ವಿದ್ಯುತ್ ಶಾಕ್ ನಂತರ ಬಸ್ ದರ ಏರಿಕೆ ಬಿಸಿ
Team Udayavani, May 29, 2018, 6:00 AM IST
ಬೆಂಗಳೂರು: ವಿದ್ಯುತ್ ದರ ಏರಿಕೆ “ಶಾಕ್’ ಬೆನ್ನಲ್ಲೇ ಸಾರ್ವಜನಿಕರಿಗೆ ಶೀಘ್ರ ಮತ್ತೂಂದು ದರ ಏರಿಕೆ “ಬಿಸಿ’ ತಟ್ಟಲಿದೆ!
ನಿರಂತರ ಡೀಸೆಲ್ ಬೆಲೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಬಸ್ ಪ್ರಯಾಣ ದರ ಏರಿಕೆಗೆ ನಿರ್ಧರಿಸಿದ್ದು, ಕನಿಷ್ಠ ಶೇ.10ರಿಂದ ಗರಿಷ್ಠ ಶೇ. 15ರವರೆಗೆ ದರ ಏರಿಕೆಗೆ ಮುಂದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.
ಕಳೆದ ಕೇವಲ ಮೂರು ತಿಂಗಳ ಅಂತರದಲ್ಲಿ ಏಳು ಬಾರಿ ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಅಂದಾಜು ಹತ್ತು ರೂ.ಗಳಷ್ಟು ಏರಿಕೆಯಾಗಿದೆ. ಇದರಿಂದ ತಿಂಗಳಿಗೆ ನಿಗಮಕ್ಕೆ 20 ಕೋಟಿ ರೂ.ಹೊರೆ ಆಗುತ್ತಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ, ಅನಿವಾರ್ಯವಾಗಿ ನೂತನ ಸರ್ಕಾರದ ಮುಂದೆ ದರ ಏರಿಕೆ ಪ್ರಸ್ತಾವನೆ ಇಡಲು ತೀರ್ಮಾನಿಸಿದೆ.ಶೇ.10ರಿಂದ 15ರಷ್ಟು ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ದರ ಏರಿಕೆ; ಬಿಸಿ ತುಪ್ಪ: ಆದರೆ, ಹೊಸ ಸರ್ಕಾರಕ್ಕೆ ಈ ದರ ಏರಿಕೆ ಬಿಸಿ ತುಪ್ಪ ಆಗಲಿದೆ. ಈಗಾಗಲೇ ಪ್ರತಿ
ವರ್ಷದಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬೆನ್ನಲ್ಲೇ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಬರುತ್ತಿದೆ. ಹಾಗೊಂದು ವೇಳೆ ಇದಕ್ಕೆ ಅನುಮೋದನೆ ನೀಡಿದರೆ, ತೀವ್ರ ವಿರೋಧ ವ್ಯಕ್ತವಾಗಲಿದೆ ಎಂಬ ಆತಂಕ ಕಾಡುತ್ತಿದೆ.
ಡೀಸೆಲ್ ಬೆಲೆ ಹೆಚ್ಚಳ ಹಾಗೂ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಪ್ರಯಾಣ ದರ ಹೆಚ್ಚಿಸಿಲ್ಲ.
ಇದರಿಂದ ಕೆಎಸ್‌ಆರ್‌ಟಿಸಿಗೆ ಹೊರೆ ಆಗುತ್ತಿದ್ದು, ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗುತ್ತಿದೆ. ಆದರೆ, ಪರಿಷ್ಕರಣೆ ಪ್ರಮಾಣ ಎಷ್ಟು ಎಂಬುದನ್ನು ಈಗಲೇ ಹೇಳುವುದು ಕಷ್ಟ. ಈ ಬಗ್ಗೆ ಇನ್ನೂ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಧಾನ ವ್ಯವಸ್ಥಾಪಕ (ಸಂಚಾರ) ವಿಶ್ವನಾಥ್ ತಿಳಿಸಿದ್ದಾರೆ.
ನಿಗಮದ ನಿತ್ಯದ ಆದಾಯ 8 ಕೋಟಿ ರೂ. ಆಗಿದ್ದು, ಇದರಲ್ಲಿ ಶೇ. 48ರಷ್ಟು ಅಂದರೆ 3ರಿಂದ 4 ಕೋಟಿ ರೂ.ಡೀಸೆಲ್ ಖರೀದಿಗೇ ಹೋಗುತ್ತದೆ.
