ಐಎಂಎ ಮನ್ಸೂರ್ ಖಾನ್ ಇರುವಿಕೆ ಪತ್ತೆ?
Team Udayavani, Jun 25, 2019, 3:06 AM IST
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರೂವಾರಿ ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದು ತಿಳಿದಿದೆ. ಆದರೆ, ತನಿಖೆ ದೃಷ್ಟಿಯಿಂದ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಆತ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿರುವಂತೆ ಕಾನೂನಿಗೆ ಶರಣಾಗುವುದಾದರೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವಿಡಿಯೋ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ಆರೋಪಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕೆಲ ಪ್ರಮುಖ ಹೆಸರು ಹೇಳಿದ್ದಾನೆ. ಆದರೆ, ಆತನ ಹೇಳಿರುವ ಎಲ್ಲರಿಗೂ ನೋಟಿಸ್ ಜಾರಿ ಮಾಡಲು ಸಾಧ್ಯವಿಲ್ಲ. ಸೂಕ್ತ ಸಾಕ್ಷ್ಯಗಳನ್ನಾಧರಿಸಿ ವಿಚಾರಣೆ ನಡೆಸಲಾಗುತ್ತದೆ.
ಆತ ಕಾನೂನಿಗೆ ಶರಣಾಗುವುದಾಗಿ, ಆತನಿಗೆ ಮತ್ತು ಕುಟುಂಬಕ್ಕೆ ಪ್ರಾಣ ಭಯ ಇದೆ ಎಂದು ಹೇಳಿಕೊಂಡಿದ್ದಾನೆ. ಕಾನೂನಿಗೆ ತಲೆಬಾಗುವುದಾದರೆ, ಸೂಕ್ತ ರಕ್ಷಣೆ ನೀಡಲಾಗುವುದು. ತನಗೆ ಬೇಕಾದ ರೀತಿಯಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಆತ ಹೇಳಿರುವ ಎಲ್ಲಾ ಸಂಗತಿಗಳನ್ನೂ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಐಎಂಎ ಆಸ್ತಿ ಪತ್ತೆ: ಐಎಂಎ ಸಮೂಹ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಕಂಪನಿಯ ಮಳಿಗೆಗಳನ್ನು ಪರಿಶೀಲಿಸಿ, ಚಿನ್ನ, ಬೆಳ್ಳಿ, ವಜ್ರಗಳನ್ನು ಜಪ್ತಿ ಮಾಡಿದ್ದೇವೆ. ಕಂಪನಿಯ ನಿರ್ದೇಶಕರನ್ನು ಬಂಧಿಸಲಾಗಿದೆ. ಅವರ ವಿಚಾರಣೆಯಿಂದ ಸಾಕಷ್ಟು ಸಂಗತಿಗಳು ಹೊರಗೆ ಬರುತ್ತಿವೆ. ಇನ್ನೂ ಕೆಲವರನ್ನು ಗುರುತಿಸಲಾಗಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ. ತನಿಖೆಯ ಗೌಪ್ಯತೆ ಹಾಗೂ ಮುಂದಿನ ಹಂತದ ತನಿಖೆಗೆ ಧಕ್ಕೆ ಆಗದಿರಲಿ ಎಂಬ ಉದ್ದೇಶದಿಂದ ಕೆಲ ವಿಚಾರಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಡಿಯೋ ಬಗ್ಗೆ ಪರಿಶೀಲನೆ: ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋ ಯುಟ್ಯೂಬ್‌ಗ ಅಪ್‌ಲೋಡ್ ಆಗಿದ್ದು ಎಲ್ಲಿಂದಾ?ಎಂಬ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿರುವ ಮನ್ಸೂರ್ ಖಾನ್ ಅದನ್ನು ಅಪ್‌ಲೋಡ್ ಮಾಡಿಲ್ಲ. ಆದರೆ ಆತನ ಅಧಿ ಕೃತ ಇ-ಮೇಲ್ ಐಡಿಯಿಂದಲೇ ಅಪ್‌ಲೋಡ್ ಆಗಿದೆ ಎಂಬುದು ಗೊತ್ತಾಗಿದೆ.
