ಲಕ್ಷ ಬಡವರಿಗೆ ಸರ್ಕಾರಿ ಸೂರು
Team Udayavani, Oct 27, 2017, 11:04 AM IST
ಬೆಂಗಳೂರು: ರಾಜಧಾನಿಯ ನಿವೇಶನ, ವಸತಿ ರಹಿತ ಬಿಪಿಎಲ್ ಕುಟುಂಬಗಳಿಗೆ “ವಸತಿ ಭಾಗ್ಯ’ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಿದೆ.
ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ತಲಾ 5.50 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಲಿದ್ದು, ಸರ್ಕಾರದಿಂದ ಸಬ್ಸಿಡಿ ಸಹ ದೊರೆಯಲಿದೆ. ಮುಂದಿನ 24 ತಿಂಗಳಲ್ಲಿ 1 ಲಕ್ಷ ಮನೆ (ನೆಲ ಮತ್ತು ಮೂರು ಅಂತಸ್ತಿನ ಅಪಾರ್ಟ್‌ಮೆಂಟ್) ನಿರ್ಮಿಸಲು ನಿರ್ಧರಿಸಿದ್ದು, ನ.15ರಿಂದ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ “ಮುಖ್ಯಮಂತ್ರಿಗಳ ಒಂದು ಲಕ್ಷ ಬೆಂಗಳೂರು ವಸತಿ ಕಾರ್ಯಕ್ರಮ’ದ ಅನುಷ್ಠಾನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬೆಂಗಳೂರಿನಲ್ಲಿ ವಾಸವಿರುವ ನಿವೇಶನವಿಲ್ಲದ ಹಾಗೂ ವಸತಿ ರಹಿತ ಬಿಪಿಎಲ್ ಕುಟುಂಬಗಳಿಗಾಗಿ ಒಂದು ಲಕ್ಷ ಮನೆ ನಿರ್ಮಾಣ ಮಾಡಲು ತೀರ್ಮಾನಿಸಲಾ ದೆ. ಅರ್ಹ ಫಲಾನುಭವಿಗಳು ನ.15ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ,’ ಎಂದು ಹೇಳಿದರು.
“ಎ.ಟಿ.ರಾಮಸ್ವಾಮಿ ವರದಿ ಪ್ರಕಾರ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ತೆರವುಗೊಳಿಸಲಾಗಿದ್ದು, ಆ ಜಮೀನಿನಲ್ಲಿ ಮನೆಗಳ ನಿರ್ಮಾಣವಾಗಲಿದೆ. ನಗರದ ನಾನಾ ಕಡೆಗಳಲ್ಲಿ ಲಭ್ಯವಿರುವ 1,100 ಎಕರೆ ಸರಕಾರಿ ಜಮೀನಿನಲ್ಲಿ ಒಟ್ಟು 1 ಲಕ್ಷ ಮನೆಗಳನ್ನು ಮುಂದಿನ 24 ತಿಂಗಳ ಕಾಲಮಿತಿಯೊಳಗೆ ನಿರ್ಮಿಸಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಈ ಜವಾಬ್ದಾರಿ ವಹಿಸಲಾಗಿದೆ.
ಈ ಮನೆಗಳ ನಿರ್ಮಾಣಕ್ಕೆ ತಲಾ 5.50 ಲಕ್ಷ ವೆಚ್ಚ ಮಾಡಲಾಗುತ್ತಿದೆ. ವಸತಿ ಪಡೆಯಲು ಬೆಂಗಳೂರಿನಲ್ಲಿ ಮನೆ ಅಥವಾ ನಿವೇಶನ ಹೊಂದಿರಬಾರದು. ಬಿಪಿಎಲ್ ಕುಟುಂಬವಾಗಿರಬೇಕು ಹಾಗೂ ನಗರದಲ್ಲಿ ಕನಿಷ್ಟ 5 ವರ್ಷಗಳಿಂದ ವಾಸಿಸುತ್ತಿರಬೇಕು ಎಂಬ ಮಾನದಂಡ ನಿಗದಿಪಡಿಸಲಾಗುವುದು,’ ಎಂದು ಹೇಳಿದರು.