ಡೀಸೆಲ್ ಬೆಲೆ ಕೇವಲ ಒಂದು ರೂಪಾಯಿ ಜಾಸ್ತಿಯಾದರೂ ತಿಂಗಳಿಗೆ 2 ಕೋಟಿ ರೂ.ಹೊರೆ ಆಗುತ್ತದೆ. ಹೀಗಿರುವಾಗ ಮೂರು ತಿಂಗಳಲ್ಲೇ 10 ರೂ.ಹೆಚ್ಚಾಗಿರುವುದರಿಂದ ನಿರ್ವಹಣೆ ದೊಡ್ಡ ಸಮಸ್ಯೆ ಆಗುತ್ತಿದೆ. ಇದರಿಂದ ಹೊರಬರಲು ದರ ಏರಿಕೆ ಅನಿವಾರ್ಯ. ಶೇ. 10ರಿಂದ 15ರಷ್ಟು ಹೆಚ್ಚಿಸಿದರೆ, ನಿತ್ಯ 1ರಿಂದ 1.5 ಕೋಟಿ ರೂ.ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ. ತಿಂಗಳಿಗೆ 40ರಿಂದ 45 ಕೋಟಿ ರೂ.ಆಗುತ್ತದೆ ಎಂದು ಉನ್ನತ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
2017ರ ಏಪ್ರಿಲ್ 1ರಿಂದ ಮಾರ್ಚ್ ಅಂತ್ಯದವರೆಗೆ ಡೀಸೆಲ್ ದರದಲ್ಲಿ ಕೇವಲ 2 ರೂ.ಹೆಚ್ಚಳ ಕಂಡು ಬಂದಿದೆ. ಆದರೆ, ಏಪ್ರಿಲ್‌ನಿಂದ ಈವರೆಗೆ 10 ರೂ.ವ್ಯತ್ಯಾಸ ಆಗಿದೆ!
ನಿಗಮದ ಪ್ರಕಾರ 2017ರ ಏಪ್ರಿಲ್ 1ರಂದು ಡೀಸೆಲ್ ಬೆಲೆ ಲೀ.ಗೆ 56.48 ರೂ.ಇತ್ತು. 2018ರ ಮಾರ್ಚ್ 16ಕ್ಕೆ ಇದು 58.30 ರೂ. ಆಗಿತ್ತು. ಆದರೆ, ಪ್ರಸ್ತುತ 68 ರೂ. ತಲುಪಿದೆ. ಈ ಮಧ್ಯೆ, ಸಿಬ್ಬಂದಿ ಭತ್ಯೆ ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಣೆಗೊಳ್ಳುವುದರಿಂದ 3ರಿಂದ 4 ಕೋಟಿ ರೂ. ಹೊರೆ ಆಗುತ್ತಿದೆ ಎಂದು ಅಧಿಕಾರಿಗಳು
ಹೇಳುತ್ತಾರೆ.
2017ರ ಏ. 1ರಿಂದ ಈವರೆಗೆ 34 ಬಾರಿ ಡೀಸೆಲ್ ಬೆಲೆ ಪರಿಷ್ಕರಣೆ ಆಗಿದೆ.ಅದರ ವಿವರ ಹೀಗಿದೆ (ರೂ.ಗಳಲ್ಲಿ).
ದಿನಾಂಕ ದರ (ಲೀ.ಗೆ)
ಏಪ್ರಿಲ್ (2017) 57.78
ಮೇ (2017) 55.71
ಜೂನ್ (2017) 55.23
ಜುಲೈ (2017) 52.29
ಆಗಸ್ಟ್ (2017) 53.82
ಸೆಪ್ಟೆಂಬರ್ (2017) 55.14
ಅಕ್ಟೋಬರ್ (2017) 53.87
ನವೆಂಬರ್ (2017) 55.56
ಡಿಸೆಂಬರ್ (2017) 56.35
ಜನವರಿ (2018) 58.79
ಫೆಬ್ರವರಿ (2018) 58.95
ಮಾರ್ಚ್ (2018) 58.30
ಏಪ್ರಿಲ್ (2018) 61.02
ಮೇ (ಈವರೆಗೆ) 68
– ವಿಜಯ್‌ಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.