ಕನ್ನಡ ದುಡಿಮೆ ಭಾಷೆಯಾಗಬೇಕು
Team Udayavani, Nov 23, 2018, 11:29 AM IST
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಅರವತ್ತೆರಡು ವರ್ಷಗಳ ಇತಿಹಾಸವಿದ್ದು, ಕನ್ನಡವು ಕನ್ನಡಿಗರ ದುಡಿಮೆ ಭಾಷೆಯಾಗಿ ಉಳಿಯಬೇಕಾದ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.
ಶೇಷಾದ್ರಿಪುರ ಪದವಿ ಪೂರ್ವ ಕಾಲೇಜು ಗುರುವಾರ ಹಮ್ಮಿಕೊಂಡಿದ್ದ 63ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯ ಅವಗಣನೆಯಾಗುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನೆಲೆಯೂರಿರುವ ಖಾಸಗಿ ಕಂಪನಿಗಳು ಕನ್ನಡವನ್ನು ಕಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಪೂರೈಸಿದವರಿಗೆ ಆದ್ಯತೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲೂ ಕೂಡ ಕನ್ನಡ ಭಾಷೆಯ ನಿರ್ಲಕ್ಷ್ಯಮಾಡಲಾಗುತ್ತಿದೆ. ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಪಠ್ಯದಲ್ಲೂ ಕನ್ನಡ ಪಠ್ಯವನ್ನು ಕಡ್ಡಾಯಮಾಡಬೇಕು. ಕನ್ನಡ ಕಲಿಸುವ ಕಾಯಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬದ್ಧತೆಯಿಂದ ತೋರಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದರು.
ಕರ್ನಾಟಕ ಏಕೀಕರಣಕ್ಕೆ ಹಿರಿಯರ ಕೊಡುಗೆ ಅಪಾರ.ಹೀಗಾಗಿ ಒಡಕಿನ ಮಾತಾಡದೇ ಹೈದ್ರಾಬಾದ್ ಕರ್ನಾಟಕ, ಬೆಳಗಾವಿ, ಮೈಸೂರು, ಕರಾವಳಿ ಪ್ರಾಂತ್ಯದ ಕನ್ನಡಿಗರ ಒಟ್ಟಾಗಿ ಕರ್ನಾಟಕವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಕರ್ನಾಟಕ ಹೋರಾಟದಲ್ಲಿ ಜಯದೇವಿ ತಾಯಿ ಲಿಂಗಾಡೆ, ಬಳ್ಳಾರಿ ಸಿದ್ಧಮ್ಮ ಅಂತಹ ವೀರ ಮಹಿಳೆಯರು ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಹೋರಾಟವನ್ನು ದಾಖಲು ಮಾಡುವ ಕೆಲಸ ನಡೆಯುವ ಅಗತ್ಯವಿದೆ ಎಂದು ತಿಳಿಸಿದರು.
ಶೇಷಾದ್ರಿಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ನಾರಾಯಣ ಸ್ವಾಮಿ, ಶೇಷಾದ್ರಿಪುರ ಶಿಕ್ಷಣ ದತ್ತಿ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ, ರಂಗಭೂಮಿ ಕಲಾವಿದೆ ಸ್ಪಶಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೈದರಾಬಾದ್‌ನ ನಿಜಾಮರು ಕರ್ನಾಟಕಕ್ಕೆ ಹೈದ್ರಾಬಾದ್‌ಅನ್ನು ನೀಡಲು ನಿರಾಕರಿಸಿದಾಗ ಸೈನಿಕರ ಬಲವಂತದ ಮೂಲಕ ಈ ಪ್ರಾಂತ್ಯವನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲಾಯಿತು. ಕರ್ನಾಟಕ ಏಕೀಕರಣಕ್ಕೆ ಒಂದು ದೊಡ್ಡ ಹೋರಾಟವಿದ್ದು, ಒಡಕಿನ ಮಾತಾಡುವವರು ಇತಿಹಾಸದ ಬಗ್ಗೆ ಅರಿಯಬೇಕು.
-ಇಂದಿರಾ ಕೃಷ್ಣಪ್ಪ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.