ಅವ್ಯವಸ್ಥೆಗಳ ಆಗರ ಬೆಂಗಳೂರಿನ ಪ್ರತಿಷ್ಠಿತ ಜೆ.ಪಿ. ಪಾರ್ಕ್
Team Udayavani, Aug 7, 2023, 10:21 AM IST
ಹಚ್ಚ-ಹಸಿರಿನ ಸಾವಿರಾರು ಗಿಡ-ಮರಗಳಿಂದ ಕೂಡಿದ ಜೆ.ಪಿ.ಪಾರ್ಕ್‌ಗೆ ಮತ್ತಿಕೆರೆ, ಯಶವಂತಪುರ,ಎಚ್.ಎಂ.ಟಿ. ಬಿಇಎಲ್, ಮುತ್ಯಾಲನಗರ, ಮಲ್ಲೇಶ್ವರಂ, ಗೊರಗುಂಟೆಪಾಳ್ಯ ವೃತ್ತ, ಗೋಕುಲ, ವಿದ್ಯಾರಣ್ಯಪುರಂ, ಎಂ.ಎಸ್.ರಸ್ತೆ, ಬೃಂದಾವನ ನಗರ ಸೇರಿ ಸುತ್ತಲಿನ 10-12 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶಗಳಿಂದ ವಾಕಿಂಗ್, ಜಾಗಿಂಗ್, ಯೋಗಾಸನ, ವ್ಯಾಯಾಮಕ್ಕಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಯುವಿಹಾರಿ ಗಳು ಆಗಮಿಸುತ್ತಾರೆ. ಆದರೆ, ಈ ಉದ್ಯಾನ ಅಧ್ವಾನಗಳ ಆಗರವಾಗಿದೆ. ಅದರ ಚಿತ್ರಣ “ಸುದ್ದಿ ಸುತ್ತಾಟ’ದಲ್ಲಿದೆ.
ಉದ್ಯಾನ ತುಂಬಾ ಬಿದ್ದಿರುವ ಕಾಮಗಾರಿಗೆ ಬಳಕೆ ಉಪಕರಣಗಳು, ನನೆಗುದಿಗೆ ಬಿದ್ದ ಹಟ್‌ಹೌಸ್, ಜಲ್ಲಿ ಕಲ್ಲಿನಿಂದ ಕೂಡಿದ ರಸ್ತೆಗಳು, ಕೊಳಚೆ ನೀರು ಹರಿಯದ ಒಳಚರಂಡಿ, ಕುಡಿಯುವುದಕ್ಕೆ ಇರಲಿ ಶೌಚಾಲಯಕ್ಕೂ ನೀರಿಲ್ಲದ ಸ್ಥಿತಿ, ಸೊಳ್ಳೆಗಳ ಆವಾಸ ಸ್ಥಾನ ಕೊಳಚೆ ನೀರಿನ ಕೊಳಗಳು.. – ನಗರದ ಮತ್ತಿಕೆರೆ ಬಳಿಯ ಜೆ.ಪಿ.ಪಾರ್ಕ್‌ನಲ್ಲಿ ಸುತ್ತು ಹಾಕಿದರೆ ತಲೆಗೇ ಸುತ್ತು ಬಂದರೂ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಉದ್ಯಾನ ಅಧ್ವಾನವಾಗಿದೆ.ಉದ್ಯಾನದ ಅಭಿವೃದ್ಧಿ ಯೋಜನೆಯ ನೀಲನಕ್ಷೆಯಲ್ಲಿ ಪುಟಾಣಿ ರೈಲು, ಸಂಗೀತ ಕಾರಂಜಿ, ನಡಿಗೆದಾ ರರಿಗೆ ನಿತ್ಯ ಜಿಮ್ ಮಾಡುವ ಉಪಕರ ಣಗಳು, ಕೆರೆ ಅಭಿವೃದ್ಧಿ, ಮಾದರಿ ಆಗುವಂತೆ ಮಹನೀಯರ ಪ್ರತಿಮೆ ಗಳು ಹೀಗೆ ಪಟ್ಟಿ ಬೆಳೆಯುತ್ತದೆ. ಅದನ್ನು ನೋಡಿ ಕಣ್ಣುಗಳೂ ಅರಳುತ್ತವೆ. ಆದರೆ, ವಾಸ್ತವದಲ್ಲಿ ಇದೆಲ್ಲವೂ ಮಾರುದೂರ.
