ಹಳ್ಳಿ ಕೆರೆ ಮೇಲೆ ನೀರಾವರಿ ಇಲಾಖೆ ಕಣ್ಣು!
Team Udayavani, Oct 30, 2017, 6:00 AM IST
ಬೆಂಗಳೂರು: ನಿರ್ಜೀವ ಮತ್ತು ಬತ್ತಿಹೋದ ಕೆರೆಗಳ ಡಿನೋಟಿಫಿಕೇಷನ್‌ವಿಚಾರದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವಿನ ಸಂಘರ್ಷ ಅಂತ್ಯ ಕಂಡ ಬೆನ್ನಲ್ಲೇ ಇದೀಗ ಹಳ್ಳಿಕೆರೆಗಳ ಮೇಲೆ ಸಣ್ಣ ನೀರಾವರಿ ಇಲಾಖೆ ಕಣ್ಣು ಹಾಕಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮತ್ತು ಜಿಲ್ಲಾ ಪಂಚಾಯಿತಿಗಳ ನಿರ್ವಹಣೆ ಮಾಡುತ್ತಿರುವ ಸುಮಾರು 22 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತಮಗೆ ಬಿಟ್ಟು ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಬೇಡಿಕೆ ಇಟ್ಟಿದೆ. ಆದರೆ, ಯಾವ ಕಾರಣಕ್ಕೂ ಇದು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿದೆ. ಹೀಗೆ ಎರಡೂ ಇಲಾಖೆಗಳ ನಡುವೆ ಕೆರೆ ಜಗಳ ನಡೆದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಕರೆಗಳನ್ನು ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿ ಬರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಗೆ ತೆಗೆದುಕೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಮೊದಲು ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯ ಕೇಳಲು ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಳಿಸಿಕೊಡಲಾಗಿದೆ. ಅಲ್ಲಿಂದ ಅಭಿಪ್ರಾಯ ಬಂದ ಮೇಲೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಆದರೆ, ಸಣ್ಣ ನೀರಾವರಿ ಇಲಾಖೆಯ ಈ ಪ್ರಸ್ತಾವನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೆರೆಗಳನ್ನು ತಮಗೆ ಬಿಟ್ಟುಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಕೇಳುತ್ತಿರುವ ಉದ್ದೇಶ ಏನೆಂದು ಗೊತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಗಳನ್ನು ತಮ್ಮ ಸುಪರ್ದಿಗೆ ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಕೇಳುತ್ತಿರುವುದೇ ಕಾನೂನುಬಾಹಿರ ಹಾಗಾಗಿ, ಯಾವುದೇ ಕಾರಣಕ್ಕೂ ಕೆರೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ಕೆರೆಗಳ ಸಂರಕ್ಷಣೆ ಮುಖ್ಯ: ಕೆರೆ ಮತ್ತು ಜಲಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಇತ್ತೀಚಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದೇ ವಿಚಾರವಾಗಿ ಹಸಿರು ನ್ಯಾಯಪೀಠ, ಸುಪ್ರೀಂಕೋರ್ಟ್, ಹೈಕೋರ್ಟ್ ಅನೇಕ ಆದೇಶಗಳನ್ನು ಕೊಡುತ್ತಿವೆ. ಇದೇ ವೇಳೆ ಹಳ್ಳಿಗಳಲ್ಲಿರುವ ಅನೇಕ ಕೆರೆ-ಕುಂಟೆಗಳು ಬತ್ತಿ ಹೋಗಿವೆ, ಕೆಲವೊಂದು ಹಾಳಾಗಿವೆ. ಈ ಮಧ್ಯೆ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಹೀಗೆ ಪ್ರತ್ಯೇಕ ಪ್ರಾಧಿಕಾರವೇ ಇರುವಾಗ ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆಗೆ ಸೇರಿದ ಕೆರೆಗಳು ಸೇರಿದಂತೆ ಇನ್ನುಳಿದ ಕೆರೆಗಳು ಪ್ರಾಧಿಕಾರದ ವ್ಯಾಪ್ತಿಗೆ ತರುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿರುವ ಕೆರೆಗಳನ್ನು ನಮಗೆ ಕೊಡಿ ಎಂದು ಕೇಳಿದ್ದೇವೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಥನೆ ನೀಡುತ್ತಾರೆ.
