊಡೆತ ಕೊಡಬಹುದು. ರಾಜ್ಯಾದ್ಯಂತ ಇಂದಿರಾಕ್ಯಾಂಟೀನ್ ಪ್ರಾರಂಭವಾದರೆ ಆಗಬಹುದಾದ ಪರಿಣಾಮಗಳನ್ನೂ ಯೋಚಿಸಿ ಪರ್ಯಾಯ ತಂತ್ರಗಾರಿಕೆ ಬಗ್ಗೆ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.
ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಸ್ತರಣೆ
ಈ ಮಧ್ಯೆ, ಇಂದಿರಾ ಕ್ಯಾಂಟೀನ್‌ಗೆ ಪರ್ಯಾಯವಾಗಿ ಜೆಡಿಎಸ್ ವತಿಯಿಂದ ಬಸವನಗುಡಿಯಲ್ಲಿ ಆರಂಭಿಸಿರುವ ದೇವೇಗೌಡರ ಹೆಸರಿನ ನಮ್ಮ ಅಪ್ಪಾಜಿ ಕ್ಯಾಂಟೀನ್ ಅನ್ನು ಇತರೆಡೆಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆದಿದೆ. ಶೀಘ್ರದಲ್ಲೇ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೋಪಾಲಯ್ಯ ಅವರ ನೇತೃತ್ವದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ಈಗಾಗಲೇ ಜಾಗ ಗುರುತಿಸುತ್ತಿದ್ದು, ಮಲ್ಲೇಶ್ವರದಲ್ಲೂ ನಮ್ಮ ಅಪ್ಪಾಜಿ ಕ್ಯಾಂಟೀನ್ ತೆರೆಯಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಆರ್ಥಿಕವಾಗಿ ಸ್ಥಿತಿವಂತರಾಗಿರುವ ನಾಯಕರಿಗೆ ಖುದ್ದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು, ಸಾಧ್ಯವಾದರೆ ಕ್ಯಾಂಟೀನ್ ತೆರೆಯುವಂತೆ ಸಲಹೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಕೆಲವೆಡೆ ಕ್ಯಾಂಟೀನ್ ತೆರೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಸವನಗುಡಿಯಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ತೆರೆದಿರುವ ಶರವಣ ಅವರ ಬಳಿ ದೈನಂದಿನ ವೆಚ್ಚ, ಕಾರ್ಮಿಕರ ಅಗತ್ಯತೆ ಮತ್ತಿತರ ಮಾಹಿತಿಗಳನ್ನು ಕೆಲವು ಜೆಡಿಎಸ್ ನಾಯಕರು ಪಡೆದುಕೊಂಡಿದ್ದಾರೆ. ಒಟ್ಟಾರೆ, ವಿಧಾನಸಭೆ, ಲೋಕಸಭೆ, ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗ ದೃಷ್ಟಿಯಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ಊಟ ಮತ್ತು ತಿಂಡಿ ನೀಡುವ ಕ್ಯಾಂಟೀನ್‌ಗಳ ಸ್ಥಾಪನೆ “ಸಮೂಹ ಸನ್ನಿಯಂತೆ’ ಆದರೂ ಆಶ್ಚರ್ಯವಿಲ್ಲ. “ಕ್ಯಾಂಟೀನ್’ ಭಾಗ್ಯ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ತಂದುಕೊಡಲಿದೆ ಎಂಬುದನ್ನೂ ಕಾದು ನೋಡಬೇಇದೆ.
ಇಂದಿರಾ ಕ್ಯಾಂಟೀನ್‌ಗೆ ನಾವು ಹೆದರಿಲ್ಲ. ಬದಲಿಗೆ ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಸ್ತರಿಸುವ ಯೋಚನೆಯಿದೆ. ಇಂದಿರಾ ಕ್ಯಾಂಟೀನ್ ಯೋಜನೆ ನಮ್ಮ ಮತಬ್ಯಾಂಕ್ ಮೇಲೇನೂ ಪರಿಣಾಮ ಬೀರದು. ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಜಾರಿ ಮಾಡಿರುವ ಕ್ಯಾಂಟೀನ್ ಯೋಜನೆ ಬಹಳ ದಿನ ನಡೆಯಲ್ಲ.
-ಟಿ.ಎ.ಶರವಣ, ರಾಜ್ಯ ಜೆಡಿಎಸ್ ವಕ್ತಾರ
* ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.