Jayanagar: ಅಮೃತ ಮಹೋತ್ಸವದ ಸಂಭ್ರಮದಲ್ಲಿ ಜಯನಗರ
Team Udayavani, Oct 16, 2023, 11:19 AM IST
ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯಲ್ಲಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದು 75ನೇ ವರ್ಷದ ಸಂಭ್ರಮದಲ್ಲಿದೆ. ಒಂದು ಕಾಲದಲ್ಲಿ ದಕ್ಷಿಣ ಬೆಂಗಳೂರಿನ ತುತ್ತ ತುದಿ ಎನಿಸಿದ್ದ ಜಯನಗರ ಇದೀಗ ಅನೇಕ ಬಡಾವಣೆಗಳಿಂದ ಹತ್ತಾರು ಕಿ.ಮೀ. ವ್ಯಾಪ್ತಿಸಿದೆ. ಹತ್ತಾರು ಹೆಗ್ಗುರುತುಗಳೊಂದಿಗೆ ಪ್ರತಿಷ್ಠಿತ ಬಡಾವಣೆ ಆಗಿದ್ದು, ಮೈಸೂರು ಮಹಾರಾಜರ ಕನಸಿನ ಕೂಸು “ಜಯನಗರ’ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಈ ವಾರದ ಸುತ್ತಾಟದಲ್ಲಿ ಬೆಳಕು ಚೆಲ್ಲಲಾಗಿದೆ.
ಒಂದು ಕಾಲದಲ್ಲಿ ಕಾಡುಮೇಡುಗಳಿಂದ ಸುತ್ತುವರಿದು, ಕೆರೆಕುಂಟೆಗಳಿಂದ ಆವೃತವಾಗಿದ್ದ ಭೂಪ್ರದೇಶ, ನಂತರದ ದಿನಗಳಲ್ಲಿ ಜನವಸತಿ ನೆಲೆಗೊಂಡು ಜೀವನೋಪಾಯಕ್ಕೆ ಹೊಲಗದ್ದೆಗಳಾಗಿ ಮಾರ್ಪಾಡಾಯಿತು. ರೈತಾಪಿ ವರ್ಗಕ್ಕೆ ನೆಲೆ ಕಲ್ಪಿಸುವ ಮೂಲಕ ಹಸಿರ ಸಮೃದ್ಧಿಯ ತಾಣವಾಗಿತ್ತು.
ಕಣ್ಣು ಹಾಯಿಸಿದಲ್ಲೆಲ್ಲಾ ರಾಗಿ, ಭತ್ತ, ಶೇಂಗ, ತರಕಾರಿ, ಹೂವುಗಳ ಹೊಲಗಳೇ ಕಾಣುತ್ತಿತ್ತು. ಹತ್ತಾರು ಎಕರೆ ಪ್ರದೇಶಗಳಲ್ಲಿ ಸೀಬೆ (ಚೇಪೆ) ಕಾಯಿ ತೋಟ ಮೈದಳೆದಿತ್ತು. ನೂರಾರು ಎಕರೆಯಲ್ಲಿ ಹಣ್ಣು-ತರಕಾರಿ ಬೆಳೆದ ರೈತರು ಜೀವನ ಸಾಗಿಸುತ್ತಿದ್ದರು.
ಅಂದಿನ ಅರೇ ಕೆಂಪನಹಳ್ಳಿ (ಇಂದಿನ ಸೋಮೇಶ್ವರ ನಗರ), ಸಿದ್ದಾಪುರದ ಕೆಲವು ಭಾಗ. ಕನಕನಪಾಳ್ಯ, ಬೈರಸಂದ್ರ (ಇಂದಿನ ತಿಲಕ್ ನಗರ), ಗುರಪ್ಪನಪಾಳ್ಯ (ಶಿವಬಾಲ ಯೋಗಿ ಆಶ್ರಮ), ತಾಯಪ್ಪನ ಪಾಳ್ಯ (ಇಂದಿನ ಜಯನಗರ ಟಿ ಬ್ಲಾಕ್), ಟಾಟಾ ಸಿಲ್ಕ್ ಫಾರ್ಮ್, ಶ್ರೀ ಪಟ್ಟಾಭಿರಾಮ ನಗರ, ಸಾಕಮ್ಮ ಗಾರ್ಡನ್, ಯಡಿಯೂರು ಕೆರೆ ಸೇರಿ ಹತ್ತು ಹಲವು ಪ್ರದೇಶಗಳನ್ನು ಒಳಗೊಂಡಿದ್ದು ಒಂದು ಕಾಲದಲ್ಲಿ ಈ ಭೂಭಾಗಗಳು ರೈತರ ಹೊಲಗದ್ದೆಗಳಾಗಿದ್ದವು.
