ತಡರಾತ್ರಿ ಕರಗದ ಉತ್ಸಾಹ
Team Udayavani, Apr 1, 2018, 12:55 PM IST
ಬೆಂಗಳೂರು: ಎಲ್ಲೆಲ್ಲೂ ಹರಡಿರುವ ಮಲ್ಲಿಗೆಯ ಕಂಪು, ರಸ್ತೆ, ಮನೆಗಳ ಮೇಲೆ ಕಿಕ್ಕಿರಿದ ಜನಸ್ತೋಮ, ಹೂವಿನ ಕರಗ ಕಂಡ ಕೂಡಲೇ ಮುಗಿಲು ಮಟ್ಟಿದ ಭಕ್ತರ ಹರ್ಷೋದ್ಗಾರ, ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ.
ಬೆಂಗಳೂರು ಕರಗ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಕಂಡು ಬಂದ ದೃಶ್ಯಗಳಿವು. ಪ್ರತಿ ವರ್ಷದಂತೆ ಈ ಬಾರಿಯ ಚೈತ್ರ ಪೌರ್ಣಿಮೆಯಂದು ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಹೂವಿನ ಕರಗವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಮಲ್ಲಿಗೆ ಹೂವುಗಳಿಂದ ಅಲಂಕೃತವಾಗಿದ್ದ ಕರಗ ದೇವಾಲಯದಿಂದ ಹೊರ ಬರುತ್ತಿದ್ದಂತೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ಮಲ್ಲಿಗೆ ಹೂವಿನ ಮಳೆಗರೆದು, ಭಕ್ತಿಪರವಶರಾಗಿ ಜೈಕಾರ ಹಾಕಿದರು. ಮೊದಲಿಗೆ ಧರ್ಮರಾಯ ದೇವಸ್ಥಾನದ ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದ ಹೂವಿನ ಕರಗವು, ಖಡ್ಗ ಹಿಡಿದಿದ್ದ ನೂರಾರು ವೀರ ಕುಮಾರರ ನಡುವೆ ಭಕ್ತರಿಗೆ ದರ್ಶನ ನೀಡುತ್ತಾ ನಗರ ಪರ್ಯಟನೆ ನಡೆಸಿತು.
ರಾತ್ರಿ ಕರಗ ಹೊರ ಬರುವ ಮುನ್ನವೇ ಹೂವು, ತಳಿರು ತೋರಣದಿಂದ ಸಿಂಗಾರಗೊಂಡಿದ್ದ ಮಹಾರಥದಲ್ಲಿ ಅರ್ಜುನ, ದ್ರೌಪದಿದೇವಿ ಹಾಗೂ ಮುತ್ಯಾಲಮ್ಮ ದೇವಿಯನ್ನು ಹೊತ್ತ ರಥಗಳ ಜತೆಗೆ, ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ನಗರದ ಹಲವಾರು ದೇಗುಲ ಮತ್ತು ಭಕ್ತರಿಂದ ಪೂಜೆ ಸ್ವೀಕರಿಸುತ್ತಾ ನಗರದ ಹಲವಾರು ಬಡಾವಣೆಗಳು ಹಾಗೂ ರಸ್ತೆಗಳಲ್ಲಿ ಸಂಚರಿಸಿ ಮುಂಜಾನೆ ವೇಳೆಗೆ ದೇವಾಲಯಕ್ಕೆ ಹಿಂದಿರುಗಿ ಗರ್ಭಗುಡಿಯ ಶಕ್ತಿಪೀಠದಲ್ಲಿ ಸ್ಥಾಪನೆಯಾಯಿತು.
ಧಾರ್ಮಿಕ ವಿಧಿ-ವಿಧಾನ: ಮೊದಲು ಅರ್ಚಕ ಎನ್.ಮನು ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ವೀರಕುಮಾರರ ಜತೆ ಮಂಗಳ ವಾದ್ಯಗಳೊಂದಿಗೆ ಮೂಲಸ್ಥಾನ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು.
ಅಲ್ಲಿಂದ ಸಂಪಗಿ ಕೆರೆಯ ಶಕ್ತಿಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂತಿರುಗಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಶಕ್ತಿ ದೇವತೆ ದ್ರೌಪದಿ ಕರಗಕ್ಕೆ ಪೂಜಿಸಿ, ಹೂವಿನಿಂದ ಅಲಂಕಾರ ಮಾಡಲಾಯಿತು. ಮಧ್ಯರಾತ್ರಿ 12ರ ವೇಳೆಗೆ ಹಳದಿ ಸೀರೆ, ಬಳೆ ತೊಟ್ಟಿದ್ದ ಅರ್ಚಕ ಎನ್.ಮನು ವಿಶೇಷ ಪೂಜೆ ನೆರವೇರಿಸಿ, ದೇವಾಲಯ ಪ್ರದಕ್ಷಿಣೆ ಹಾಕಿ ನಗರ ಪ್ರದಕ್ಷಿಣೆಗೆ ಸಾಗಿದರು.
ವಾಹನ ಸಂಚಾರ ಸ್ಥಗಿತ: ಕರಗದ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ರಾತ್ರಿ 8 ಗಂಟೆಯಿಂದಲೇ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ ಸುತ್ತಲಿನ ರಸ್ತೆಗಳಲ್ಲಿ ಶನಿವಾರ ಮಧ್ಯರಾತ್ರಿ 12ರಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಭಕ್ತರಿಗೆ ಪ್ರಸಾದ ಹಂಚಿಕೆ: ಕರಗ ಮಹೋತ್ಸವ ವೀಕ್ಷಿಸಲು ದೂರದ ಊರಿಗಳಿಂದ ಬಂದಿದ್ದ ಭಕ್ತರು, ಪ್ರವಾಸಿಗರಿಗೆ ಧರ್ಮರಾಯ ದೇವಸ್ಥಾನದ ಸುತ್ತಮುತ್ತ ಹಾಗೂ ಕರಗ ಸಾಗುವ ಹಾದಿಯ ಇಕ್ಕೆಲಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೇಸರಿ ಬಾತ್, ಪುಳಿಯೊಗರೆ, ಪಲಾವು, ಕೋಸಂಬರಿ, ಪಾನಕ ಮಜ್ಜಿಗೆ ಹಂಚಿ ಭಕ್ತಿಭಾವ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.