ಸದಭಿರುಚಿಯ ಆತ್ಮೀಯನೇ, ಇಗೋ ನಿನಗೆ ನನ್ನಂತರಂಗದ ಅಭಿನಂದನೆ
Team Udayavani, Jul 16, 2018, 6:15 AM IST
ಎಪ್ಪತ್ತರ ದಶಕ. ನಾನು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಾಹಿತ್ಯದ ವಿದ್ಯಾರ್ಥಿಯಾಗಿದ್ದೆ. ನಮ್ಮ ನಲ್ಮೆಯ ಕರ್ನಾಟಕ ಸಂಘಕ್ಕೆ ಚಿನ್ನದ ಹಬ್ಬ. ಸಮನ್ವಯ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ಮತ್ತು ಕನ್ನಡ ಸಾಹಿತ್ಯ ಚರಿತ್ರೆ ಬರೆದ ಉದ್ದಾಮ ಸಾಹಿತಿ ಡಾ.ರಂ.ಶ್ರೀ ಮುಗಳಿ ಅವರುಗಳು ನೇತೃತ್ವ ವಹಿಸಿದ್ದರು. ನಾನು ಕವಿಗೋಷ್ಠಿ ಹಾಗೂ ಎತ್ತಿದಕೈ ನಾಟಕಗಳಲ್ಲಿ ಭಾಗವಹಿಸಿದ್ದೆ.
ನಾಟಕ ಮುಗಿದ ವೇಳೆ ಚೆನ್ನಾಗಿ ಪಾತ್ರ ಮಾಡಿದಿರಿ. ಕಾ.ವೆಂ.ರಾಜಗೋಪಾಲ್ ನಿರ್ದೇಶನ ಸೊಗಸಾಗಿತ್ತು. ನಿನ್ನ ತಮ್ಮ ಕೆ.ನಾಗರಾಜ ಎಷ್ಟೊಂದು ಅರ್ಥಪೂರ್ಣವಾಗಿ ಅಭಿನಯಿಸಿದ. ವಂಡರ್‌ಫುಲ್ ಎಂದು ಅಭಿನಂದಿಸುವ ಮೂಲಕ ತನ್ನ ಪರಿಚಯ ಮಾಡಿಕೊಂಡ ವ್ಯಕ್ತಿಯೇ ಕವಿ ಎಂ.ಎನ್.ವ್ಯಾಸರಾವ್. ಆ ಹೊತ್ತು ಗುಬ್ಬಿ ಕಂಪೆನಿ ಚಿನ್ನಪ್ಪಣ್ಣ ಅದೇ ಸಂದರ್ಭದಲ್ಲಿ ಮುಕ್ತ ಮನಸ್ಸಿನಿಂದ ನನ್ನನ್ನು ಅಭಿನಂದಿಸಿ ಆರ್ಶೀವಾದಿಸಿದರು.
ಹೀಗೆ ಪರಿಚಯವಾದ ವ್ಯಕ್ತಿ ಸ್ನೇಹಿತನಾದ. ಮುಂದೆ ನಾವು ಕೆಲವೇ ತಿಂಗಳುಗಳಲ್ಲಿ ಆತ್ಮೀಯರಾದೆವು. ಬರು ಬರುತ್ತಾ ಏಕವಚನದ ಗೆಳೆಯರಾದೆವು. ಹೀಗಾಗಿ ವ್ಯಾಸರಾವ್ ನನ್ನ ಜೀವ ಭಾವದ ಗೆಳೆಯ. ನಾನು ಆನರ್ಸ್ ಹಾಗೂ ಎಂ.ಎ ತರಗತಿಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದಾಗ ಗಾಂಧಿಬಜಾರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ಕೊಡಿಸುವ ಮೂಲಕ ಆ ಸಂದರ್ಭವನ್ನು ಸಂಭ್ರಮಿಸಿದ್ದ.