ಹತ್ತಾರು ಹಳ್ಳಿಗಳನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಆಧುನಿಕತೆಯ ಸ್ಪರ್ಶದೊಂದಿಗೆ ಎಲ್ಲರೂ ನಿಬ್ಬೆರಗಾಗುವಂತೆ ಬೆಳೆದಿರುವ “ಜಯನಗರ’, ಏಷ್ಯಾದಲ್ಲೇ ಅತ್ಯಂತ ಯೋಜಿತ ದೊಡ್ಡ ಬಡಾವಣೆ ಎಂಬ ಕೀರ್ತಿಯನ್ನೂ ಪಡೆದಿದೆ. ನೂರಾರು ರೋಚಕ ಕಥಾನಕಗಳೂ ಈ ಬಡಾವಣೆಯ ಒಡಲಾಳದಲ್ಲಿವೆ.
ಮೈಸೂರು ಅರಸರ ಕನಸಿನ ಬಡಾವಣೆ: ಬೆಂಗಳೂರಿನ ಜಯನಗರ ಬಡಾವಣೆಗೂ ಮೈಸೂರು ಮಹಾಸಂಸ್ಥಾನಕ್ಕೂ ಸಹಜ ನಂಟಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿಧನದ ನಂತರ ಜಯಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೇರಿದರು. ತಾವು ಪಟ್ಟಕ್ಕೇರಿದ 8 ವರ್ಷದ ನೆನಪಿಗಾಗಿ 1948ರಲ್ಲಿ ಬೆಂಗಳೂರಿನಲ್ಲೊಂದು ಯೋಜಿತ ಬಡಾವಣೆ ನಿರ್ಮಿಸಲು ಚಿಂತಿಸಿದರು. ಅದನ್ನು ಕಾರ್ಯರೂಪಕ್ಕೆ ತರಲು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ಸ್ಥಾಪಿಸಿ ಅದಕ್ಕೆ ಸಿ.ನರಸಿಂಗರಾವ್‌ರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಜತೆಗೆ ಆರ್.ಮಾಧವನ್ ಮುಖ್ಯ ಎಂಜಿನಿಯರ್ ಆಗಿದ್ದರು. ಇಡೀ ಬಡಾವಣೆಯ ಕೆಲಸಕ್ಕೆ ಅಧಿಕೃತ ಗುತ್ತಿಗೆದಾರರಾಗಿ ಕೆ.ಇ.ರಂಗನಾಥಾಚಾರ್‌ರನ್ನು ನೇಮಿಸಲಾಯಿತು. ಮೈಸೂರು ಅರಸರ ಕನಸಿನ ಕೂಸಾದ ಈ ಬಡಾವಣೆಗೆ ಜಯನಗರ ಬಡಾವಣೆ ಎಂದೇ ನಾಮಕರಣ ಮಾಡಲಾಯಿತು.
10 ಬ್ಲಾಕ್ ಆಗಿ ವಿಂಗಡಣೆ: 1948ರಲ್ಲಿ ಆರಂಭವಾದ ಜಯನಗರ ಇಂದು ಬಸವನಗುಡಿ, ಜೆ.ಪಿ.ನಗರ, ವಿಲ್ಸನ್ ಗಾರ್ಡನ್, ಬನಶಂಕರಿ 2ನೇ ಹಂತ, ಗುರಪ್ಪನಪಾಳ್ಯ, ಸುದ್ದಗುಂಟೆಪಾಳ್ಯ ಮತ್ತು ಬಿಟಿಎಂ ಬಡಾವಣೆಗಳಿಂದ ಸುತ್ತುವರಿದಿದೆ. ಜತೆಗೆ ಇತಿಹಾಸ ಪ್ರಖ್ಯಾತವಾದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಹೊಂದಿಕೊಂಡಿದೆ. ಜಯನಗರ ಬಡಾವಣೆಯು 1 ರಿಂದ 9ನೇ ಬ್ಲಾಕ್‌ವರೆಗೂ ಇದ್ದು, ಜಯನಗರದ 4ನೇ “ಟಿ’ ಬ್ಲಾಕ್ ಸೇರಿ 10 ಬ್ಲಾಕ್‌ಗಳು ಹೆಚ್ಚಾಗಿ ಜನನಿಬಿಡ ವಸತಿಯ ತಾಣವಾಗಿವೆ. 3, 4ನೇ ಬ್ಲಾಕ್‌ಗಳು ಅಂದಿನಿಂದ ಇಂದಿನವರೆಗೂ ವಾಣಿಜ್ಯ ಕೇಂದ್ರಗಳಾಗಿ ಬೆಂಗಳೂರಿಗರನ್ನು ಆಕರ್ಷಿಸುತ್ತಿದೆ.
