ಕೆಪಿಎಸ್‌ಸಿ ನೇರ ನೇಮಕಾತಿ: ಅಪಸ್ವರ
Team Udayavani, Nov 17, 2018, 6:10 AM IST
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಡಿ ನೇರ ನೇಮಕಾತಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾದ ಹುದ್ದೆಗಳಲ್ಲಿ ಮೆರಿಟ್ ಆಧಾರದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ- 1, 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವ ಸಂಬಂಧ ರಾಜ್ಯ ಸರ್ಕಾರದ ನಡೆ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರದ ಈ ನಿಲುವಿನಿಂದ ರಾಜ್ಯದಲ್ಲಿ ಅಹಿಂದ ವರ್ಗದ ಅಭ್ಯರ್ಥಿಗಳಿಗೆ ಭಾರೀ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಹಿಂದ ವರ್ಗದ ಅಭ್ಯರ್ಥಿಗಳ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನದ ಅನುಚ್ಛೇದ 16 (4)ರಡಿ ಸಾಮಾಜಿಕ ಮೀಸಲಾತಿ (ನೇರ ಮೀಸಲಾತಿ) ಕಲ್ಪಿಸಲಾಗಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ (ಶೇ.15), ಪರಿಶಿಷ್ಟ ಪಂಗಡ (ಶೇ. 3), ಪ್ರವರ್ಗ 1 (ಶೇ. 4), ಪ್ರವರ್ಗ 2ಎ (ಶೇ.15), ಪ್ರವರ್ಗ 2ಬಿ (ಶೇ.4), ಪ್ರವರ್ಗ 3ಎ (ಶೇ.4) ಹಾಗೂ ಪ್ರವರ್ಗ 3 ಬಿ (ಶೇ.5)ಕ್ಕೆ ಮೀಸಲಾತಿ ಕಲ್ಪಿಸಲಾಗಿದೆ.
ಯಾವುದೇ ಒಂದು ನೇಮಕಾತಿ ಪ್ರಾಧಿಕಾರವು ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವಾಗ ನೇರ ಮೀಸಲಾತಿ ನಿಗದಿಪಡಿಸುವುದು ಸಾಂವಿಧಾನಿಕ ಕ್ರಮವಾಗಿರುತ್ತದೆ. ವಾಸ್ತವವಾಗಿ ಶೇ.50ರಷ್ಟು ಹುದ್ದೆಗಳನ್ನು ಸಾಮಾನ್ಯ ವರ್ಗದ ಮೂಲಕ ಹಾಗೂ ಶೇ.50ರಷ್ಟು ಹುದ್ದೆಗಳನ್ನು ಮೀಸಲಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಜತೆಗೆ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶ ಕೂಡ ಪಾಲನೆಯಾಗುತ್ತಿದೆ.
ಜತೆಗೆ ಶೇ.50ರಷ್ಟು ಸಾಮಾನ್ಯ ವರ್ಗದಿಂದ ಭರ್ತಿ ಮಾಡುವ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ಯಾವುದೇ ಜಾತಿ, ಧರ್ಮದ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಭರ್ತಿ ಮಾಡಬಹುದಾಗಿದೆ. ಉಳಿದ ಶೇ.50ರಷ್ಟು ಹುದ್ದೆಗಳನ್ನು ಯಾವ ಜಾತಿ, ಪ್ರವರ್ಗ ಅಥವಾ ಧರ್ಮಕ್ಕೆ ಮೀಸಲಾಗಿದೆಯೇ ಅವರಿಂದಲೇ ಭರ್ತಿಯಾಗಬೇಕು. ಇದು ಸುಪ್ರೀಂ ಕೋರ್ಟ್ 2007ರ ಜು.18ರಂದು ನೀಡಿರುವ ತೀರ್ಪಿಗೆ ಪೂರಕವಾಗಿದೆ.
ಈ ನಡುವೆ ಕರ್ನಾಟಕ ಲೋಕಸೇವಾ ಆಯೋಗದ ರಿಟ್ ಅರ್ಜಿ ಹಾಗೂ ಇತರೆ ಪ್ರಕರಣಗಳಲ್ಲಿ ಹೈಕೋರ್ಟ್ 2016ರ ಜೂ.21ರಂದು ಆದೇಶ ನೀಡಿದೆ. ಅದರಂತೆ 1998, 1999 ಹಾಗೂ 2004ರಲ್ಲಿ ಗೆಜೆಟೆಡ್ ಪ್ರೊಬೆಷನರಿ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಲಿಖೀತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿರುವುದಕ್ಕೆ ಸಂಬಂಧಪಟ್ಟಂತೆ ಕೈಗೊಂಡಿರುವ ಕ್ರಮವು ಸಂವಿಧಾನಬಾಹಿರ ಹಾಗೂ ಸರ್ಕಾರದ ನಿಯಮ ಮತ್ತು ಆದೇಶಗಳಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು.
ಈ ಆದೇಶದ ಅನ್ವಯ ಸಾಮಾನ್ಯ ವರ್ಗದವರಿಗೆ ಮೀಸಲಾದ ಹುದ್ದೆಗಳಿಗೆ ಕೇವಲ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನೇ ಒಳಗೊಂಡ ಮೆರಿಟ್ ಪಟ್ಟಿ ಹಾಗೂ ಮೀಸಲಾತಿ ಕೋರಿದ ಅಭ್ಯರ್ಥಿಗಳ ಪ್ರತ್ಯೇಕ ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಧಿಸೂಚಿಸಿದ ಹುದ್ದೆಗಳಿಗೆ ಅನುಗುಣವಾಗಿ ಅರ್ಹತಾ ಪಟ್ಟಿಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಂಡರೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬ ಆತಂಕ ಕೇಳಿಬಂದಿದೆ.
