Team Udayavani, Apr 12, 2019, 1:28 PM IST
ಬೆಂಗಳೂರು: ಬಿಜೆಪಿಯವರಿಗೆ ಸೋಲುವ ಭೀತಿ ಎದುರಾಗಿರುವ ಕಾರಣ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ಮಾಡಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪ್ರತಿಪಕ್ಷಗಳ ನಾಯಕರ ಆಪ್ತರು, ಸ್ನೇಹಿತರ ಮನೆಗಳ ಮೇಲೆ ಮಾಡಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಐದು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ಈ ರೀತಿ ಪ್ರತಿಪಕ್ಷಗಳ ನಾಯಕರು ಹಾಗೂ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಕೋಟ್ಯಂತರ ರೂ. ಖರ್ಚು ಮಾಡುವುದಾಗಿ ಹೇಳಿದ್ದರು. ಆದರೆ, ಅವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದರು.
ಪ್ರತಿಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ಮಾಡುವುದೇ ಆದಾಯ ತೆರಿಗೆ ಇಲಾಖೆ ಉದ್ಯೋಗ. ಐದು ವರ್ಷದಲ್ಲಿ ಐಟಿ ಇಲಾಖೆಯಲ್ಲಿ ರಾಜಕೀಯ ವಿಭಾಗವನ್ನು ಆರಂಭಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ರಾಜಕೀಯ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ರಿಜ್ವಾನ್ ಆರೋಪಿಸಿದರು.
ಬೆಂಗಳೂರಿನಲ್ಲಿ ಬಿಜೆಪಿಯ ಮೂವರು ಸಂಸದರು, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದರೂ, ನಗರಕ್ಕೆ ಒಂದೇ ಒಂದು ವಿಶೇಷ ಕೊಡುಗೆ ಕೊಟ್ಟಿಲ್ಲ. ಅವರು ತಮ್ಮ ಸಾಧನೆಯ ಮೇಲೆ ಮತ ಕೇಳುವ ಸ್ಥಿತಿಯಲ್ಲಿಲ್ಲ. ಬಿಜೆಪಿ ನಾಯಕರು ಬೆಂಗಳೂರಿಗೆ 10 ಸಾವಿರ ಕೋಟಿ ರೂ. ವಿಶೇಷ ಅನುದಾನ ತರುವುದಾಗಿ ಹೇಳಿದ್ದರು. ಆದರೆ, ನಯಾಪೈಸೆ ಬಂದಿಲ್ಲ. ಏಮ್ಸ್, ಐಐಟಿ, ನ್ಯಾಷನಲ್ ಏರೋನಾಟಿಕಲ್ ವಿಶ್ವ ವಿದ್ಯಾಲಯ, ದೆಹಲಿಯಿಂದ ಬೆಂಗಳೂರುವರೆಗೆ ಬುಲೆಟ್ ಟ್ರೇನ್ ಹೊರಡಿಸುತ್ತೇವೆ ಎಂದು ಹೇಳಿದ್ದರು. ಬಿಜೆಪಿ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ ಎಂದರು.
ನನ್ನ ಆಸ್ತಿ ಬಗ್ಗೆ ಸ್ಪಷ್ಟ ದಾಖಲೆಗಳಿವೆ ಸುಮಾರು ಹದಿನೈದು ಜನರ ಮೇಲೆ ದಾಳಿಯಾಗಿದೆ. ಅವರಲ್ಲಿ ಏಳೆಂಟು ಜನ
ಯಾರೆಂಬುದೂ ನನಗೆ ಗೊತ್ತಿಲ್ಲ. ಆದರೂ, ಅವರಿಗೆ ರಿಜ್ವಾನ್ ಬಗ್ಗೆ ಗೊತ್ತು ಎಂದು ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಪಿ.ಸಿ.ಮೋಹನ್ ಅವರಿಗೆ ನಾಲ್ಕೈದು ಪ್ರಶ್ನೆ ಕೇಳಿ, ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಬರಲಿಲ್ಲ. ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ. ಐಟಿ ದಾಳಿಗೆ ನಾನು ಹೆದರುವುದಿಲ್ಲ. ನನ್ನ ಬಳಿ ಇರುವ ಆಸ್ತಿ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಹೊಂದಿದ್ದೇನೆ. ಅಮಾನುಲ್ಲಾ ಖಾನ್, ಕಮಲ್ ಪಾಷಾ ಪರಿಚಯ ನನಗಿದೆ. ನಯೀಸ್ ಖಾನ್ ಯಾರೆಂದು ಗೊತ್ತಿಲ್ಲ. ನನಗೆ ತೊಂದರೆ ಕೊಡಲೆಂದೇ ಐಟಿ ದಾಳಿ ನಡೆಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಸಿಎಂ, ಮಾಜಿ ಸಿಎಂ ಕುಂಬಳಕಾಯಿ ಕಳ್ಳರಾ?
