ಖತರ್ನಾಕ್ ಮಹಿಳೆ ಸೆರೆ
Team Udayavani, Nov 22, 2018, 1:58 PM IST
ಬೆಂಗಳೂರು: ಬನಶಂಕರಿ ಭಾಗದ ಸುತ್ತಮುತ್ತಲ ದೇವಾಲಯಗಳಿಗೆ ಪೋಷಕರೊಂದಿಗೆ ಬರುತ್ತಿದ್ದ ಮಕ್ಕಳ ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್‌ನಾಕ್ ಮಹಿಳೆಯನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಮಾ(45) ಬಂಧಿತ ಆರೋಪಿ. ಆಕೆಯಿಂದ 197 ಗ್ರಾಂ. ತೂಕದ ಚಿನ್ನಾಭರಣ ವಶ ಮಾಡಲಾಗಿದೆ. ಒಂದು ವರ್ಷದಿಂದ ಮಕ್ಕಳ ಚಿನ್ನಾಭರಣ ಕಳವಿಗೆ ಇಳಿದಿದ್ದ ಉಮಾ ಬಂಧನದಿಂದ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಆಕೆಯನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2014ರಲ್ಲಿ ಹನುಮಂತನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇರೆಗೆ ಹೊರಗೆ ಬಂದಿರುವ ಆರೋಪಿ ಉಮಾ, ದೇವಾಲಯಗಳಲ್ಲಿ ಪುಟ್ಟಮಕ್ಕಳ ಬಳಿ ಚಿನ್ನಾಭರಣ ಕದಿಯುವ ವೃತ್ತಿಗೆ ಇಳಿದಿದ್ದಾಳೆ. ಬನಶಂಕರಿ ದೇಗುಲದಲ್ಲಿ ಹೆಚ್ಚು ಭಕ್ತರು ಸೇರುವ ದಿನಗಳಂದು ಭಕ್ತೆಯ ಸೋಗಿನಲ್ಲಿ ಬೆಳಗ್ಗೆ ಆಗಮಿಸುತ್ತಿದ್ದ ಆಕೆ, ಯಾರ ಮಕ್ಕಳ ಕತ್ತಿನಲ್ಲಿ ಚಿನ್ನದ ಸರ, ಕಾಲ್ಗಡಗ ಇದೆ ಎಂದು ಗುರುತು ಮಾಡಿಕೊಳ್ಳುತ್ತಿದ್ದಳು. ಬಳಿಕ ಅವರನ್ನೇ ಹಿಂಬಾಲಿಸಿ ಪೋಷಕರ ಕಣ್ತಪ್ಪಿಸಿ ಮಕ್ಕಳು ಧರಿಸುತ್ತಿದ್ದ ಆಭರಣಗಳನ್ನು ಕಳವು ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದರು.
ಆಸ್ಪತ್ರೆ ಮುಂಭಾಗ ಮಾರಾಟ: ದೇವಾಲಯಗಳ ಬಳಿ ಚಿನ್ನಾಭರಣ ಕಳವು ಮಾಡುತ್ತಿದ್ದ ಉಮಾ ಅವುಗಳ ಮಾರಾಟವನ್ನು ಸರ್ಕಾರಿ ಆಸ್ಪತ್ರೆ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಳು. ಈ ಹಿಂದೆ ಅಪಘಾತವಾದಾಗ ಪಡೆದುಕೊಂಡಿದ್ದ ವೈದ್ಯಕೀಯ ದಾಖಲೆಗಳನ್ನು ಸಾರ್ವಜನಿಕರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಲು ಹಣದ ಅವಶ್ಯವಿದೆ. ಹೀಗಾಗಿ ಚಿನ್ನಾಭರಣ ಪಡೆದುಕೊಂಡು ಹಣ ನೀಡಿ ಎಂದು ಗೋಗರೆದು ಮಾರಾಟ ಮಾಡುತ್ತಿದ್ದಳು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಪೊಲೀಸರೆದುರೇ 2 ಕಡಗ ಕಳವು: ಕೆಲದಿನಗಳ ಹಿಂದೆ ದೇವಾಲಯಕ್ಕೆ ಬಂದ ಮಗುವಿನ ಚಿನ್ನದ ಸರ ಕಳೆದು ಹೋಗಿದೆ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವಾಲಯದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯೊಬ್ಬರು ಪ್ರಸಾದ ಸ್ವೀಕರಿಸುವಾಗ ಆಕೆಯನ್ನು ಹಿಂಬಾಲಿಸಿದ್ದ ಉಮಾ, ಮಗುವನ್ನು ಮುದ್ದು ಮಾಡುವ ನೆಪದಲ್ಲಿ ಚಿನ್ನದ ಸರ ಬಿಚ್ಚಿಕೊಂಡು ಹೋಗಿರುವುದು ಕಂಡು ಬಂತು.
