ಪಂ.ಗಣಪತಿ ಭಟ್ ಹಾಸಣಗಿ ಅವರಿಗೆ ಇನ್ಫೋಸಿಸ್ ಪ್ರಶಸ್ತಿ
Team Udayavani, Sep 9, 2017, 11:28 AM IST
ಬೆಂಗಳೂರು: ಇನ್ಫೋಸಿಸ್ ಮತ್ತು ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಫೌಂಡೇಷನ್ ಟ್ರಸ್ಟ್ ನೀಡುವ ಇನ್ಫೋಸಿಸ್-ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ- 2017ಕ್ಕೆ ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾದ ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಆಯ್ಕೆಯಾಗಿದ್ದಾರೆ.
ನಗರದ ಜಯನಗರ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ ಸೆ. 10ರ ಭಾನುವಾರ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಟ್ರಸ್ಟ್ ಹಮ್ಮಿಕೊಂಡಿರುವ ಸ್ಮರಣೆ, ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪದ್ಮಶ್ರೀ ಪುರಸ್ಕೃತ ಕವಿ ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮದ್, ಬಿಎನ್‌ಎಂ ಚಾರಿಟಿಸ್‌ನ ಟ್ರಸ್ಟಿ ಮತ್ತು ಕಾರ್ಯದರ್ಶಿ ನಾರಾಯಣ ರಾವ್ ಆರ್.ಮಾನೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಪರ್ವೀನ್ ಜೆ.ಶೇಖ್ ಮತ್ತು ಅನೀಸಾ ಖಾನ್ ಸೌದಾಗರ್ ಅವರಿಂದ ಹಾಡುಗಾರಿಕೆ ನಡೆಯಲಿದ್ದು, ಶೈಲೇಶ್ ಶೆಣೈ ತಬಲಾ, ಹರ್ಷದಾ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಅಲ್ಲದೆ, ರೈಸ್ ಬಾಲೇಖಾನ್ ಮತ್ತು ಹಫೀಸ್ ಬಾಲೇಖಾನ್ ಅವರು ಹಾಡಿರುವ ಮತ್ತು ಉಸ್ತಾದ್ ರಫೀಕ್ ಖಾನ್ ಮತ್ತು ಪಂಡಿತ್ ಶ್ರೀನಿವಾಸ ಜೋಶಿ ಅವರು ಸಂಗೀತ ಸಂಯೋಜಿಸಿರುವ ವಚನ ಸ್ವರಧಾರೆ ಸಿ.ಡಿ. ಬಿಡುಗಡೆ ಮಾಡಲಾಗುವುದು.
ಎಂ.ಆರ್.ಕಲಾವತಿ ಅವರಿಗೆ ಸೌಭಾಗ್ಯ ಲಕ್ಷ್ಮಿ ವಸಂತರಾವ್ ಜಾಜೀ ಶಿಷ್ಯವೇತನ ಮತ್ತು ಬಿ.ಕೆ.ಮಮತಾ ಅವರಿಗೆ ಹಮೀದಾ ಬೇಗಂ ಬಾಲೇಖಾನ್ ಶಿಷ್ಯವೇತನ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಹಫೀಸ್ ಬಾಲೇಖಾನ್ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನದ ಬಳಿಕ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಂದ ಹಾಡುಗಾರಿಕೆ ಇರಲಿದ್ದು, ಶ್ರೀಧರ್ ಮಾಂಡ್ರೆ ತಬಲ ಮತ್ತು ಗುರುಪ್ರಸಾದ್ ಹೆಗ್ಡೆ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.