ಕಾಲ ಸರಿಯುತ್ತಿರುತ್ತದೆ; ನನ್ನ ಬವಣೆಯನ್ನು ಅವನು ಕಣ್ಣಾರೆ ಕಂಡು ಮರುಗಿದ್ದ. ಮನೆಗೆಲ್ಲಾ ಬರುತ್ತಿದ್ದ. ನನ್ನ ಅನೇಕ ಕಷ್ಟಗಳಲ್ಲಿ ಅವನು ಸಾಂತ್ವನದ ಮಾತು ಹೇಳುತ್ತಿದ್ದ. ಧೈರ್ಯ ತುಂಬುತ್ತಿದ್ದ. ಸ್ನೇಹಿತರು ಅಂದರೆ ಅದೇ ತಾನೇ?
ನನ್ನ ಬದುಕಿನ ಅಗ್ನಿ ಕುಂಡಗಳ ಕುಲುಮೆಯಲ್ಲಿ ಬೇಯುವಾಗ ಅವನು ಬದಿಗಿದ್ದು ಸಮಾಧಾನ ಮಾಡುತ್ತ ಇದ್ದ. ನನ್ನ ಕವಿತೆಗಳು ಪ್ರಕಟವಾಗುತ್ತಿದಾಗ ಮುಕ್ತವಾಗಿ ಹೊಗುಳುತ್ತಿದ್ದ. ಅವನ ಕಥೆಗಳು ಸುಧಾ, ಮಯೂರ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಆ ಕಟಿಂಗ್ಸ್ ತಂದು ತೊರುತ್ತಿದ್ದ. ಮುಂದೆ ಯೂಕೋ ಬ್ಯಾಂಕ್‌ನಲ್ಲಿ ನೌಕರನಾದ. ಅದು ನಮಗೆಲ್ಲ ಸಂತೋಷದ ಘಳಿಗೆ.
ಅವನ ಹಾಗೂ ನನ್ನ, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್ ಅವರ ಪಠ್ಯಗಳು ಒಟ್ಟೊಟ್ಟಿಗೆ ಪ್ರಕಟವಾಗುತ್ತಿದ್ದ ದಿನಗಳಲ್ಲಿ ನಾವೆಲ್ಲಾ ಆತ್ಮೀಯ ಸ್ನೇಹಿತರು.
ಪುಟ್ಟಣ್ಣ ಕಣಗಲ್ ಶುಭಮಂಗಳ ಚಿತ್ರದಲ್ಲಿ ಲೆಕ್ಕದ ಹಾಡು ಬರೆಸಬೇಕೆಂದು ತೀರ್ಮಾನಿಸಿದಾಗ ಆಯ್ದುಕೊಂಡ ಯುವ ಕವಿ ಎಂ.ಎನ್.ವ್ಯಾಸರಾವ್ (ಆಗ ಅವನು ಯುಕೋ ಬ್ಯಾಂಕ್ ಕ್ಯಾಷಿಯರ್ ಆಗಿದ್ದ!)”ನಾಕೊಂದ್ಲ ನಾಕು ನಾಕೆರಡ್ಲ ಎಂಟು ಇಷ್ಟೇ ಲೆಕ್ಕದ ನಂಟು” (ಶುಭಮಂಗಳ 1975) ಹಾಗೂ ಆತನಿಗೆ ತುಂಬಾ ಹೆಸರು ತಂದುಕೊಟ್ಟ- ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗುತಾದ ಭೂತಾಯಿ ಮನಸು; ರಾಜಂಗೂ ರಾಣಿಗೂ ಮುರಿದೋದ್ರೆ ಮನಸು ಅರಮನೆಯಾಗೇನೈತೆ ಸೊಗಸು (ಶುಭಮಂಗಳ 1975). ಎಷ್ಟೇ ಆಗಲಿ ವ್ಯಾಸ ಕವಿ; ಅವನ ಕವಿ ಹೃದಯ ಸಹಜವಾಗೇ ಪಲ್ಲವಿಸಿತ್ತು ಸುಂದರವಾದ ಗೀತೆಗಳನ್ನು. ಇದು ಅವನ ನೈಜ ಕಾತ್ಯ ಕಾಣೆR!