ಜಯನಗರದಲ್ಲಿ 1968ರಲ್ಲಿ ಉದ್ಘಾಟನೆಗೊಂಡ ಸಿಟಿ ಸೆಂಟ್ರಲ್ ಲೈಬ್ರರಿ ಅತ್ಯಂತ ಜನನಿಬಿಡ ಗ್ರಂಥಾಲಯಗಳಲ್ಲಿ ಒಂದಾಗಿದೆ. ಜನವಸತಿ, ಅದಕ್ಕೆ ತಕ್ಕ ಮೂಲ ಸೌಕರ್ಯಗಳ ಜತೆಗೆ ಹಸಿರು ಉಳಿಯುವಂತೆ ಬಡಾವಣೆಯ ವಿನ್ಯಾಸ ರೂಪಿಸಿದ ಮಾಧವನ್ ಹೆಸರನ್ನು ಇಲ್ಲಿನ ಉದ್ಯಾನಕ್ಕೆ ಇಡಲಾಗಿದೆ.
ಹತ್ತಾರು ಹೆಗ್ಗುರುತು:
ಜಯನಗರ ಬಡಾವಣೆ ಒಟ್ಟು 9 ಬ್ಲಾಕ್ ಹೊಂದಿದ್ದು, ಹತ್ತಾರು ಹೆಗ್ಗುರುತುಗಳಿವೆ. 9ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ಆಂಜನೇಯ ದೇವಸ್ಥಾನ, ರಾಘವೇಂದ್ರ ಸ್ವಾಮಿ ಮಠ ಹೀಗೆ ಹತ್ತಾರು ಹಿಂದೂ ದೇವಾಲಯಗಳು ಇಲ್ಲಿವೆ. ಜೈನ ಮಂದಿರವೂ ಸೇರಿ ಜಯನಗರವು ದಕ್ಷಿಣ ಬೆಂಗಳೂರಿನ ಧರ್ಮಕ್ಷೇತ್ರವೂ ಆಗಿದೆ. ಶಾಲಿನಿ ಆಟದ ಮೈದಾನ, ಜಯನಗರ ಕ್ಲಬ್, ಕ್ರೀಡಾಂಗಣ ಮತ್ತು ವಿಶ್ವವಿಖ್ಯಾತ ಈಜುಕೊಳ ಕೂಡ ಇಲ್ಲಿದ್ದು ಕ್ರೀಡಾಸಕ್ತರನ್ನೂ ಸೆಳೆಯುತ್ತದೆ.
ಇನ್ನು 3ನೇ ಬ್ಲಾಕ್‌ನಲ್ಲಿರುವ 500 ವರ್ಷ ಹಳೆಯ ಪಟಾಲಮ್ಮ ದೇಗುಲಕ್ಕೂ ಪುರಾಣದ ನಂಟಿದೆ. ದೇವಿಯು ಆನೆಯ ಮೇಲೆ ಸವಾರಿ ಮಾಡುತ್ತಾ ಈ ಸ್ಥಳದಲ್ಲಿ ಇಳಿದು ನೆಲೆಸಿದಾಗ ಆನೆಯು ಬಂಡೆ ರೂಪ ತಾಳುತ್ತದೆ ಎಂದೇ ಇಂದಿಗೂ ಜನರ ನಂಬಿಕೆ ಇದೆ. ಅದಕ್ಕೆ ಪೂರಕವೆಂಬಂತೆ ಆನೆ ಬಂಡೆ (ಎಲಿಫೆಂಟ್ ರಾಕ್)ಯ ಗುರುತೂ ಇಲ್ಲಿದೆ.
ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ, ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್, ಇನ್‌ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ, ಸುಧಾಮೂರ್ತಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಿರಿಯ ನಟ ವಿಷ್ಣುವರ್ಧನ್, ಕಾಶಿನಾಥ್, ಹಿರಿಯ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್, ಹಿರಿಯ ಸಾಹಿತಿ ಜಿ.ವೆಂಕಟಸುಬ್ಬಯ್ಯ, ಶೇಷಗಿರಿರಾವ್ ಹೀಗೆ ಪ್ರತಿಷ್ಠಿತ ವ್ಯಕ್ತಿಗಳ ನಿವಾಸಗಳು ಇಲ್ಲಿವೆ.
ತಾಯಪ್ಪನಹಳ್ಳಿ ಈಗ “ಜಯನಗರ ಟಿ ಬ್ಲಾಕ್’:
ಜಯನಗರದ 1 ರಿಂದ 9ನೇ ಬ್ಲಾಕ್‌ವರೆಗೂ ಇದ್ದ ಅನೇಕ ಹಳ್ಳಿಗಳು ತಮ್ಮ ಮೂಲ ಹೆಸರಿನ ಅಸ್ಮಿತೆ ಕಳೆದುಕೊಂಡು, ವಿವಿಧ ಬ್ಲಾಕ್‌ಗಳಲ್ಲಿ ವಿಲೀನಗೊಂಡವು. ಆದರೆ, ಒಂದು ಹಳ್ಳಿ ಮಾತ್ರ ಜಯನಗರ ಬಡಾವಣೆ ಯೋಜನೆಗೆ ಸೇರಲಿಲ್ಲ. ಆ ಹಳ್ಳಿಯೇ “ತಾಯಪ್ಪನ ಹಳ್ಳಿ’. ಈಗಿನ ಜಯನಗರ 4ನೇ ಬ್ಲಾಕಿನ ಪಕ್ಕದಲ್ಲಿದ್ದ ತಾಯಪ್ಪನಹಳ್ಳಿ ಗ್ರಾಮದವರು ತಮ್ಮ ಮೂಲ ಹೆಸರಿನ ಅಸ್ಮಿತೆ ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಬಹಳ ಹಿಂದೆ ತಾಯಪ್ಪ ಎಂಬ ವ್ಯಕ್ತಿ ಹೆಚ್ಚಿನ ಸೌಕರ್ಯಗಳನ್ನು ನೀಡಿ ಆ ಪ್ರದೇಶವನ್ನು ಆಳಿದ್ದ. ಆ ವ್ಯಕ್ತಿಯ ಸ್ಮರಣಾರ್ಥ ಆ ಪ್ರದೇಶಕ್ಕೆ ತಾಯಪ್ಪನಹಳ್ಳಿ ಎಂಬ ಹೆಸರು ಬಂದಿತ್ತು. ಆ ಹಳ್ಳಿಯ ಜನರು ತಾಯಪ್ಪನ ಹೆಸರು ಅಜರಾಮರವಾಗಿರಸಬೇಕೆಂದು ಪಟ್ಟು ಹಿಡಿದರು. ಆಗ ಮೈಸೂರು ಮಹಾರಾಜರು ಜನರ ಒತ್ತಾಯಕ್ಕೆ ಮಣಿದು ಜಯನಗರದ ಜತೆ ತಾಯಪ್ಪನವರ ಹೆಸರೂ ಸೇರಿಸಿ ಜಯನಗರ 4ನೇ “ಟಿ’ ಬ್ಲಾಕ್ ಎಂದು ಕರೆದರು. ತಾಯಪ್ಪನಹಳ್ಳಿ ಜನರ ಆಶಯವೇನೋ ಅಂದು ಈಡೇರಿತಾದರೂ ಜನರ ನೆನಪಿನಂಗಳದಲ್ಲಿ ಇಂದು ತಾಯಪ್ಪನವರ ಹೆಸರು ಮಾಯವಾಗಿ ಅದು ಕೇವಲ “ಟಿ’ ಆಗಿ ಉಳಿದುಕೊಂಡಿದೆ.
