ಡಿ.8 ರಿಂದ 5.09 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ವಿತರಣೆಗೆ ಚಾಲನೆ : ಕೆ.ಸುಧಾಕರ್
Team Udayavani, Dec 6, 2022, 8:20 PM IST
ಬೆಂಗಳೂರು; ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ʼಆಯುಷ್ಮಾನ್ ಭಾರತ್–ಪ್ರಧಾನಮಂತ್ರಿ ಜನಾರೋಗ್ಯ-ಆರೋಗ್ಯ ಕರ್ನಾಟಕ ಯೋಜನೆಯ ಗುರುತಿನ ಚೀಟಿಗಳ ವಿತರಣೆಗೆ ಡಿಸೆಂಬರ್ 8 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ 5.09 ಕೋಟಿ ಜನರಿಗೆ ಕಾರ್ಡ್ ವಿತರಣೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅದೇ ದಿನದಿಂದ ಎಲ್ಲಾ ಜಿಲ್ಲೆಗಳಲ್ಲೂ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿ ವಿತರಿಸಲು ಆರೋಗ್ಯ ಇಲಾಖೆಯಿಂದ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಪಿಎಲ್ ಕುಟುಂಬಗಳು ಒಳಗೊಂಡಂತೆ ಎಲ್ಲಾ ಅರ್ಹ 5.09 ಕೋಟಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಗುರಿ ಹೊಂದಲಾಗಿದೆ.
ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಎಬಿ-ಪಿಎಂಜೆಎವೈ-ಎಆರ್ ಕೆ ಗುರುತಿನ ಚೀಟಿಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿ ಉಚಿತವಾಗಿ ವಿತರಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಮ್ಮತಿಸಿದೆ. ಪಿವಿಸಿ ಮಾದರಿಯಲ್ಲಿ ರಾಜ್ಯ ಮತ್ತು ಕೇಂದ್ರದ ಜಂಟಿಯಾಗಿ ಛಾಪಿಸಿದ ಗುರುತಿನ ಚೀಟಿಗಳನ್ನು ವಿತರಿಸುತ್ತಿದ್ದು, ದೀರ್ಘ ಕಾಲ ಬಾಳಿಕೆ ಬರುವ ಪಿವಿಸಿ ಪರಿಕರದಿಂದ ಇದನ್ನು ಸಿದ್ಧಪಡಿಸಲಾಗಿದೆ. ಈ ಗುರುತಿನ ಚೀಟಿಯಲ್ಲಿ ಪೋರ್ಟಬಿಲಿಟಿ ಸೌಲಭ್ಯ ಇರುವುದರಿಂದ ಇದರ ಮೂಲಕ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು ಎಂದರು.
ಆರೋಗ್ಯ ದಾಖಲೆ ಒಳಗೊಂಡ ಕಾರ್ಡ್
ಇದರಲ್ಲಿ ಎಬಿಎಚ್ಎ ಗುರುತಿನ ಸಂಖ್ಯೆಯನ್ನು ಸಹ ನಮೂದು ಮಾಡಿದ್ದು, ರೋಗಿಯ ಆರೋಗ್ಯ ದಾಖಲೆಗಳನ್ನು ಈ ಗುರುತಿನ ಚೀಟಿ ಒಳಗೊಂಡಿದೆ. ಆದ್ದರಿಂದ ಚಿಕಿತ್ಸೆಗಾಗಿ ಹೆಚ್ಚಿನ ದಾಖಲೆಗಳನ್ನು ರೋಗಿಗಳು ಕೊಂಡೊಯ್ಯುವ ಅಗತ್ಯವಿಲ್ಲ. ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಜನ ಸೇವಕ ಕೇಂದ್ರಗಳಿಂದ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, 1.20 ಕೋಟಿ ಗುರುತಿನ ಚೀಟಿ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 3 ತಿಂಗಳ ಒಳಗಾಗಿ ಉಳಿದ 4 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಎಬಿ-ಪಿಎಂಜೆಎವೈ-ಎಆರ್.ಕೆ ಗುರುತಿನ ಚೀಟಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು.
42 ಲಕ್ಷ ಫಲಾನುಭವಿಗಳಿಗೆ 5,426 ಕೋಟಿ ರೂ. ಮೊತ್ತದ ಚಿಕಿತ್ಸೆ
ಹಾಗೊಂದು ವೇಳೆ ಫಲಾನುಭವಿಗಳು ಗುರುತಿನ ಚೀಟಿ ಹೊಂದಿಲ್ಲದಿದ್ದರೂ, ಆಧಾರ್ ಮತ್ತು ಪಡಿತರ ಚೀಟಿ ಮೂಲಕ ರೋಗಿಗಳು ಎಸ್.ಎ.ಎಸ್.ಟಿ ನೋಂದಾಯಿತ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯಬಹುದು. ನಗರಗಳಲ್ಲಿ ಗುರುತಿನ ಚೀಟಿ ಮುದ್ರಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಸ್ಮಾರ್ಟ್ ಐಟಿ ಎಂಬ ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಮತ್ತು ಉಳಿದವರಿಗೆ ಶೇ.30 ರಷ್ಟು ಚಿಕಿತ್ಸಾ ವೆಚ್ಚವನ್ನು ಸಹ ಪಾವತಿಯ ಆಧಾರದ ಮೇಲೆ ಅಂದರೆ ವಾರ್ಷಿಕ 1.5 ಲಕ್ಷ ರೂ. ಮೊತ್ತದಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಈ ಯೋಜನೆ ಮೂಲಕ 3,545 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 23 ವಿಶೇಷತೆಗಳಲ್ಲಿ 1,650 ಕಾರ್ಯ ವಿಧಾನಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆ ಪ್ರಾರಂಭವಾದ ನಂತರ 42 ಲಕ್ಷ ಫಲಾನುಭವಿಗಳು, 5,426 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿದ್ದು, ಇದೊಂದು ಮಹತ್ವದ ಸಾಧನೆ ಎಂದು ಸಚಿವರು ತಿಳಿಸಿದರು.
ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ತಿಂಗಳು 1.80 ರಿಂದ 2 ಲಕ್ಷ ಮಂದಿ ಚಿಕಿತ್ಸೆಗಾಗಿ ನೋಂದಣಿಯಾಗುತ್ತಿರುವುದು ಈ ಯೋಜನೆಯ ಜನಪ್ರಿಯತೆಗೆ ಸಾಕ್ಷಿ. ಆನ್‌ಲೈನ್ ಕ್ಲೇಮ್‌ಗಳನ್ನು 2 ವಾರಗಳಲ್ಲಿ ಇತ್ಯರ್ಥಗೊಳಿಸಿ ಆಸ್ಪತ್ರೆಗಳಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮಗಳಿಂದಾಗಿ ಯೋಜನೆ ವ್ಯಾಪ್ತಿಗೆ ಸೇರ್ಪಡೆಯಾಗಲು ಹೆಚ್ಚಿನ ಆಸ್ಪತ್ರೆಗಳು ನೋಂದಣಿಯಾಗುವ ನಿರೀಕ್ಷೆ ಇದೆ. ಹಾಗೆಯೇ, ರೋಗಿಗಳಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬಿಸಿಎಂ ಹಾಸ್ಟೆಲ್ ಗಳಿಗೆ 100 ಕೋಟಿ ವೆಚ್ಚದ ಮೂಲ ಸೌಕರ್ಯಾಭಿವೃದ್ಧಿ ಪ್ರಸ್ತಾವನೆಗೆ ಸಚಿವರ ಅನುಮೋದನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.