ರಫೇಲ್ ಉತ್ಪಾದನೆಗೆ ನೆರವಾಗಲು ಆಸಕ್ತಿ ಇತ್ತು
Team Udayavani, Feb 22, 2019, 6:23 AM IST
ಬೆಂಗಳೂರು: ರಫೇಲ್ ಯುದ್ಧ ವಿಮಾನವನ್ನು ನಮ್ಮಲ್ಲೇ ಉತ್ಪಾದಿಸುವುದಾದರೆ ನೆರವಾಗಲು ಆಸಕ್ತಿ ಹೊಂದಿದ್ದೆವು ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹೇಳಿದ್ದಾರೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಫೇಲ್ ಯುದ್ಧ ವಿಮಾನಗಳನ್ನು ವಿದೇಶಿ ಕಂಪನಿಯಿಂದ ನೇರವಾಗಿ ಖರೀದಿ ಮಾಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಹೀಗಾಗಿ ಒಪ್ಪಂದದ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದ ಅವರು, ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ (ಎಚ್‌ಎಎಲ್) ಆರ್ಥಿಕ ಸುಸ್ಥಿರತೆ ಕಾಯ್ದುಕೊಂಡಿದೆ ಮತ್ತು ಸರ್ಕಾರದಿಂದ ಯಾವುದೇ ರೀತಿಯಲ್ಲೂ ನಿರ್ಲಕ್ಷಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.
2022ರ ವೇಳೆಗೆ ಎಲ್‌ಸಿಎ ಎಂಕೆ-1ಎ: ಎಚ್‌ಎಎಲ್‌ನ 15 ಎಲ್‌ಸಿಎಚ್ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಬಂದಿದ್ದು, 162ಗೂ ಬೇಡಿಕೆ ಬರುವ ನಿರೀಕ್ಷೆಯಿದೆ. ಕನಿಷ್ಠ 70 ಎಚ್‌ಟಿಟಿ-40 ಟ್ರೇನರ್ ಜೆಟ್‌ಗಳ ಖರೀದಿಗೆ ಆರ್ಡರ್ ಬರಲಿದೆ. ತೇಜಸ್ ಎಲ್‌ಸಿಎ- ಎಂಕೆ1ಎ ವಿಮಾನ ವಿನ್ಯಾಸ ಪೂರ್ಣಗೊಂಡಿದ್ದು, ಐಎಎಫ್ನಿಂದ ಪ್ರಮಾಣೀಕರಿಸಿದ ಬಳಿಕ ಉತ್ಪಾದನೆ ಶುರುವಾಗಲಿದೆ.
ಅಂದಾಜು ಪ್ರಕಾರ 2022ರ ವೇಳೆಗೆ ಎಂಕೆ-1ಎ ಉತ್ಪಾದನೆ ಶುರುವಾಗಲಿದೆ. ಜತೆಗೆ ಎಲ್‌ಸಿಎ ಎಂಕೆ-2 ವಿಮಾನಗಳ ತಯಾರಿಗೂ ಎಲ್ಲಾ ರೀತಿಯ ಸಿದ್ಧತೆ ಆರಂಭಿಸಿದ್ದೇವೆ. ಭಾರತೀಯ ವಾಯು ಸೇನೆಯಿಂದ ಅಂತಿಮ ಅನುಮತಿ ಪತ್ರ ದೊರೆತಿರುವುದರಿಂದ 16 ತೇಜಸ್ ಲಘು ಯುದ್ಧ ವಿಮಾನಗಳನ್ನು ಆದಷ್ಟು ಬೇಗ ನೀಡಲಿದ್ದೇವೆ ಎಂದರು.
ವಿದೇಶಿ ಗ್ರಾಹಕರು ನಮ್ಮ ಸೇವೆ ಬಗ್ಗೆ ತೃಪ್ತಿ ಹೊಂದಿದ್ದಾರೆ. ಹೀಗಾಗಿ ವಿದೇಶಿ ಕಂಪನಿಗಳೊಂದಿಗಿನ ನಮ್ಮ ವ್ಯವಹಾರಕ್ಕೆ ಯಾವುದೇ ಧಕ್ಕೆಯಿಲ್ಲ. ನಮ್ಮ ಸಾಮರ್ಥ್ಯ ಏನು ಎಂಬುದು ಈಗಾಗಲೇ ಹಲವು ಬಾರಿ ಸಾಬೀತುಪಡಿಸಿದ್ದೇವೆ. ಏರೋ ಇಂಡಿಯಾದಲ್ಲೂ ನಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದೇವೆ ಎಂದು ಹೇಳಿದರು.
ಮಿರಾಜ್ ದುರಂತಕ್ಕೆ ಎಚ್‌ಎಎಲ್ ಹೊಣೆಯಲ್ಲ: ಮಿರಾಜ್-2000 ವಿಮಾನ ದುರಂತದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ದುರಂತಕ್ಕೆ ಎಚ್‌ಎಎಲ್ ಅನ್ನು ಹೊಣೆ ಮಾಡುವುದು ಸರಿಯಲ್ಲ. ಯಾರು ಏನೇ ಮಾತನಾಡಿದರೂ ಎಚ್‌ಎಎಲ್ ಘನತೆಗೆ ಹಿನ್ನಡೆಯಾಗುವುದಿಲ್ಲ.
ನ್ಯಾಯಾಲಯದಿಂದ ತೀರ್ಪು ಬಂದ ನಂತರ ಈ ಬಗ್ಗೆ ಉತ್ತರ ನೀಡಲಿದ್ದೇವೆ ಎಂದು ಎಚ್‌ಎಎಲ್ ಸಾಮರ್ಥ್ಯದ ಬಗ್ಗೆ ಟೀಕೆ ಮಾಡಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯಖಾತೆ ಸಚಿವ ಜನರಲ್ ವಿ.ಕೆ.ಸಿಂಗ್ ಹೇಳಿಕೆಗೆ ಮಾಧವನ್ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಫೆ.1ರಂದು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಮಿರಾಜ್-2000 ಏರ್‌ಕ್ರಾಫ್ಟ್ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಈ ವೇಳೆ ಜನರಲ್ ವಿ.ಕೆ.ಸಿಂಗ್, “ನಮ್ಮ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಎಚ್‌ಎಎಲ್ ಅಭಿವೃದ್ಧಿಪಡಿಸಿದ ವಿಮಾನದ ಭಾಗಗಳು ರನ್‌ವೇನಲ್ಲಿಯೇ ಉದುರಿ ಹೋಗುತ್ತವೆ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.