ನಾನು, ವ್ಯಾಸರಾವ್, ಶ್ಯಾಮಸುಂದರ್ ಕುಲಕರ್ಣಿ ಒಟ್ಟೊಟ್ಟಿಗೆ ಅನೇಕ ಸಿನಿಮಾಗಳಿಗೆ ಮದ್ರಾಸಿನ ಸ್ವಾಗತ್ ಹಾಗೂ ಪಾಮ್‌ಗ್ರೂಪ್ ಹೋಟೆಲ್‌ಗಳಲ್ಲಿ ಕೂತು ಬರೆದಿದ್ದು ಉಂಟು.
ನಮ್ಮಲ್ಲಿ ಅಕ್ಕರೆ ಇತ್ತು; ಆತ್ಮೀಯರೆ ಇತ್ತು; ಅನನ್ಯ ಹೊಂದಾಣಿಕೆ ಇತ್ತು. ನನಗೆ ಹಾಗೂ ವ್ಯಾಸನಿಗೆ ಸಾಹಿತ್ಯ ರತ್ನ ಚಿ.ಉದಯಶಂಕರ್ ಅವರು ವಿಜಯಭಾಸ್ಕರ್ (ಸಂಗೀತ ಸಾಮ್ರಾಟ್) ಕೋರಿಕೆ ಮೇರೆಗೆ ಪ್ರಸಾದ್ ಸ್ಟುಡಿಯೊ ತೊರಿಸಿದ ಸಂದರ್ಭ ನಮ್ಮಿಬ್ಬರ ಪಾಲಿಕೆ ಶುಭ ಘಳಿಗೆ.
ಅಂದು ರಾಜನ್-ನಾಗೇಂದ್ರ ಅವರನ್ನು ಹಾಗೂ ಕನ್ನಡದ ನಟ ಸಾರ್ವಭೌಮ ಕಲಾಸೂರ್ಯ ಡಾ.ರಾಜ್‌ಕುಮಾರ ಅವರನ್ನು ಕಂಡ ಕ್ಷಣಗಳಲ್ಲಿ ನಾವಿಬ್ಬರೂ ಹಿಮಾಲಯ ಸಂತೋಷ ಹೊತ್ತಿದ ಸಂತೋಷ ಅನುಭವಿಸಿದ್ದೆವು.
ಜೀವನವೇ ಹೀಗೆ.. ಅನಿರೀಕ್ಷಿತಗಳ ಸರಮಾಲೆ, ಮುಂದೆ ನಾನು ಎಸ್‌ಎಲ್‌ಎನ್ ಕಾಲೇಜು ಸೇರಿದೆ. ನನ್ನ ಮೊದಲ ಬ್ಯಾಂಕ್ ಖಾತೆ ತೆರೆಯಲು ಸಂತೋಷದಿಂದ ಸಹಾಯ ಮಾಡಿದ ಮಹನೀಯ! ನನಗೂ ರಾಜಿಗೂ ವ್ಯಾಸ ಬಹಳ ಪ್ರಿಯ ವ್ಯಕ್ತಿ. ನನ್ನ ಭರತನನ್ನು (ಮಗ) ವ್ಯಾಸ ಎತ್ತಿ ಆಡಿಸಿದ್ದಾನೆ. ಅದು ಅವನ ನಿಷ್ಕಲ್ಮಶ ಪ್ರೀತಿಯದ್ಯೊತಕ.
ನಾನು ವ್ಯಾಸ ಒಟ್ಟೊಟ್ಟಿಗೆ ಪ್ರೊ.ಗೋಪಾಲಕೃಷ್ಣ ಅಡಿಗರ ಮನೆಗೆ ಹೊಗುತ್ತಿದ್ದೆವು. ಸಾಹಿತ್ಯದ ಚರ್ಚೆ ಮಾಡುತ್ತಿದ್ದೆವು. ಗಾಂಧಿಬಜಾರಿನಲ್ಲಿ ಅವನ ಮನೆಗೆ ಹೊಗುತ್ತಿದ್ದೆ (ಲಂಕೇಶ್ ಪತ್ರಿಕೆ ಪಕ್ಕದ ಮನೆ, ಬಿಎಂಎಸ್ ಮಹಿಳಾ ಕಾಲೇಜು ಹಿಂಭಾಗ) ನನ್ನ ಚೆನ್ನಾಗಿ ನೊಡಿಕೊಂಡಿದ್ದಾನೆ. ನನ್ನ ಪ್ರೀತಿಯ ಅಪ್ಪ ತೀರಿಕೊಂಡಾಗ ಒಂದಿಷ್ಟು ದುಡ್ಡು ಕೊಟ್ಟು ಧೈರ್ಯ ತುಂಬಿ ಆಸ್ಪತ್ರೆಯಿಂದ ಬಾಡಿ ನನ್ನ ಹುಟ್ಟೂರಿಗೆ ಸಾಗಿಸಲು ಸಹಾಯ ಮಾಡಿದ ಮಾನವೀಯ ವ್ಯಕ್ತಿ.
