ಪಕ್ಷಗಳಿಗೀಗ ಬಂಡಾಯ, ಪಕ್ಷಾಂತರ ಬಿಸಿ
Team Udayavani, Apr 28, 2018, 6:20 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ, ನಾಮಪತ್ರ ಸಲ್ಲಿಕೆ ಹಾಗೂ ವಾಪಸಾತಿ ಪ್ರಕ್ರಿಯೆ ನಂತರ ಬಂಡಾಯ ಹಾಗೂ ಪಕ್ಷಾಂತರ ಎಷ್ಟರ ಮಟ್ಟಿಗೆ ಹೊಡೆತ ಕೊಡಬಹುದು ಎಂಬ ಆತಂಕ ಎದುರಾಗಿದೆ.
ಮತ್ತೂಮ್ಮೆ ಅಧಿಕಾರಕ್ಕೆ ಬರುವ ಹಠ ತೊಟ್ಟಿರುವ ಕಾಂಗ್ರೆಸ್ ಹಾಗೂ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂದು ಮಿಷನ್-150 ಗುರಿ ಇಟ್ಟುಕೊಂಡಿರುವ ಬಿಜೆಪಿ ಎರಡೂ ಪಕ್ಷಕ್ಕೆ ಬಂಡಾಯ ಹಾಗೂ ಪಕ್ಷಾಂತರ ಕೆಲವು ಕ್ಷೇತ್ರಗಳಲ್ಲಿ ಮಗ್ಗುಲ ಮುಳ್ಳಾಗಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಬೇಸರಗೊಂಡ ಐವರು ಜೆಡಿಎಸ್‌ನಿಂದ, ಇಬ್ಬರು ಬಿಜೆಪಿಯಿಂದ, ಐದು ಮಂದಿ ಬಂಡಾಯಗಾರರಾಗಿ ಸ್ಪರ್ಧಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗದ ಒಬ್ಬರು ಕಾಂಗ್ರೆಸ್, ಆರು ಮಂದಿ ಜೆಡಿಎಸ್‌ನಿಂದ ಹಾಗೂ ಒಬ್ಬರು ಬಂಡಾಯಗಾರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
ಒಟ್ಟಾರೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಹನ್ನೊಂದು ಮಂದಿಗೆ ಜೆಡಿಎಸ್ ಟಿಕೆಟ್ ಸಿಕ್ಕಿರುವುದು ವಿಶೇಷ. ಕಾಂಗ್ರೆಸ್‌ನಲ್ಲೂ ಹತ್ತು ಮಂದಿ ವಲಸಿಗರಿಗೆ ಟಿಕೆಟ್ ಸಿಕ್ಕಿದೆ. ಬಿಜೆಪಿಯಲ್ಲಿ 8 ಮಂದಿ ವಲಸಿಗರಿಗೆ ಮಣೆ ಹಾಕಲಾಗಿದೆ.
ಜೆಡಿಎಸ್‌ಗೆ ಬಂಡಾಯದ ಚಿಂತೆ ಹೆಚ್ಚಾಗಿಲ್ಲವಾದರೂ ಪಕ್ಷ ಬಿಟ್ಟು ಹೋದ ಹತ್ತು ಶಾಸಕರ ಕ್ಷೇತ್ರಗಳು ಹಾಗೂ ಟಿಕೆಟ್ ಸಿಗದೆ ಬೇರೆ ಪಕ್ಷಕ್ಕೆ ಸೇರಿರುವ ಹಾಗೂ ಬಿ ಫಾರಂ ಗೊಂದಲದಿಂದ ಬಂಡಾಯ ಎದ್ದಿರುವ ಏಳು ಕ್ಷೇತ್ರಗಳಲ್ಲಿ ಶಕ್ತಿ ತುಂಬಿಸಿಕೊಳ್ಳುವುದು ಹರಸಾಹಸವಾಗಿದೆ. ಜತೆಗೆ ಜಮೀರ್ ಅಹಮದ್-ಇಕ್ಬಾಲ್‌ಅನ್ಸಾರಿ ಕಾಂಗ್ರೆಸ್ ಸೇರಿರುವುದರಿಂದ ಪಕ್ಷದಲ್ಲಿ ಮುಸ್ಲಿಂ ಮತ ತಂದುಕೊಡಬಲ್ಲ ನಾಯಕರ ಕೊರತೆ ಎದುರಿಸುತ್ತಿದೆ.
