ಬಿಎಂಟಿಸಿಗೆ ಎಲ್ಲವೂ ಅಗೋಚರ?
ದಾರಿ ಯಾವುದಯ್ಯಾ? ಸಂಚಾರಕೆ...
Team Udayavani, Jan 11, 2020, 3:10 AM IST
ಬೆಂಗಳೂರು: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿ ಬಸ್‌ವೊಂದರ ಫೋಟೋ ಹಾಕಿ, ಅದರ “ಬ್ಲೈಂಡ್ ಸ್ಪಾಟ್’ (ಅಗೋಚರ ಪ್ರದೇಶ)ಗಳನ್ನು ಗುರುತಿಸಲಾಗಿತ್ತು. ಅದು ಸಾಕಷ್ಟು ವೈರಲ್ ಆಗಿತ್ತು. ಏಕೆಂದರೆ, ಬಸ್‌ನ ಅಕ್ಕಪಕ್ಕ ಮಾತ್ರವಲ್ಲ; ಮುಂದಿನ ಜಾಗವನ್ನೂ “ಅಗೋಚರ’ ಎಂದು ಉಲ್ಲೇಖೀಸಲಾಗಿತ್ತು.
ಕೇವಲ 4 ದಿನಗಳ ಅಂತರದಲ್ಲಿ ನಗರದಲ್ಲಿ ಸಂಭವಿಸಿದ ಬಿಎಂಟಿಸಿ ಬಸ್ಸುಗಳ 2 ಸರಣಿ ಅಪಘಾತಗಳು ಆ “ವೈರಲ್ ಪೋಸ್ಟ್’ ಅನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದಂತಿವೆ! ಈ ಹೋಲಿಕೆಗೆ ಸಕಾರಣವೂ ಇದೆ. ಅಪಘಾತಕ್ಕೆ ಕಾರಣವಾದ ಆ ಬಸ್ಸುಗಳು ಮುಂದೆ ಹೋಗುತ್ತಿರುವ ವಾಹನಗಳಿಗೆ ಡಿಕ್ಕಿ ಹೊಡೆದಿದ್ದವು. ಪರಿಣಾಮ ಹತ್ತಕ್ಕೂ ಅಧಿಕ ವಾಹನಗಳು ಜಖಂಗೊಳ್ಳುವುದರ ಜತೆಗೆ ಈ ಘಟನೆಗಳು ಇಬ್ಬರನ್ನು ಬಲಿ ತೆಗೆದುಕೊಂಡಿದ್ದವು.
ಜ.6ರಂದು ಕಾಮಾಕ್ಷಿಪಾಳ್ಯದಲ್ಲಿ ನಡೆದ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದರೆ, ಶುಕ್ರವಾರ ಜಯನಗರದಲ್ಲಿ ನಡೆದ ಘಟನೆಗೆ ಚಾಲಕನ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದೆ. ಅಲ್ಪಾವಧಿಯಲ್ಲಿ ನಡೆದ ಈ ಅಪಘಾತಗಳು ಬಿಎಂಟಿಸಿ ಬಸ್‌ಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿವೆ. ಒಂದೆಡೆ ಹೊಸ ಬಸ್‌ಗಳು ಸೇರ್ಪಡೆ ವಿಳಂಬವಾಗುತ್ತಿದೆ. ಮತ್ತೂಂದೆಡೆ 8 ಲಕ್ಷ ಕಿ.ಮೀ. ದಾಟಿದ ಬಸ್‌ಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ.
ಇನ್ನೊಂದೆಡೆ ನಿರ್ವಹಣೆ ಮತ್ತು ಕಾರ್ಯಾಚರಣೆ ಎರಡೂ ತಂಡಗಳು ಒತ್ತಡದಲ್ಲಿ ಕೆಲಸ ಮಾಡುತ್ತಿವೆ. ಇದೆಲ್ಲವೂ ಸರಣಿ ಅಪಘಾತಗಳ ರೂಪದಲ್ಲಿ ಬಯಲಾಗಿದೆ ಎಂಬ ಚರ್ಚೆ ಬಿಎಂಟಿಸಿ ವಲಯದಲ್ಲಿ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಭಾಗೀಯ ಕಾರ್ಯಾಗಾರಗಳಲ್ಲಿ ವಾಹನಗಳ ನಿಲುಗಡೆ ಪ್ರಮಾಣ ಶೇ. 5ರಿಂದ 10ರಷ್ಟು ಹೆಚ್ಚಳವಾಗಿದೆ. ಇಲ್ಲಿ ವಾಹನಗಳ ಅರ್ಹತಾ ಪ್ರಮಾಣಪತ್ರ, ವಿನ್ಯಾಸ ನಿರ್ಮಾಣ (ಬಾಡಿ ಬಿಲ್ಡಿಂಗ್), ಗಾಜು, ಪ್ರವೇಶದ್ವಾರ ಮತ್ತಿತರ ದುರಸ್ತಿಗಾಗಿ ಶಾಂತಿನಗರ, ಕೆ.ಆರ್. ಪುರ, ನೆಲಮಂಗಲದ ಕಾರ್ಯಾಗಾರಗಳಲ್ಲಿ ನಿಲ್ಲುತ್ತವೆ.
