ಸಕಾಲ ದುರ್ಬಲಗೊಳಿಸಲು ಹುನ್ನಾರ
Team Udayavani, Jun 5, 2017, 12:22 PM IST
ಬೆಂಗಳೂರು: ಸಾರ್ವಜನಿಕರು ಬಯಸುವ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸುವ “ಸಕಾಲ’ ಯೋಜನೆಯ ನಿರ್ದೇಶಕರೇ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದಾರೆಂದು ಸಕಾಲ ಆಡಳಿತಾಧಿಕಾರಿ ಕೆ.ಮಥಾಯಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸಕಾಲ ಯೋಜನಾ ನಿರ್ದೇಶಕರಾದ ಡಾ.ಕಲ್ಪನಾ ಅವರು ಯೋಜನೆಯ ತುರ್ತು ನಿಧಿ ದುರ್ಬಳಕೆ ಮಾಡಿಕೊಂಡಿದ್ದನ್ನು ಬಯಲಿಗೆಳೆದ ಕಾರಣಕ್ಕೆ ಅವರು ತಮ್ಮ ವಿರುದ್ಧ ದ್ವೇಷ ಸಾಧಿಸಲು ಯತ್ನಿಸಿದಂತಿದೆ ಎಂದು ಮಥಾಯಿ ದೂರಿದ್ದಾರೆ. ಜತೆಗೆ ತಾವು ಯೋಜನೆಯನ್ನು ಸದೃಢಗೊಳಿಸಲು ನಡೆಸಿದ ಪ್ರಯತ್ನದ ಬಗ್ಗೆ ಉಲ್ಲೇಖೀಸಿ, ಅದಕ್ಕೆ ವ್ಯತಿರಿಕ್ತವಾಗಿ ಯೋಜನೆಯನ್ನು ದುರ್ಬಲಗೊಳಿಸಲು ಅವರು ಹುನ್ನಾರ ನಡೆಸಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
“ಸಕಾಲ’ ಯೋಜನೆಯ ಮಾಸಿಕ ಪ್ರಗತಿ ವರದಿ ನೀಡದಿರುವುದಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಥಾಯಿ ಅವರ ಈ ಆರೋಪ ಚರ್ಚೆಗೆ ಗ್ರಾಸವಾಗಿದೆ. ತಾವು ಸಕಾಲ ಸದೃಢಗೊಳಿಸಲು ನಡೆಸಿದ ಪ್ರಯತ್ನ ಹಾಗೂ ಇದಕ್ಕೆ ವ್ಯತಿರಿಕ್ತವಾಗಿ ಯೋಜನಾ ನಿರ್ದೇಶಕರು ಕೈಗೊಂಡ ಕ್ರಮಗಳ ಬಗ್ಗೆ ಹೋಲಿಕೆ ರೂಪದಲ್ಲಿ ಮಥಾಯಿ ಮೇ 31ರಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ: ಬಿಡಿಎ, ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿ ಸೇರಿ ಹಾಸನದ ನಾನಾ ಕಚೇರಿಗಳಿಗೆ ನಾನು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದರೂ ಯೋಜನಾ ನಿರ್ದೇಶಕರಿಂದ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಮುಖ್ಯಮಂತ್ರಿ ಕಚೇರಿ ಹಾಗೂ ಕಾನೂನು ಸಚಿವರ ಸೂಚನೆ ಇದ್ದರೂ, ನನಗೆ ಮಂಜೂರಾಗಿದ್ದ ಗುತ್ತಿಗೆ ವಾಹನದ ಬಿಲ್‌ಅನ್ನು ಒಂಭತ್ತು ತಿಂಗಳಿನಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಕಡತವನ್ನು ಅನಗತ್ಯವಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ತಪಾಸಣೆ, ಪರಿಶೀಲನೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಆ ಮೂಲಕ ಮಾಫಿಯಾ ಕಾರ್ಯಾಚರಣೆ ಮಾದರಿಯಲ್ಲಿ ಸಕಾಲವನ್ನು ಬಂದ್ ಮಾಡುವ ಹುನ್ನಾರ ನಡೆಸಿದ್ದಾರೆ.