ಈಗಿನ ವಿಶ್ಲೇಷಣೆ ಹಾಗೂ ಲೆಕ್ಕಾಚಾರಗಳ ಪ್ರಕಾರವೇ ಟಿಕೆಟ್ ಹಂಚಿಕೆಯ ನಂತರದ ಬಂಡಾಯ ಹಾಗೂ ಪಕ್ಷಾಂತರದಿಂದ ಕಾಂಗ್ರೆಸ್‌ಗೆ 10, ಬಿಜೆಪಿಗೆ 10 ಸ್ಥಾನಗಳು ನಷ್ಟವಾಗಲಿದ್ದು, ಜೆಡಿಎಸ್‌ಗೆ ಮೂರು ಸ್ಥಾನ ನಷ್ಟವಾಗುವ ಸಾಧ್ಯತೆಯಿದೆ. ಆದರೆ, ಜೆಡಿಎಸ್‌ಗೆ ಬೇರೆ ಪಕ್ಷಗಳಿಂದ ಬಂದಿರುವ ವಲಸಿಗರಿಂದ 5 ಪ್ಲಸ್ ಆಗುವ ನಿರೀಕ್ಷೆಯಿದೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಲ್ಲ
ಬಿಜೆಪಿಯಲ್ಲಿ ಕೆಲವೆಡೆ ಸ್ವಲ್ಪ ಹೆಚ್ಚೇ ಎನಿಸುವಂತ ಬಂಡಾಯ ಕಾಣಿಸಿಕೊಂಡು ಟಿಕೆಟ್ ಪಡೆದವರನ್ನು ವಲಸಿಗರು, ಕೆಜೆಪಿ, ಬಿಎಸ್‌ಆರ್, ಬಿಜೆಪಿಯವರು ಎಂದು ಲೆಕ್ಕ ಹಾಕುವಂತಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ಗೆ ನಿಜಕ್ಕೂ 224 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದ್ದದ್ದಂತೂ ಸಾಬೀತಾಗಿದೆ. ಇನ್ನು,ಬಿಜೆಪಿಗೆ ಹಳೇ ಮೈಸೂರು ಭಾಗದಲ್ಲಿ ಶಕ್ತಿ ವೃದ್ಧಿಸಿಕೊಳ್ಳುವ ಕಾರ್ಯತಂತ್ರ ಫಲಿಸಿಲ್ಲ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಹೊರತುಪಡಿಸಿದರೆ ಸಮರ್ಥ ಕಲಿಗಳು ಗಾಳಕ್ಕೆ ಸಿಕ್ಕಿಲ್ಲ.
ಆದರೆ, ವಿಜಯಪುರ, ಬಾಗಲಕೋಟೆ , ಹುಬ್ಬಳ್ಳಿ-ಧಾರವಾಡ,ಗದಗ-ಹಾವೇರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿನ ಬಂಡಾಯ ಬಿಜೆಪಿಗೆ ಹೆಚ್ಚು ಹೊಡೆತ ಕೊಡುವ ಲಕ್ಷಣಗಳು ಕಂಡು ಬರುತ್ತಿವೆ. ಎಸ್.ಕೆ.ಬೆಳ್ಳುಬ್ಬಿ,ರೇವುನಾಯಕ್ ಬೆಳಮಗಿ, ವಿಠಲ್ ಕಟಕದೊಂಡ, ಪ್ರಕಾಶ್ ಖಂಡ್ರೆ, ರವಿಕಾಂತ್ ಪಾಟೀಲ್, ಸೋಮಣ್ಣ ಬೇವಿನಮರದ ನಿರ್ಗಮನ ಪಕ್ಷಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ, ಕರಾವಳಿ, ಮಲೆನಾಡು ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬೇರೆ ಪಕ್ಷಗಳಿಂದ ಬಂದಿರುವ ನಾಯಕರ ಮೇಲೆ ಹೆಚ್ಚು ಅವಲಂಬಿತವಾಗಬೇಕಿದೆ.