ಇಷ್ಟೇ ಅಲ್ಲ, ಈ ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡಿ ಸೇರಿ ಇನ್ನಿತರ ಆಟೋಪಕರಣಗಳು, ಈಜುಕೊಳ, ಗ್ಯಾಲರಿ, ಸಂಗೀತ ಕಾರಂಜಿಯಿಂದ ಮಕ್ಕಳನ್ನು ಆಕರ್ಷಿಸುತ್ತಿತ್ತು. ಆದ್ದರಿಂದ ನಗರದ ಎಲ್ಲೆಡೆಯಿಂದ ಸಾರ್ವ ಜನಿಕರು ತಮ್ಮ ಮಕ್ಕಳೊಂದಿಗೆ ಪಾರ್ಕಿಗೆ ಬರುತ್ತಿದ್ದರು. ಆದರೆ, ಮೂರ್ನಾಲ್ಕು ವರ್ಷಗಳ ಹಿಂದೆ ಬಿಬಿಎಂಪಿಯು “ಮುಖ್ಯಮಂತ್ರಿಗಳ ನವನಗರೋತ್ಥಾನ’ ಕ್ರಿಯಾಯೋಜನೆ ಅಡಿ ಉದ್ಯಾನ ಅಭಿವೃದ್ಧಿ ಹೆಸರಿನಲ್ಲಿ ಮಕ್ಕಳ ಆಟೋಪಕರಣಗಳನ್ನು ಕಿತ್ತುಹಾಕಲಾಗಿದೆ.
ನೀರಿನ ಸಂಗೀತ ಕಾರಂಜಿ ಹಾಗೂ ಈಜುಕೊಳವನ್ನು ಸ್ಥಗಿತಗೊಳಿಸಿರುವ ಕಾರಣ ಮಕ್ಕಳು ಪಾರ್ಕಿಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ವಾಕಿಂಗ್ ಮಾಡುವ ರಸ್ತೆಯನ್ನೂ ಪುನರ್‌ನಿರ್ಮಾಣ ಮಾಡುವ ಹಿನ್ನೆಲೆ ಕಿತ್ತು ಹಾಕಲಾಗಿದೆ. ದುರಸ್ತಿಯೂ ಅರ್ಧದಲ್ಲೇ ನಿಂತಿರುವ ಕಾರಣ ರಸ್ತೆಗಳು ಕೆಲವು ಕಡೆ ಜಲ್ಲಿ ಕ್ಲಲು, ಮಣ್ಣಿನಿಂದ ಕೂಡಿದ್ದು, ವಾಯು ವಿಹಾರಿಗಳಿಗೆ ವಾಕಿಂಗ್ ಮಾಡಲು ಕಷ್ಟವಾಗಿದೆ ಎಂದು ವಾಯುವಿಹಾರಿಗಳು ದೂರಿದ್ದಾರೆ.
ಒಂದೂ ಕಸದ ಬುಟ್ಟಿ ಇಲ್ಲ!: 85 ಎಕರೆ ಪ್ರದೇಶದಲ್ಲಿರುವ ಈ ಉದ್ಯಾನದಲ್ಲಿ ಹುಡುಕಿದರೂ ಒಂದೂ ಕಸದ ಬುಟ್ಟಿ ಕಾಣುವುದಿಲ್ಲ. ಇದರ ಪರಿಣಾಮವಾಗಿ ಸಾರ್ವಜನಿಕರು ಹಾಗೂ ಮಕ್ಕಳು ತಿಂಡಿಯನ್ನು ತಿಂದು ಎಲ್ಲೆಂದರಲ್ಲೇ ಪ್ಲಾಸ್ಟಿಕ್ ಕವರ್ ಹಾಗೂ ತ್ಯಾಜ್ಯ ಎಸೆದಿರುವ ದೃಶ್ಯಗಳು ಕಂಡುಬಂದಿವೆ.
ಬೀದಿನಾಯಿಗಳ ಹಾವಳಿ: ಜೆ.ಪಿ.ಪಾರ್ಕಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮುಖ್ಯದ್ವಾರ ಹೊರತುಪಡಿಸಿ, ಇನ್ನಿತರೆ ಗೇಟ್‌ಗಳಲ್ಲಿ ಯಾವುದೇ ಕಾವಲುಗಾರರು ಇಲ್ಲದ ಕಾರಣ ಬೀದಿ ನಾಯಿ ಗಳು ಪಾರ್ಕ್ ಒಳಗೆ ಬರುತ್ತವೆ. ವಾಕಿಂಗ್, ಜಾಗಿಂಗ್ ಹಾಗೂ ವ್ಯಾಯಾಮ ಮಾಡುವವರಿಗೆ ಕಿರಿಕಿರಿ ಉಂಟುಮಾಡುತ್ತವೆ.