ಈ ಹಿಂದಿನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಶಾಲಿನಿ ರಜನೀಶ್, ಎಂ.ಲಕ್ಷ್ಮೀನಾರಾಯಣ್, ಎಂ.ವಿ.ಜಯಂತಿ, ಟಿ.ಕೆ.ಅನಿಲ್‌ಕ ಕುಮಾರ್ ಅವರ ಅಧಿಕಾರಾವಧಿಯಲ್ಲಿ ಸಕಾಲ ಆಡಳಿತಾಧಿಕಾರಿಗೆ ಕಾರು ಮಂಜೂರಾಗಿತ್ತು. ಆದರೆ ತಮಗೆ ಕಾರು ನೀಡಲು ಅಡ್ಡಿಪಡಿಸಿದ ಅಧಿಕಾರಿಯು ಈ ಹಿಂದೆ ತಾವು ಸಲ್ಲಿಸಿದ್ದ ಪಾಲಿಕೆಯ ಜಾಹೀರಾತು ಹಗರಣ ಸಂಬಂಧ ಪರೋಕ್ಷ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಮಾಸಿಕ ವರದಿ ಪ್ರಕಟಣೆಗೆ ನಿರಾಸಕ್ತಿ: ಸಕಾಲ ಯೋಜನೆಯ ಮಾಸಿಕ ಪ್ರಗತಿ ವಿವರ ಪ್ರಕಟಣೆಗೆ ಯೋಜನಾ ನಿರ್ದೇಶಕರು ನಿರಾಸಕ್ತಿ ತೋರಿದ್ದಾರೆ. ಇದು ಕ್ರಮೇಣ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನಕ್ಕೆ ಪುಷ್ಠಿ ನೀಡಿದಂತಿದೆ. ಹಾಗೆಯೇ ಸಕಾಲದ ಯಶಸ್ವಿ ಜಾರಿಗೆ ಸಂಬಂಧಪಟ್ಟಂತೆ ಬಳಸಬಹುದಾಗಿದ್ದ 2 ಕೋಟಿ ರೂ. ಅನುದಾನ ಬಳಸದೆ ಕೈತಪ್ಪುವಂತಾಗಿದ್ದು ಸಹ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನದ ಭಾಗದಂತಿದೆ.
ತುರ್ತು ನಿರ್ವಹಣೆಗೆಂದು ಕಾಯ್ದಿರಿಸಿದ್ದ ನಿಧಿಯಿಂದ (ಇಂಪ್ರಸ್ಟ್ ಅಮೌಂಟ್) ನಿಯಮಬಾಹಿರವಾಗಿ 75,890 ರೂ. ವೆಚ್ಚದಲ್ಲಿ ಯೋಜನಾ ನಿರ್ದೇಶಕರು ತಮ್ಮ ವೈಯಕ್ತಿಕ ಬಳಕೆಗಾಗಿ ದುಬಾರಿ ಐಪಾಡ್ ಖರೀದಿಸಿದ್ದಾರೆ. ಇದು ನಿಯಮಬಾಹಿರ ಎಂದು ತಿಳಿಸಿ ಅವರ ಸೂಚನೆಯಂತೆ ಮತ್ತೆ 20,000 ರೂ. ಹಣ ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೆ ತಮ್ಮ ವಿರುದ್ಧ ಪ್ರತಿಕಾರ ಮನೋಭಾವ ತೋರುತ್ತಿದ್ದಾರೆ. ಬಳಿಕ ಹಣ ಡ್ರಾ ಮಾಡುವ ಅಧಿಕಾರವನ್ನೇ ತಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.
ಯೋಜನೆಯ ಯಶಸ್ವಿ ಜಾರಿಗೆ ಅಗತ್ಯವಾದ ಮ್ಯಾನೇಜ್‌ಮೆಂಟ್ ಕನ್‌ಸಲ್ಟೆಂಟ್ಸ್, ಐಟಿ ಸಲಹೆಗಾರರು, ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗಿದೆ. ಈ ಬಗ್ಗೆ ಗಮನ ಸೆಳೆದದ್ದಕ್ಕೆ ತಮಗೆ ಅನಗತ್ಯವಾಗಿ ನೋಟಿಸ್ ನೀಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ತಪಾಸಣೆ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡದೆ ವಿಳಂಬ ಮಾಡುವ ಜತೆಗೆ ಯೋಜನೆಗೆ ಸಂಬಂಧಪಟ್ಟ ದೂರುಗಳ ಇತ್ಯರ್ಥಕ್ಕೂ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಕಾಲ ಸುಧಾರಣೆಗೆ ಸಲಹೆ: ಈ ಹಿಂದೆ ಯೋಜನಾ ನಿರ್ದೇಶಕರಾಗಿದ್ದ ಶಾಲಿನಿ ರಜನೀಶ್ ಅವರ ಅಧಿಕಾರಾವಧಿಯಲ್ಲಿದ್ದ ವಾತಾವರಣವನ್ನು ಮತ್ತೆ ತರಬೇಕಿದೆ. ಸಕಾಲ ಆಡಳಿತಾಧಿಕಾರಿಗಳಿಗೆ ತಕ್ಷಣವೇ ವಾಹನ ಮಂಜೂರು ಮಾಡಬೇಕು. ತಕ್ಷಣವೇ ವಾಹನ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಬೇಕು. ಹಣ ಡ್ರಾ ಮಾಡುವ ಅಧಿಕಾರವನ್ನು ಮತ್ತೆ ಆಡಳಿತಾಧಿಕಾರಿಗಳಿಗೆ ನೀಡಬೇಕು. ಸಕಾಲದ ಯಶಸ್ವಿ ಕಾರ್ಯ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯನ್ನು ತ್ವರಿತವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.