ರೂಪಾ ಸಹಿತ ಜೈಲು ಅಧಿಕಾರಿಗಳ ಎತ್ತಂಗಡಿ
Team Udayavani, Jul 18, 2017, 4:05 AM IST
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ಆರಂಭವಾಗಿರುವ ಬೆನ್ನಲ್ಲೇ, ಬಂದೀಖಾನೆ ಇಲಾಖೆಯ ಡಿಜಿ ಎಚ್.ಎನ್.ಸತ್ಯನಾರಾಯಣ ರಾವ್ ಹಾಗೂ ಡಿಐಜಿ ರೂಪಾ ಡಿ. ಮೌದ್ಗಿಲ್ ಅವರನ್ನು ಸರಕಾರ ಸೋಮವಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ನೋಟಿಸ್ ನೀಡಿದ ಅನಂತರವೂ ಕಾರಾಗೃಹಕ್ಕೆ ಭೇಟಿ ನೀಡಿರುವುದು, ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದನ್ನು ಆಕ್ಷೇಪಿಸಿ ರಾಜ್ಯ ಸರಕಾರ ಇಬ್ಬರು ಅಧಿಕಾರಿಗಳನ್ನು ಬಂದೀಖಾನೆ ಇಲಾಖೆಯಿಂದಲೇ ವರ್ಗಾವಣೆ ಮಾಡಿದೆ. ಇದನ್ನು ಶಿಕ್ಷೆಯ ವರ್ಗಾವಣೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಐಪಿಎಸ್ ಅಧಿಕಾರಿ ರೂಪಾ ಅವರನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿಯನ್ನಾಗಿ ವರ್ಗಾವಣೆ ಮಾಡಿದರೆ, ನಿವೃತ್ತಿ ಅಂಚಿನಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಸತ್ಯನಾರಾಯಣ ಅವರನ್ನು ಬಂದೀಖಾನೆ ಡಿಜಿ ಸ್ಥಾನದಿಂದ ವಿಮುಕ್ತಿಗೊಳಿಸಿದ್ದಲ್ಲದೆ, ಕಡ್ಡಾಯವಾಗಿ ರಜೆ ಮೇಲೆ ತೆರಳುವಂತೆ ಆದೇಶಿಸಲಾಗಿದೆ. ಅಷ್ಟೇ ಅಲ್ಲ, ಕೇಂದ್ರ ಕಾರಾಗೃಹದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಅವರನ್ನು ಸಹ ಎತ್ತಂಗಡಿ ಮಾಡಲಾಗಿದ್ದು, ಯಾವುದೇ ಹುದ್ದೆ ಸೂಚಿಸಲಾಗಿಲ್ಲ. ಬಂದೀಖಾನೆ ಇಲಾಖೆಯ ಉನ್ನತ ಅಧಿಕಾರಿಗಳ ಜಗಳದಿಂದ ಬೇಸತ್ತ ಸರಕಾರ ಕಾರಾಗೃಹದ ಡಿಜಿಪಿ ಹುದ್ದೆಯ ರ್‍ಯಾಂಕಿಂಗ್ ಅನ್ನೇ ಕೆಳದರ್ಜೆಗಿಳಿಸಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಸ್ಥಾನಕ್ಕೆ ಹಿಂಭಡ್ತಿ ನೀಡಲಾಗಿದೆ.
ವರ್ಗಾವಣೆಗೆ ಸರಕಾರದ ಸ್ಪಷ್ಟನೆ
ಇಬ್ಬರು ಉನ್ನತ ಅಧಿಕಾರಿಗಳ ವರ್ಗಾವಣೆ ಬಗ್ಗೆ ಸಾರ್ವಜನಿಕವಾಗಿ ಪರ-ವಿರೋಧ ಚರ್ಚೆ ನಡೆಯುವುದನ್ನು ಗಮನಿಸಿದ ಮುಖ್ಯಮಂತ್ರಿ ಸಚಿವಾಲಯ ಅಧಿಕಾರಿಗಳ ಎತ್ತಂಗಡಿಗೆ ಸ್ಪಷ್ಟನೆ ನೀಡಿದ್ದು, ಕಾರಾಗೃಹದ ಅಕ್ರಮಗಳ ಬಗ್ಗೆ ಸರಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿರುವಾಗ ಇಬ್ಬರು ಅಧಿಕಾರಿಗಳು ಸರಕಾರದ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದರಿಂದ ಅವರನ್ನು ವರ್ಗಾವಣೆ ಮಾಡಲಾಯಿತು ಎಂದಿದೆ.
