ಕೆಆರ್‌ಎಸ್, ಕಬಿನಿ, ಹೇಮಾವತಿ ಭರ್ತಿ
Team Udayavani, Jul 15, 2018, 6:00 AM IST
ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗು ಭಾಗದಲ್ಲಿ ಮುಂಗಾರು ಆರ್ಭಟಿಸುತ್ತಿದ್ದು, ಈ ಭಾಗದ
ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಿದೆ.
ಕೇರಳದ ವೈನಾಡು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿವೆ. ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಬಳಿ ಶನಿವಾರ ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿಹೋಗಿದ್ದು, ಮತ್ತೂಬ್ಬ ಯುವಕ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾನೆ.
ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿದ್ದು, ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತಗೊಂಡಿವೆ.
ಕೆಆರ್‌ಎಸ್ ಭರ್ತಿ: ಕೊಡಗಿನಲ್ಲಿ ಭಾರೀ ಮಳೆಯ ಪರಿಣಾಮ ಮೂರು ವರ್ಷಗಳ ಬಳಿಕ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿದೆ. ಕಳೆದ ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜುಲೈ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ವಿಭಾಗದ ಮುಖ್ಯ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ನೇತೃತ್ವದಲ್ಲಿ ಅಣೆಕಟ್ಟೆಗೆ ಶನಿವಾರ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ, 11 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.
ಕೇರಳದ ವೈನಾಡಿನಲ್ಲಿ ಉತ್ತಮ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಕೂಡ ಭರ್ತಿಯಾಗಿದೆ. ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಚಾಮರಾಜನಗರ ಜಿಲ್ಲೆಯ ಪ್ರಸಿದಟಛಿ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದೆ.
ಈ ಮಧ್ಯೆ, ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಕೂಡ ತುಂಬಿದ್ದು, 6 ಕ್ರಸ್ಟ್
ಗೇಟ್‌ಗಳ ಮೂಲಕ 14 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯ ನಿರ್ಮಾಣವಾದ 36 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ಎರಡನೇ ವಾರದಲ್ಲಿಯೇ ಜಲಾಶಯ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಕ್ರಸ್ಟ್‌ಗೇಟ್‌ಗಳಿಗೆ ಪೂಜೆ ಸಲ್ಲಿಸಿದ ಬಳಿಕ ನದಿಗೆ 15,000 ಕ್ಯೂಸೆಕ್ ನೀರು ಬಿಡಲಾಯಿತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ಮತ್ತೆ ಪ್ರವಾಹಉಂಟಾಗಿದ್ದು, ಶೃಂಗೇರಿಯ ಬೈಪಾಸ್ ರಸ್ತೆಗೆ ನೀರು ನುಗ್ಗಿದೆ. ಉತ್ತರ ಕನ್ನಡ, ಕೊಡಗು, ಕರಾವಳಿಯಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಂದಿ ಹಳೆಯಮ್ಮ ಸಹ ಪರಿವಾರ ದೈವಸ್ಥಾನದ ಹೊರ ಭಾಗದ ತಗಡು ಮಾಡಿನ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು, ಅಪಾರ ನಷ್ಟ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಕೊçಲ ಹಾಗೂ ರಾಮಕುಂಜ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಶನಿವಾರ ಬೀಸಿದ ಭಾರೀ ಸುಂಟರ ಗಾಳಿಯಿಂದಾಗಿ ಅಪಾರ ಪ್ರಮಾಣದ ಕೃಷಿ ಪ್ರದೇಶ ನಾಶವಾಗಿದೆ.
ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ: ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಬಳಿ ಶನಿವಾರ ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. 20 ಸಾವಿರ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿಯಲ್ಲಿ ಪ್ರವಾಹ ಬಂದಿದೆ. ಇದೇ ವೇಳೆ, ನದಿ ತೀರದಲ್ಲಿದ್ದ ಇಬ್ಬರು ಯುವಕರು
ನೀರಿಗಿಳಿದು ಆಟವಾಡುವಾಗ ನೀರಿನ ರಭಸಕ್ಕೆ ಒಬ್ಬ ಯುವಕ ಕೊಚ್ಚಿ ಹೋಗಿದ್ದಾನೆ. ಮತ್ತೂಬ್ಬ ಯುವಕ ಮಹದೇವ್ ನದಿ ನೀರಲ್ಲಿ ಕೊಚ್ಚಿ ಬಂದು ಬಂಗಾರ ದೊಡ್ಡಿ ನಾಲಾ ಬಳಿಯ ಗೇಟ್‌ನ ಗೂಳಿ ತಿಟ್ಟಿನ ಸಮೀಪದಲ್ಲಿ ನದಿ ಮಧ್ಯೆ ಸಿಲುಕಿದ್ದು, ಅಲ್ಲೇ ಬೆಳೆದಿದ್ದ ತಾಳೆ ಬುಡವನ್ನು ಹಿಡಿದು ರಕ್ಷಣೆಗೆ ಕೂಗಿಕೊಳ್ಳುತ್ತಿದ್ದ. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ನದಿಗೆ ಇಳಿಯಲಾಗದೆ ಮೈಸೂರಿನಿಂದ ಯಂತ್ರದ ಬೋಟ್ ತರಲು ಅಧಿಕಾರಿಗಳಿಗೆ ತಿಳಿಸಿ ಆತನ ರಕ್ಷಣೆ ಮಾಡಿದ್ದಾರೆ.