ಪ್ರಗತಿಯಲ್ಲಿರುವ ಕಾಮಗಾರಿಗಳು: ಜೆ.ಪಿ. ಪಾರ್ಕ್ ಕೆರೆಯ ಅಭಿವೃದ್ಧಿಗಾಗಿ 2028-19ನೇ ಸಾಲಿನ “ಮುಖ್ಯ ಮಂತ್ರಿಗಳ ನಗರತ್ಥೋನ’ ಕ್ರಿಯಾ ಯೋಜನೆಯಡಿ 37.50 ಕೋಟಿ ರೂ. ಮೀಸ ಲಿಡಲಾಗಿತ್ತು. ಕೆರೆ ಅಭಿವೃದ್ಧಿ ಜತೆಗೆ ಉದ್ಯಾನ ದಲ್ಲಿನ ಪಾದಾ ಚಾರಿ ಮಾರ್ಗ ಅಭಿವೃದ್ಧಿ, ಕೆರೆ ಕಲುಷಿತ ನೀರನ್ನು ಹೊರಹಾಕಿ, ಹೂಳನ್ನು ತೆಗೆದು ನೀರಿನ ಗುಣಮಟ್ಟ ವೃದ್ಧಿಸುವುದು, ಕಲ್ಯಾಣಿ ನಿರ್ಮಾಣ, ಸಾರ್ವಜನಿಕರ ಮನರಂಜನೆಗಾಗಿ ಕೃತಕ ರೈಲುಮಾರ್ಗ, ಪುಸ್ತಕ ಪ್ರೇಮಿಗಳ ಉಪ ಯೋಗಕ್ಕಾಗಿ ಗ್ರಂಥಾ ಲಯ, ಲೈಟಿಂಗ್ ವ್ಯವಸ್ಥೆ, ಬೆಂಗಳೂರು ನಿರ್ಮಾ ಣಕ್ಕೆ ಪ್ರಮುಖ ಕಾರಣೀ ಭೂತ ರಾದ ಕೃಷ್ಣ ರಾಜೇಂದ್ರ ಒಡೆಯರ್, ಕೆಂಪೇಗೌಡ ಸೇರಿ ಖ್ಯಾತ ವಿದ್ವಾಂಸರು, ಕವಿಗಳು, ಸಾಹಿತಿ ಗಳ, ಕಲಾವಿದರ ಪ್ರತಿಮೆಗಳ ನಿರ್ಮಿಸಲಾಗು ತ್ತದೆ ಎಂದು ಬಿಬಿಎಂಪಿ ತಿಳಿ ಸಿತ್ತು.
ಆದರೆ, ಕಾಮ ಗಾರಿ ಪ್ರಾರಂಭ ವಾಗಿ ಮೂರ್ನಾಲ್ಕು ವರ್ಷ ಕಳೆದರೂ ಕಾಮಗಾರಿ ಮಂದಗತಿ ಯಲ್ಲಿ ಸಾಗುತ್ತಿದೆ. ಇದುವರೆಗೆ ಕೂರಲು ಕಲ್ಲಿನ ಬೆಂಚ್‌ಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯಾಯಾಮ ಸ್ಥಳ, ಉಪಕರಣಗಳನ್ನು ಜೋಡಿಸಲಾ ಗಿದ್ದು, ಕೇವಲ ಶೇ.50 ಕಾಮಗಾರಿ ನಡೆದಿದೆ. ಚುನಾವಣಾ ಹಿನ್ನೆಲೆ ಕಾಮಗಾರಿ ಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮಳೆ ಬಂದರೆ ಸಾಕು ಮಣ್ಣು ಕೆಸರು ಗದ್ದೆಯಂತಾಗಿ ಓಡಾಡಲು ಬರದಂತೆ ಆಗುತ್ತದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ.
