ಕನ್ನಡ ಕಲಿಸುವ ಯಜ್ಞ
Team Udayavani, Oct 31, 2018, 12:15 PM IST
ಬೆಂಗಳೂರು: ಶಿಕ್ಷಣ, ಉದ್ಯೋಗ ಮೊದಲಾದ ಕಾರಣಕ್ಕಾಗಿ ಕರ್ನಾಟಕಕ್ಕೆ ಬಂದು ಬಹುಕಾಲ ನೆಲೆ ನಿಲ್ಲುವ ಸಾವಿರಾರು ಜನರಿಗೆ ಕನ್ನಡ ಕಲಿಸುವ ಕಾರ್ಯ ಸದ್ದುಗದ್ದಲವಿಲ್ಲದೇ ನಡೆಯುತ್ತಿದೆ.
ಕನ್ನಡಿಗರು ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಕ್ರಿಯೆ ಒಂದೆಡೆಯಾದರೆ, ಕನ್ನಡ ಕಲಿತ ಕನ್ನಡೇತರರು, ತಮ್ಮಂತೆ ಹೊರಗಿನಿಂದ ಬಂದ ಪರಭಾಷಿಗರಿಗೂ ಕನ್ನಡ ಕಲಿಸುತ್ತಿರುವುದು ವಿಶೇಷ. ಇದರ ಜತೆಗೆ ಕನ್ನಡೇತರರಲ್ಲಿ ಅನೇಕರು ಕನ್ನಡ ಕಲಿತು, ಅಧ್ಯಯನ ನಡೆಸಿ, ಕನ್ನಡದ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡದ ಕಂಪನ್ನು ತಮ್ಮ ರಾಜ್ಯದಲ್ಲೂ ಪಸರಿಸಿದ್ದಾರೆ.
ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ಧಾರವಾಡ, ದಾವಣಗೆರೆ ಹೀಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಪೀಠಗಳಿಂದ, ಪ್ರಮಾಣ ಪತ್ರದ ಕೋರ್ಸ್ ಮೂಲಕ ಕನ್ನಡೇತರರಿಗೆ ಕನ್ನಡ ಕಲಿಸುವ ಬಹುದೊಡ್ಡ ಯಜ್ಞ ನಡೆಯುತ್ತಿದೆ.
ಬಿ.ವಿ.ರಾಘವನ್ ಅವರು 1974ರಿಂದ 1990ರವರೆಗೆ ಬೆಂಗಳೂರು ತಮಿಳು ಸಂಘದೊಂದಿಗೆ ಸೇರಿ ಖಾಸಗಿ ಸಂಸ್ಥೆಗಳಲ್ಲಿ ಇರುವವರಿಗೆ ಕನ್ನಡ ಕಲಿಸಿದ್ದಾರೆ. 1990ರಲ್ಲಿ ಕನ್ನಡ ಪ್ರಸಾರ ಪರಿಷತ್ ಸ್ಥಾಪಿಸಿ, ಆ ಮೂಲಕ ಪ್ರತಿ ಭಾನುವಾರ ಕನ್ನಡ ತರಗತಿ ನಡೆಸಿಕೊಂಡು ಬರುತ್ತಿದ್ದಾರೆ. ತಮಿಳು, ತೆಲಗು, ಹಿಂದಿ, ಮರಾಠಿ ಭಾಷಿಕರಿಗೆ ಮಾತ್ರವಲ್ಲದೇ ವಿದೇಶಿಗರಿಗೂ ಕನ್ನಡ ಕಲಿಸುತ್ತಿದ್ದಾರೆ. ಐಎಎಸ್ ಸೇರಿದಂತೆ ವಿವಿಧ ವರ್ಗದ ಸರ್ಕಾರಿ ಅಧಿಕಾರಿಗಳಿಗೂ ಕನ್ನಡದ ಪಾಠ ಮಾಡುತ್ತಿದ್ದಾರೆ.
ಕನ್ನಡೇತರರಿಗೆ ಕನ್ನಡ ಕಲಿಸುವ ಅಭಿಯಾನ ಆರಂಭಿಸಿದ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ಆಸ್ಪತ್ರೆಯ ವೈದ್ಯರಿಗೆ ಕನ್ನಡ ಕಲಿಸುವ ಕೆಲಸ ಮಾಡಿದ್ದು, ಬಹುಪಾಲು ಕನ್ನಡೇತರ ವೈದ್ಯರು ಕನ್ನಡ ಕಲಿತಿದ್ದಾರೆ. ವೈದ್ಯರು ಇರುವಲ್ಲಿಗೇ ಹೋಗಿ ಕನ್ನಡ ಕಲಿಸುವ ಜತೆಗೆ ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ನೀಡುತ್ತಿದ್ದರು. ಇದಾದ ನಂತರ ನರ್ಸಿಂಗ್ ಹೋಮ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಹೋಗಿ ಕನ್ನಡ ಕಲಿಸುವ ಕೆಲಸ ಮಾಡಿದ್ದಾರೆ.