ಇಲ್ಲಿ ಈ ಮೊದಲು ತಲಾ 5ರಿಂದ 6 ಬಸ್ ನಿಲುಗಡೆ ಆಗುತ್ತಿದ್ದವು. ಈಗ ಅವುಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದರ ಪರಿಣಾಮ ಘಟಕಗಳ ನಿರ್ವಹಣಾ ಕಾರ್ಯಾಗಾರಗಳಲ್ಲಿ “ಸ್ಪೇರ್’ (ಹೆಚ್ಚುವರಿ ನಿಲುಗಡೆ) ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ಬಂದು ನಿಂತಿರುತ್ತಾರೆ. ಆದರೆ, ಕೆಲವು ಸಲ ಬಸ್ಸುಗಳು ಇರುವುದಿಲ್ಲ. ಹೀಗಾಗಿ ಮೊದಲ ಪಾಳಿ ಪೂರ್ಣ ಗೊಳಿಸಿಕೊಂಡು ಬಂದ ಬಸ್‌ಗಳನ್ನೇ ಅವರಿಗೆ ನೀಡುವ ಉದಾಹರಣೆಗಳಿವೆ.
ಇನ್ನು ಕೆಲವು ವೇಳೆ ತರಾತುರಿಯಲ್ಲಿ ನಿರ್ವಹಣೆ ಮಾಡ ಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಾಗಾರದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಇದಲ್ಲದೆ, ಬಿಎಂಟಿಸಿ ವ್ಯಾಪ್ತಿಯಲ್ಲಿ 6,500 ಬಸ್‌ಗಳಿದ್ದು, ಆ ಪೈಕಿ 890ಕ್ಕೂ ಅಧಿಕ ಬಸ್ಸುಗಳು 8.5 ಲಕ್ಷ ಕಿ.ಮೀ. ಕ್ರಮಿಸಿವೆ. ಹಳೆ ಬಸ್ಸುಗಳು ಆಗಾಗ್ಗೆ ದುರಸ್ತಿಗೆ ಬರುತ್ತಿರುತ್ತವೆ. ನಿರ್ವಹಣೆ ಕೆಲವೊಮ್ಮ ತರಾತುರಿಯಲ್ಲಿ ಆಗುವುದರಿಂದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದೂ ಹೇಳಲಾಗುತ್ತದೆ.
ಆದರೆ, ಮೂಲಗಳ ಪ್ರಕಾರ ಅಪಘಾತಕ್ಕೀಡಾಗಿರುವ ಬಸ್ಸುಗಳು ಇಷ್ಟೊಂದು ಕಿ.ಮೀ. ಕ್ರಮಿಸಿಲ್ಲ. ಈ ನಿಟ್ಟಿನಲ್ಲಿ ಹೇಳುವುದಾದರೆ, ಬಸ್‌ಗಳಲ್ಲಿನ ವ್ಯವಸ್ಥೆಯೂ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ರಸ್ತೆಗಿಳಿದ ಬಸ್‌ಗಳಲ್ಲಿನ “ಏರ್ ಸಿಸ್ಟ್‌ಂ’ (ಗಾಳಿಯ ಒತ್ತಡದ ವ್ಯವಸ್ಥೆ) ತುಸು ಭಿನ್ನವಾಗಿದೆ. ಏರ್ ಬಲೂನು, ಆಟೋಮೆಟಿಕ್ ದ್ವಾರಗಳು ಮತ್ತಿತರ ಹೆಚ್ಚುವರಿ ವ್ಯವಸ್ಥೆ ಜತೆಗೆ ಸಂಚಾರ ದಟ್ಟಣೆಯಲ್ಲಿ ಪದೇ ಪದೇ ಬ್ರೇಕ್ ಹಾಕಬೇಕಾಗುತ್ತದೆ.