ನಮ್ಮದು ಬಹುಪಯೋಗಿ ಕೆರೆಗಳು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಕೇವಲ ನೀರಾವರಿ ಕೆರೆಗಳು ಬರುತ್ತವೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿರುವ ಕೆರೆಗಳು ಬಹುಪಯೋಗಿ ಕೆರೆಗಳು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆರೆಗಳು ಇದಾಗಿವೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಶೇ.90ರಷ್ಟು ಕೆರೆಗಳೇ ಆಧಾರವಾಗಿದೆ. ಒಂದು ವೇಳೆ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಬಿಟ್ಟುಕೊಟ್ಟರೆ ಅವುಗಳನ್ನು ಕೃಷಿ ಮತ್ತು ನೀರಾವರಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯೆತೆಯನ್ನು ಅಲ್ಲಗಳೆಯುವಂತಿಲ್ಲ. ಒಂದೊಮ್ಮೆ ಈ ರೀತಿ ಆದರೆ, ಗ್ರಾಮೀಣ ಭಾಗದ ಜಲಮೂಲವೇ ಕಳೆದಕೊಳ್ಳಬೇಕಾದಿತು. ಅಷ್ಟಕ್ಕೂ ಅನೇಕ ವರ್ಷಗಳಿಂದ ಈ ಕೆರೆಗಳನ್ನು ನಮ್ಮ ಇಲಾಖೆಯೇ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುತ್ತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ನಮ್ಮ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಬಿಟ್ಟುಕೊಡುವುದಿಲ್ಲ ಎನ್ನುವುದು ಗ್ರಾಮೀಣಾಭಿವೃದ್ಧಿ ಇಲಾಖೆಯ ವಾದವಾಗಿದೆ.
ನಮ್ಮ ಇಲಾಖೆಯ ಕೆರೆಗಳನ್ನು ತಮಗೆ ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಕೇಳುತ್ತಿರುವುದು ಯಾಕೆಂದು ಗೊತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಅಷ್ಟೂ ಕೆರೆಗಳನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲೇ ಉಳಿಸಿಕೊಳ್ಳುತ್ತೇವೆ. ಅಷ್ಟಕ್ಕೂ, ಕೆರೆಗಳನ್ನು ನಮಗೆ ಕೊಡಿ ಎಂದು ಕೇಳುತ್ತಿರುವುದೇ ಕಾನೂನು ಬಾಹಿರ. ಹಾಗಾಗಿ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ನಮ್ಮ ಇಲಾಖೆಯ ಕೆರೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಗೆ ಸ್ಪಷ್ಟವಾಗಿ ಹೇಳಿದ್ದೇವೆ.
– ಎಚ್.ಕೆ ಪಾಟೀಲ್. ಗ್ರಾಮೀಣಾಭಿವೃದ್ಧಿ ಸಚಿವ
ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ದೃಷ್ಟಿಯಿಂದ ಎಲ್ಲ ಕೆರೆ-ಕುಂಟೆಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕಾಗಿದೆ. ಅದಕ್ಕಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಗೆ ತೆಗೆದುಕೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಅದನ್ನು ಸಚಿವ ಸಂಪುಟದ ಮುಂದೆ ತರುವ ಮೊದಲು ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯ ಕೇಳಬೇಕಾಗುತ್ತದೆ. ಹಾಗಾಗಿ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಳಿಸಲಾಗಿದೆ. ಅಲ್ಲಿಂದ ಅಭಿಪ್ರಾಯ ಬಂದ ಮೇಲೆ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು.
- ಆರ್. ರುದ್ರಯ್ಯ, ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ.
*ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.