ಹಳೇ ಮೈಸೂರು, ಉ.ಕರ್ನಾಟಕ ಮೇಲೆ ಕಾಂಗ್ರೆಸ್‌ಗೆ ಆಶಾಭಾವ
ಕಾಂಗ್ರೆಸ್‌ನಲ್ಲಿ ಬಂಡಾಯ ಎಲ್ಲ ಜಿಲ್ಲೆಗಳಲ್ಲೂ ಒಳ ಹೊಡೆತ ಕೊಡುವ ಆತಂಕ ಪಕ್ಷದ ನಾಯಕರಿಗೆ ಎದುರಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷಾಂತರ-ಬಂಡಾಯದ ಜತೆಗೆ ಜೆಡಿಎಸ್‌ನಿಂದ ತೀವ್ರ ಸ್ಪರ್ಧೆ, ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಬಂಡಾಯ ಜತೆಗೆ ಬಿಜೆಪಿಯನ್ನು ಎದುರಿಸುವಂತಾಗಿದೆ. ಇಷ್ಟಾದರೂ ಕಾಂಗ್ರೆಸ್ ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕದ ಮೇಲೆಯೇ ಹೆಚ್ಚು ಆಶಾಭಾವನೆ ಇರಿಸಿಕೊಂಡಿದೆ.
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಮಾಲೀಕಯ್ಯ ಗುತ್ತೇದಾರ್ ಪಕ್ಷ ಬಿಟ್ಟಿರುವುದು, ಖಮರುಲ್ ಇಸ್ಲಾಂ ನಿಧನ, ಧರ್ಮಸಿಂಗ್ ಕುಟುಂಬದವರ ಅಸಮಾಧಾನ, ಟಿಕೆಟ್ ಹಂಚಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅತೃಪ್ತಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಬಾಗಲಕೋಟೆ, ವಿಜಯಪುರ,ಬೆಳಗಾವಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗಬಹುದೆಂಬ ಲೆಕ್ಕಾಚಾರವೂ ಇದೆ.
ವಲಸಿಗರಿಂದ ಜೆಡಿಎಸ್‌ಗೆ ಸಂಖ್ಯಾಬಲ ಹಿಗ್ಗುವ ನಿರೀಕ್ಷೆ
ಜೆಡಿಎಸ್‌ಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಂದವರಿಂದ ಸಂಖ್ಯಾಬಲ ಹಿಗ್ಗುವ ನಿರೀಕ್ಷೆ. ಟಿಕೆಟ್ ಹಂಚಿಕೆ ಪ್ರಕ್ರಿಯೆ ನಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪಕ್ಷ ಚೇತರಿಸಿಕೊಂಡಿದೆ.
ಜೆಡಿಎಸ್ ಸಹ ಉತ್ತರ ಕರ್ನಾಟಕ ಭಾಗದಿಂದಲೇ ಹೆಚ್ಚು ಸ್ಥಾನ ಪಡೆಯುವ ಆಸೆ ಇಟ್ಟುಕೊಂಡಿತ್ತಾದರೂ ಮಲ್ಲಿಕಾರ್ಜುನ ಖೂಬಾ, ಎ.ಎಸ್.ಪಾಟೀಲ್ ನಡಹಳ್ಳಿ, ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ಸೇರಿ ಕೆಲವರು ವಲಸೆ ಹೋಗಿದ್ದು ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತ ರೇವು ನಾಯಕ್ ಬೆಳಮಗಿ, ಎಸ್.ಕೆ.ಬೆಳ್ಳುಬ್ಬಿ, ಪ್ರಕಾಶ್ ಖಂಡ್ರೆ, ಮನೋಹರ್ ತಹಸೀಲ್ದಾರ್ ಸೇರ್ಪಡೆ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಬಲ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿಯಲ್ಲಿ ಟಿಕೆಟ್ ವಂಚಿತರಾಗಿ ಜೆಡಿಎಸ್-ಕಾಂಗ್ರೆಸ್-ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವವವರು:
ಶ್ರೀಧರ್ ರೆಡ್ಡಿ-ಶಾಂತಿನಗರ (ಜೆಡಿಎಸ್)ಹೇಮಚಂದ್ರ ಸಾಗರ್- ಚಿಕ್ಕಪೇಟೆ (ಜೆಡಿಎಸ್), ಮಂಗಳಾದೇವಿ-ಮುದ್ದೇಬಿಹಾಳ (ಜೆಡಿಎಸ್) ಸೋಮಣ್ಣ ಬೇವಿನಮರದ -ಶಿಗ್ಗಾಂವ್ (ಬಂಡಾಯ) ಶ್ರೀಕರ ಪ್ರಭು- ಮಂಗಳೂರು ದಕ್ಷಿಣ (ಬಂಡಾಯ)
ರಾಮಚಂದ್ರ- ರಾಜರಾಜೇಶ್ವರಿನಗರ (ಜೆಡಿಎಸ್)
ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಬಿಜೆಪಿಯ ಪಾಲಿಕೆ ಸದಸ್ಯರಾಗಿದ್ದವರು. ಬಿಜೆಪಿಯಿಂದ ರಾಜರಾಜೇಶ್ವರಿನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಅವರಿಗೆ ಟಿಕೆಟ್ ಕೊಟ್ಟಿದ್ದರಿಂದ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿದ್ದ ಇವರು ಪಕ್ಷ ಬಿಟ್ಟಿದ್ದರಿಂದ ಬಿಜೆಪಿಗೆ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗಬಹುದು.
