Bangalore: ಬತ್ತಿದ ಕೊಳವೆಬಾವಿಗಳು; ನಗರದ ಪಾರ್ಕ್‌ಗಳಲ್ಲಿ ಬರ!
Team Udayavani, Feb 26, 2024, 12:42 PM IST
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಒಂದೆಡೆ ನಗರ ವಾಸಿಗಳಿಗೆ ಕುಡಿಯಲು ನೀರಿನ ಸಮಸ್ಯೆ ಆಗಿದ್ದರೆ, ಮತ್ತೂಂದೆಡೆ ಪಾರ್ಕ್‌ಗಳಲ್ಲಿರುವ ಕೊಳವೆ ಬಾವಿಗಳ ಅಂತರ್ಜಲದ ಮಟ್ಟ ಕುಸಿದು ಗಿಡ ಮರ, ಪ್ರಾಣಿ ಪಕ್ಷಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಹೆಚ್ಚು ನೀರಿನ ಸಮಸ್ಯೆ ಇರುವ ಪಾರ್ಕ್‌ಗಳಲ್ಲಿನ ಗಿಡ ಮರಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಇನ್ನು ಪ್ರಾಣಿ, ಪಕ್ಷಿ ಪ್ರಿಯರು ಮನೆಗಳ ಚಾವಣಿ, ಪಾರ್ಕ್‌ಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಬಾಟಲ್, ಪ್ಲಾಸ್ಟಿಕ್ ಟ್ರೇ, ಪಾಟ್‌ಗಳಲ್ಲಿ ನೀರು ಒದಗಿಸುವ ಕಾರ್ಯ ಮಾಡಿದ್ದಾರೆ. ಈ ಕುರಿತು ಮಾಹಿತಿ ಉದಯವಾಣಿಯ ಈ ವಾರದ ಸುದ್ದಿಸುತ್ತಾಟ…
ಉದ್ಯಾನ ನಗರಿಯೆಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಸದ್ಯ ಎತ್ತ ನೋಡಿದರೂ ಬಾನೆತ್ತರದ ಕಟ್ಟಡಗಳು, ಡಾಂಬರು, ಕಾಂಕ್ರೀಟ್ ರಸ್ತೆಗಳೇ ಕಾಣುತ್ತಿವೆ. ಇದರಿಂದ ಬಿದ್ದ ಮಳೆ ನೀರು ಭೂಮಿಗೆ ಸೇರುತ್ತಿಲ್ಲ. ಇನ್ನು ಅಭಿವೃದ್ಧಿ ಹೆಸರಿನಲ್ಲಿ ಬಹುತೇಕ ಕೆರೆ, ಕಾಲುವೆ, ಬಾವಿ, ಕಲ್ಯಾಣಿಗಳನ್ನು ಮುಚ್ಚಿಹಾಕಲಾಗುತ್ತಿದೆ. ಇದರಿಂದ ಅಂತರ್ಜಲ ಕುಸಿತ ಕಂಡು ಕೊಳವೆಬಾವಿಗಳು ದಿನದಿಂದ ದಿನಕ್ಕೆ ಬತ್ತಿ ಹೋಗುತ್ತಿವೆ. ಇದರಿಂದ ನಗರದ ಜನರಿಗೆ ನೀರಿನ ಸಮಸ್ಯೆ ಕಾಡುತ್ತಿದೆ. ಇದೇ ಪರಿಸ್ಥಿತಿ ಪಾರ್ಕ್‌ಗಳಲ್ಲಿನ ಗಿಡ ಮರ, ಪ್ರಾಣಿ ಪಕ್ಷಗಳಿಗೂ ಬಂದಿದೆ.
ಸಸ್ಯಕಾಶಿ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಸೇರಿ ತೋಟಗಾರಿಕೆ ಅಡಿಯಲ್ಲಿ ಬರುವ ಉದ್ಯಾನಗಳು, ಜೆ.ಪಿ. ಪಾರ್ಕ್, ಎಂ.ಎನ್.ಕೃಷ್ಣ ಪಾರ್ಕ್, ಸ್ವಾಮಿ ವಿವೇಕಾನಂದ ಪಾರ್ಕ್, ಫ್ರೀಡಂ ಪಾರ್ಕ್, ಇಂದಿರಾನಗರ, ಹಲಸೂರು, ದೊಮ್ಮಲೂರು, ಬ್ಯಾಟರಾಯನಪುರ, ಯಶವಂತಪುರ ಸೇರಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1270 ಉದ್ಯಾನಗಳು ಇವೆ. ಈ ಪೈಕಿ 800 ಪಾರ್ಕ್‌ಗಳಲ್ಲಿ ಕೊಳವೆ ಬಾವಿ ಸೌಕರ್ಯವಿದೆ. ಉಳಿದಂತೆ ಟ್ಯಾಂಕರ್ ನೀರೇ ಆಧಾರವಾಗಿದ್ದು, ಗಿಡ-ಮರಗಳಿಗೆ ನೀರು ಉಣಿಸಲಾಗುತ್ತಿದೆ.