“ಸೌತ್ ಎಂಡ್ ಸರ್ಕಲ್’:
ಅಂದಿನ ಕಾಲಕ್ಕೆ ಜಯನಗರವನ್ನು ಸಾಂಪ್ರದಾಯಿಕವಾಗಿ ಬೆಂಗಳೂರಿನ ದಕ್ಷಿಣ ತುದಿ ಎಂದು ಪರಿಗಣಿಸಲಾಗಿತ್ತು. ಹಾಗಾಗಿಯೇ 6 ರಸ್ತೆಗಳು ಸೇರುವ ವೃತ್ತಕ್ಕೆ “ಸೌತ್ ಎಂಡ್ ಸರ್ಕಲ್’ ಎಂದೇ ಹೆಸರಿಸಿದ್ದು, ಜನಪ್ರಿಯವಾಗಿದೆ.
ಬೆಂಗಳೂರಿನ ಮೊದಲ ಶಾಪಿಂಗ್ ಕಾಂಪ್ಲೆಕ್ಸ್:
1976ರಲ್ಲಿ ಅಂದಿನ ಸಿಎಂ ಡಿ.ದೇವರಾಜ ಅರಸು ಜಯನಗರದ 4ನೇ ಬ್ಲಾಕ್‌ಗೆ ಮುಕುಟಪ್ರಾಯವಾಗಿ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿದರು. ಇದು ಸಿಲಿಕಾನ್ ಸಿಟಿಯ ಮೊತ್ತ ಮೊದಲ ಶಾಪಿಂಗ್ ಕಾಂಪ್ಲೆಕ್ಸ್ ಎಂಬ ಕೀರ್ತಿಗೆ ಭಾಜನವಾಗಿದೆ. ಕಾಂಪ್ಲೆಕ್ಸ್‌ನಲ್ಲಿ ಒಂದು ಪುಟ್ಟ ರಂಗಮಂದಿರ ಕಟ್ಟಿಸಿದ್ದು, ಪುಟ್ಟಣ್ಣ ಕಣಗಾಲ್ ರಂಗಮಂದಿರ ಎಂದೇ ಖ್ಯಾತವಾಗಿದೆ.
ಅಶೋಕ ಪಿಲ್ಲರ್ ಸ್ತಂಭ ನಿರ್ಮಾಣದ ಹಿಂದಿನ ಕಥೆ:
ಜಯನಗರದ ಹೆಗ್ಗರುತಾಗಿ, ಮೈಸೂರಿನ ಅರಸ ಜಯಚಾಮರಾಜೇಂದ್ರ ಒಡೆಯರ್ ಸ್ಮರಣಾರ್ಥ 1948ರ ಆ.20ರಂದು ಜಯಗರದಲ್ಲಿ ಅಶೋಕ ಸ್ತಂಭ ನಿರ್ಮಿಸಲಾಯಿತು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯನ್ನು ಆಹ್ವಾನಿಸಲಾಗಿತ್ತು. ಅಡಿಗಲ್ಲು ಹಾಕುವ ಹಿಂದಿನ ದಿನವಾದ ಆ.19ರಂದು ಸ್ಮಾರಕ ನಿರ್ಮಾಣದ ಹೊಣೆ ಹೊತ್ತಿದ್ದ ಮೇಸಿŒ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದ. ಗವರ್ನರ್ ಜನರಲ್ ಪಾಲ್ಗೊಳ್ಳುವ ಕಾರ್ಯಕ್ರಮ ನಿಲ್ಲಿಸಲಾಗದು ಎಂದು ಪಣ ತೊಟ್ಟ ಅಂದಿನ ಸಿಐಟಿಬಿಯ ಅಧ್ಯಕ್ಷರಾಗಿದ್ದ ಸಿ.ನರಸಿಂಗರಾವ್, ಮುಖ್ಯ ಎಂಜಿನಿಯರ್ ಆರ್.ಮಾಧವನ್ ಮತ್ತು ಗುತ್ತಿಗೆದಾರರಾಗಿದ್ದ ಪಿ.ಸಿ.ರಂಗನಾಥಚಾರ್ ಅವರು ಅರುಣಾಚಲಂ ಎಂಬ ಮತ್ತೂಬ್ಬ ನುರಿತ ಮೇಸಿŒಯನ್ನು ತ್ವರಿತವಾಗಿ ನಿಯೋಜಿಸಿದರು. ಪೆಟ್ರೋ ಮ್ಯಾಕ್ಸ್ ದೀಪ ಇಟ್ಟುಕೊಂಡು ಬೆಳಗಾಗುವುದರ ಒಳಗೆ 20 ಅಡಿ ಎತ್ತರದ ಗ್ರಾನೈಟ್ ಕಲ್ಲಿನಿಂದ ಅಶೋಕ ಸ್ತಂಭ ಸ್ಥಾಪಿಸಿಯೇ ಬಿಟ್ಟರು. ಮರುದಿನ ಬೆಳಗ್ಗೆ ಸಿ.