ಅಶಿಸ್ತಿನ ವರ್ತನೆಗಾಗಿ ಶೋಕಾಸ್ ನೋಟಿಸ್ ನೀಡಿದ್ದರೂ ಇಬ್ಬರು ಉನ್ನತ ಅಧಿಕಾರಿಗಳು ಕಾರಾಗೃಹಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿದ್ದು, ಸರಕಾರದ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತನಿಖೆಗೆ ಸಹಕರಿಸಬೇಕಾಗಿದ್ದ ಅಧಿಕಾರಿಗಳು ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಇಲಾಖೆಯ ಘನತೆಗೆ ಕುಂದು ಉಂಟು ಮಾಡುವ ಕೃತ್ಯವಾಗಿದೆ. ಅಷ್ಟೇ ಅಲ್ಲ ತನಿಖೆಯ ಮೇಲೆ ಒತ್ತಡ ನಿರ್ಮಾಣವಾಗಬಾರದು ಎಂದು ಮುನ್ನೆಚ್ಚರಿಕೆ ವಹಿಸಲಾಗಿದೆ. ಆ ಮೂಲಕ ನಿಷ್ಪಕ್ಷಪಾತವಾಗಿ, ಸುಗಮವಾಗಿ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎನ್ನುವ ದೃಷ್ಟಿಯಿಂದ ರೂಪಾ ಮತ್ತು ಸತ್ಯನಾರಾಯಣ ರಾವ್ ಅವರನ್ನು ಬಂದೀಖಾನೆ ಇಲಾಖೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಸತ್ಯನಾರಾಯಣ ಅವರನ್ನು ಎತ್ತಂಗಡಿ ಮಾಡಿದ್ದ ಸರಕಾರ ಬಂದೀಖಾನೆ ಇಲಾಖೆಯ ಎಡಿಜಿಪಿ ಯನ್ನಾಗಿ ಭ್ರಷ್ಟಾಚಾರ ನಿಗ್ರಹ ದಳದ ಎನ್.ಎಸ್. ಮೇಘರಿಕ್ ಅವರನ್ನು ನಿಯುಕ್ತಿಗೊಳಿಸಿದೆ. ರೂಪಾ ಅವರ ಸ್ಥಾನಕ್ಕೆ ಇನ್ನೂ ಯಾರನ್ನೂ ನಿಯೋಜಿಸಿಲ್ಲ. ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಜೈಲಿನ ಅಧೀಕ್ಷಕಿ ಅನಿತಾ ಆರ್. ಅವರಿಗೆ ಪ್ರಭಾರ ಹೊಣೆ ನೀಡಲಾಗಿದೆ. ಇನ್ನೊಂದೆಡೆ, ನಿವೃತ್ತ ಅಧಿಕಾರಿ ವಿನಯಕುಮಾರ್ ಅವರು ಸೋಮವಾರದಿಂದಲೇ ತನಿಖೆ ಆರಂಭಿಸಿದ್ದಾರೆ. ವಾರದೊಳಗೆ ಪ್ರಾಥಮಿಕ ವರದಿ ನೀಡುವಂತೆ ಸರಕಾರ ಅವರಿಗೆ ಸೂಚಿಸಿದ್ದು, ತಿಂಗಳೊಳಗೆ ಪೂರ್ಣ ವರದಿ ನೀಡುವಂತೆ ನಿರ್ದೇಶಿಸಿದೆ.
ಆಕ್ಷೇಪಗಳ ಸುರಿಮಳೆ: ಅಧಿಕಾರಿಗಳ ವರ್ಗಾ ವಣೆ ಅದರಲ್ಲೂ ಡಿಐಜಿ ರೂಪಾ ವರ್ಗದ ಸುದ್ದಿ ಹೊರಬರುತ್ತಿರುವಂತೆಯೇ, ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪಗಳು ವ್ಯಕ್ತವಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿರುವಂತೆಯೇ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್ ಆ್ಯಪ್‌ಗ್ಳಲ್ಲೂ ರೂಪಾ ಎತ್ತಂಗಡಿ ವಿಚಾರವಾಗಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಿದ ರೂಪಾ ಅವರಿಗೆ ಇಡೀ ರಾಜ್ಯದ ಜನ ಬೆಂಬಲ ವ್ಯಕ್ತಪಡಿಸಬೇಕು. ಇಂತಹ ಭ್ರಷ್ಟ ಸರಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆಯೇ ಇಲ್ಲ. ಅಧಿಕಾರಿಗಳ ಎತ್ತಂಗಡಿ ಬದಲು ಜೈಲಿನಲ್ಲಿ ಐಷಾ ರಾಮಿ ಸೌಲಭ್ಯ ಅನುಭವಿಸುತ್ತಿರುವ ತಮಿಳುನಾಡು ಎಐಎಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ, ಛಾಪಾಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಸಹಿತ ಕೆಲವು ರೌಡಿ ವರ್ತನೆ ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಗೊಳಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಕರಣದ ಹಿನ್ನೆಲೆ: ಇದೇ ಜುಲೈ 12ರಂದು ಡಿಐಜಿ ರೂಪಾ ಅವರು ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜೈಲಿನಲ್ಲಿ ವಿಶೇಷ ಆತಿಥ್ಯ ದೊರೆಯುತ್ತಿದ್ದು, ಇದಕ್ಕಾಗಿ ಇಲಾಖೆಯ ಡಿಜಿ ಸತ್ಯನಾರಾಯಣರಾವ್ ಸಹಿತ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ 2 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಲ್ಲದೇ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ವತಃ ಸತ್ಯನಾರಾಯಣರಾವ್ ಅವರಿಗೆ ವರದಿ ನೀಡಿದ್ದರು. ಇದರಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಪಾತ್ರವೂ ಇದೆ ಎಂದು ಆರೋಪಿಸಿದ್ದರು. ಇದಲ್ಲದೆ, ಕಾರಾಗೃಹದಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ ಇತರೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಿದ್ದರು. ಒಂದಲ್ಲ ಎರಡು ವರದಿ ನೀಡಿ ಸಾರ್ವಜನಿಕವಾಗಿ ಚರ್ಚೆಗೆ ಕಾರಣಕರ್ತರಾಗಿದ್ದರು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗು ತ್ತಿದ್ದಂತೆ ಎಚ್ಚೆತ್ತ ಸರಕಾರ, ಇಬ್ಬರು ಅಧಿಕಾರಿಗಳಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ತಾಕೀತು ಮಾಡಿತ್ತು. ಆದರೂ ಅಧಿಕಾರಿಗಳು ಹೇಳಿಕೆ ಕೊಡಲು ಮುಂದಾದ್ದರಿಂದ ಅಸಮಾಧಾನಗೊಂಡ ಸರಕಾರ ಮೂವರನ್ನು ಎತ್ತಂಗಡಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.