ಇಂದಿರಾನಗರ ನಿವಾಸಿಗಳ ಗೋಳು ಕೇಳುವವರ್ಯಾರು?
Team Udayavani, Feb 8, 2019, 6:07 AM IST
ಬೆಂಗಳೂರು: ನಮ್ಮ ಮೆಟ್ರೊದಿಂದ ನಗರದ ಸಂಚಾರ ದಟ್ಟಣೆ ತಕ್ಕಮಟ್ಟಿಗೆ ಸುಧಾರಿಸಿದ್ದು, ಇಂದಿರಾನಗರದ ಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಮೆಟ್ರೋ ನಂತರ ಅಲ್ಲಿನ ನಿವಾಸಿಗಳ ನೆಮ್ಮದಿ ಕದಡಿದೆ!
ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ, ರಸ್ತೆಯಲ್ಲಿ ಜನರ ಓಡಾಟ, ವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಪಾಲಿಕೆ, ನಿವಾಸಿಗಳ ನಿದ್ದೆಗೆಡಿಸುವ ಪಬ್, ಬಾರ್‌ಗಳ ಸಂಗೀತ, ಮನೆ ಮುಂದೆಯೂ ವಾಹನ ನಿಲುಗಡೆಯಿಂದ ಹೊರಬರಲಾದ ಸ್ಥಿತಿಯಿದೆ.
ನಮ್ಮ ಮೆಟ್ರೊ ಇಂದಿರಾನಗರದ ಮೂಲಕ ಹಾದು ಹೋಗಿರುವುದರಿಂದ ಈ ಭಾಗದ ಹಲವಾರು ಬಡಾವಣೆಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಪರಿಣಾಮ ಪ್ರಮುಖ ಸಂಸ್ಥೆಗಳ ಕಚೇರಿಗಳು, ಸೂಪರ್ ಮಾರ್ಕೆಟ್‌ಗಳು, ಮಸಾಜ್ ಪಾರ್ಲರ್‌ಗಳು, ಪಿಜಿಗಳು ಆರಂಭವಾಗಿದ್ದು, ಇಲ್ಲಿನ ಮನೆಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಪರಿಣಾಮ ಇಂದಿರಾನಗರ 1ನೇ ಹಂತ, 12ನೇ ಮುಖ್ಯರಸ್ತೆ ಹಾಗೂ ಎಚ್‌ಎಎಲ್ 2ನೇ ಹಂತ ಸೇರಿದಂತೆ ಪ್ರಮುಖ ಬಡಾವಣೆಗಳ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಅದನ್ನು ತಾಳಲಾಗದೆ ವಾಣಿಜ್ಯ ಚಟುವಟಿಕೆಗಳ ಮುಚ್ಚುವಂತೆ ನಿವಾಸಿಗಳು ಬೀದಿಗಿಳಿದು ಧರಣಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಕಾನೂನು ಬಾಹಿರವಾಗಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಾಗಿದ್ದಾರೆ. ನಿವಾಸಿಗಳು ಹಲವಾರು ಬಾರಿ ದೂರುಗಳನ್ನು ನೀಡಿದರೂ, ಒಂದು ನೋಟಿಸ್ ಜಾರಿಗೊಳಿಸಿ ಸುಮ್ಮನಾಗುತ್ತಿದ್ದಾರೆ. ಇನ್ನು ಹಿರಿಯ ಅಧಿಕಾರಿಗಳಿಂದ ಆದೇಶ ಬಂದಾಗ ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳುವ ಮಳಿಗೆಗಳು ಮರು ದಿನವೇ ಆರಂಭವಾಗುತ್ತವೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
ಪಾರ್ಕಿಂಗ್ ಜಾಗದಲ್ಲಿ ಮಳಿಗೆಗಳು: ಇಂದಿರಾನಗರದ 80ಅಡಿ ಹಾಗೂ 100ಅಡಿ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಬಹುಮಹಡಿ ಕಟ್ಟಡಗಳ ನಿರ್ಮಾಣ ವೇಳೆ ಪಾರ್ಕಿಂಗ್‌ಗೆ ಮೀಸಲಿಡಬೇಕಾದ ಜಾಗವನ್ನು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇದರಿಂದಾಗಿ ಮಳಿಗೆಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಲುಗಡೆ ಮಾಡುತ್ತಿದ್ದಾರೆ.