ಬೇಸಿಗೆ ಸಮಯದಲ್ಲಿ ಸಾಮಾನ್ಯ ದಿನಗಳಿಗಿಂತ ಅತ್ಯಧಿಕ ನೀರು ಬಳಕೆಯಾಗುತ್ತದೆ. ಜತೆಗೆ ಅಂತರ್ಜಲದ ಮಟ್ಟವೂ ಶೇ.20ರಿಂದ 30 ಕಡಿಮೆಯಾಗಿದೆ. ಕೊಳವೆ ಬಾವಿ ಹೊಂದಿರುವ ಉದ್ಯಾನಗಳಲ್ಲಿ ವಾರಕ್ಕೊಮ್ಮೆ ಅಥವಾ 10 ದಿನಗಳಿಗೆ ಎರಡು ಸಲದಂತೆ ಸ್ಪ್ರಿಂಕ್ಲರ್ ಸಹಾಯದಿಂದ ನೀರು ಸಿಂಪಡಿಸಲಾಗುತ್ತದೆ. ಕೊಳವೆ ಬಾವಿ ರಹಿತ ಉದ್ಯಾನಗಳಿಗೆ ವಾರಕ್ಕೆರಡು ಬಾರಿಯಂತೆ ನೀರು ಹರಿಸಲಾಗುತ್ತದೆ.
ಒಂದೊಂದು ಪ್ರದೇಶದಲ್ಲಿನ ಪಾರ್ಕ್‌ಗಳಿಗೆ ಒಂದು ಅಥವಾ ಎರಡು ಟ್ಯಾಂಕರ್ ನೀರು ಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಒಂದು ಟ್ಯಾಂಕರ್ ನೀರಿಗೆ 1,000 ರೂ. ಇದ್ದರೆ, ಸದ್ಯ 1,200 ರೂ.ಗೆ ಒಂದು ಟ್ಯಾಂಕರ್ ನೀರು ಸಿಗಲಿದೆ. ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಏರಿಕೆಯಾಗಬಹುದು ಎಂದು ಬಿಬಿಎಂಪಿ ತೋಟಗಾರಿಕೆ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ಉದಯವಾಣಿಗೆ ತಿಳಿಸಿದ್ದಾರೆ.
ಕಬ್ಬನ್‌ಪಾರ್ಕ್‌ನಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ :
197 ಎಕರೆಯ ವಿಸ್ತೀರ್ಣವನ್ನು ಹೊಂದಿರುವ ಕಬ್ಬನ್ ಪಾರ್ಕ್‌ನಲ್ಲಿ 9,200 ಮರಗಳಿವೆ. ಇದರಲ್ಲಿ 60ರಿಂದ 70 ಜಾತಿಯ ಹೂವಿನ ಗಿಡ-ಮರಗಳಿದ್ದು, ಟಬುಬಿಯಾ(ಪಿಂಕ್ ಮತ್ತು ಹಳದಿ ಹೂವು ಬಿಡುವ ಮರದ ಜಾತಿ) ಮರಗಳೂ ಇಲ್ಲಿವೆ. ಪಾರ್ಕ್‌ನಲ್ಲಿ ತಾವರೆಕೊಳ, ಅನೇಕ ನೀರಿನ ಕಾರಂಜಿ ಕೊಳಗಳಿದ್ದರೂ, 80 ರಿಂದ 100 ಕಡೆಗಳಲ್ಲಿ ಪಕ್ಷಿಗಳಿಗಾಗಿ ಪಾಟ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ನಿತ್ಯ ನೀರು ಹಾಕಲಾಗುತ್ತದೆ. ಇದರಿಂದ ಬಹುತೇಕ ಪಕ್ಷಿಗಳು ನೀರಿನ ದಾಹವನ್ನು ನೀಗಿಸಿಕೊಳ್ಳುತ್ತಿವೆ. ಕಬ್ಬನ್‌ಪಾರ್ಕ್ ಒಳಗಡೆ 4 ಕೊಳವೆಬಾವಿ, 15 ಒಳಚರಂಡಿ ವ್ಯವಸ್ಥೆ ಇರುವುದರಿಂದ ಮಳೆ ಬಂದಂತ ಸಂದರ್ಭದಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಸದ್ಯ ನೀರಿನ ಕೊರತೆ ಇಲ್ಲ. ಇದೇ ರೀತಿ ಮುಂದಿನ ಮಳೆಗಾಲದಲ್ಲಿಯೂ ಮಳೆ ಪ್ರಮಾಣ ಕಡಿಮೆಯಾದರೆ, ಆಗ ನೀರಿನ ಮಟ್ಟ ಮತ್ತಷ್ಟು ಕುಸಿತವಾಗುತ್ತದೆ ಎಂದು ಕಬ್ಬನ್ ಪಾರ್ಕ್ ಅಧಿಕಾರಿಯೊಬ್ಬರು ಹೇಳಿದರು.
