ಜಯಮಹಲ್ ರಸ್ತೆ ಮರಗಳ ಸ್ಥಳಾಂತರ
Team Udayavani, Sep 15, 2017, 11:50 AM IST
ಬೆಂಗಳೂರು: ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಮರಗಳ ಕತ್ತರಿಸುವ ಪಾಲಿಕೆಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಮರಗಳನ್ನು ಕತ್ತರಿಸುವ ಬದಲಿಗೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಅದರಂತೆ ಗುರುವಾರದಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಿರುವ ಅಧಿಕಾರಿಗಳು ಒಂದೇ ದಿನ 10 ಮರಗಳನ್ನು ಸ್ಥಳಾಂತರಿಸಿದ್ದಾರೆ.
ಜಯಮಹಲ್ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು 2.5 ಕಿ.ಮೀ. ಉದ್ದದ ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಆ ಹಿನ್ನೆಲೆಯಲ್ಲಿ ಮೇಖ್ರಿ ವೃತ್ತದಿಂದ ದಂಡು ಪ್ರದೇಶದವರೆಗಿನ ಕಾಮಗಾರಿಗೆ 291 ಮರಗಳು ಹಾನಿಯಾಗುತ್ತವೆ ಎಂದು ಅಂದಾಜಿಸಲಾಗಿತ್ತು. 112 ಮರಗಳನ್ನು ತೆರವುಗೊಳಿಸಬೇಕಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದರು.
ಮರ ಕಡಿಯುವುದಕ್ಕೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಮರಗಳನ್ನು ಕತ್ತರಿಸದಂತೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪಾಲಿಕೆಯ ಅಧಿಕಾರಿಗಳು ಮರಗಳನ್ನು ಕತ್ತರಿಸುವ ಬದಲಿಗೆ, ಮರಗಳನ್ನು ಸ್ಥಳಾಂತರಿಸಲು ತೀರ್ಮಾನಿಸಿದ್ದರು. ಇದಕ್ಕೆ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಡಬ್ಲ್ಯುಎಸ್‌ಟಿ) ಸಂಸ್ಥೆಯ ನೆರವನ್ನು ಸಹ ಕೋರಿದ್ದರು.
ಅದರಂತೆ ರಸ್ತೆಯಲ್ಲಿರುವ ಮರಗಳ ಪರಿಶೀಲಿಸಿದ ಐಡಬ್ಲ್ಯುಎಸ್‌ಟಿಯ ತಜ್ಞರು ಕಾಮಗಾರಿಗಾಗಿ ಎಷ್ಟು ಮರಗಳನ್ನು ಸ್ಥಳಾಂತರಿಸಬೇಕು, ಯಾವ ಮರಗಳನ್ನು ಉಳಿಸಿಕೊಂಡು ಕಾಮಗಾರಿ ನಡೆಸಬಹುದು, ರಸ್ತೆಗಳ ನಡುವಿನ ಜಾಗದಲ್ಲಿ ನೆಡಬೇಬಹುದಾದ ಗಿಡಗಳ ಬಗ್ಗೆ ಅಧ್ಯಯನ ನಡೆಸಿ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಪಾಲಿಕೆಯ ಅಧಿಕಾರಿಗಳು ರೂಪಿಸಿರುವ ಯೋಜನೆಯಂತೆ ದಂಡು ರೈಲ್ವೆ ನಿಲ್ದಾಣದಿಂದ ಬೆಂಗಳೂರು ದೂರದರ್ಶನ ಕೇಂದ್ರದವರೆಗಿನ ರಸ್ತೆಯನ್ನು 30 ಮೀಟರ್ ಮತ್ತು ದೂರದರ್ಶನ ಕೇಂದ್ರದಿಂದ ಮೇಖ್ರಿವೃತ್ತದವರೆಗೆ 45 ಮೀಟರ್ ರಸ್ತೆ ವಿಸ್ತರಿಸಲಾಗುತ್ತದೆ. ಅದಕ್ಕಾಗಿ ಅಧಿಕಾರಿಗಳು ಟೋಟಲ್ ಸ್ಟೇಷನ್ ಸರ್ವೆ ನಡೆಸಿ ಅನಿವಾರ್ಯವಾಗಿ 112 ಮರಗಳನ್ನು ಕತ್ತರಿಸಬೇಕು ಎಂದು ವರದಿ ನೀಡಿದ್ದರು.
