ಜ.18ಕ್ಕೆ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ
Team Udayavani, Oct 6, 2018, 12:29 PM IST
ಬೆಂಗಳೂರು: ಕೃಷಿ ಇಲಾಖೆ ವತಿಯಿಂದ “ಸಾವಯವ ಮತ್ತು ಸಿರಿಧಾನ್ಯಗಳು- 2019′ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವು ಜ.18ರಿಂದ 20ರವರೆಗೆ ಮೂರು ದಿನಗಳ ಕಾಲ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ.
ಈ ಬಾರಿಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದು, 12,000 ಚದರ ಮೀಟರ್ ಪ್ರದೇಶದಲ್ಲಿ ಮೇಳ ಆಯೋಜನೆಯಾಗಲಿದೆ. ರಾಜ್ಯದ ಜತೆಗೆ ಹೊರರಾಜ್ಯ ಹಾಗೂ ವಿದೇಶಗಳ ಸಾವಯವ- ಸಿರಿಧಾನ್ಯ ಪಾಲುದಾರರು ಹಾಗೂ ರಾಜ್ಯದ ಪ್ರಾದೇಶಿಕ ಸಾವಯವ ಕೃಷಿಕರ ಒಕ್ಕೂಟಗಳು, ರೈತ ಉತ್ಪಾದಕರ ಸಂಘಗಳು, ರೈತರ ಮಳಿಗೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಾವಯವ- ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಅಧಿಕೃತವಾಗಿ ಘೋಷಿಸಿದ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಸಾವಯವ- ಸಿರಿಧಾನ್ಯ ಕೃಷಿಕರು, ಉದ್ದಿಮೆದಾರರು, ರಫ್ತುದಾರರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಮೇಳ ಆಯೋಜಿಸಲಾಗಿದೆ. ಈ ಪ್ರಯತ್ನದಿಂದ ರಾಜ್ಯವು ದೇಶದ ಸಾವಯವ- ಸಿರಿಧಾನ್ಯಗಳ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಿದರು.
ಕಡಿಮೆ ನೀರಿನಲ್ಲಿ, ಹೆಚ್ಚಿನ ಗೊಬ್ಬರದ ಅಗತ್ಯವೂ ಇಲ್ಲದೆ ಉತ್ತಮ ಸಿರಿಧಾನ್ಯ ಬೆಳೆಯಲು ಅವಕಾಶವಿದೆ. ಹಾಗಾಗಿ ಸಿರಿಧಾನ್ಯ ಬೆಳೆಯಲು ಹಾಗೂ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೊಯಮತ್ತೂರು, ಪುಣೆ, ದೆಹಲಿಯಲ್ಲಿ ರೋಡ್ ಶೋ ನಡೆಸಿ ಜಾಗೃತಿ ಮೂಡಿಸಲಾಗುವುದು. ವಿದೇಶಗಳಲ್ಲೂ ರೋಡ್ ಶೋ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೊಜ್ಜು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ತೀವ್ರತೆ ತಗ್ಗಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯ ಸಹಕಾರಿಯಾಗಿದೆ. ಕಡಿಮೆ ಮಳೆಯಾಗುವ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಇತರೆಡೆ ಸಿರಿಧಾನ್ಯ ಬೆಳೆಯಲು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಮೂರ್‍ನಾಲ್ಕು ವರ್ಷಗಳಿಂದ ಸಾವಯವ, ಸಿರಿಧಾನ್ಯ ಬೆಳೆಯುವುದಕ್ಕೆ ಉತ್ತೇಜಿಸಿ ಹಲವು ಕಾರ್ಯಕ್ರಮ ಜಾರಿಯಾಗಿವೆ. ಮುಖ್ಯವಾಗಿ ನಮ್ಮ ಜೀವನಶೈಲಿ, ಆಹಾರ ಪದ್ಧತಿ, ಬೆಳೆ ಬೆಲೆ ಪದ್ಧತಿಯಲ್ಲಿ ಸುಸ್ಥಿರ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ.
ಪಾಶ್ವಿಮಾತ್ಯ ಜೀವನ ಶೈಲಿಗೆ ಮಾರುಹೋಗಿ ಅನೇಕ ರೋಗಗಳಿಗೆ ತುತ್ತಾಗಿ ಹೆಚ್ಚು ಹಣ ವ್ಯಯಿಸುತ್ತಿದ್ದೇವೆ. ಇನ್ನಾದರೂ ಸುಸ್ಥಿರದೆಡೆಗೆ ಗಮನ ಹರಿಸಬೇಕಿದೆ ಎಂದರು. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಮಾತನಾಡಿ, ಸಾವಯವ ಬೆಳೆ ಪ್ರದೇಶ 2,500 ಹೆಕ್ಟೇರ್‌ನಿಂದ ಒಂದು ಲಕ್ಷ ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ.
ಇದನ್ನು 1.5 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಗುರಿ ಇದೆ. ಸಾವಯವ, ಸಿರಿಧಾನ್ಯ ಬೆಳೆಗಾರರು ಕೇವಲ ಶೇ.30, ಶೇ.40ರಷ್ಟು ಬೆಲೆಯಷ್ಟೇ ಪಡೆಯುತ್ತಿದ್ದಾರೆ. ಹಾಗಾಗಿ ರೈತರು ಹಾಗೂ ಖರೀದಿದಾರರ ನಡುವೆ ನೇರ ಸಂಪರ್ಕ ಕಲ್ಪಿಸಲು ಒತ್ತು ನೀಡಲಾಗಿದೆ. ಮೂರು ತಿಂಗಳಲ್ಲಿ ಕೃಷಿ ಉತ್ಪಾದಕರ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಸಮಗ್ರ ನೀತಿ ತರಲು ಚಿಂತಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್, ಹಾಸನ- ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೆ.ಸಿ.ರುದ್ರಪ್ಪ, “ಫಲದ’ ಆಗ್ರೋ ರಿಸರ್ಚ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಶಾಸಿ, ಬಿಗ್ ಬ್ಯಾಸ್ಕೆಟ್‌ನ ಶೇಷು ಕುಮಾರ್, ಐಸಿಸಿಒಎ ಕಾರ್ಯಕಾರಿ ನಿರ್ದೇಶಕ ಮನೋಜ್ ಕುಮಾರ್ ಮೆನನ್ ಉಪಸ್ಥಿತರಿದ್ದರು.
ಹಾಲಿನ ಬೂತ್ ಮಾದರಿಯಲ್ಲಿ ಸಾವಯವ, ಸಿರಿಧಾನ್ಯ ಮಾರಾಟ ಮಳಿಗೆ ತೆರೆಯಲು ಚಿಂತಿಸಲಾಗಿದೆ. ಸಿರಿಧಾನ್ಯ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹಾಗಾಗಿ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಅನುಕೂಲವಾಗುವಂತೆ ಮಳಿಗೆ ತೆರೆಯಲು ಚಿಂತಿಸಲಾಗಿದೆ.
-ಎನ್.ಎಸ್.ಶಿವಶಂಕರರೆಡ್ಡಿ, ಕೃಷಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.