ಅದು ಭಾರತದಿಂದಲೇ ಅಪ್‌ಲೋಡ್ ಆಗಿರುವ ಸಾಧ್ಯತೆಯಿದೆ. ಆತ ತನ್ನ ವೀಡಿಯೋವನ್ನು ಭಾರತದಲ್ಲಿರುವ ಪರಿಚಯಸ್ಥರಿಗೆ ಕಳುಹಿಸಿ ಅವರ ಮೂಲಕ ಅಪ್‌ಲೋಡ್ ಮಾಡಿಸಿರಬಹುದು. ಹೀಗಾಗಿ ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿ ತನಿಖೆ ತಾಂತ್ರಿಕ ನಡಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಐಎಂಎ ಗೋಲ್ಡ್ ಪರಿಶೀಲನೆ: ಈ ಮಧ್ಯೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಗೋಲ್ಡ್ ಮಳಿಗೆಯಲ್ಲಿ ಪರಿಶೀಲಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ದಾಖಲೆಗಳನ್ನು ಜಪ್ತಿ ಮಾಡಿದೆ. ಬೆಳಗ್ಗೆ ಎಂಟು ಗಂಟೆಯಿಂದ ಎಸಿಪಿ ಬಾಲರಾಜ್ ನೇತೃತ್ವದ ತಂಡ ರಾತ್ರಿ 9.30ರವರೆಗೆ ಐಎಂಎ ಗೋಲ್ಡ್‌ನಲ್ಲಿ ಪರಿಶೀಲನೆ ನಡೆಸಿದ್ದು, ಸುಮಾರು ಎಂಟು ಟ್ರಂಕ್‌ಗಳ ಚಿನ್ನಾಭರಣ ಜಪ್ತಿ ಮಾಡಿದೆ.
ಈ ವೇಳೆ ವಂಚಕ ಸಂಸ್ಥೆ ಹಾಗೂ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಮೂಲ ದಾಖಲೆಗಳು ಹಾಗೂ ಹೂಡಿಕೆದಾರರಿಗೆ ಸೇರಿದ ದಾಖಲೆಗಳು ಸಿಕ್ಕಿವೆ. ಇದರೊಂದಿಗೆ ಆರೋಪಿ ಬಳಿ ಚಿನ್ನಾಭರಣ ಅಡಮಾನ ಇಟ್ಟಿರುವ ದಾಖಲೆಗಳು ದೊರಕಿದ್ದು, ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಯ ದಾಖಲೆ ಪತ್ತೆಯಾಗಿವೆ.