ಲಾಲ್‌ಬಾಗ್‌ನಲ್ಲಿ 15 ಲಕ್ಷ ಲೀ. ನೀರು ಸಂಗ್ರಹದ ವ್ಯವಸ್ಥೆ :
ಸಸ್ಯಕಾಶಿ ಲಾಲ್‌ಬಾಗ್ 240 ಎಕರೆ ವಿಸ್ತೀರ್ಣ ಹೊಂದಿದ್ದು, ನೂರಾರು ವರ್ಷಗಳ ಮರಗಳನ್ನು ಹೊಂದಿರುವ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅಂದಾಜು 1,250 ವಿವಿಧ ಜಾತಿ ಮರಗಳು ಸೇರಿದಂತೆ 10 ಸಾವಿರ ಮರಗಳು, 10 ರಿಂದ 15 ಸಾವಿರದಷ್ಟು ಹೂ ಗಿಡ-ಬಳ್ಳಿಗಳನ್ನು ಕಾಣಬಹುದು. ಸದಾ ಹಚ್ಚಹಸಿರಿನಿಂದ ಕೂಡಿರುವ ಪ್ರದೇಶ ಇದಾಗಿದ್ದು, 15 ಲಕ್ಷ ಲೀಟರ್ ನೀರಿನ ಸಂರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಉದ್ಯಾನದೊಳಗೆಯೇ ಕೆರೆ ಇದ್ದು, ಆರು ಕೊಳವೆ ಬಾವಿಗಳು ಇವೆ. ಕಳೆದ ಬಾರಿ ಮಳೆಯ ಪ್ರಮಾಣ ಕಡಿಮೆ ಆಗಿದ್ದು, ಬೇಸಿಗೆ ಹಿನ್ನೆಲೆ ಸದ್ಯ ಕೊಳವೆ ಬಾವಿಗಳಲ್ಲಿ ಶೇ.60 ಅಡಿಯಷ್ಟು ನೀರು ಕುಸಿತ ಕಂಡಿದೆ. ಬೇಸಿಗೆಯ ಅಂತ್ಯದಷ್ಟೊತ್ತಿಗೆ ಶೇ.70 ಅಡಿಯಷ್ಟು ಅಂತರ್ಜಲ ಕುಸಿಯುವ ಸಾಧ್ಯತೆ ಇದೆ. ಸುಮಾರು 60 ಅಡಿ ಎತ್ತರವಿರುವ ಮರಗಳಿಗೆ ಹೆಚ್ಚು ನೀರಿನ ಬಳಕೆಯಾಗುತ್ತದೆ. ಉಳಿದಂತೆ ಐದು ದಿನಕ್ಕೊಮ್ಮೆ ಎಲ್ಲಾ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸಲಾಗುತ್ತದೆ. ದಿನಕ್ಕೆ ಒಟ್ಟು 10 ಲಕ್ಷ ಲೀಟರ್ ನೀರನ್ನು ಬಳಕೆ ಮಾಡುತ್ತೇವೆ ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್) ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸುತ್ತಾರೆ.
