ಮೂಡದ ಒಮ್ಮತ; ನ್ಯಾ. ಸದಾಶಿವ ಆಯೋಗದ ವರದಿ ಕುರಿತು ಸಿಎಂ ಸಭೆ
Team Udayavani, Jan 15, 2018, 6:00 AM IST
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಅಥವಾ ಮೀಸಲಾತಿ ಪುನರ್‌ವಿಂಗಡಣೆ ಕುರಿತ ನ್ಯಾ.ಎ.ಜೆ.
ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಒಮ್ಮತಕ್ಕೆ ಬರಲು ವಿಫಲವಾಗಿದೆ.
ಈ ಕುರಿತು ಕಾನೂನು ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. ಇದರೊಂದಿಗೆ ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಜಾರಿಗೊಳ್ಳುವುದು ಮತ್ತಷ್ಟು ವಿಳಂಬವಾಗುವ ಲಕ್ಷಣ ಗೋಚರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವ ಕುರಿತು ಸಾಧಕ-ಬಾಧಕ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಭಾನುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪರಿಶಿಷ್ಟ ಜಾತಿಯ ಜನಪ್ರತಿನಿಧಿಗಳೊಂದಿಗೆ ಸುಮಾರು ನಾಲ್ಕು ತಾಸು ಮ್ಯಾರಥಾನ್ ಸಭೆ ನಡೆಸಿದರಾದರೂ ಪರ-ವಿರೋಧ ಅಭಿಪ್ರಾಯಗಳೇ ಕೇಳಿಬಂದವು. ಜತೆಗೆ ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಇದರಿಂದ ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂಬ ಅಭಿಪ್ರಾಯವೂ ಕೇಳಿಬಂತು.
ಈ ಹಿನ್ನೆಲೆಯಲ್ಲಿ ಸದಾಶಿವ ಆಯೋಗದ ವರದಿ ಕುರಿತು ಕಾನೂನು ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದರು. ಹೀಗಾಗಿ ವರದಿ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಿದ ದಲಿತ ಮುಖಂಡರು ಸಭೆ ಮುಕ್ತಾಯಗೊಳಿಸಿದರು.
ಸಚಿವ ಆಂಜನೇಯ ಮಾಹಿತಿ:
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಯಾವುದೇ ವರದಿ ಜಾರಿಗೊಳಿಸುವ ಮುನ್ನ ವರದಿಯಲ್ಲಿರುವ ಅಂಶಗಳು ಸಾಂವಿಧಾನಿಕವಾಗಿ ಎಷ್ಟು ಮಹತ್ವದ್ದು ಎಂದು ಅರಿಯಬೇಕಾಗುತ್ತದೆ. ಈ ಕಾರಣಕ್ಕೆ ಕಾನೂನು ಸಲಹೆ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕಾನೂನು ಅಭಿಪ್ರಾಯ ವಾರದಲ್ಲಾದರೂ ಬರಬಹುದು, ಹದಿನೈದು ದಿನದಲ್ಲಾದರೂ ಬರಬಹುದು. ವರದಿ ಬಂದ ತಕ್ಷಣ ಮತ್ತೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಸದಾಶಿವ ಆಯೋಗ ವರದಿ ಜಾರಿ ಸಂಬಂಧ ಪರ-ವಿರೋಧ ಅಭಿಪ್ರಾಯ, ಹೋರಾಟ ಬಹಳ ದಿನಗಳಿಂದಲೂ ಇದೆ. ಹೀಗಾಗಿ ಮುಖ್ಯಮಂತ್ರಿಯವರು ಎರಡೂ ಕಡೆಯವರನ್ನು ಕರೆದು ಅಭಿಪ್ರಾಯ ಮಂಡಿಸಲು ಅವಕಾಶ ಮಾಡಿಕೊಟ್ಟಿದ್ದರು. ಸಭೆಯಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆದಿದ್ದು, ಎಲ್ಲರೂ ತಮ್ಮ ಅಭಿಪ್ರಾಯ ನೀಡಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಸದಾಶಿವ ಆಯೋಗ ವರದಿ ಸಂಪುಟ ಸಭೆಯ ಮುಂದೆ ಚರ್ಚೆಗೆ ಬಂದಾಗ, ವರದಿ ಒಪ್ಪುವ ಮುನ್ನ ಸಮುದಾಯದ ಮುಖಂಡರು ಮತ್ತು ಕಾನೂನು ಸಲಹೆ ಪಡೆಯಬೇಕು ಎಂದು ತೀರ್ಮಾನವಾಗಿತ್ತು. ಅಲ್ಲದೆ, ವರದಿಯಲ್ಲಿ ಭೋವಿ ಮತ್ತು ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವ ಅಂಶಗಳಿವೆ ಎಂಬಿತ್ಯಾದಿ ಹಲವು ಆತಂಕಗಳು ಇದ್ದವು. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಯಾವುದೇ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಶಿಫಾರಸು ವರದಿಯಲ್ಲಿಲ್ಲ. ಇದ್ದರೂ ಆ ರೀತಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದರು ಎಂದು ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಪ್ರಿಯಾಂಕ್ ಖರ್ಗೆ, ಆರ್.ಬಿ.ತಿಮ್ಮಾಪುರ್, ರುದ್ರಪ್ಪ ಲಮಾಣಿ, ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಶಾಸಕರಾದ ಅರವಿಂದ್ ಜಾಧವ್, ಆರ್.ಧರ್ಮಸೇನಾ, ಪಿ.ಎಂ.ನರೇಂದ್ರಸ್ವಾಮಿ, ಶಿವರಾಜ ತಂಗಡಗಿ ಮತ್ತಿತರರು ಇದ್ದರು.
ಭೋವಿ, ಲಂಬಾಣಿ ಕೈಬಿಡುವುದಿಲ್ಲ
ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾದರೆ ಭೋವಿ ಮತ್ತು ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕಾಗುತ್ತದೆ ಎಂಬ ಆತಂಕವನ್ನು ದೂರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಹ ಯಾವುದೇ ಅಂಶ ವರದಿಯಲ್ಲಿ ಇಲ್ಲ ಎಂದಿದ್ದಾರೆ.
ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ನಡೆದ ಸಭೆಯಲ್ಲಿ ಶಾಸಕ ಶಿವರಾಜ್ ತಂಗಡಗಿ, ವರದಿಯಲ್ಲಿ ಭೋವಿ ಮತ್ತು ಲಂಬಾಣಿ ಸಮುದಾಯದ ಬಗ್ಗೆ ಏನು ಹೇಳಲಾಗಿದೆ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವರದಿಯಲ್ಲಿ ಅನೇಕ ಉಪಜಾತಿಗಳ ವಿಚಾರ ಪ್ರಸ್ತಾಪವಾಗಿದೆ. ಆದರೆ, ಎಲ್ಲೂ ಲಂಬಾಣಿ ಮತ್ತು ಭೋವಿ ಸಮುದಾಯವನ್ನು ಪಟ್ಟಿಯಿಂದ ಕೈಬಿಡುವಂತೆ ಶಿಫಾರಸು ಮಾಡಿಲ್ಲ. ಒಂದು ವೇಳೆ ಶಿಫಾರಸು ಮಾಡಿದರೂ ಹಾಗೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.