ಅಲ್ಲದೆ, ಸಂಜೆ ವೇಳೆಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಂಪನಿಯ ನಿರ್ದೇಶಕ ಹರ್ಷದ್ ಖಾನ್‌ನನ್ನು ಐಎಂಎ ಗೋಲ್ಡ್‌ಗೆ ಕರೆದೊಯ್ದ ವಿಶೇಷ ತಂಡ, ಆರೋಪಿಯಿಂದ ಅಡಮಾನ ಇಟ್ಟಿರುವ ಚಿನ್ನಾಭರಣಗಳ ಲೆಕ್ಕ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಕಂಪನಿ ಯಾರ ಜತೆ ವಹಿವಾಟು ನಡೆಸಿತ್ತು, ಸಾರ್ವಜನಿಕರ ಹೂಡಿಕೆಯ ಹಣ ಐಎಂಎ ಮೂಲಕ ಯಾವ ಯಾವ ಫಲಾನುಭವಿಗಳ ಪಾಲಾಗಿದೆ ಎಂಬ ಮಾಹಿತಿಗಳೆಲ್ಲಾ ಅದರಲ್ಲಿವೆ. ತನಿಖೆಯ ದೃಷ್ಟಿಯಿಂದ ಆ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ಪಿಸ್ತೂಲ್, ಜೀವಂತ ಗುಂಡುಗಳು ಪತ್ತೆ: ಐಎಂಎ ಗೋಲ್ಡ್‌ನಲ್ಲಿ ಪರಿಶೀಲನೆ ವೇಳೆ ಮನ್ಸೂರ್ ಖಾನ್ ಬಳಸುತ್ತಿದ್ದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳು ಪತ್ತೆಯಾಗಿವೆ.ಕೆಲ ತಿಂಗಳ ಹಿಂದೆ ತಿಲಕನಗರ ಪೊಲೀಸರಿಂದ ಪಿಸ್ತೂಲ್ ಪರವಾನಿಗೆ ಪಡೆದಿದ್ದ ಆರೋಪಿ, ಅದನ್ನು ತನ್ನ ಜ್ಯುವೆಲ್ಲರಿ ಮಳಿಗೆಯಲ್ಲೇ ಇಟ್ಟಿದ್ದ. ಸೋಮವಾರ ಪರಿಶೀಲನೆ ವೇಳೆ ಒಂದು ಪಿಸ್ತೂಲ್, 50 ಜೀವಂತ ಗುಂಡುಗಳು ಸಿಕ್ಕಿವೆ. ಪಿಸ್ತೂಲ್ 32 ಎಂಎಂನದ್ದು ಎನ್ನಲಾಗಿದೆ. ಇದೀಗ ಪಿಸ್ತೂಲ್ ಪರವಾನಿಗೆ ರದ್ದು ಮಾಡುವಂತೆ ತಿಲಕನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ಎಸ್‌ಐಟಿ ತನಿಖೆ ಎದುರಿಸಲು ಸಿದ್ಧ: ರೆಹಮಾನ್ ಖಾನ್
ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಈ ಬಗ್ಗೆ ನಾನು ಎಸ್‌ಐಟಿ ತನಿಖೆ ಎದುರಿಸಲು ಸಿದ್ದನಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಕೆ.ರೆಹಮಾನ್ ಖಾನ್ ಹೇಳಿದ್ದಾರೆ. ವಿಡಿಯೋದಲ್ಲಿ ಮನ್ಸೂರ್ ಖಾನ್ ತಮ್ಮ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮನ್ಸೂರ್ ಖಾನ್‌ಗೂ ನನಗೂ ವೈಯಕ್ತಿಕ ಸಂಬಂಧವಿಲ್ಲ.
ಸಮಾಜದ ಕಾರ್ಯಕ್ರಮದಲ್ಲಿ ನೋಡಿದ್ದೆ. ಒಂದು ಬಾರಿ ರೋಷನ್ ಬೇಗ್ ಅವರನ್ನು ಭೇಟಿ ಮಾಡಿಸಿದ್ದರು. ಈ ಸಂಸ್ಥೆಯ ಬಗ್ಗೆ ನಾನು ಹಲವು ಬಾರಿ ಪ್ರಶ್ನೆ ಮಾಡಿದ್ದೆ. ಸರ್ಕಾರ, ಐಟಿ, ಪೊಲೀಸ್ ಇಲಾಖೆಗಳಿಗೆ ಇವನು ಮೋಸ ಮಾಡುವುದು ಗೊತ್ತಿತ್ತು. ಆದರೂ, ಯಾವ ಕಾರಣಕ್ಕೆ ಕಣ್ಣು ಮುಚ್ಚಿಕೊಂಡು ಕುಳಿತರೋ ಗೊತ್ತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ನಮ್ಮ ಹೆಸರು ಪ್ರಸ್ತಾಪಿಸಿದ್ದಾರೆ. ಇಂತವರಿಂದ ಎಲ್ಲ ಸಮುದಾಯಗಳಿಗೂ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.