ನಡಿಗೆದಾರರ ಸಂಘದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ :
ಬೇಸಿಗೆ ಬಂತೆಂದರೆ ಕೇವಲ ಗಿಡ-ಮರಗಳಿಗೆ, ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಕೆಲವರು ಅಪಾರ್ಟ್‌ಮೆಂಟ್, ಮನೆಗಳ ಟೆರಸ್‌ನಲ್ಲಿ ಪಕ್ಷಿಗಳಾಗಿ ಪ್ಲಾಸ್ಟಿಕ್ ಟ್ರೇ, ಬಾಟಲ್, ಪಾಟ್‌ಗಳಲ್ಲಿ ನೀರು ಇರಿಸುತ್ತಾರೆ. ಅದೇ ರೀತಿ, ಕಬ್ಬನ್ ಪಾರ್ಕಿನ ನಡಿಗೆದಾರರ ಸಂಘದವರು 150ಕ್ಕೂ ಹೆಚ್ಚಿನ ನೀರಿನ ಪಾಟ್‌ಗಳನ್ನು ತೋಟಗಾರಿಕೆ ಇಲಾಖೆಗೆ ನೀಡಿದ್ದಾರೆ. ಆದರೆ, ಅವರು ನೀರು ಪೂರೈಸುತ್ತಿಲ್ಲ. ಹೀಗಾಗಿ ಸಂಘದ ಸದಸ್ಯರೇ ನಿತ್ಯ ಬರುವಾಗಿ ಒಂದು ಬಾಟಲಿನಲ್ಲಿ ನೀರು ತಂದು ಆ ಪಾಟ್‌ಗಳಿಗೆ ಹಾಕಲಾಗುತ್ತಿದ್ದಾರೆ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ(ಸಿಪಿಡಬ್ಲೂéಎ)ದ ಅಧ್ಯಕ್ಷ ಎಸ್.ಉಮೇಶ್ ತಿಳಿಸಿದ್ದಾರೆ.
ಕಳೆದ 2022-23ನೇ ಸಾಲಿನಲ್ಲಿ ಒಟ್ಟು 83 ಉದ್ಯಾನಗಳಲ್ಲಿ 966 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಸಂಗ್ರಹವಾದ ನೀರನ್ನು ಗಿಡ-ಮರಗಳಿಗೆ ಬಳಸಲಾಗುತ್ತಿದೆ. ಜತೆಗೆ ಅಂತರ್ಜಲ ಕುಸಿಯುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಕೊಳವೆ ಬಾವಿಗಳನ್ನು ಮರುಪೂರಣಗೊಳಿಸಲು, ಬಿಎಬ್ಲೂéಎಸ್‌ಎಸ್‌ಬಿಯಿಂದ ನೀರಿನ ಪೂರೈಕೆ ಮಾಡುವ ಚಿಂತನೆ ನಡೆಯುತ್ತಿದೆ. –ಎಂ.ಆರ್.ಚಂದ್ರಶೇಖರ್, ತೋಟಗಾರಿಕೆಯ ಉಪನಿರ್ದೇಶಕ, ಬಿಬಿಎಂಪಿ.
ನಗರಾದ್ಯಂತ ಹೂಳು ತುಂಬಿರುವ 150 ಕೆರೆಗಳನ್ನು ಗುರುತಿಸಲಾಗಿದೆ. ಸಮೀಕ್ಷೆ ಪ್ರಕಾರ ಕೆರೆಗಳಲ್ಲಿ ಪ್ಲಾಸ್ಟಿಕ್ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದ ಮನುಷ್ಯರಿಗೆ ಹಾಗೂ ಪರಿಸರಕ್ಕೂ ಹಾನಿಕರಕ. ಆದ್ದರಿಂದ ಕೆರೆಗಳಲ್ಲಿನ ಹೂಳು ತೆಗೆದು, ಮಳೆ ನೀರು ಸಂಗ್ರಹಣೆಯತ್ತ ಗಮನ ಹರಿಸಬೇಕು. ಜತೆಗೆ “ನೀರು ಬಳಕೆಯ ನೀತಿ’ಯನ್ನು ಸರ್ಕಾರ ರಚಿಸಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಲು ಸಾಧ್ಯ.-ಅ.ನ.ಯಲ್ಲಪ್ಪರೆಡ್ಡಿ, ನಿವೃತ್ತ ಕಾರ್ಯದರ್ಶಿ, ಪರಿಸರ ಇಲಾಖೆ
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.