ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಗೆ ರಕ್ತ ನೀಡಿದ ಇನ್ಸ್‌ಪೆಕ್ಟರ್
Team Udayavani, Mar 16, 2019, 6:33 AM IST
ಬೆಂಗಳೂರು: ವ್ಯಕ್ತಿಯೊಬ್ಬನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ, ರಕ್ತದಾನವನ್ನೂ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪರಿಚಯದ ವ್ಯಕ್ತಿಯಿಂದ ಹಲ್ಲೆಗೊಳಗಾಗಿದ್ದ ಖಾಸಗಿ ಶಾಲೆ ಶಿಕ್ಷಕಿ ತನುಜಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವೆಂಕಟಪ್ಪ ಲೇಔಟ್‌ನಲ್ಲಿ ವಾಸವಿರುವ ಶಿಕ್ಷಕಿ ತನುಜಾ, ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ 25ಕ್ಕೂ ಹೆಚ್ಚುಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡುತ್ತಿದ್ದಾರೆ. ಅವರ ಪತಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದು, ತನುಜಾ ಒಬ್ಬರೇ ವಾಸಿಸುತ್ತಿದ್ದರು.
ಅವರ ಮನೆ ಸಮೀಪ ವಾಸವಿರುವ ಶೇಖರ್ ಎಂಬಾತ ತನ್ನ ಇಬ್ಬರು ಮಕ್ಕಳನ್ನು ತನುಜಾ ಅವರ ಬಳಿ ಪಾಠಕ್ಕೆ ಕಳುಹಿಸುತ್ತಿದ್ದ. ಹೀಗಾಗಿ ಪರಿಚಯವಾಗಿತ್ತು. ಇತ್ತೀಚೆಗೆ ತನ್ನ ಜತೆ ಸರಿಯಾಗಿ ಮಾತನಾಡುವುದಿಲ್ಲ ಎಂದು ಶೇಖರ್ ಜಗಳವಾಡಿದ್ದ. ಜತೆಗೆ ಬೆದರಿಕೆ ಹಾಕಿದ್ದ.
ಗುರುವಾರ ಸಂಜೆ 4.30ರ ಸುಮಾರಿಗೆ ತನುಜಾ ಅವರು ಮನೆಯ ಬಳಿ ಒಬ್ಬರೇ ಇದ್ದಾಗ ಅಲ್ಲಿಗೆ ಬಂದ ಶೇಖರ್, ಜಗಳ ಆರಂಭಿಸಿದ್ದಾನೆ. ಜತೆಗೆ ಮಚ್ಚಿನಿಂದ ತನುಜಾರ ಹೊಟ್ಟೆಗೆ ಎರಡು ಮೂರು ಬಾರಿ ಹಲ್ಲೆ ನಡೆಸಿದ್ದಾನೆ. ಈ ಭೀಕರ ಘಟನೆ ನೋಡಿದ ಸ್ಥಳೀಯರು ಬೆಚ್ಚಿಬಿದ್ದು, ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅಲ್ಲಿಗೆ ತೆರಳಿದ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಹಾಗೂ ಸಿಬ್ಬಂದಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ತನುಜಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ವಿಕ್ಟೋರಿಯಾಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹೀಗಾಗಿ ಪೊಲೀಸರೇ ತನುಜಾ ಅವರನ್ನು ವಿಕ್ಟೋರಿಯಾಗೆ ಕರೆತಂದಿದ್ದಾರೆ.
ಮಚ್ಚೇಟಿನ ಗಾಯದಿಂದ ತೀವ್ರ ರಕ್ತಸ್ರಾವವಾಗಿದ್ದು, ತನುಜಾ ಅವರಿಗೆ ಎಬಿ ಪಾಸಿಟಿವ್ ರಕ್ತದ ಅವಶ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಇನ್ಸ್‌ಪೆಕ್ಟರ್ “ನನ್ನದೂ ಎಬಿ ಪಾಸಿಟಿವ್ ರಕ್ತ, ತೆಗೆದುಕೊಳ್ಳಿ’ ಎಂದು ತಿಳಿಸಿದ್ದಾರೆ. ಬಳಿಕ ವೈದ್ಯರು, ಇನ್ಸ್‌ಪೆಕ್ಟರ್ ರಕ್ತ ಸಂಗ್ರಹಿಸಿ ತನುಜಾ ಅವರಿಗೆ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
“ತಕ್ಷಣಕ್ಕೆ ಗಾಯಾಳು ತನುಜಾ ಅವರಿಗೆ ರಕ್ತದ ಅವಶ್ಯವಿತ್ತು. ನನ್ನ ರಕ್ತ ಅವರ ರಕ್ತದ ಗುಂಪಿಗೆ ಹೊಂದಾಣಿಕೆ ಆಗುತ್ತಿತ್ತು. ಹೀಗಾಗಿ, ಆ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ನಿರ್ವಹಿಸಿದೆ’ ಎಂದು ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಹೇಳಿದರು.
ತನುಜಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರು ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಆರೋಪಿ ಶೇಖರ್ ವಿರುದ್ಧ ಹಲ್ಲೆ, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.