ಎಚ್‌ಎಎಲ್, ಬೆಮೆಲ್, ಇನ್ಫೋಸಿಸ್, ವಿಪ್ರೊ ಸೇರಿದಂತೆ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಭೇಟಿ ನೀಡಿ, ಕನ್ನಡ ತರಗತಿ ನಡೆಸಿದ್ದಾರೆ. ಐಐಎಸ್ಸಿ, ಐಐಎಂ ಕೇಂದ್ರ ಸರ್ಕಾರದ ಕಚೇರಿ, ಆದಾಯ ತೆರಿಗೆ ಕಚೇರಿಯ ಕನ್ನಡೇತರ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕನ್ನಡ ಪಾಠ ಹೇಳಿಕೊಟ್ಟಿದ್ದಾರೆ. ಸದ್ಯ ಕೆಲವು ಐಎಎಸ್ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತಲ್ಲಿನರಾಗಿದ್ದಾರೆ. ಇದರ ಜತೆಗೆ ಭಾನುವಾರದ ತರಗತಿಯನ್ನೂ ನಡೆಸುತ್ತಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮುಂದಾಳತ್ವದಲ್ಲೂ ಕನ್ನಡೇತರಿಗೆ ಕನ್ನಡ ಕಲಿಸುವ ಕಾರ್ಯ ನಡೆಯುತ್ತಿದೆ.
ಕನ್ನಡ ಕಲಿತ ವಿದೇಶಿಗರು: ಕನ್ನಡ ಪ್ರಸಾರ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್ ಭವನದಲ್ಲಿ ಜರ್ಮನಿ ಮತ್ತಿತರ ದೇಶಗಳ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಕನ್ನಡ ಕಲಿಸಿದ್ದಾರೆ. ನಗರದ ಅಲಾಯನ್ಸ್ ಫ್ರಾನ್ಸ್ (ಭಾರತದಲ್ಲಿರುವ ಅಧಿಕೃತ ಫ್ರೆಂಚ್ ಕೇಂದ್ರ)ನಲ್ಲಿ, ಫ್ರಾನ್ಸ್ ಹಾಗೂ ಇತರ ದೇಶದವರಿಗೆ ಕನ್ನಡ ಕಲಿಸಿದ್ದಾರೆ. ಎನ್‌ಸಿಬಿಎಸ್‌ನಲ್ಲಿ ವಿಜ್ಞಾನಿಗಳಿಗೆ ಕನ್ನಡ ಪಾಠ ಕಲಿಸಿಕೊಡಲಾಗಿದೆ. ಈ ಮೂಲಕ ಸಾವಿರಾರು ವಿದೇಶಿಗರು ಕನ್ನಡ ಕಲಿತಿದ್ದಾರೆ.
ಶ್ರೇಷ್ಠ ಕಾದಂಬರಿ ತರ್ಜುಮೆ: ಕೇರಳದ ಕಣ್ಣೂರು ಜಿಲ್ಲೆಯಿಂದ ಬೆಂಗಳೂರಿಗೆ ಬಂದು ನೆಲೆಸಿರುವ ರಾಮತಳ ಸುಧಾಕರನ್ ರಾಮನಥಲಿ ಅವರು ಕನ್ನಡ ಕಲಿತು, ಅಧ್ಯಯನ ಮಾಡಿ, ಕನ್ನಡದ ಶ್ರೇಷ್ಠ ಗ್ರಂಥಗಳನ್ನು ಮಲಯಾಳಂಗೆ ಭಾಷಾಂತರಿಸಿ ಪ್ರಶಸ್ತಿ ಪಡೆದಿದ್ದಾರೆ. ಈವರೆಗೆ ಕನ್ನಡದ 17 ಕೃತಿಗಳನ್ನು ಮಲಯಾಳಂಗೆ ಭಾಷಾಂತರಿಸಿದ್ದಾರೆ.
ಅದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ 5 ಕೃತಿ ಹಾಗೂ ಡಾ.ಎಸ್.ಎಲ್.ಬೈರಪ್ಪ ಅವರ 2 ಕಾದಂಬರಿ, ಯು.ಆರ್.ಅನಂತಮೂರ್ತಿಯವರ ಒಂದು ಕೃತಿ, ಕುವೆಂಪು ಅವರ “ರಾಮಾಯಣ ದರ್ಶನಂ’ನ ಆಯ್ದ ಭಾಗ ತರ್ಜುಮೆ ಮಾಡಿದ್ದಾರೆ. ಇದರ ಜತೆಗೆ ಕನಕದಾಸರ ಸಮಗ್ರ ಕೃತಿಯ ಭಾಷಾಂತರದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.
1974ರಿಂದ ಕನ್ನಡೇತರರಿಗೆ ಕನ್ನಡ ಕಲಿಸುತ್ತಿದ್ದೇವೆ. 1990ರಲ್ಲಿ ಕನ್ನಡ ಪರಿಷತ್ ಆರಂಭಿಸಿದ್ದು, ಪ್ರತಿ ಭಾನುವಾರ ಕನ್ನಡದ ತರಗತಿ ನಡೆಸುತ್ತಿದ್ದೇವೆ. ಬಹುತೇಕರು ಕನ್ನಡ ಮಾತನಾಡುವುದನ್ನು ಕಲಿಯಲು ಬರುತ್ತಾರೆ. ಅಪಾರ ಸಂಖ್ಯೆಯ ವಿದೇಶಿಗರಿಗೂ ಕನ್ನಡ ಕಲಿಸಿದ್ದೇವೆ.
-ಬಿ.ವಿ.ರಾಘವನ್, ಕನ್ನಡ ಪ್ರಸಾರ ಪರಿಷತ್ ಅಧ್ಯಕ್ಷ
ಕನ್ನಡ ಭಾಷೆಯ ಶ್ರೇಷ್ಠ ಕೃತಿಗಳನ್ನು ಮಲಯಾಳಂಗೆ ತರ್ಜುಮೆ ಮಾಡಿದ್ದೇನೆ. ಕೇರಳಿಗರಿಗೆ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವುದು ಇದರ ಉದ್ದೇಶವಾಗಿದೆ.
-ಸುಧಾಕರನ್ ರಾಮನಥಲಿ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.