ಹೆಚ್ಚಿದ ಶಬ್ದ ಮಾಲಿನ್ಯ: ವಾಣಿಜ್ಯ ಚಟುವಟಿಕೆಗಳು ಹೆಚ್ಚಾದಂತೆ ಇಂದಿರಾನಗರಕ್ಕೆ ಬರುವ ಜನಸಂಖ್ಯೆಯಲ್ಲಿ ಏರಿಕೆಯಾಗಿದೆ. ಪರಿಣಾಮ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಉಂಟಾಗುತ್ತಿದ್ದು, ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಇದರೊಂದಿಗೆ ಪಬ್ ಹಾಗು ಬಾರ್‌ಗಳಲ್ಲಿನ ಧ್ವನಿ ವರ್ಧಕಗಳಿಂದಾಗಿ ಜನರು ನೆಮ್ಮದಿಯಿಂದ ನಿದ್ದೆ ಮಾಡದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಕುಡುಕರ ಹಾವಳಿ: ಸಂಜೆಯಿಂದ ಪಬ್, ಬಾರ್‌ಗಳಲ್ಲಿ ಕುಣಿದು, ಕುಡಿಯುವವರು, ರಾತ್ರಿ 12ರ ರಸ್ತೆಗಳಲ್ಲಿ ಮದ್ಯಪಾನ ಮಾಡುತ್ತಾರೆ. ಜತೆ ಕಾರುಗಳಿಂದ ಜೋರಾಗಿ ಸ್ವೀಕರ್ ಹಾಕಿ ನಿದ್ದೆ ಮಾಡದಂತೆ ಮಾಡುತ್ತಾರೆ. ಅದನ್ನು ಪ್ರಶ್ನಿಸಿದರೆ, ಹಲ್ಲೆಗೆ ಮುಂದಾಗುತ್ತಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಒಂದು ದಿನ ಬೀಟ್ ಮಾಡುತ್ತಾರೆ. ನಂತರ ಅದೇ ಪರಿಸ್ಥಿತಿ ಮುಂದುವರಿಯುತ್ತದೆ. ಇನ್ನು ವಾಣಿಜ್ಯ ಮಳಿಗೆಗಳಿಗೆ ಬರುವವರು ತಮ್ಮ ವಾಹನಗಳನ್ನು ನಿವಾಸಿಗಳ ಗೇಟ್ ಮುಂದೆ ಹಾಕುವುದರಿಂದ ಜನರು ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು.
ಇಂದಿರಾನಗರದ ಡಿಫೆನ್ಸ್ ಬಡಾವಣೆ, ಎಚ್‌ಎಎಲ್ 2ನೇ ಹಂತ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಜನರು ಕೆಲಸ ಮಾಡುವಂತಹ ಕಚೇರಿಗಳನ್ನು ತೆರೆಯಲಾಗಿದೆ. ಆದರೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಉದ್ಯೋಗಿಗಳು ತಮ್ಮ ವಾಹನಗಳನ್ನು ಬಡಾವಣೆಗಳ ರಸ್ತೆಗಳ ಎರಡೂ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
-ವೆಂಕಟೇಶ್, ಡಿಫೆನ್ಸ್ ಬಡಾವಣೆಯ ನಿವಾಸಿ
ಪಬ್, ಬಾರ್‌ಗಳು ಧ್ವನಿ ವರ್ಧಕ ಬಳಸಲು ಅನುಮತಿ ಪಡೆಯದಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ನಿವಾಸಿಗಳು ರಾತ್ರಿ ವೇಳೆ ನಿದ್ದೆಗೆಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಿ ಉಪಮುಖ್ಯಮಂತ್ರಿಗಳಿಂದ ಹಿಡಿದು ಸಹಾಯಕ ಇಂಜಿನಿಯರ್‌ವರೆಗೆ ದೂರುಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ.
-ಸ್ವರ್ಣ ವೆಂಕಟರಾಮನ್, ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ
* ವೆಂ. ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.