ರೇವುನಾಯಕ್ ಬೆಳಮಗಿ- ಕಲಬುರಗಿ ಗ್ರಾಮಾಂತರ (ಜೆಡಿಎಸ್)
ಮಾಜಿ ಸಚಿವರೂ ಆಗಿದ್ದ ಬಿಜೆಪಿಯ ನಿಷ್ಠಾವಂತರಾಗಿದ್ದ ರೇವುನಾಯಕ್ ಬೆಳಮಗಿ ಅವರಿಗೆ ಟಿಕೆಟ್ ನೀಡದೆ ಬಸವರಾಜ್ ಮಟ್ಟಿಮೋಡ್ ಅವರಿಗೆ ಟಿಕೆಟ್ ಕೊಟ್ಟಿರುವುದರಿಂದ ಬೆಳಮಗಿ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಬಂಜಾರ ಸಮುದಾಯಕ್ಕೆ ಸೇರಿದ ಇವರಿಗೆ ಟಿಕೆಟ್ ತಪ್ಪಿರುವುದರಿಂದ ಈ ಕ್ಷೇತ್ರವಷ್ಟೇ ಅಲ್ಲದೆ ಕಲಬುರಗಿ, ಬೀದರ್ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಮೇಲೂ ಪರಿಣಾಮ ಬೀರಬಹುದು.
ಎಸ್.ಕೆ.ಬೆಳ್ಳುಬ್ಬಿ- ವಿಜಯಪುರ (ಜೆಡಿಎಸ್)
ಬಸವನಬಾಗೇವಾಡಿಯ ಮಾಜಿ ಶಾಸಕರಾಗಿದ್ದ ಬೆಳ್ಳುಬ್ಬಿ ಅವರಿಗೆ ಟಿಕೆಟ್ ನಿರಾಕರಿಸಿ ಸಂಗರಾಜ ದೇಸಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಇವರು ಜೆಡಿಎಸ್ ಸೇರಿ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಇವರು ಸಹ ಬಿಜೆಪಿಯ ನಿಷ್ಠಾವಂತರು ಎನಿಸಿದ್ದರಿಂದ ಪಕ್ಷದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಜಿಲ್ಲೆಯಲ್ಲಿ ಬೀರಬಹುದು.
ವಿಠಲ ಕಟಕದೊಂಡ -ನಾಗಠಾಣಾ (ಕಾಂಗ್ರೆಸ್)
ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿದ್ದ ವಿಠಲ ಕಟಕದೊಂಡ ಅವರಿಗೆ ಟಿಕೆಟ್ ನಿರಾಕರಿಸಿ ಸಚಿವ ಗೋವಿಂದ ಕಾರಜೋಳ ಪುತ್ರಡಾ.ಗೋಪಾಲ್ ಕಾರಜೋಳ ಅವರಿಗೆ ಟಿಕೆಟ್ ನೀಡಿರುವುದರಿಂದ ಕಟಕದೊಂಡ ಕಾಂಗ್ರೆಸ್ ಸೇರಿ ಅದೇ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಜಿಲ್ಲಾ ಅಧ್ಯಕ್ಷರೇ ಪಕ್ಷ ಬಿಟ್ಟಿದ್ದರಿಂದ ಬಿಜೆಪಿ ಮೇಲೆ ಪರಿಣಾಮ ಸಾಧ್ಯತೆಯಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪಿ ಜೆಡಿಎಸ್, ಬಿಜೆಪಿ ಹಾಗೂ ಬಂಡಾಯಗಾರರಾಗಿರುವವರು.:
ಲೋಕೇಶ್ ನಾಯಕ್- ಕೂಡ್ಲಿಗಿ (ಬಂಡಾಯ), ನಲ್ಲೂರಹಳ್ಳಿ ನಾಗೇಶ್- ಮಹದೇವಪುರ (ಬಂಡಾಯ), ಬಿ.ವಿ.ಬಲರಾಂ- ಪಾವಗಡ (ಬಿಜೆಪಿ)ಅಲ್ತಾಫ್ ಖಾನ್- ಚಾಮರಾಜಪೇಟೆ (ಜೆಡಿಎಸ್) ರುಕ್ಮಿಣಿ ಸಾಹುಕಾರ್- ರಾಣೆಬೆನ್ನೂರು (ಬಂಡಾಯ)ಪುಷ್ಪಾ ಲಕ್ಷ್ಮಣ್ -ಜಗಳೂರು (ಬಂಡಾಯ) ನಂಜಾಮರಿ- ತಿಪಟೂರು (ಬಂಡಾಯ), ನಾರಾಯಣ (ತಿಪಟೂರು) ಮನೋಹರ ತಹಸೀಲ್ದಾರ್ (ಜೆಡಿಎಸ್), ಪ್ರಸನ್ನಕುಮಾರ್- ಪುಲಿಕೇಶಿನಗರ- (ಜೆಡಿಎಸ್)
ಎನ್.ವೈ.ಗೋಪಾಲಕೃಷ್ಣ- ಕೂಡ್ಲಿಗಿ (ಬಿಜೆಪಿ)
ಬಳ್ಳಾರಿ ಗ್ರಾಮಾಂತರ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ನಾಯಕ ಸಮುದಾಯದ ಪ್ರಭಾವಿ ಮುಖಂಡರು. ಇವರಿಗೆ ಈ ಬಾರಿ ಟಿಕೆಟ್ ತಪ್ಪಿಸಿ ಕೂಡ್ಲಿಗಿಯ ಪಕ್ಷೇತರ ಶಾಸಕ ನಾಗೇಂದ್ರಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರಗೊಂಡ ಎನ್.ವೈ.ಗೋಪಾಲಕೃಷ್ಣ ಬಿಜೆಪಿ ಸೇರಿ ಕೂಡ್ಲಿಗಿ ಅಭ್ಯರ್ಥಿಯಾಗಿದ್ದಾರೆ. ಇವರು ಹಿಂದೆ ಮೊಳಕಾಳೂ¾ರು ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಹೀಗಾಗಿ, ಇವರಿಂದ ಮೊಳಕಾಳೂ¾ರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಬಹುದು.
ಪಿ.ರಮೇಶ್- ಸರ್.ಸಿ.ವಿ.ರಾಮನ್‌ನಗರ (ಜೆಡಿಎಸ್)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಪಿ.ರಮೇಶ್ ಕಳೆದ ಚುನಾವಣೆಯಲ್ಲಿ ಸರ್.ಸಿ.ವಿ.ರಾಮನ್‌ನಗರದಿಂದ ಸ್ಪರ್ಧಿಸಿ ಎಂಟು ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ, ಬದಲಿಗೆ ಮೇಯರ್ ಸಂಪತ್‌ರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರಗೊಂಡ ರಮೇಶ್ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದು ಕ್ಷೇತ್ರದಲ್ಲಿ ಸ್ವಂತ ವರ್ಚಸ್ಸು ಹೊಂದಿರುವುದರಿಂದ ಕಾಂಗ್ರೆಸ್ ಗೆಲುವಿಗೆ ತೊಡಕಾಗಬಹುದು.
