ಯಾರ ಅಪ್ಪನ ಗೇಲಿಯೂ ಒಳ್ಳೇದಲ್ಲ; ಕುಮಾರಸ್ವಾಮಿ
Team Udayavani, Apr 9, 2018, 6:00 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಅವರಪ್ಪ ನಾಣೆ’ ಪದ ಬಳಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಂದೆಯ ಸ್ಥಾನ ಗೇಲಿ ಮಾಡದಂತೆ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಬಹಿರಂಗ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ಅಪ್ಪನ ಮಹತ್ವ ಹಾಗೂ ಹಿಂದಿನ ರಾಜಕೀಯವನ್ನು ಪ್ರಸ್ತಾಪಿಸಿದ್ದಾರೆ.
ಕುಮಾರಸ್ವಾಮಿ ಪತ್ರದ ಸಾರಾಂಶ
“”ಮೊದಲನೆಯದಾಗಿ, ನನ್ನ ಪ್ರಶ್ನೆ ಎತ್ತಿದರೆ ಸಾಕು, ಅವರಪ್ಪನಾಣೆ ಗೆಲ್ಲಲ್ಲ ಎಂದು ನೀವು ಉದ^ರಿಸುತ್ತೀರಿ. ತಂದೆಯೇ ಗುರು, ಗುರುವೇ ತಂದೆ ಎಂಬುದು ಭಾರತೀಯರ ನಂಬಿಕೆ. ಪದೇ ಪದೇ ಅವರಪ್ಪನಾಣೆ ಎನ್ನುವ ಮೂಲಕ ನೀವು ತಂದೆ ಸ್ಥಾನದಲ್ಲಿರುವವರಿಗೆ, ಗುರುಗಳಿಗೆ, ಇಡೀ ಭಾರತೀಯರ ನಂಬುಗೆಗಳಿಗೆ ಭಂಗ ತರುತ್ತಿದ್ದೀರಿ. ನೀವಿಡುತ್ತಿರುವ ಪ್ರತೀ ಪ್ರಮಾಣಗಳು ನಿಮ್ಮ ಭವಿಷ್ಯವನ್ನೇ ಸುತ್ತುವರಿಯಲಿವೆ ಎಚ್ಚರ. ಕಾಕತಾಳಿಯವೆಂಬಂತೆ ನನ್ನ ತಂದೆ ದೇವೇಗೌಡರು ನಿಮ್ಮ ರಾಜಕೀಯ ಗುರು. ಗುರುವಿಗೇ ಗೌರವ ಕೊಡದ, ಗುರುವಿಗೆ ನಿಷ್ಠರಲ್ಲದ ನೀವು ಜನರಿಗೆ ಗೌರವ ಕೊಡುವಿರೇ?
ಬಾಳಿ ಬದುಕಬೇಕಾದ ಯುವಕ, ನಿಮ್ಮ ಪುತ್ರ ರಾಕೇಶ್ ನಿಧನ ಹೊಂದಿದಾಗ ತಂದೆಯಾಗಿ ನೀವು ಪಟ್ಟ ಯಾತನೆ, ದುಃಖವನ್ನು ನೆನೆದು ಒಬ್ಬನೇ ಮಗನ ತಂದೆಯಾದ ನಾನೂ ಮಮ್ಮಲ ಮರುಗಿದ್ದೇನೆ. ನಾಡಿನ ತಂದೆ ತಾಯಿಯರೂ ದುಃಖೀಸಿದ್ದಾರೆ. ಅಂಥ ತಂದೆ ಸ್ಥಾನವನ್ನು ನೀವು ಗೇಲಿ ಮಾಡುವುದಾದರೆ, ಅಗೌರವಿಸುವುದಾದರೆ ಆಗಲಿ ಬಿಡಿ. ಇದರ ಪರಾಮರ್ಶೆಯನ್ನು ನಾನು ಜನತಾ ನ್ಯಾಯಾಲಯಕ್ಕೆ ಬಿಡುತ್ತೇನೆ.
ರಾಮನಗರದಲ್ಲಿ ನನ್ನನ್ನು ಸೋಲಿಸುತ್ತೇನೆ ಎಂಬ ನಿಮ್ಮ ಮಾತುಗಳು ದ್ವೇಷ ರಾಜಕಾರಣದ ಪ್ರತೀಕ. ನಿಮ್ಮ ರಾಜಕೀಯ ಜೀವನ ಏಳಿಗೆ ಕಂಡಿರುವುದು ಇನ್ನೊಬ್ಬರನ್ನು ಕುತಂತ್ರದಿಂದ ಸೋಲಿಸಿಯೇ ಅಲ್ಲವೇ? ಆದರೆ, ಸೋಲಲು ನಾನು ಪರಮೇಶ್ವರ್ ಅಲ್ಲ. ರಾಮನಗರ ಮಾತ್ರವಲ್ಲ, ಚನ್ನಪಟ್ಟಣದಲ್ಲೂ ಜನ ನನ್ನನ್ನು ಮಗನಾಗಿ ಸ್ವೀಕರಿಸಿದ್ದಾರೆ. ನನ್ನ ಮತ್ತು ಜನರ ನಡುವೆ ನನಗೆ ಇರುವುದು ಚುನಾವಣೆ, ರಾಜಕೀಯವನ್ನು ಮೀರಿದ ಸಂಬಂಧ. ಅಲ್ಲಿನ ಜನರಿಗೆ ನನ್ನ ಮೇಲಿರುವ ಈ ಮಟ್ಟಿನ ವಿಶ್ವಾಸ ನಿಮಗೆ ಚಾಮುಂಡೇಶ್ವರಿಯಲ್ಲಿ ಸಿಗಲು ಸಾಧ್ಯವೇ?
ದೇವೇಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಮನ್ನಾ ಮಾಡದೆ ಈಗೇಕೆ ಮಾತನಾಡುತ್ತಿದ್ದಾರೆ ಎಂಬುದು ನಿಮ್ಮ ಇನ್ನೊಂದು ಪ್ರಶ್ನೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ನೀವೇ ಹಣಕಾಸು ಸಚಿವರಾಗಿದ್ದರೂ ಸಾಲಮನ್ನಾ ಪ್ರಸ್ತಾಪ ಮಾಡಲಿಲ್ಲ. ದೇವೇಗೌಡರೇ ಪ್ರಧಾನಿ ಮೇಲೆ ಒತ್ತಡ ಹಾಕಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯವರು ಹಣಕಾಸು ಸಚಿವರಾಗಿದ್ದರೂ ಸಾಲ ಮನ್ನಾ ಮಾಡಿ ಅದನ್ನು ಚುಕ್ತಾ ಮಾಡಿದೆ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿ, ಜಾರಿಗೆ ತರದೇ ವಂಚನೆ ಮಾಡಿದ ನಿಮ್ಮಿಂದ ಜೆಡಿಎಸ್ ಸಾಲ ಮನ್ನಾದ ಬಗ್ಗೆ ಪಾಠ ಹೇಳಿಸಿಕೊಳ್ಳುವುದೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ.
ಜೆಡಿಎಸ್‌ನಲ್ಲಿದ್ದಿದ್ದರೆ ನಾನು ಮುಖ್ಯಮಂತ್ರಿಯಾಗಿರುತ್ತಿದ್ದೆ. ಕುಮಾರಸ್ವಾಮಿಗೆ ಅಧಿಕಾರ ಸಿಗುತ್ತಿರಲಿಲ್ಲ. ಮಕ್ಕಳನ್ನು ಮುಖ್ಯಮಂತ್ರಿ ಮಾಡಲೆಂದೇ ನನ್ನನ್ನು ಹೊರ ಹಾಕಲಾಯಿತು ಎಂದು ಆರೋಪಿಸಿದ ನೀವು ಕಡೆಗೂ ಸತ್ಯ ಒಪ್ಪಿಕೊಂಡಿದ್ದೀರಿ. ಈ ಮಾತಿನೊಂದಿಗೆ ದೇವೇಗೌಡರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿಸಿದರು ಎಂಬ ನಿಮ್ಮ ಆರೋಪವನ್ನು ಸ್ವತಃ ನೀವೇ ಸುಳ್ಳು ಎಂದು ಸಾರಿ ಹೇಳಿದ್ದೀರಿ. ಜೆಡಿಎಸ್ 25 ಸ್ಥಾನಗಳನ್ನೂ ಗೆಲ್ಲವುದಿಲ್ಲ ಎಂದು ಭವಿಷ್ಯ ನುಡಿದಿದ್ದೀರಿ. ಭಾಷ್ಯ ಬರೆಯಬೇಕಾದವರು ನಾಡಿನ ಜನ. ನಮ್ಮ ಪಕ್ಷದ ಗೆಲುವಿನ ಬಗ್ಗೆ ಮಾತನಾಡುವ ಮುನ್ನ ಚಾಮುಂಡೇಶ್ವರಿಯಲ್ಲಿ ನಿಮ್ಮ ಗೆಲುವಿನ ಬಗ್ಗೆ ಚಿಂತಿಸಿ.
ಜೆಡಿಎಸ್‌ಗೆ ಬೀಳುವ ಪ್ರತಿ ಮತ ಬಿಜೆಪಿಗೆ ಸಿಗುವ ಗೆಲುವಲ್ಲ, ಕಾಂಗ್ರೆಸ್‌ನ ಸೋಲು. ಕಾಂಗ್ರೆಸ್‌ಗೆ ಹಾಕುವ ಒಂದೊಂದು ಮತವೂ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೇಕಾದ ಖರ್ಚಿನ ಹಣವಾಗಿ ಪರಿವರ್ತನೆಯಾಗಲಿದೆ. ಕಾಂಗ್ರೆಸ್ ಅಧಿಕಾರ ಪಡೆದಿದ್ದೇ ಆದರೆ ರಾಜ್ಯವನ್ನು ಲೂಟಿ ಮಾಡಲಿದೆ. ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಟಿಎಂ ರೀತಿಯಂತಾಗಲಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಾಕುವ ಪ್ರತಿ ಮತವೂ ಲೂಟಿಕೋರರಿಗೆ ನೀಡಿದ ಪ್ರೋತ್ಸಾಹವಾಗಲಿದೆ.
ಉತ್ತರ ಕರ್ನಾಟಕದಲ್ಲಿ ಬಸವಣ್ಣ ಎನ್ನುವ ನೀವು, ಹಳೇ ಮೈಸೂರಿನಲ್ಲಿ ಕೆಂಪೇಗೌಡ ಎನ್ನುತ್ತೀರಿ. ಈ ಇಬ್ಬರೂ ಮಹ ನೀಯರು ಕಾಲ, ದೇಶ,ಪ್ರಾಂತ್ಯವನ್ನು ಮೀರಿದ ವಿಶ್ವಮಾನ ವರು ಎಂಬುದನ್ನು ಮರೆತು ಮತಕ್ಕಾಗಿ ಅವರ ಭಜನೆ ಮಾಡುತ್ತೀರಿ. ಹೀಗಿರುವಾಗ ನಿಮ್ಮಂಥವರಿಂದ ಜಾತ್ಯತೀತತೆ,ಬದ್ಧತೆ ಯನ್ನು ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ”.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು