ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ ನಿಧನ
Team Udayavani, Jun 10, 2018, 6:55 AM IST
ರಾಮನಗರ: ರಾಜ್ಯ ವಿಧಾನಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ (ಅಪ್ಸರ್ ಆಗಾ) ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು. ಶುಕ್ರವಾರ ಮಧ್ಯರಾತ್ರಿ 12ರ ವೇಳೆಗೆ ಅವರು ಬೆಂಗಳೂರಿನ ಆರ್.ಟಿ.
ನಗರದ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಜಮೀರ್ ಅಹಮದ್
ಸೇರಿ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಬಳಿಕ, ಮೃತರ ಕಳೆಬರಕ್ಕೆ ರಾಷ್ಟ್ರಧ್ವಜ ಹೊದಿಸಿ, ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ, ಅವರ ಮೃತದೇಹವನ್ನು ದಫನ್ ಮಾಡಲಾಯಿತು.
ಮೃತರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ತಾಲೂಕಿನ ಖ್ಯಾತ ಆಗಾ ಕುಟುಂಬದಲ್ಲಿ
ಜನಿಸಿದ ಅವರು, ರೈಲ್ವೆ ನೇಮಕಾತಿ ಮಂಡಳಿ ಅಧ್ಯಕ್ಷರಾಗಿ, ರಾಜ್ಯ ವಕ್ಫ್ ಬೋರ್ಡ್ ಮತ್ತು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಇಲ್ಲಿನ ಅಂಜುಮಾನ್ ಇಮಾಯತುಲ್ ಇಸ್ಲಾಂ ಶಿಕ್ಷಣ ಸಂಸ್ಥೆ ಮತ್ತು ರಾಮನಗರ ಯೂತ್ ಎಜುಕೇಷನ್ ಸಂಸ್ಥೆ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.