“ಒಟ್ಟು 5.5 ಲಕ್ಷ ರೂ.ವೆಚ್ಚದ ಈ ಮನೆಗಳಿಗಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಪರಿಶಿಷ್ಟರಾಗಿದ್ದರೆ 50 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರು 1 ಲಕ್ಷ ರೂ. ಆರಂಭಿಕ ಠೇವಣಿ ಪಾವತಿಸಬೇಕು. ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಒಟ್ಟು 3.80 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂ. ಸಬ್ಸಿಡಿ ಸಿಗಲಿದೆ.
ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕಿದ್ದು, ಈ ಉದ್ದೇಶಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಸಿಗಲಿದೆ. ಬ್ಯಾಂಕುಗಳ ಜತೆಯೂ ಈ ಸಂಬಂಧ ಮಾತನಾಡಲಾಗಿದೆ,’ ಎಂದು ಸಿಎಂ ಮಾಹಿತಿ ನೀಡಿದರು. “ಯೋಜನೆಯಡಿ ನೆಲಮಹಡಿ ಸೇರಿ ಒಟ್ಟು ನಾಲ್ಕು ಅಂತಸ್ತುಗಳು ನಿರ್ಮಾಣವಾಗಲಿದ್ದು, ಮಲಗುವ ಕೊಠಡಿ, ಹಾಲ್, ಅಡುಗೆ ಮನೆ, ಸ್ನಾನದ ಕೋಣೆ ಇರಲಿವೆ.
ತುಮಕೂರಿನಲ್ಲಿ ಈಗಾಗಲೇ ತಲಾ 4.70 ಲಕ್ಷ ರೂ. ವೆಚ್ಚದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮ ನಿರ್ಮಿಸಿರುವ ಮನೆಗಳ ಮಾದರಿಯಲ್ಲೇ ಈ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸುವುದನ್ನೂ ಒಳಗೊಂಡಿರುವ ಕಾರಣ ಪ್ರತಿ ಮನೆ ನಿರ್ಮಾಣ ವೆಚ್ಚವನ್ನು 5.5 ಲಕ್ಷ ರೂ. ನಿಗದಿ ಮಾಡಲಾಗಿದೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ,’ ಎಂದು ತಿಳಿಸಿದರು.
ಹೊರವಲಯದವರಿಗೆ ಶೇ.20 ಮನೆ
“ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಒಟ್ಟು 1,100 ಎಕರೆ ಭೂಮಿಯ ಅಗತ್ಯವಿದೆ. ಈ ಭೂಮಿ ಗುರುತಿಸಲು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಈಗಾಗಲೇ 431 ಎಕರೆ ಭೂಮಿಯನ್ನು ಗುರುತಿಸಿದೆ. ಬಿಬಿಎಂಪಿ ವ್ಯಾಪ್ತಿಗೆ ಸೀಮಿತವಾಗದೆ ಬಿಎಂಆರ್‌ಡಿಎ ವ್ಯಾಪ್ತಿಯಲ್ಲೂ ಈ ಮನೆಗಳು ನಿರ್ಮಾಣವಾಗುತ್ತಿವೆ. ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರಿಗೆ ಮನೆಗಳ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
ಶೇ.20 ಮನೆಗಳ ಹಂಚಿಕೆಗೆ ಹೊರವಲಯದ ಕುಟುಂಬಗಳನ್ನೂ ಪರಿಗಣಿಸಲಾಗುವುದು. ಅಸಂಘಟಿತ ವಲಯದ ಕಾರ್ಮಿಕರೂ ಮನೆ ಪಡೆದುಕೊಳ್ಳಲು ಇದೊಂದು ಅವಕಾಶವಾಗಿದ್ದು, ಇಂತವರಿಗೆ ಹೆಚ್ಚು ಸಬ್ಸಿಡಿ ಸಿಗುವಂತೆ ಮಾಡಲು ಯೋಜನೆಯಲ್ಲಿ ಸಹಯೋಗಕ್ಕೆ ಕಾರ್ಮಿಕ ಇಲಾಖೆಗೂ ನಿರ್ದೇಶನ ನೀಡಲಾಗಿದೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ವಸತಿ ಸಚಿವ ಎಂ.ಕೃಷ್ಣಪ್ಪ, ಕಾರ್ಮಿಕ ಸಚಿವ ಸಂತೋಷ್‌ಲಾಡ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.