ಇನ್ನು ಮಳೆ ಕೊಯ್ಲು ನೀರು ಬಳಕೆ ಕಡ್ಡಾಯ?
Team Udayavani, Aug 17, 2019, 3:08 AM IST
ಬೆಂಗಳೂರು: ನಗರದಲ್ಲಿ ಕಾವೇರಿ ನೀರಿನ ಅವಲಂಬನೆ ಕಡಿಮೆ ಮಾಡಿ ಮಳೆನೀರು ಸಂಗ್ರಹ ಹಾಗೂ ಬಳಕೆ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಇದಕ್ಕಾಗಿ ಕಟ್ಟಡಗಳ ಮಳೆ ನೀರು ಕೊಯ್ಲು ಸಂಗ್ರಹ ಸಾಮರ್ಥ್ಯವನ್ನು ಮೂರಪಟ್ಟು ಹೆಚ್ಚಿಸುವ ಜತೆಗೆ ಆ ನೀರನ್ನು ಕಡ್ಡಾಯವಾಗಿ ಬಳಕೆ ಮಾಡಲು ನಿಯಮ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತುತ ನಗರದಲ್ಲಿ 1.8 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಮಳೆನೀರು ಕೊಯ್ಲು ವಿಧಾನ ವ್ಯಾಪ್ತಿಗೆ ಬರಲಿದ್ದು, ಆ ಪೈಕಿ 1.2 ಲಕ್ಷ ಕಟ್ಟಡಗಳು ಈ ವಿಧಾನ ಅಳವಡಿಸಿಕೊಂಡಿವೆ. ಈ ವಿಧಾನದಲ್ಲಿ ಸಂಗ್ರಹಣೆಗೆಂದು ನಿರ್ಮಿಸುವ ಟ್ಯಾಂಕ್ ಅಥವಾ ಸಂಪ್ ಸಾಮರ್ಥ್ಯವು ಕಟ್ಟಡದ ಮೆಲ್ಛಾವಣಿ ಆಧಾರಿತ ಮಳೆನೀರು ಕೊಯ್ಲುನಲ್ಲಿ ಒಂದು ಮೀಟರ್‌ಗೆ 20 ಲೀ.ನಷ್ಟು ಹಾಗೂ ನಿವೇಶನ ಆಧಾರಿತ ಮಳೆನೀರು ಕೋಯ್ಲು ವಿಧಾನದಲ್ಲಿ ಒಂದು ಮೀಟರ್‌ಗೆ 10 ಲೀ.ನಷ್ಟು ಕಡ್ಡಾಯವಾಗಿ ಇರಬೇಕು ಎಂದು ನಿಯಮವಿದೆ.
ಈಗ ಮಳೆ ನೀರನ್ನು ಹೆಚ್ಚು ಸಂಗ್ರಹಿಸಿ ಕಡ್ಡಾಯ ಬಳಕೆ ಮಾಡುವ ಕುರಿತು ಚಿಂತನೆ ನಡೆಸಿರುವ ಜಲಮಂಡಳಿಯು ಸಂಗ್ರಹಣಾ ಸಾಮಥ್ಯವನ್ನು ಮೂರುಪಟ್ಟು ಹೆಚ್ಚಿಸಲು ಮುಂದಾಗಿದೆ. ಅದಕ್ಕಾಗಿ ಮೆಲ್ಛಾವಣಿ ಆಧಾರಿತ ವಿಧಾನದಲ್ಲಿ ಒಂದು ಮೀಟರ್ ವಿಸ್ತೀರ್ಣಕ್ಕೆ 60 ಲೀ.ನಷ್ಟು ಹಾಗೂ ನಿವೇಶನ ಆಧಾರಿತ ವಿಧಾನದಲ್ಲಿ ಒಂದು ಮೀಟರ್ ವಿಸ್ತೀರ್ಣಕ್ಕೆ 30 ಲೀ.ನಷ್ಟು ಸಾಮರ್ಥ್ಯದ ಟ್ಯಾಂಕ್ ಅಥವಾ ಸಂಪ್ ಅಳವಡಿಸಬೇಕು ಎಂಬ ನಿಯಮ ಜಾರಿ ತರುತ್ತಿದೆ.