ಮೇಲ್ಛಾವಣಿ ಕುಸಿದು ವಿದ್ಯಾರ್ಥಿ ಸಾವು: ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಮೇಲ್ಛಾವಣಿ ಕುಸಿದು ಮಹೇಶ(12) ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಒಳ ಹರಿವು ಭಾರೀ ಹೆಚ್ಚಳ: ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.ಇದೇ ಮೊದಲ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ 76 ಸಾವಿರ ಕ್ಯೂಸೆಕ್‌ಗೂ ಹೆಚ್ಚಾಗಿದೆ.
ಜುಲೈನಲ್ಲಿ ಕೆಆರ್‌ಎಸ್ 5 ಬಾರಿ ಭರ್ತಿ 50 ವರ್ಷಗಳ ಇತಿಹಾಸದಲ್ಲಿ 5ನೇ ಬಾರಿಗೆ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. 1980, 2006, 2007 ಹಾಗೂ 2009ರಲ್ಲಿ ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗಿತ್ತು. ಜಲಾಶಯದಿಂದ ನೀರು ಬಿಡುತ್ತಿರುವ ಕಾರಣ, ನದಿಯ ಎರಡೂ ದಂಡೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಪ್ರವಾಸಿ ತಾಣ ಬಲಮುರಿ ಫಾಲ್ಸ್ ಬಳಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
20ಕ್ಕೆ ಸಿಎಂ ಬಾಗಿನ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜು.20ರಂದು ಕೃಷ್ಣರಾಜ ಸಾಗರಕ್ಕೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ. ಜು.19ರಂದು ರಾತ್ರಿ ಮಡಿಕೇರಿಯಲ್ಲೇ ವಾಸ್ತವ್ಯ ಹೂಡುವ ಕುಮಾರಸ್ವಾಮಿ, ಬೆಳಗ್ಗೆ 7 ಗಂಟೆಗೆ ಕಾವೇರಿ ಉಗಮ ಸ್ಥಳ ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ,ಹೆಲಿಕ್ಯಾಪ್ಟರ್ ಮೂಲಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವರು. ನಂತರ, ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಸಲ್ಲಿಸುವರು. ಬಳಿಕ ಕೃಷ್ಣರಾಜ ಸಾಗರ ಜಲಾಶ ಯಕ್ಕೆ ಆಗಮಿಸಿ ಮೈದುಂಬಿ ಹರಿಯುತ್ತಿರುವ ಕಾವೇರಿ ಮಾತೆಗೆ ಬಾಗೀನ ಸಲ್ಲಿಸಲಿದ್ದಾರೆ.
ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಾರಿಗೆ
ಸಚಿವ ಡಿ.ಸಿ.ತಮ್ಮಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.
ಮಹೇಶ್, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಸೇತುವೆಗಳು ಜಲಾವೃತ
ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಶನಿವಾರ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 74,946 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳ ಮೂಲಕ 23,936 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 98,882 ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 87,100 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ ಎಂದು ತಹಶೀಲ್ದಾರ ಸಿ.ಎಸ್.ಕುಲಕರ್ಣಿ ಉದಯವಾಣಿಗೆ ಶನಿವಾರ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಕೃಷ್ಣಾ ನದಿಯ ಕಲ್ಲೋಳ-ಯಡೂರ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇದಗಂಗಾ ನದಿಯ ಬೋಜವಾಡಿ-ಕುನ್ನೂರ,ಜತ್ರಾಟ-ಭೀವಸಿ, ಸಿದ್ನಾಳ-ಅಕ್ಕೋಳ ಈ ಸೇತುವೆಗಳ ಮೇಲೆ ನಾಲ್ಕೈದು ಅಡಿಯಷ್ಟು ನೀರು ನಿಂತಿದೆ.
ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ವಾಯವ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ದಿನಗಳು ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಪ್ರಭಾವ ಹೆಚ್ಚಿರಲಿದ್ದು, ಆ ಭಾಗದಲ್ಲಿ ಭಾರೀ ಮಳೆ ಆಗಲಿದೆ.
ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಆಯ್ದ ಭಾಗಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದರು.
ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯ ನಿರೀಕ್ಷೆ
ಇದೆ. ಉಳಿದೆಡೆ ಚದುರಿದ ಮಳೆ ಆಗಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.