ಪರಪ್ಪನ ಜೈಲಿಗೆ ಉರುಳಿದ ಗಾಲಿ
Team Udayavani, Nov 12, 2018, 6:00 AM IST
ಬೆಂಗಳೂರು: ನಿರಂತರ 24 ಗಂಟೆಗಳ ವಿಚಾರಣೆ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಕಡೆಗೂ ಜೈಲು ಸೇರಿದ್ದಾರೆ.
ದೇಶದ ಸ್ವತಂತ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ (ಇ.ಡಿ)ತನಿಖೆಯಿಂದ ಬಚಾವ್ ಮಾಡುತ್ತೇನೆ ಎಂದು ಆರೋಪಿಯೊಬ್ಬನ ಬಳಿ “ಡೀಲ್’ ಕುದುರಿಸಿ 57 ಕೆ.ಜಿ ಚಿನ್ನದ ಗಟ್ಟಿ ಪಡೆದ ಆರೋಪ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ.
ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಮೂರು ವರ್ಷಗಳ ಬಳಿಕ ಎರಡನೇ ಬಾರಿಗೆ ಗಣಿ ಧಣಿ ರೆಡ್ಡಿ ಕಾರಾಗೃಹ ಬಂಧನಕ್ಕೆ ಒಳಗಾಗಿದ್ದಾರೆ.
ಆ್ಯಂಬಿಡೆಂಟ್ ಕಂಪನಿಯ 600 ಕೋಟಿ. ರೂ.ಗಳಿಗೂ ಅಧಿಕ ಮೊತ್ತದ ವಂಚನೆ ಪ್ರಕರಣದ ಬೆನ್ನುಹತ್ತಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು, ಇದೇ ಮೊದಲ ಬಾರಿಗೆ ರಾಜಕೀಯದಲ್ಲಿ ಪ್ರಭಾವಿ ಎಂದು ಪರಿಗಣಿಸಲಾಗಿರುವ ಜನಾರ್ದನ ರೆಡ್ಡಿಗೆ ಜೈಲು ಹಾದಿ ತೋರಿಸುವಲ್ಲಿ ಸಫಲರಾಗಿದ್ದಾರೆ.
ಶನಿವಾರ ರಾತ್ರಿಯಿಡೀ ಜನಾರ್ದನ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ ಸಿಸಿಬಿ ಪೊಲೀಸರು, ಪ್ರಕರಣದಲ್ಲಿ ಶಾಮೀಲಾದ ಕುರಿತು ಖಚಿತ ಸುಳಿವು ದೊರೆತಿದ್ದಾಗಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರೆಡ್ಡಿ ಬಂಧನ ಖಚಿತಪಡಿಸಿ ಪ್ರಕರಣದ 6ನೇ ಆರೋಪಿಯನ್ನಾಗಿ ಪರಿಗಣಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಜನಾರ್ದನ ರೆಡ್ಡಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದರು.
ನಂತರ ಕೋರಮಂಗಲದಲ್ಲಿರುವ 1ನೇ ಮ್ಯಾಜಿಸ್ಟ್ರೇಟ್‌ನ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರ ಎದುರು ಆರೋಪಿ ರೆಡ್ಡಿಯನ್ನು ಹಾಜರುಪಡಿಸಿ ಆತನ ವಿರುದ್ಧ ದಾಖಲಿಸಿದ ಪ್ರಕರಣಗಳ ವಿವರಗಳ ಜತೆಗೆ ಆರೋಪಿ ಅತ್ಯಂತ ಪ್ರಭಾವಿ ಆಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರಿಗೆ ನಿವೇದಿಸಿದರು.
ಸಿಸಿಬಿ ಪೊಲೀಸರ ವಾದ ಸಂಪೂರ್ಣ ಆಲಿಸಿದ ನ್ಯಾಯಾಧೀಶರು, ಪ್ರಕರಣದ ಆರೋಪಿ ಜನಾರ್ದನ ರೆಡ್ಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು. ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಆರೋಪಿ ರೆಡ್ಡಿಯನ್ನು ಸಂಜೆ 4 30ರ ಸುಮಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
57 ಕೆ.ಜಿ ಚಿನ್ನ ಪಡೆದಿರುವುದು ಖಚಿತ!
18 ಗಂಟೆಗಳಿಗೂ ಅಧಿಕ ಕಾಲ ನಡೆದ ಜನಾರ್ದನ ರೆಡ್ಡಿ, ಫರೀದ್, ಅಲಿಖಾನ್ ವಿಚಾರಣೆಯಲ್ಲಿ 57 ಕೆ.ಜಿ ಚಿನ್ನದ ಗಟ್ಟಿ ವ್ಯವಹಾರ ಬಹುತೇಕ ಖಚಿತವಾಗಿದೆ. ಆರೋಪಿಗಳ ವಿಚಾರಣೆ ಈ ಮಾಹಿತಿ ಲಭ್ಯವಾಗಿದೆ. ಆದರೆ, ಚಿನ್ನದ ರೂಪ ಬದಲಾಗಿದೆ. ಚಿನ್ನವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ. ನಗದಾಗಿ ಪರಿವರ್ತನೆ ಆಗಿದೆಯೇ ಎಂಬುದರ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಾಮೀನು ಕೋರಿ ಇಂದು ಕೋರ್ಟ್ ಮೊರೆ!
ಪ್ರಕರಣದಲ್ಲಿ 14ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಜನಾರ್ದನ ರೆಡ್ಡಿ ಜಾಮೀನು ಕೋರಿ ಇಂದು ಕೋರ್ಟ್‌ನಲ್ಲಿ ಅವರ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಈ ಮಧ್ಯೆಯೇ ರೆಡ್ಡಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರ ತನಿಖಾ ತಂಡದ ಹೆಸರು ಬಳಸಿ 20 ಕೋಟಿ ರೂ.ಹಣ ವಂಚನೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳಿದ್ದು, ಆ ಹಣವನ್ನು
ಮರುಪಡೆಯಲು ಕ್ರಮ ವಹಿಸಲಾಗಿದೆ.
- ಅಲೋಕ್ ಕುಮಾರ್, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
ಮೈತ್ರಿ ಸರ್ಕಾರ ಸಿಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಲೋಕಾಯುಕ್ತ ಇದೆ. ಆದರೆ, ಆ ಸಂಸ್ಥೆಯ ಶಕ್ತಿ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಜನಾರ್ದನ ರೆಡ್ಡಿ ಪ್ರಕರಣದಲ್ಲಿ ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ. ಈ ಕುರಿತು ಹೆಚ್ಚಿನ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.
ಉಪ್ಪು ತಿಂದವ ನೀರು ಕುಡಿಯಲೇ ಬೇಕು. ತಪ್ಪು ಮಾಡಿದವನಿಗೆ ಕಾನೂನು ಶಿಕ್ಷೆ ಕೊಟ್ಟೇ ಕೊಡುತ್ತದೆ. ತಪ್ಪು ಮಾಡಿದವನಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ನ್ಯಾಯಾಲಯ ತನ್ನ ಕೆಲಸ ಮಾಡಿದೆ.
– ಸಿದ್ದರಾಮಯ್ಯ, ಮಾಜಿ ಸಿಎಂ
ಫೋಟೊ: ಫಕ್ರುದ್ದೀನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.