ಹೀಗಾಗಿ ಆಕೆಯನ್ನು ಬಂಧಿಸುವ ಸಲುವಾಗಿ ಮಹಿಳಾ ಸಿಬ್ಬಂದಿಯನ್ನು ಮಫ್ತಿಯಲ್ಲಿ ಕರ್ತವ್ಯಕ್ಕೆ ಯೋಜಿಸಲಾಗಿತ್ತು. ಅದರಂತೆ ಕಳೆದ ಶುಕ್ರವಾರ ಸಿಬ್ಬಂದಿ ಮಕ್ಕಳನ್ನು ಎತ್ತಿಕೊಂಡಿದ್ದ ಪೋಷಕರ ಮುಂದೆಯೇ ಮಫ್ತಿಯಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಭಕ್ತೆಯ ಸೋಗಿನಲ್ಲಿ ಆಗಮಿಸಿದ ಉಮಾ ಮಗುವಿನಿಂದ ಕಾಲಿನ ಕಡಗ ಬಿಚ್ಚಿಕೊಂಡಿದ್ದನ್ನು ಸಿಬ್ಬಂದಿ ನೋಡಿ ಆಕೆಯ ಬೆನ್ನು ಬಿದ್ದರು. ಜತೆಗೆ, ಮತ್ತೂಂದು ಮಗುವಿನ ಕತ್ತಿನ ಸರವನ್ನು ಉಮಾ ಬಿಚ್ಚಿಕೊಳ್ಳುತ್ತಲೇ ಮಾಲಿನ ಸಮೇತ ಆಕೆಯನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ದಾಂಪತ್ಯ ಕಲಹಕ್ಕೆ ಕಾರಣ
ಆರೋಪಿ ಉಮಾ ಎಸಗಿದ ಸರಕಳವು ಪ್ರಕರಣದಿಂದ ದಂಪತಿ ನಡುವೆ ಜಗಳ ನಡೆದು ವೈ ಮನಸ್ಸು ಬಂದಿರುವ ಪ್ರಸಂಗವೂ ನಡೆದಿದೆ. ದೇವಾಲಯಕ್ಕೆ ಆಗಮಿಸಿದ್ದ ಮಗುವಿನ ಸರಕಳೆದು ಹೋಗಿದ್ದರಿಂದ ಆತಂತಕ್ಕೀಡಾದ ಮಹಿಳೆ ಮನೆಗೆ ತೆರಳಿದಾಗ ಗಂಡ ಪ್ರಶ್ನಿಸಿದ್ದಾನೆ. ಈ ವೇಳೆ, ಆಕೆ ದೇವಾಲಯದ ಬಳಿ ಮಗುವಿನ ಸರ ಕಳುವಾಗಿದೆ ಎಂದು ತಿಳಿಸಿದ್ದಾಳೆ. ಇದನ್ನು ನಂಬದ ಆತ, ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ” ದೇವಾಲಯಗಳಲ್ಲಿ ಕಳ್ಳತನ ನಡೆಯಲು ಸಾಧ್ಯವೇ? ಅಲ್ಲಿಗೆ ಕಳ್ಳರು ಬರಲು ಸಾಧ್ಯವೇ? ನೀನೆ ಸರ ಏನೋ ಮಾಡಿದ್ದೀಯಾ’ಎಂದು ಬೈದಿದ್ದಾನೆ. ಈ ವಿಚಾರಕ್ಕೆ ದಂಪತಿ ನಡುವೆ ಜಗಳದಿಂದ ವಿರಸ ಉಂಟಾಗಿದೆ. ಕಡೆಗೆ ಮಹಿಳೆ ಪೊಲೀಸರ ಮೊರೆಹೋಗಿದ್ದಳು. ಹೀಗಾಗಿ, ದಂಪತಿಯನ್ನು ಕರೆಸಿ ವಿಷಯ ತಿಳಿಸಿದಾಗ ಸುಮ್ಮನಾದರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.