ರಾಜಗೋಪಾಲಾಚಾರಿ ಅವರ ಅಮೃತಹಸ್ತದಿಂದ ಅನಾವರಣಗೊಂಡಿತು. ಅಶೋಕ ಸ್ತಂಭದ ಮೇಲು¤ದಿಯಲ್ಲಿ ನಮ್ಮ ರಾಷ್ಟ್ರೀಯ ಲಾಂಛನದಂತೆಯೇ 4 ಸಿಂಹ ಜತೆಯಲ್ಲಿಯೇ ಮೈಸೂರಿನ ರಾಜ ಲಾಂಛನ ಗಂಡಭೇರುಂಡ ಹೊಂದಿರುವುದು ವಿಶೇಷವಾಗಿದೆ. ಅಂದು ಈ ಕಾರ್ಯಕ್ಕೆ ಖರ್ಚಾದ ಹಣ 3 ಸಾವಿರ ರೂ. ಎಂದು ಇತಿಹಾಸದ ಪುಟಕ್ಕೆ ಕೊಂಡೊಯ್ಯುತ್ತಾರೆ ಇತಿಹಾಸ ತಜ್ಞ ಸುರೇಶ ಮೂನ.
ರಾಗಿ ಹೊಲ ಇದ್ದವು, ರೌಡಿಗಳ ಕಾಟ ಹೆಚ್ಚಿತ್ತು:
ನಾನು, ಓದಿ ಬೆಳೆದಿದ್ದು ಜಯನಗರದಲ್ಲೆ. 1966ರಲ್ಲಿ ಬೆಂಗಳೂರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದೆ. ಈಗಿನ ಶಾಪಿಂಗ್ ಕ್ಲಾಂಪ್ಲೆಕ್ಸ್ ಆಗ ಬೆಂಗಳೂರು ಹೈಸ್ಕೂಲ್ ದೊಡ್ಡ ಆಟದ ಮೈದಾನವಾಗಿತ್ತು. ಕ್ರಿಕೆಟ್ ಕೂಡ ಆಡುತ್ತಿದ್ದೆವು. ಈಗಿನ ಬಸ್ ನಿಲ್ದಾಣದ ಬಳಿ ಈದ್ಗಾ ಇತ್ತು. ಹಬ್ಬ ಬಂದಾಗ ಈ ಮೈದಾನಲ್ಲೇ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದರು. ಒಂದೇ ಒಂದು ಡಬಲ್ ಡಕ್ಕರ್ ಬಸ್ ಆಗ ತಿರುಗಾಡುತ್ತಿತ್ತು. ಜಯನಗರ ಒಂದು ಕಾಲದಲ್ಲಿ ಹಳ್ಳಿಗಾಡಾಗಿತ್ತು. ನಂದಾ ಟಾಕೀಸ್ ಸಮೀಪ ದೊಡ್ಡ ಕೆರೆ ಇತ್ತು. ಹಿಂದೆ ರಸ್ತೆಗಳಲ್ಲಿ ಜನಗಳೇ ಇರುತ್ತಿರಲಿಲ್ಲ. ಒಬ್ಬರೇ ಹೋಗಲು ತುಂಬಾ ಭಯವಾಗುತ್ತಿತ್ತು. ಅಶೋಕ್ ಪಿಲ್ಲರ್‌ನಿಂದ ಸಿದ್ದಾಪುರ ಕಡೆ ಭಾಗದ ಪ್ರದೇಶ ರಾಗಿ ಹೊಲವಾಗಿತ್ತು. ಸಂಜೆ ಆಗುತ್ತಿದ್ದಂತೆ ರೌಡಿಗಳ ಕಾಟ ಶುರುವಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಈಗಿನ ಲಾಲ್‌ಬಾಗ್ ಸಿದ್ದಾಪುರ ಭಾಗದ ಕಡೆಗೆ ಹೋಗಲು ಜನರು ಭಯ ಬೀಳುತ್ತಿದ್ದರು ಎಂದು ಹಳೆಯ ದಿನಗಳನ್ನು ಲೇಖಕ ರಾ.ನಂ.ಚಂದ್ರಶೇಖರ್ ನೆನಪಿಸಿಕೊಂಡರು.
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.