ನಾನು, ಟಿ.ಎಸ್.ನಾಗಭರಣ; ನಾವೆಲ್ಲಾ ಒಟ್ಟೊಟ್ಟಿಗೆ ಚಿತ್ರ ರಂಗದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇವೆ. ವ್ಯಾಸನಿಗೆ-ನಟ ಸುರೇಶ್ ಹೆಬ್ಲೀಕರ್‌ಗೆ ಭಾರೀ ದೋಸ್ತಿ. ನಾವೆಲ್ಲ ಇಷ್ಟಪಟ್ಟಿದ್ದ ವ್ಯಕ್ತಿ ಸಂಗೀತ ನಿರ್ದೇಶಕ ಅಶ್ವತ್ಥ. ನಾನು ವ್ಯಾಸನನ್ನು ಅನನ್ಯ ಹಾಡುಗಳಲ್ಲಿ ಮೆಚ್ಚಿಕೊಂಡಿದ್ದೇನೆ. ಯುಗ ಯುಗಗಳೇ ಸಾಗಲಿ ನನ್ನ ಪ್ರೀತಿ ಶಾಶ್ವತ (ಹೃದಯ ಗೀತೆ: ರಾಜನ್ ನಾಗೇಂದ್ರ ಸಂಗೀತ), ಅಡವಿ ದೇವಿಯ ಕಾಡು ಜನರ ಈ ಹಾಡು (ರಾಯರು ಬಂದರು: ರಾಜಕೋಟಿ ಸಂಗೀತ), ಮಧುರ ಈ ಕ್ಷಣ (ಒಡಹುಟ್ಟಿದವರು: ಉಪೇಂದ್ರಕುಮಾರ್ ಸಂಗೀತ), ವ್ಯಾಸನ ಕುರಿತು ಇನ್ನೂ ಬರೆಯಬೇಕಾದುದು ಬಹಳ ಇದೆ. ಅಳಲ ಹೊಳೆ ನನ್ನೆದೆ ತುಂಬಿ ಈ ನಿಮಿಷ ಬರೆಯಲಾಗುತ್ತಿಲ್ಲ.
ಇದು ಗೆಳೆಯನಿಗೆ ಇಗೋ ನನ್ನ ಶ್ರದ್ಧಾಂಜಲಿ. ಅರಿತು ಬೆರೆತ ಜೀವ ಜೀವದ ಭಾವ ಗೆಳೆಯನೇ,
ಕಷ್ಟದ ಕಡಲಿಲ್ಲ ನಾ ಮುಳುಗುವಾಗ ಇಷ್ಟಪಟ್ಟು ಬಂದ ನೆರವಾದ ಕವಿ ಮಿತ್ರನೇ,
ಮುದ್ದು ಮುದ್ದಾ ಹಾಡುಗಳ ಬರೆದು ಜನಮನ ಗೆದ್ದವನೇ, ದ್ರವ್ಯಾಲಯದ ನೌಕರನಾದರೂ ಸಾಹಿತ್ಯ ಸಂಸರ್ಗದ ಸೃಜನಶೀಲನೆ, ಸದಭಿರುಚಿಯ ಆತ್ಮೀಯನೇ ಇಗೋ ನಿನಗೆ ನನ್ನಂತರಂಗದ ಅಭಿನಂದನೆ..
– ಹಿರಿಯ ಕವಿ ಡಾ.ದೊಡ್ಡರಂಗೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.