ಕಡ್ಡಾಯ ಬಳಕೆಗೆ ಪ್ರಸ್ತಾವನೆ: ಇದರ ಜತೆಗೆ ಇಷ್ಟು ದಿನ ಮಳೆನೀರು ಕೊಯ್ಲು ವಿಧಾನದಲ್ಲಿ ಸಂಗ್ರಹವಾದ ನೀರನ್ನು ಇಂಗುಗುಂಡಿಗೆ ಹರಿಸಬೇಕು ಎಂದು ನಿಯಮ ಇದೆ. ಆಸಕ್ತರು ಮಾತ್ರ ಮಳೆ ನೀರನ್ನು ದೈನಂದಿನ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಈಗ 40*60 ವಿಸ್ತೀರ್ಣ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳು ಕಡ್ಡಾಯವಾಗಿ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ತರಲು ಮುಂದಾಗಿದೆ.
ಜಲಮಂಡಳಿ ಹಾಕುವ ದಂಡದಿಂದ ತಪ್ಪಿಸಿಕೊಳ್ಳಲು ಹೆಸರಿಗಷ್ಟೆ ಹಲವರು ಮಳೆನೀರ ಕೊಯ್ಲು ಅಳವಡಿಸಿಕೊಂಡಿದ್ದು, ಮಳೆ ನೀರನ್ನು ಉತ್ತಮ ಟ್ಯಾಂಕ್ ಅಥವಾ ಸಂಪ್‌ನಲ್ಲಿ ಸಂಗ್ರಹಿಸಿ ನಿತ್ಯ ಕೆಲಸಗಳಿಗೆ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಜತೆಗೆ ಬಹುತೇಕರು ಇಂಗು ಗುಂಡಿ ಮಾಡಿ ಅದಕ್ಕೆ ಮಳೆನೀರು ಕೊಯ್ಲು ವಿಧಾನದಲ್ಲಿ ಸಂಗ್ರಹವಾದ ನೀರನ್ನು ಹರಿಸಿ ಅಂತರ್ಜಲ ಮರುಪೂರಣ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದಾಗಿ ಮಳೆನೀರು ಉಪಯುಕ್ತವಾಗಿ ಕಾವೇರಿ ನೀರಿನ ಬಳಕೆ ಕಡಿಮೆಯಾಗುತ್ತಿಲ್ಲ. ಹೀಗಾಗಿ, ಮಳೆನೀರು ಕೊಯ್ಲು ಸಂಗ್ರಹವನ್ನು ಹೆಚ್ಚಿಸುವ ಜತೆಗೆ ಬಳಕೆಯನ್ನು ಕಡ್ಡಾಯಗೊಳಿಸುವ ನಿಯಮ ತರಲಾಗುತ್ತಿದೆ.
ಸದ್ಯ ಈ ಕುರಿತು ಪ್ರಸ್ತಾವನೆಯನ್ನು ಜಲಮಂಡಳಿ ಸಿದ್ದಪಡೆಸಿ ಮಂಡಳಿ ಸಭೆಯಲ್ಲಿ ಅನುಮತಿ ಪಡೆದು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಒಪ್ಪಿಗೆ ಬಾಕಿ ಇದೆ. ಮಳೆಗಾಲದ ಸಮಯದಲ್ಲಿ ನಿವೇಶಗಳ ತರಾಸಿನ ಮೇಲೆ ಬೀಳುವ ನೀರನ್ನು ಮಳೆನೀರುಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಸಂಗ್ರಹಿಸಿ ಬಳಸಿದರೆ ವರ್ಷದಲ್ಲಿ ಕನಿಷ್ಠ ಮೂರರಿಂದ ನಾಲ್ಕು ತಿಂಗಳು ಕಾವೇರಿ ಅವಲಂಬನೆ ತಪ್ಪಿಸಿಬಹುದು ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರಿನಲ್ಲಿ ವಾರ್ಷಿಕ ಕನಿಷ್ಠ 700 ರಿಂದ 800 ಮಿ.ಲೀ.ನಷ್ಟು ಮಳೆಯಾಗುತ್ತಿದ್ದು, ಮಳೆ ನೀರನ್ನುಹೆಚ್ಚು ಬಳಸಿ ಕಾವೇರಿ ನೀರಿನ ಅವಲಂಬನೆ ಕಡಿಮೆ ಮಾಡಲು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಸಿ.ಗಂಗಾಧರ್ ತಿಳಿಸಿದ್ದಾರೆ.