ಮಹದೇವಪುರ: “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರು’ ಎಂಬಂತೆ, ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ಮಹದೇವಪುರ ಕ್ಷೇತ್ರದ ಕಾಡುಗುಡಿಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಪರ ಗುರುವಾರ ಮತಯಾಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ದಾಳಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಬೇನಾಮಿ ಹಣವನ್ನು ಐಟಿ ಅಧಿಕಾರಿಗಳು ಎಲ್ಲಿ ವಶ ಪಡಿಸಿಕೊಳ್ಳುತ್ತಾರೆಂಬ ಆತಂಕದಿಂದ ಹತಾಶರಾಗಿ ಮಾತನಾಡುತಿದ್ದಾರೆ ಎಂದು ಲೇವಡಿ ಮಾಡಿದರು.
ಯಾರೋ ಗುತ್ತಿಗೆದಾರರ ಮನೆ ಮೇಲೆ ಐಟಿ ದಾಳಿ ನಡೆದರೆ ಇವರೇಕೆ ಈ ರೀತಿ ಬಡಬಡಿಸುತ್ತಿದ್ದಾರೆ? ಗುತ್ತಿಗೆದಾರಿಗೆ ಮತ್ತು ಇವರಿಗೆ ಇರುವ ಸಂಬಂಧವೇನು? ಚುನಾವಣೆಯಲ್ಲಿ ಹಣ ಹಂಚಲು ಗುತ್ತಿಗೆದಾರನ ಬೇನಾಮಿ ಹಣ ಇರಿಸಿದ್ದರಾ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಯುಷ್ಮಾನ್ ಭಾರತ, ಉಜ್ವಲ, ಜನಧನ್, ಮುದ್ರಾ ಯೋಜನೆಗಳ ಸದುಪಯೋಗವನ್ನು ಕೋಟ್ಯಂತರ ಭಾರತೀಯರು ಪಡೆದಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ 100 ರೂ. ಅನುದಾನ ಬಿಡುಗಡೆ ಮಾಡಿದರೆ, 15 ರೂ. ಮಾತ್ರ ಪಂಚಾಯಿತಿಗೆ ಸೇರುತ್ತದೆ ಎಂದು ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಹೇಳಿದ್ದರು. ಈಗ 2000 ರೂ. ಅನುದಾನ ಬಿಡುಗಡೆ ಮಾಡಿದರೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ಅಷ್ಟೂ ಹಣ ಪಂಚಾಯಿತಿ ಸೇರುವಂತೆ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಮುಖಂಡರಾದ ರಾಜಾರೆಡ್ಡಿ, ಜಯಚಂದ್ರ ರೆಡ್ಡಿ, ಅಶ್ವತ್ಥನಾರಾಯಣ ರೆಡ್ಡಿ, ಚನ್ನಸಂದ್ರ ಚಂದ್ರಶೇಖರ್, ಮಾರಪ್ಪ, ಕಬಡ್ಡಿ ಪಿಳ್ಳಪ್ಪ ಮತ್ತಿತರರು ಹಾಜರಿದ್ದರು.