ಶಶಿಕುಮಾರ್ -ಹೊಸದುರ್ಗ (ಜೆಡಿಎಸ್)
ಹೊಸದುರ್ಗ ಅಥವಾ ಮೊಳಕಾಳೂ¾ರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಶಿಕುಮಾರ್‌ಗೆ ಅಲ್ಲಿ ಟಿಕೆಟ್ ತಪ್ಪಿದ್ದರಿಂದ ಜೆಡಿಎಸ್ ಸೇರಿ ಹೊಸದುರ್ಗದ ಅಭ್ಯರ್ಥಿಯಾಗಿದ್ದಾರೆ. ಹಿಂದೆ ಚಿತ್ರದುರ್ಗ ಸಂಸದರಾಗಿಯೂ ಕೆಲಸ ಮಾಡಿದ್ದರಿಂದ ಇವರು ಕಾಂಗ್ರೆಸ್ ತೊರೆದಿರುವುದು ಆ ಭಾಗದ ಎರಡು ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸ್ವಲ್ಪ ಮಟ್ಟಿನ ನಷ್ಟವಾಗಬಹುದು.
ನಂಜಾಮರಿ – ತಿಪಟೂರು (ಬಂಡಾಯ)
ತಿಪಟೂರಿನ ಮಾಜಿ ಶಾಸಕರೂ ಆದ ನಂಜಾಮರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿ ಹಾಲಿ ಶಾಸಕ ಷಡಕ್ಷರಿಗೆ ಟಿಕೆಟ್ ತಪ್ಪಿತ್ತು. ಆದರೆ, ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಮತ್ತೆ ಷಡಕ್ಷರಿಗೆ ಟಿಕೆಟ್ ನೀಡಿದ್ದರಿಂದ ನಂಜಾಮತಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಜತೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ಎಂಬುವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಇಬ್ಬರು ಬಂಡಾಯ ಅಭ್ಯರ್ಥಿಗಳು ಇರುವುದರಿಂದ ಸಹಜವಾಗಿ ಕಾಂಗ್ರೆಸ್ ಮತಗಳ ವಿಭಜನೆ ಆತಂಕವಿದೆ.
ಜೆಡಿಎಸ್‌ನಲ್ಲಿ ಟಿಕೆಟ್ ಸಿಗದೆ ಬಂಡಾಯಗಾರರಾಗಿ ಸ್ಪರ್ಧಿಸಿರುವವರು:
ಗಂಜೂರು ಶ್ರೀನಿವಾಸರೆಡ್ಡಿ (ಬಂಡಾಯ), ಬಾಬಣ್ಣ- ಶಿವಮೊಗ್ಗ (ಬಂಡಾಯ), ಕುಣಿಗಲ್- ಜಯರಾಂ (ಬಂಡಾಯ) ಅಶ್ವಿನ್ ಜೊಸ್ಸಿ ಪೆರೇರಾ (ಬಂಡಾಯ)
ಸಂದೇಶ್ ಸ್ವಾಮಿ- ನರಸಿಂಹರಾಜ (ಬಿಜೆಪಿ)
ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಸಂದೇಶ್‌ಸ್ವಾಮಿಗೆ ನರಸಿಂಹರಾಜ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಲ್ಲಿ ಅಬ್ದುಲ್ ಅಜೀಜ್ ಅಬ್ದುಲ್ಲಾ ಅವರಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಮೊದಲಿನಿಂದಲೂ ಕ್ಷೇತ್ರದಲ್ಲಿ ನಿಕಟ ಸಂಪರ್ಕ ಇಟ್ಟುಕೊಂಡಿದ್ದರಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದರಿಂದ ಅನುಕಂಪ ಇದೆ. ಹೀಗಾಗಿ, ಜೆಡಿಎಸ್ ಅಭ್ಯರ್ಥಿಗೆ ಇವರಿಂದ ತೊಡಕಾಬಹುದು.