15 ವರ್ಷಗಳಿಂದ ಬೃಂದಾವನ ನಗರದಿಂದ ನಿತ್ಯ ವಾಕಿಂಗ್ ಮಾಡಲು ಬರುತ್ತೇವೆ. ಮೊದಲು ವಾಕಿಂಗ್ ಮಾಡಲು ಹಾಗೂ ಮಕ್ಕಳು ಆಟವಾಡಲು ಚೆನ್ನಾಗಿತ್ತು. ಆದರೆ, ಈಗ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಆಟೋಪಕರಣಗಳ ಜತೆಗೆ ಕಾರಂಜಿ ಹಾಗೂ ಈಜುಕೊಳ ಒಡೆದು ಹಾಕಿದ್ದಾರೆ. ಗೂಗಲ್‌ನಲ್ಲಿ ನೋಡಿಕೊಂಡು ಕೆ.ಆರ್.ಪುರದಿಂದ ಮಕ್ಕಳನ್ನು ಆಟವಾಡಿಸಲೆಂದು ಬಂದಿದ್ದರು. ಇಲ್ಲಿ ಬಂದಾಗ ಬೇಸರದಿಂದ ವಾಪಸಾದ ಸಂಗತಿಗಳೂ ಇವೆ. ಆದರೆ, ಇನ್ನೂ ಯಾವುದೇ ಕಾಮಗಾರಿ ಕ್ರಮಬದ್ಧವಾಗಿ ನಡೆದಿಲ್ಲ. –ಶಿವಣ್ಣ, ಬೃಂದಾವನ ನಗರದ ವಾಯುವಿಹಾರಿ.
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಶುದ್ಧಗಾಳಿ ಸೇವನೆಗೆಂದು ಇಲ್ಲಿಗೆ ಬರುತ್ತಾರೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿದುಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಪಾರ್ಕ್ ಪಕ್ಕದಲ್ಲಿ ರಸ್ತೆ ಮಾಡಲಾಗುತ್ತದೆ ಎಂದು ಹೇಳಿ ಕೆಲವು ಮರಗಳನ್ನು ಕತ್ತರಿಸಿದರು. ಇದೀಗ ಮಕ್ಕಳಿಗೆ ಕೃತಕ ರೈಲುಮಾರ್ಗ ನಿರ್ಮಾಣಕ್ಕೆಂದು ಹಲವು ಮರ ಕಡಿಯಲಾಗಿದೆ. ಅನವಶ್ಯಕ ಕಟ್ಟಡ, ಮಕ್ಕಳನ್ನು ಆಕರ್ಷಿಸುವ ಹೆಸರಿನಲ್ಲಿ ನೂರಾರು ವರ್ಷದಿಂದ ಬೆಳೆದಿರುವ ಮರಗಳನ್ನು ಕಡಿಯಲಾಗಿದೆ.– ನಾಗರಾಜ್, ಎಚ್‌ಎಂಟಿ ಲೇಔಟ್ ವಾಯುವಿಹಾರಿ.
ಅಭಿವೃದ್ಧಿ ಬೇಕು ಅಂದರೆ, ಕೆಲವೊಂದನ್ನು ಕಳೆದುಕೊಳ್ಳಬೇಕಾ ಗುತ್ತದೆ. ಕೆಲವು ಮರ ಕಡಿದಿದ್ದಾರೆ. ಆದರೆ, ಮಕ್ಕಳಿಗೆ ಆಟವಾಡಲು ರೈಲು ಸೇರಿ ಇನ್ನಿತರೆ ಚಟುವಟಿಕೆ ಕೈಗೊಂಡಿದ್ದಾರೆ. ಚುನಾವಣಾ ನಂತರ ಕಾಮಗಾರಿ ಕುಂಠಿತಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ, ವಾಯುವಿಹಾರಿಗಳಿಗೆ ಅನುಕೂಲ ಆಗುತ್ತದೆ.– ಕೃಷ್ಣ ಸಿಂಗ್, ಯಶವಂತಪುರ ವಾಯುವಿಹಾರಿ
ಇಲ್ಲಿಗೆ ವಾಕಿಂಗ್ ಮಾಡಲು ಬರುವ ಹಲವರಿಗೆ ಡಯಾಬಿಟಿಸ್ ಇದೆ. ಅವರು ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಆದರೆ, ಇಲ್ಲಿನ ಶೌಚಾಲಯಗಳು ದುರ್ನಾತ ಬೀರುತ್ತವೆ. ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಆದ್ದರಿಂದ ಅನೇಕರು ಪಾರ್ಕ್‌ನಲ್ಲಿಯೇ ಹೋಗುವ ದುಸ್ಥಿತಿ ಇಲ್ಲಿದೆ.– ಪ್ರೇಮಲತಾ, ವಾಯುವಿಹಾರಿ.
-ಭಾರತಿ ಸಜ್ಜನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.