ಸಂಗ್ರಹ ಸಾಮರ್ಥ್ಯ ಹೆಚ್ಚಳ ಹೇಗೆ?: ಪ್ರಸ್ತಾವನೆ ಸಲ್ಲಿಸಿರುವ ನಿಯಮದಂತೆ ಉದಾಹರಣೆಗೆ ನಿಮ್ಮ ಕಟ್ಟಡದ ಮೇಲ್ಛಾವಣಿ ವಿಸ್ತೀರ್ಣ 20 ಮೀ. ಇದ್ದರೆ ಮಳೆನೀರು ಸಂಗ್ರಹಿಸುವ ಟ್ಯಾಂಕ್ ಅಥವಾ ಸಂಪ್ ಸಾಮರ್ಥ್ಯವು ಒಂದು ಮೀಟರ್‌ಗೆ 60 ಲೀ. ನಂತೆ (20*60) 1200 ಲೀ. ಸಾಮರ್ಥ್ಯವನ್ನು ಹೊಂದಿರಬೇಕು. ಅಂತೆಯೇ ನಿವೇಶನ ಅಳತೆ ಆಧಾರದಲ್ಲಿಯೂ ಮೂರುಪಟ್ಟು ಹೆಚ್ಚಳವಾಗಲಿದೆ.
ಹಳೇ ಕಟ್ಟಡಗಳಿಗೆ ಅನ್ವಯವಿಲ್ಲ: “ಈಗಾಗಲೇ ಮಳೆನೀರು ಕೊಯ್ಲು ಅಳವಡಿಸಿಕೊಂಡಿರುವ ಹಳೇ ಕಟ್ಟಡಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವ ಹಾಗೂ ನಿರ್ಮಾಣವಾಗುವ ಕಟ್ಟಡಗಳು ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಜತೆಗೆ ಮಳೆ ನೀರಿನ ಮರುಬಳಕೆಗೆ ಜೋಡಿ ಕೊಳವೆ ವ್ಯವಸ್ಥೆಯನ್ನು ಕಟ್ಟಡದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ ಮಳೆನೀರು ಕೊಯ್ಲು ಯೋಜನೆ ಅಧಿಕಾರಿ ಬಿ.ಎಂ.ಮಂಜುನಾಥ್ ತಿಳಿಸಿದರು.
ಬೆಂಗಳೂರಿನಲ್ಲಿ ವಾರ್ಷಿಕ 970 ಮಿ.ಲೀ ಮಳೆಯಾಗುತ್ತದೆ. ಮಳೆನೀರು ಕೊಯ್ಲು ಸಂಗ್ರಹಣಾ ಸಾಮರ್ಥ್ಯ ಮೂರುಪಟ್ಟು ಹೆಚ್ಚಳ ಮಾಡುತ್ತಿರುವ ಜಲಮಂಡಳಿ ಚಿಂತನೆ ಉತ್ತಮವಾಗಿದ್ದು, ಇದರಿಂದ ಕಟ್ಟಡದ ಮೇಲ್ಛಾವಣೆ ಮೇಲೆ ಬೀಳುವ ಶೇ.80 ರಷ್ಟು ನೀರು ಮರುಬಳಕೆಗೆ ಸಾಧ್ಯವಾಗುತ್ತದೆ.
-ವಿಶ್ವನಾಥ್, ಮಳೆನೀರು ಕೊಯ್ಲು ತಜ್ಞ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.