ರಾಜಣ್ಣ-ಶಿಡ್ಲಘಟ್ಟ (ಬಂಡಾಯ)
ಹಾಲಿ ಶಾಸಕರೂ ಆಗಿರುವ ರಾಜಣ್ಣ ಅವರಿಗೆ ಮೊದಲ ಪಟ್ಟಿಯಲ್ಲೇ ಜೆಡಿಎಸ್ ಟಿಕೆಟ್ ಘೋಷಿಸಿತ್ತು. ಬಿ ಫಾರಂ ಸಹ ನೀಡಲಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ರವಿಕುಮಾರ್ ಎಂಬುವರಿಗೆ ಕೊನೇ ಗಳಿಗೆಯಲ್ಲಿ ಸಿ ಫಾರಂ ನೀಡಲಾಯಿತು. ಇದರಿಂದ ಆಕ್ರೋಶಗೊಂಡ ರಾಜಣ್ಣ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಇದು ಕ್ಷೇತ್ರದಲ್ಲಿ ಗೊಂದಲಕ್ಕೂ ಕಾರಣವಾಗಿದ್ದು ಜೆಡಿಎಸ್ ಗೆಲುವಿನ ಮೇಲೆ ಪರಿಣಾಮ ಬೀರಬಹುದು.
ತುರುವೇಕರೆ- ರಮೇಶ್‌ಗೌಡ (ಬಂಡಾಯ)
ತುರುವೇಕೆರೆಯಲ್ಲಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದ್ದರಿಂದ ಮತ್ತೂಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್‌ಗೌಡ ಬಂಡಾಯ ಅಭ್ಯರ್ಥಿಯಾಗಿದ್ದು, ಇದರಿಂದ ಅಧಿಕೃತ ಅಭ್ಯರ್ಥಿ ಕೃಷ್ಣಪ್ಪ ಗೆಲುವಿಗೆ ತೊಡಕಾಬಹುದು.
ಪ್ರಮುಖ ಜಪಿಂಗ್ ಸ್ಟಾರ್
ಮಾಲೀಕಯ್ಯ ಗುತ್ತೇದಾರ್ (ಕಾಂಗ್ರೆಸ್‌ನಿಂದ ಬಿಜೆಪಿ), ಮಲ್ಲಿಕಾರ್ಜುನ ಕೂಬಾ(ಜೆಡಿಎಸ್‌ನಿಂದ ಬಿಜೆಪಿಗೆ),ಎ.ಎಸ್.ಪಾಟೀಲ್ ನಡಹಳ್ಳಿ,(ಕಾಂಗ್ರೆಸ್‌ನಿಂದ ಜೆಡಿಎಸ್ ಅಲ್ಲಿಂದ ಬಿಜೆಪಿ), ಗೂಳಿಹಟ್ಟಿ ಶೇಖರ್ (ಸಮಾಜವಾದಿ ಪಕ್ಷದಿಂದ ಬಿಜೆಪಿ), ಮಾನಪ್ಪ ವಜ್ಜಲ್ (ಜೆಡಿಎಸ್‌ನಿಂದ ಬಿಜೆಪಿ), ಶಿವರಾಜ್ ಪಾಟೀಲ್(ಜೆಡಿಎಸ್‌ನಿಂದ ಬಿಜೆಪಿ), ಸಿ.ಪಿ.ಯೋಗೇಶ್ವರ್(ಕಾಂಗ್ರೆಸ್‌ನಿಂದ ಬಿಜೆಪಿ), ಸಂದೇಶ್ ಸ್ವಾಮಿ (ಜೆಡಿಎಸ್‌ನಿಂದ ಬಿಜೆಪಿ), ಆನಂದ್‌ಸಿಂಗ್ (ಬಿಜೆಪಿಯಿಂದ ಕಾಂಗ್ರೆಸ್), ನಾಗೇಂದ್ರ (ಪಕ್ಷೇತರನಾಗಿ ಕಾಂಗ್ರೆಸ್), ಜಮೀರ್ ಅಹಮದ್, , ಇಕ್ಬಾಲ್ ಅನ್ಸಾರಿ, ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಮಾಗಡಿ ಬಾಲಕೃಷ್ಣ, ಭೀಮಾನಾಯ್ಕ, ಅಖಂಡ ಶ್ರೀನಿವಾಸಮೂರ್ತಿ (ಜೆಡಿಎಸ್‌ನಿಂದ ಕಾಂಗ್ರೆಸ್), ಅಶೋಕ್ ಖೇಣಿ (ಮಕ್ಕಳ ಪಕ್ಷದಿಂದ ಕಾಂಗ್ರೆಸ್), ಬಿಆರ್.ಪಾಟೀಲ್ (ಕೆಜೆಪಿಯಿಂದ ಕಾಂಗ್ರೆಸ್)
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.