ವೈಜ್ಞಾನಿಕ ಕಸ ವಿಲೇವಾರಿಗೆ ಜಾಗದ ಕೊರತೆ
Team Udayavani, Jan 30, 2019, 6:49 AM IST
ಬೆಂಗಳೂರು: ನಗರದಲ್ಲಿ ಉಲ್ಬಣಿಸುತ್ತಿರುವ ಕಸ ವಿಲೇವಾರಿ ಸಮಸ್ಯೆಯಿಂದ ಉಂಟಾಗುತ್ತಿರುವ ತೊಂದರೆ ಮನಗಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ, ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಇದಕ್ಕೆ ಜಾಗದ ಕೊರತೆ ಎದುರಾಗಿದ್ದು “ಸ್ವತ್ಛ ಭಾರತ್’ ಯೋಜನೆ ಜಾರಿಗೆ ಭಾರಿ ಹಿನ್ನಡೆ ಉಂಟಾಗಿದೆ.
ಬೆಂಗಳೂರು ನಗರದಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ಸಂಸ್ಕರಣೆಯಿಂದಾಗಿ ಉಂಟಾದ ಸಮಸ್ಯೆ ಮತ್ತು ಸವಾಲು ಮುಂದಿನ ದಿನಗಳಲ್ಲಿ ನಗರ ಜಿಪಂ ವ್ಯಾಪ್ತಿಯ ಭಾಗಕ್ಕೂ ವ್ಯಾಪ್ತಿಸಬಹುದು ಎಂಬ ಮುಂದಾಲೋಚನೆಯಿಂದ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ.
ಜಿಪಂನಲ್ಲಿ ಸುಮಾರು 96 ಗ್ರಾಮ ಪಂಚಾಯ್ತಿಗಳಿದ್ದು, ಹಲವು ಗ್ರಾಪಂಗಳಲ್ಲಿ ಕಸವನ್ನು ಸಮಪರ್ಕವಾಗಿ ವಿಲೇವಾರಿ ಮಾಡಲು ಆಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರ ನಗರ ಜಿಲ್ಲಾ ಪಂಚಾಯ್ತಿ, 37 ಗ್ರಾಮ ಪಂಚಾಯ್ತಿಗಳಲ್ಲಿ ವೈಜ್ಞಾನಿಕ ಕಸವಿಲೇವಾರಿ ಸಂಬಂಧ ಜಾಗ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ ಕೇವಲ ಆರು ಗ್ರಾಮ ಪಂಚಾಯ್ತಿ ಮಾತ್ರ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ.
ಬೆಂಗಳೂರು ಉತ್ತರ ತಾಲೂಕಿನ ರಾಜನಕುಂಟೆ, ದೊಡ್ಡಜಾಲ, ಚಿಕ್ಕಜಾಲ, ಬೆಟ್ಟಹಲಸೂರು ಮತ್ತು ಸಿಂಗನಾಯಕನಹಳ್ಳಿ ಸರ್ಕಾರದಿಂದ ಭೂಮಿ ಮಂಜೂರಾಗಿದೆ. ಜತೆಗೆ ಅನೇಕಲ್‌ಗೂ ಕೂಡ ಜಾಗ ನೀಡಲಾಗಿದೆ. ಈಗಾಲೇ ಸರ್ಕಾರ ಮಂಜೂರು ಮಾಡಿರುವ ಭೂಮಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಕೆಲಸ ಸಾಗಿದೆ. ಆದರೆ, ಇನ್ನೂ 31 ಗ್ರಾಪಂಗಳಲ್ಲಿ ಸಮರ್ಪಕವಾಗಿ ಕಸವಿಲೇವಾರಿ ಆಗದೇ ಇರುವುದು “ಸ್ವತ್ಛ ಭಾರತ್’ ಯೋಜನೆ ಕಾರ್ಯಗತವಾಗಲು ಮತ್ತಷ್ಟು ಹಿನ್ನಡೆಯಾದಂತಾಗಿದೆ.
ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ: ವ್ಯಾಪಾರ-ವಹಿವಾಟಿಗೆ ಪರವಾನಗಿ ನೀಡುವಾಗ ಪ್ಲಾಸ್ಟಿಕ್ ಕೈ ಚೀಲ ಮಾರಾಟ ಹಾಗೂ ಬಳಕೆ ಮಾಡದಂತೆ ಈಗಾಗಲೇ ಜಿಲ್ಲಾಡಳಿತ ನಾಗರಿಕರಿಗೆ ಸೂಚಿಸಿದೆ. ಈ ಸಂಬಂಧ ಹಲವು ಕಡೆಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃಷಿಗೆ ಗೊಬ್ಬರ: ಹೋಟೆಲ್, ಕಲ್ಯಾಣ ಮಂಟಪ, ಮಾರುಕಟ್ಟೆಗಳಿಂದ ಹಣ್ಣು -ತರಕಾರಿ, ಹೂವು, ಉಳಿದ ಆಹಾರದಂಥ ಕಸ ಒಂದೆಡೆ ಶೇಖರಣೆ ಮಾಡಿ ನಂತರ ಆ ತ್ಯಾಜ್ಯವನ್ನು ಸಂಸ್ಕರಿಸಿ ಕೃಷಿಗೆ ಗೊಬ್ಬರವಾಗಿ ಬಳಕೆಗೆ ನೀಡುವ ಉದ್ದೇಶವೂ ಕೂಡ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಹೊಂದಿದೆ.
ನಿರ್ವಹಣೆಗೆ ಭೇಟಿ: ನಗರ ಜಿಲ್ಲಾ ಪಂಚಾಯ್ತಿ ಘನತ್ಯಾಜ್ಯ ನಿರ್ವಹಣೆ ಸಂಬಂಧ ಹಲವು ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಘನ ತ್ಯಾಜ್ಯ ಸಂಗ್ರಹ ಘಟಕಗಳನ್ನು ನಿರ್ಮಿಸುವುದು ಕೂಡ ಸೇರಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒ ಒಳಗೊಂಡ ತಂಡ ಉಡುಪಿ ಮತ್ತು ಆಂಧ್ರ ಪ್ರದೇಶದ ಗುಂಟೂರಿಗೂ ಭೇಟಿ ನೀಡಿ, ಘನ ತ್ಯಾಜ್ಯ ವೈಜ್ಞಾನಿಕ ನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಬಂದಿದೆ ಎಂದು ಹೇಳಿದ್ದಾರೆ.
ಕಸಮುಕ್ತ ಗ್ರಾಪಂ ಮಾಡಲು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಪಣತೊಟ್ಟಿದೆ. ಈಗಾಗಲೇ ಸರ್ಕಾರ ಆರು, ಗ್ರಾಮ ಪಂಚಾಯ್ತಿಗೆ ಸಮರ್ಪಕ ಕಸವಿಲೇವಾರಿಗೆ ಭೂಮಿ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆಗಳಲ್ಲಿ ಭೂಮಿ ನೀಡುವ ನಿರೀಕ್ಷೆ ಇದೆ.
-ಎಂ.ಎಸ್.ಆರ್ಚನ, ನಗರ ಜಿಪಂ ಸಿಇಒ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.