ಹೀಗೆ ಬ್ರೇಕ್ ಹಾಕುವಾಗ ಗಾಳಿಯ ಒತ್ತಡ ನಿಗದಿಗಿಂತ ಕಡಿಮೆ ಇದ್ದಾಗ ನಿಲುಗಡೆ ಆಗುವುದಿಲ್ಲ ಎಂದೂ ಕಾರ್ಯಾಗಾರದ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ. ಈ ಮಧ್ಯೆ ಚಾಲಕರಿಗೂ ಸುತ್ತುವಳಿ ಪೂರೈಸುವ ಸವಾಲು ಇರುತ್ತದೆ. ಗುರಿ ತಲುಪುವ ಒತ್ತಡದಲ್ಲಿ ಸಿಗ್ನಲ್ ಜಂಪ್ ಅಥವಾ ಬ್ರೇಕ್ ಹಾಕುವ ಬದಲಿಗೆ ಎಕ್ಸಿಲರೇಟರ್ ಒತ್ತುವ ಸಾಧ್ಯತೆ ಇರುತ್ತದೆ ಎಂದೂ ಚಾಲನಾ ಸಿಬ್ಬಂದಿ ಹೇಳುತ್ತಾರೆ.
ಬ್ಲೈಂಡ್ ಸ್ಪಾಟ್ ಅಂದ್ರೆ ಏನು?: ಬಸ್‌ನಲ್ಲಿ ಚಾಲಕ ಸಾಮಾನ್ಯವಾಗಿ ಎತ್ತರದ ಆಸನದಲ್ಲಿ ಕುಳಿತಿರುತ್ತಾರೆ. ಆಸನದ ಎಡ-ಬಲ ಭಾಗದಲ್ಲಿ ಯಾವುದೇ ಚಿಕ್ಕ ವಾಹನಗಳು ಸಂಚರಿಸಿದರೆ ಚಾಲಕನಿಗೆ ಕಾಣುವುದಿಲ್ಲ. ಬಸ್‌ಗೆ ಅಳವಡಿಸಿರುವ ಕನ್ನಡಿಗಳ ಗಾತ್ರ ಕೂಡ ಚಿಕ್ಕದಾಗಿರುತ್ತದೆ. ಹಾಗಾಗಿ ಈ ಜಾಗಗಳನ್ನು “ಬ್ಲೈಂಡ್ ಸ್ಪಾಟ್’ ಎಂದು ಕರೆಯುತ್ತಾರೆ.
ಸರಾಸರಿ ದಿನಕ್ಕೊಂದು ಅಪಘಾತ!: ಅಂಕಿ-ಅಂಶಗಳ ಪ್ರಕಾರ ಅಪಘಾತಗಳ ಸಂಖ್ಯೆ ಇಳಿಮುಖದಲ್ಲಿದ್ದರೂ, ಸರಾಸರಿ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಅಪಘಾತಗಳ ವಿವರ ಹೀಗಿದೆ.
ವರ್ಷ ಅಪಘಾತ
2013-14 388
2015-16 333
2016-17 299
2017-18 293
2018-19 286
8.50 ಲಕ್ಷಕ್ಕಿಂತ ಹೆಚ್ಚು ಕಿ.ಮೀ. ಕ್ರಮಿಸಿದ ಬಸ್ಸುಗಳು
ಸಾಮಾನ್ಯ 833
ಹವಾನಿಯಂತ್ರಿತ 362
ವಾಸ್ತವವಾಗಿ ಈ ಘಟನೆಗಳಿಗೆ ಕಾರಣಗಳೇನು? ತನಿಖಾ ವರದಿಗಳು ಏನು ಹೇಳುತ್ತವೆ? ಅದರಿಂದ ಕಲಿತ ಪಾಠಗಳೇನು? ಇದ್ಯಾವುದೂ ಗೊತ್ತಾಗುವುದಿಲ್ಲ. ಮುಖ್ಯವಾಗಿ ಆ ವರದಿಗಳನ್ನು ಬಹಿರಂಗಪಡಿಸಬೇಕು. ಆಗ ರಸ್ತೆಗಳು ಕಾರಣವೇ? ಬಸ್ಸು ಅಥವಾ ಇತರೆ ವಾಹನ ಸವಾರರು ಕಾರಣವೇ ಎಂಬುದು ತಿಳಿಯುತ್ತದೆ.
-ವಿನಯ್ ಶ್ರೀನಿವಾಸ್, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸದಸ್ಯ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.