ಆನಂತರದಲ್ಲಿ ಮತ್ತೂಮ್ಮೆ ಸರ್ವೆ ನಡೆಸಿದ ಐಡಬ್ಲ್ಯುಎಸ್‌ಟಿ ತಜ್ಞರು 40-50 ಮರಗಳನ್ನು ಪಕ್ಕದ ಅರಮನೆ ಮೈದಾನದ ಆವರಣದೊಳಗೆ ನೆಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ ಈ ಮಾರ್ಗದಲ್ಲಿ ಕಾಮಗಾರಿಗೆ ಅಡ್ಡಲಾಗಿ 61 ಹಾಗೂ ಅರಮನೆ ಪ್ರದೇಶಕ್ಕೆ ಹೊಂದಿಕೊಂಡಂತೆ 51 ಮರಗಳಿದ್ದು, ಮೊದಲ ಹಂತದಲ್ಲಿ 52 ಮರಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಒಂದೇ ದಿನ 10 ಮರಗಳ ಸ್ಥಳಾಂತರ
ಗುರುವಾರದಿಂದ ಮರ ಸ್ಥಳಾಂತರ ಕಾರ್ಯ ಆರಂಭಿಸಿದ ಅಧಿಕಾರಿಗಳು ಗುರುವಾರ ರಸ್ತೆ ಬದಿಯ 10 ಅಡಿ ಎತ್ತರದ ಸುಮಾರು 10-12 ಮರಗಳನ್ನು ಅರಮನೆ ಮೈದಾನಕ್ಕೆ ಸ್ಥಳಾಂತರಿಸಿದರು. ಪಾಲಿಕೆಯ ಅಧಿಕಾರಿಗಳು ಸ್ಥಳಾಂತರ ಮಾಡುತ್ತಿದ್ದ ಕಾರ್ಯವನ್ನು ಪರಿಸರ ತಜ್ಞ ವಿಜಯ್ ನಿಶಾಂತ್, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೈಯ್ಯದ್ ಇಕ್ಬಾಲ್ ಅಹಮದ್ ಅವರು ಪರಿಶೀಲಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ಸ್ಥಳಾಂತರಿಸಲು ಗುರುತಿಸಿರುವ ಮರಗಳ ಮಾಹಿತಿ ಪಡೆದರು.
ಪ್ರತಿ ಮರ ಸ್ಥಳಾಂತರಕ್ಕೆ 50 ಸಾವಿರ ರೂ.
ಜಯಮಹಲ್ ರಸ್ತೆಯಲ್ಲಿರುವ ಮರಗಳನ್ನು ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಿ ನೆಡಬೇಕಾದರೆ ಪ್ರತಿ ಮರಕ್ಕೆ ಸುಮಾರು 50 ಸಾವಿರ ರೂ. ವೆಚ್ಚವಾಗಲಿದೆ. ಐಡಬ್ಲ್ಯುಎಸ್‌ಟಿ ತಜ್ಞರು 50 ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ತಿಳಿಸಿದ್ದು, ಒಟ್ಟಾರೆಯಾಗಿ ಮರಗಳ ಸ್ಥಳಾಂತರಕ್ಕೆ 25 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಯಮಹಲ್ ರಸ್ತೆ ರಸ್ತೆ ಅಗಲೀಕರಣಕ್ಕೆ ಅನಿವಾರ್ಯವಾಗಿ ಕತ್ತರಿಸಬೇಕಾದ 112 ಮರಗಳ ಪೈಕಿ ಮೊದಲ ಹಂತದಲ್ಲಿ 52 ಮರಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಗುರುವಾರದಿಂದಲೇ ಸ್ಥಳಾಂತರ ಕಾರ್ಯ ಆರಂಭಿಸಿದ್ದಾರೆ. ಉಳಿದ ಕಡೆಗಳಲ್ಲಿಯೂ ಮರಗಳ ರಕ್ಷಣೆಗೆ ಇದೇ ಮಾದರಿ ಅನುಸರಿಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಪಾಲಿಕೆ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.