2016ರಲ್ಲಿ ಹೈಕೋರ್ಟ್ ನೀಡಿರುವ ಆದೇಶವು ಆ ನಿರ್ದಿಷ್ಟ ಪ್ರಕರಣಗಳಿಗೆ ಅನ್ವಯಿಸುತ್ತವೆಯೇ ಹೊರತು ಅದನ್ನೇ ಪೂರ್ವ ನಿದರ್ಶನವನ್ನಾಗಿಸಿ ಇತರೆ ನೇರ ನೇಮಕಾತಿಗೆ ಅನುಸರಿಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿಲ್ಲ. ಹಲವು ಪ್ರಕರಣಗಳಲ್ಲಿ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆಯೇ ಹೊರತು ಮೀಸಲಾತಿ ಬಯಸಿದ ಅಭ್ಯರ್ಥಿಗಳು ನೇರ ನೇಮಕಾತಿಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗಕ್ಕೆ ಕಾಯ್ದಿರಿಸಿದ ಹುದ್ದೆಗಳಿಗೆ ಪರಿಗಣಿಸಬಾರದು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಯಾವುದೇ ನೇರ ನೇಮಕಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಹುದ್ದೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ. ಹಾಗಾಗಿ ಹಲವು ನೇಮಕಾತಿಯಲ್ಲಿ ಹೆಚ್ಚಿನ ಮೆರಿಟ್ ಅಂಕ ಗಳಿಸಿದ ಮೀಸಲಾತಿ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದ ಹುದ್ದೆಗಳಿಗೆ ಪರಿಗಣಿಸಿರುವುದು ಕಂಡುಬಂದಿದೆ.
ವಿವಾದದ ಕೇಂದ್ರಬಿಂದು
ಈ ನಡುವೆ ಕಳೆದ ನ.3ರಂದು ಸರ್ಕಾರವು ಕೆಪಿಎಸ್‌ಸಿಗೆ ನೀಡಿರುವ ನಿರ್ದೇಶನವು ವಿವಾದಕ್ಕೆ ಕಾರಣವಾಗಿದೆ. 2016ರಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿಯಲ್ಲಿ ಅನುಸರಿಸಬೇಕೆ ಎಂಬ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು, ಹೈಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅದರಂತೆ 2015ರ ಗೆಜೆಟೆಡ್ ಪ್ರೊಬೆಷನರ್ ಹುದ್ದೆ ನೇಮಕ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ ಕಾಯ್ದಿರಿಸಿದ ಹುದ್ದೆಗಳಲ್ಲಿ ಮೆರಿಟ್ ಆಧಾರದ ಮೇಲೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಪರಿಗಣಿಸದಿರುವ ಸಾಧ್ಯತೆ ಇರುವುದು ವಿವಾದಕ್ಕೆ ಕಾರಣವಾಗಿದೆ.
ಈ ಎಲ್ಲ ಅಂಶಗಳ ಬಗ್ಗೆ ನಾಲ್ಕು ಪುಟಗಳ ಪತ್ರವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಬರೆದಿದ್ದಾರೆ. ರಾಜ್ಯದಲ್ಲಿ ಸದ್ಯ ನೇರ ಮೀಸಲಾತಿ ಪಡೆಯಲು ಅರ್ಹವಿರುವ ಸಮುದಾಯದವರ ಸಂಖ್ಯೆ ಶೇ.93ರಷ್ಟಿದ್ದು, ಸದರಿ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಿದರೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಲಿದೆ. ಹಾಗಾಗಿ ಕೂಡಲೇ ಮಧ್ಯ ಪ್ರವೇಶಿಸಿ ಈ ಸಮುದಾಯದವರ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಕೋರ್ಟ್ ಹೇಳಿದ್ದೇನು?
ಕೆಪಿಎಸ್‌ಸಿ 1998, 1999 ಹಾಗೂ 2004ರಲ್ಲಿ ನಡೆಸಿದ ನೇಮಕಾತಿಗೆ ಸಂಬಂಧಪಟ್ಟಂತೆ ಹೈಕೋರ್ಟ್ 2016ರಲ್ಲಿ ಈ ರೀತಿಯ ಆದೇಶ ನೀಡಿತ್ತು. ನೇರ ನೇಮಕಾತಿಗೆ ನಡೆಯುವ ಪೂರ್ವಭಾವಿ ಪರೀಕ್ಷೆಗೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದರಲ್ಲಿ ಶೇ.50ರಷ್ಟು ಸಾಮಾನ್ಯ ವರ್ಗಕ್ಕೆ ಕಾಯ್ದಿರಿಸಿದ ಪಾಲಿನಲ್ಲಿ ಮೆರಿಟ್ ಆಧರಿಸಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಪರಿಗಣಿಸುವಂತಿಲ್ಲ. ಹಾಗೆಯೇ ಮುಖ್ಯ ಪರೀಕ್ಷೆ 1:5ರ ಅನುಪಾತದಲ್ಲೂ ಇದೇ ಕ್ರಮ ಅನುಸರಿಸಬೇಕು ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್ ಆಕರ್ಷಣೆ!
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.